ಚಂಡೀಗಢ: ಹರಿಯಾಣದ ಈ ಕೋಣಕ್ಕೆ ಅನ್ಮೋಲ್ ಎಂದು ಅದರ ಮಾಲೀಕ ಹೆಸರಿಟ್ಟಿದ್ದಾರೆ. ಹೆಸರಿಗೆ ತಕ್ಕಂತೆ ಇದು ಅತ್ಯಂತ ವಿಶಿಷ್ಟವಾದ ಕೋಣವಾಗಿದ್ದು, ಇತ್ತೀಚಿನ ಎರಡು ಪ್ರಮುಖ ಮೇಳದ ನಂತರ ಇದು ರಾಷ್ಟ್ರವ್ಯಾಪಿ ಸುದ್ದಿಯಾಗಿದೆ. ಸುದ್ದಿಯಾಗಿರುವುದು ಇದರ ಮೌಲ್ಯ ಹಾಗೂ ಡಯಟ್‌ಗಾಗಿ.
ಪುಷ್ಕರ್ ಹಾಗೂ ಮೀರತ್‌ನಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ಕೃಷಿ ಮೇಳದಲ್ಲಿ ಸುಮಾರು 1500 ಕೆ.ಜಿ. ತೂಗುವ ಸುರ್ತಿ ತಳಿಯ ಅನ್ಮೋಲ್ ಎಲ್ಲರ ಗಮನ ಸೆಳೆದಿತ್ತು. ಸಾಮಾಜಿಕ ಮಾಧ್ಯಮದಲ್ಲೂ ಇದರದ್ದೇ ಸುದ್ದಿ.
ತನ್ನ ನೆಚ್ಚಿನ ಅನ್ಮೋಲ್‌ಗೆ ದುಬಾರಿ ಜೀವನ ಶೈಲಿಯನ್ನು ಅಳವಡಿಸಿಕೊಂಡಿರುವ ಅದರ ಮಾಲೀಕ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಕೋಣಕ್ಕೆ ನಿತ್ಯ ನೀಡುವ ಆಹಾರದ ಪಟ್ಟಿಯನ್ನು ಕೇಳಿದ ಪ್ರತಿಯೊಬ್ಬರ ಹುಬ್ಬೇರುವಂತೆ ಮಾಡಿದೆ.
ಅನ್ಮೋಲ್‌ನ ಆರೋಗ್ಯವಂತ ಜೀವನ ಶೈಲಿಗಾಗಿ ನಿತ್ಯ 250 ಗ್ರಾಂ ಬಾದಾಮಿ, 30 ಬಾಳೆಹಣ್ಣು, 4 ಕೆ.ಜಿ. ದಾಳಿಂಬೆ, 5 ಕೆ.ಜಿ. ಹಾಲು ಹಾಗೂ 20 ಮೊಟ್ಟೆ ನೀಡಲಾಗುತ್ತಿದೆಯಂತೆ. ಇಷ್ಟು ಮಾತ್ರವಲ್ಲ, ಹಿಂಡಿ, ಹಸಿರು ಮೇವು, ತುಪ್ಪ, ಸೋಯಾಬೀನ್ ಹಾಗೂ ಮೆಕ್ಕೆಜೋಳವನ್ನೂ ನೀಡಲಾಗುತ್ತಿದೆ. ಆ ಮೂಲಕ ಸಂತಾನೋತ್ಪತ್ತಿ ಮತ್ತು ಮೇಳಗಳಲ್ಲಿ ಪ್ರದರ್ಶನ ನೀಡಲು ಅನ್ಮೋಲ್ ಸದಾ ಸಿದ್ಧವಿರುತ್ತದೆ ಎನ್ನುವುದು ಅದರ ಮಾಲೀಕರ ಮಾತು.
ನಿತ್ಯ ಎರಡು ಬಾರಿ ಮಜ್ಜನ. ಇದಕ್ಕಾಗಿ ಬದಾಮಿ ಹಾಗೂ ಸಾಸಿವೆ ಎಣ್ಣೆ ಬೆರೆಸಿದ ವಿಶೇಷ ತೈಲವನ್ನು ಬಳಸಲಾಗುತ್ತದೆ ಎಂದು ಅದರ ಮಾಲೀಕ ಗಿಲ್ ವಿವರಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಕೋಣದ ಸಾಕಾಣಿಕೆ ವೆಚ್ಚವನ್ನು ಸರಿದೂಗಿಸುವ ಸಲುವಾಗಿ ನಿತ್ಯ 25 ಲೀಟರ್ ಹಾಲು ಕೊಡುತ್ತಿದ್ದ ಅನ್ಮೋಲ್‌ನ ತಾಯಿ ಹಾಗೂ ಸೋದರಿ ಎಮ್ಮೆಗಳನ್ನು ಮಾರಿದ್ದಾರೆ.
ವಾರಕ್ಕೆ ಎರಡು ಬಾರಿ ಅನ್ಮೋಲ್ ವೀರ್ಯ ದಾನ ಮಾಡುತ್ತದೆ. ಇದರ ವೀರ್ಯಕ್ಕೆ ಸಾಕಷ್ಟು ಬೇಡಿಕೆ ಇದೆಯಂತೆ. ಒಂದು ಬಾರಿ ಸಂಗ್ರಹವಾಗುವ ವೀರ್ಯದಿಂದ ನೂರಕ್ಕೂ ಹೆಚ್ಚು ಎಮ್ಮೆಗಳಿಗೆ ಬಳಸಬಹುದಾಗಿದೆ. ಇದರಿಂದಾಗಿ ಮಾಸಿಕ ಗಿಲ್ ಕುಟುಂಬಕ್ಕೆ ಅನ್ಮೋಲ್‌ನಿಂದಾಗಿ ₹4ಲಕ್ಷದಿಂದ ₹5ಲಕ್ಷದವರೆಗೆ ನಿರ್ದಿಷ್ಟ ಆದಾಯ ತಂದು ಕೊಡುತ್ತಿದೆ. ಇದರಿಂದಲೂ ಇದರ ನಿರ್ವಹಣೆ ಸಾಧ್ಯವಾಗುತ್ತಿದೆ ಎಂದು ಗಿಲ್ ತಿಳಿಸಿರುವುದಾಗಿ ವರದಿಯಾಗಿದೆ.
ಸಾಕಷ್ಟು ಜನರು ಅನ್ಮೋಲ್‌ಗಾಗಿ ಬೇಡಿಕೆ ಇಟ್ಟಿದ್ದಾರೆ. ಇದು ಸದ್ಯ ₹23 ಕೋಟಿ ವರೆಗೂ ತಲುಪಿದೆ. ಆದರೆ ಅನ್ಮೋಲ್ ನಮ್ಮ ಕುಟುಂಬದ ಸದಸ್ಯ. ಹೀಗಾಗಿ ಇದನ್ನು ಮಾರುವ ಯಾವುದೇ ಇರಾದೆ ಇಲ್ಲ ಎನ್ನುತ್ತಾರೆ ಗಿಲ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.