ADVERTISEMENT

ನೇಪಾಳ ವಿಮಾನ ದುರಂತ: ಘಟನೆಗೂ ಮುನ್ನ ಟಿಕ್‌ ಟಾಕ್ ವಿಡಿಯೊ ಮಾಡಿದ್ದ ಗಗನಸಖಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜನವರಿ 2023, 6:25 IST
Last Updated 17 ಜನವರಿ 2023, 6:25 IST
ನೇಪಾಳದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಗಗನಸಖಿ ‘ಒಶಿನ್ ಅ್ಯಲೆ’ ಮೃತಪಟ್ಟಿದ್ದಾರೆ.
ನೇಪಾಳದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಗಗನಸಖಿ ‘ಒಶಿನ್ ಅ್ಯಲೆ’ ಮೃತಪಟ್ಟಿದ್ದಾರೆ.    

ಬೆಂಗಳೂರು: ನೇಪಾಳದಲ್ಲಿ ಭಾನುವಾರ ಸಂಭವಿಸಿದ ವಿಮಾನ ದುರಂತದಲ್ಲಿ ಐವರು ಭಾರತೀಯರು ಸೇರಿದಂತೆ 72 ಮಂದಿ ಸಾವಿಗೀಡಾಗಿದ್ದಾರೆ. ಘಟನೆ ಬೆನ್ನಲ್ಲೇ ಹಲವು ಮನಕಲಕುವ ಸಂಗತಿಗಳು ಬೆಳಕಿಗೆ ಬರುತ್ತಿವೆ.

ಹೌದು, ದುರಂತಕ್ಕೀಡಾದ ವಿಮಾನದಲ್ಲಿ ಕೊನೆಯದಾಗಿ ಟಿಕ್‌ ಟಾಕ್ ವಿಡಿಯೊ ಮಾಡಿದ್ದ ಗಗನಸಖಿಯೂ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಇದೀಗ ಬೆಳಕಿಗೆ ಬಂದಿದೆ.

ಪತನಗೊಂಡ ಯೇತಿ ಏರ್‌ಲೈನ್ಸ್‌ ವಿಮಾನದಲ್ಲಿ ಗಗನಸಖಿ ‘ಒಶಿನ್ ಅ್ಯಲೆ’ ಅವರ ಕೊನೆಯ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಒಶಿನ್ ಅಲೆ ಸೇರಿದಂತೆ ನಾಲ್ವರು ಕ್ಯಾಬಿನ್ ಸಿಬ್ಬಂದಿ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ.

ADVERTISEMENT

ನೇಪಾಳದಲ್ಲಿ ಒಶಿನ್ ಅಲೆ ಜನಪ್ರಿಯ ಟಿಕ್‌ ಟಾಕ್‌ ಸ್ಟಾರ್‌ ಆಗಿದ್ದರು. ಕೊನೆಯದಾಗಿ ಒಶಿನ್ ಹಂಚಿಕೊಂಡಿರುವ ವಿಡಿಯೊದಲ್ಲಿ ನಗುನಗುತ್ತಾ ಕ್ಯಾಮೆರಾಗೆ ಪೋಸ್‌ ನೀಡಿರುವ ದೃಶ್ಯ ಸೆರೆಯಾಗಿದೆ. ಒಶಿನ್ ನಿಧನಕ್ಕೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಮನಿ ಕಂಟ್ರೋಲ್ ವರದಿಯ ಪ್ರಕಾರ, ವಿಮಾನ ಅಪಘಾತಕ್ಕೀಡಾಗುವ ಕೆಲವೇ ಕ್ಷಣಗಳ ಮುನ್ನ ವಿಡಿಯೊ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ.

ಲೈವ್‌ ವಿಡಿಯೊದಲ್ಲಿ ನೇಪಾಳ ವಿಮಾನ ಅಪಘಾತದ ದೃಶ್ಯ: ವಿಮಾನ ನೆಲಕ್ಕೆ ಅಪ್ಪಳಿಸುವ ಮುನ್ನ ಉತ್ತರಪ್ರದೇಶದ ಸೋನು ಜೈಸ್ವಾಲ್‌ ಎಂಬುವರು ಫೇಸ್‌ಬುಕ್‌ ಲೈವ್‌ ಮಾಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಲವೇ ಸೆಕೆಂಡ್‌ಗಳ ಈ ವಿಡಿಯೊದಲ್ಲಿ ಪ್ರಯಾಣಿಕರ ಚೀರಾಟ ಹಾಗೂ ಬೆಂಕಿ ಕಾಣಿಸಿಕೊಂಡಿರುವ ದೃಶ್ಯ ಸೆರೆಯಾಗಿದೆ.

ಮೃತ ಭಾರತೀಯರಲ್ಲಿ ನಾಲ್ವರು ಬಾಲ್ಯ ಸ್ನೇಹಿತರು: ವಿಮಾನ ದುರಂತದಲ್ಲಿ ಮೃತಪಟ್ಟಿರುವ ಉತ್ತರಪ್ರದೇಶದ ಗಾಜಿಪುರ ಜಿಲ್ಲೆಯ ನಾಲ್ವರು ಬಾಲ್ಯಸ್ನೇಹಿತರಾಗಿದ್ದು, ಪ್ರಸಿದ್ಧ ಪಶುಪತಿನಾಥ ದೇವಾಲಯಕ್ಕೆ ಭೇಟಿ ನೀಡಲು ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.

ಸೋನು ಜೈಸ್ವಾಲ್‌, ಅಭಿಷೇಕ್ ಕುಶ್ವಾಹಾ, ಅನಿಲ್ ರಾಜ್ಬರ್ ಮತ್ತು ವಿಶಾಲ್‌ ಶರ್ಮಾ ಅವರು ಜನವರಿ 10ರಂದು ನೇಪಾಳಕ್ಕೆ ತೆರಳಿದ್ದರು.

ಕೇರಳ ಪಾದ್ರಿಯ ಅಂತ್ಯಕ್ರಿಯೆ ಮುಗಿಸಿ ವಾಪಾಸ್ಸಾಗುವಾಗ ದುರಂತ: ಕೇರಳದಲ್ಲಿ ಪಾದ್ರಿಯೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ವಾಪಾಸ್ಸಾಗುವಾಗ ವಿಮಾನ ದುರಂತದಲ್ಲಿ ಮೃತಪಟ್ಟಿರುವ ವಿವರ ಬೆಳಕಿಗೆ ಬಂದಿದೆ.

ಮೃತರನ್ನು ರಾಜು, ರಾಬಿನ್ ಮತ್ತು ಅನಿಲ್ ಎಂದು ಗುರುತಿಸಲಾಗಿದೆ.

ನೇಪಾಳದಲ್ಲಿ 45 ವರ್ಷ ಸೇವೆ ಸಲ್ಲಿಸಿದ್ದ ಕೇರಳದ ಪತ್ತನಂತಿಟ್ಟ ಮೂಲದ ಪಾದ್ರಿ ಮ್ಯಾಥ್ಯೂ ಪಿಲಿಪ್ (76) ಜನವರಿ 11ರಂದು ನಿಧನರಾದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪಿಲಿಪ್ ಎರಡು ವರ್ಷಗಳ ಹಿಂದೆಯಷ್ಟೇ ಕೇರಳಕ್ಕೆ ವಾಪಸ್ಸಾಗಿದ್ದರು.

ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸ್ನೇಹಿತರಾದ ರಾಜು, ರಾಬಿನ್ ಮತ್ತು ಅನಿಲ್ ಸೇರಿದಂತೆ ಐದು ಮಂದಿ ನೇಪಾಳದಿಂದ ಆಗಮಿಸಿದ್ದರು.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.