ಬೆಂಗಳೂರು: ಇತ್ತೀಚೆಗೆ ಕೆಲದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರನ್ನು ಹೋಲುವಂತೆ ಡೀಪ್‌ಫೇಕ್ ವಿಡಿಯೊ ಒಂದು ಸಾಕಷ್ಟು ಹರಿದಾಡುತ್ತಿದೆ.
ಪಡ್ಡೆ ಹುಡುಗರು ಈ ವಿಡಿಯೊ ನಿಜವೆಂದುಕೊಂಡು ಸಾಕಷ್ಟು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಕೆಲ ರಶ್ಮಿಕಾ ವಿರೋಧಿಗಳು, ಇದೇ ವಿಡಿಯೊವನ್ನು ಮುಂದಿಟ್ಟುಕೊಂಡು ರಶ್ಮಿಕಾ ಬಗ್ಗೆ ಕೀಳಾಗಿ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಹಲವರು ಈ ಆಕ್ಷೇಪಾರ್ಹ ವಿಡಿಯೊ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ರಶ್ಮಿಕಾ ಅವರನ್ನು ಡೀಪ್‌ಫೇಕ್ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಮಹಿಳೆಯರಿಗೆ ಅವಮಾನ ಮಾಡುವುದು ಎಷ್ಟೊಂದು ಸುಲಭವಾಗಿದೆ ನೋಡಿ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಸಲಿಯೇತ್ತೇನೆಂದರೆ ಇದೊಂದು ಡೀಪ್‌ಫೇಕ್ ವಿಡಿಯೊ ಆಗಿದ್ದು ಹೊರದೇಶದಲ್ಲಿರುವ ಭಾರತೀಯ ಮೂಲದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೇನ್ಸರ್ ಜಾರಾ ಪಟೇಲ್ ಎನ್ನುವ ಯುವತಿಯದ್ದಾಗಿದೆ ಎಂದು ತಿಳಿದು ಬಂದಿದೆ.
ಲಿಫ್ಟ್‌ನಲ್ಲಿ ಝಾರಾ ಪಟೇಲ್ ಅವರು ಪ್ರವೇಶ ಮಾಡುತ್ತಿರುವ ವಿಡಿಯೊ ಇಟ್ಟುಕೊಂಡು ಯಾರೊ ಕಿಡಿಗೇಡಿಗಳು, ರಶ್ಮಿಕಾ ಮಂದಣ್ಣ ಮುಖ ಜೋಡಿಸಿ ವಿಡಿಯೊ ಮಾಡಿ ಹರಿಬಿಟ್ಟಿದ್ದಾರೆ.
ಈ ಬಗ್ಗೆ ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿ ಆಘಾತ ವ್ಯಕ್ತಪಡಿಸಿದ್ದಾರೆ. ಇಂತಹವುಗಳನ್ನು ನಿಗ್ರಹಿಸಲು ಕಠಿಣ ಕ್ರಮದ ಅವಶ್ಯಕತೆ ಇದೆ. ಇದಕ್ಕೆ ಇನ್ನೂ ಬೇರೆ ಮಹಿಳೆಯರು ಬಲಿಯಾಗುವ ಮುನ್ನ ಎಚ್ಚರ ಅಗತ್ಯ ಎಂದಿದ್ದಾರೆ.
ಈ ಡೀಪ್‌ಫೇಕ್ ವಿಡಿಯೊ ಬಗ್ಗೆ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರೂ ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ತರದ ವಿಡಿಯೊಗಳು ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದ ತಕ್ಷಣ ಏನು ಮಾಡಬೇಕು ಎಂಬುದರ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ.
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೂ ಇಂಥ ಕೃತ್ಯಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂಬ ಅಭಿಯಾನವನ್ನು ಬೆಂಬಲಿಸಿದ್ದಾರೆ.
ಡಿಜಿಟಲ್ ನಾಗರಿಕರ ಸುರಕ್ಷತೆ ಬಗ್ಗೆ ನಮ್ಮ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಬಗ್ಗೆ ನಾಗರಿಕರು ಜಾಗೃತರಾಗಿರಬೇಕು ಎಂದು ಮೂಲ ವಿಡಿಯೊ ಉಲ್ಲೇಖಿಸಿ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ನಟ ಅಮಿತಾಬ್ ಬಚ್ಚನ್ ಅವರು ಕೂಡ ಈ ವಿಡಿಯೊ ನೋಡಿ ಆತಂಕ ವ್ಯಕ್ತಪಡಿಸಿದ್ದಾರೆ. X ತಾಣದಲ್ಲಿ ಟ್ವೀಟ್ ಮಾಡಿರುವ ಅವರು ಇಂತಹವುಗಳಿಗೆ ಕಠಿಣ ಕ್ರಮದ ಅಗತ್ಯವಿದೆ ಎಂದಿದ್ದಾರೆ. ಆಘಾತ ವ್ಯಕ್ತಪಡಿಸಿ ನಿಜವಾದ ವಿಡಿಯೊವನ್ನು ರಿಟ್ವೀಟ್ ಮಾಡಿದ್ದಾರೆ.
ಡೀಪ್‌ಫೇಕ್ ಒಂದು ಆನ್‌ಲೈನ್ ತಂತ್ರಜ್ಞಾನವಾಗಿದ್ದು ಎಐ, ಆ್ಯಪ್ ಅಥವಾ ವೆಬ್ ಒಪನ್ ಸೋರ್ಸ್‌ಗಳಲ್ಲಿ ಇದನ್ನು ಬಳಸಿಕೊಳ್ಳಲಾಗುತ್ತದೆ. ಬಹುತೇಕ ಈ ತಂತ್ರಜ್ಞಾನವನ್ನು ಟ್ರೋಲರ್‌ಗಳು, ಕಿಡಿಗೇಡಿಗಳು ಬೇರೆಯವನ್ನು ಟ್ರೋಲ್ ಮಾಡಲು ಬಳಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.