ಬೆಂಗಳೂರು: ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಟೀಕಿಸುತ್ತಿದ್ದ ರಷ್ಯಾದಲ್ಲಿನ ಪ್ರಸಿದ್ಧ ಬಾಣಸಿಗ ಅಲೆಕ್ಸಿ ಜಿಮಿನ್ (52) ಅನುಮಾನಾಸ್ಪದವಾಗಿ ಮೃತಪಟ್ಟಿದ್ದನ್ನು ಅವರ ಒಡೆತನದ ಜಿಮಾ ರೆಸ್ಟೋರೆಂಟ್ ಖಚಿತಪಡಿಸಿದೆ.
ಸರ್ಬಿಯಾದ ಬೇಲ್‌ಗ್ರೇಡ್ ಖಾಸಗಿ ಹೋಟೆಲ್‌ನಲ್ಲಿ ಅಲೆಕ್ಸಿ ಅವರ ಶವ ಬುಧವಾರ ಪತ್ತೆಯಾಗಿದೆ ಎಂದು ಬಿಬಿಸಿ ವರದಿ ಮಾಡಿತ್ತು. ಸರ್ಬಿಯಾದ ಸ್ಥಳೀಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಮರಣೋತ್ತರ ಪರೀಕ್ಷೆ ವರದಿ ಇನ್ನೂ ಬರಬೇಕಿದೆ ಎಂದಿದ್ದಾರೆ.
ರಷ್ಯಾದ ಎನ್‌ಟಿವಿಯಲ್ಲಿ ಅಲೆಕ್ಸಿ ಅವರು ‘ಕುಕ್ಕಿಂಗ್ ವಿತ್ ಅಲೇಕ್ಸಿ ಜೆಮಿನ್’ ಎಂಬ ಜನಪ್ರಿಯ ಟಿ.ವಿ ಶೋ ನಡೆಸುತ್ತಿದ್ದರು. ಇದು ಭಾರಿ ಜನಪ್ರಿಯವಾಗಿತ್ತು.
2022 ರಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದ ನಂತರ ಅಲೆಕ್ಸಿ ಅವರು ಪುಟಿನ್ ಅವರನ್ನು ಬಹಿರಂಗವಾಗಿ ಟೀಕಿಸಿದ್ದರು. ಪುಟಿನ್ ಅವರನ್ನು ರಾಕ್ಷಸ ಎಂದಿದ್ದರು. ನಂತರ ಎನ್‌ಟಿವಿಯಲ್ಲಿ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಿತ್ತು.
ಇಂಗ್ಲೆಂಡ್‌ನಲ್ಲಿ ಜಿಮಾ ಎನ್ನುವ ರೆಸ್ಟೋರೆಂಟ್ ನಡೆಸುತ್ತಿದ್ದ ಅಲೆಕ್ಸಿ ಅವರ ಸಾವನ್ನು ಜಿಮಾ ಖಚಿತಪಿಡಿಸಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದೆ.
ಪುಟಿನ್ ಅವರನ್ನು ಟೀಕಿಸುವ ಅನೇಕ ಪ್ರಿಸಿದ್ಧರು ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಪುಟಿನ್ ಅವರ ಮೇಲೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.