ಬೆಂಗಳೂರು: ಅಜ್ಜಿಯರು ಕತೆ ಹೇಳುವಾಗ ಹಾಗೂ ಪಂಚತಂತ್ರದ ಹಲವಾರು ಕಥೆಗಳಲ್ಲಿ ಕುಂಬಳಕಾಯಿಯಲ್ಲಿ ರಾಕ್ಷಸರು ಅಡಗಿರುತ್ತಿದ್ದರು ಎಂದು ಹೇಳುವುದನ್ನು ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಕುಂಬಳಕಾಯಿಯಲ್ಲಿ ಕೂತು ನದಿಯಲ್ಲಿ ಬರೋಬ್ಬರಿ 73 ಕಿ.ಮೀ ಚಲಿಸಿ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾನೆ.
ಅಮೆರಿಕದ ಓರೆಗಾನ್‌ನ ಗ್ಯಾರಿ ಕ್ರಿಸ್ಟನ್‌ಸೆನ್ ಎನ್ನುವ ಕುಂಬಳಕಾಯಿ ಬೆಳೆಗಾರ ಈ ಸಾಧನೆ ಮಾಡಿದವರು.
ಗ್ಯಾರಿ ಅವರು ಗಿನ್ನಿಸ್ ದಾಖಲೆ ನಿರ್ಮಿಸಲು ತಮ್ಮ ತೋಟದಲ್ಲಿ ಬೆಳೆದಿದ್ದ 555.2 ಕೆ.ಜಿ ತೂಕದ ಕುಂಬಳಕಾಯಿಯನ್ನು ಕಿರು ದೋಣಿಯನ್ನಾಗಿ ಪರಿವರ್ತಿಸಿದ್ದಾರೆ. ಇದಕ್ಕಾಗಿ ಅಕ್ಟೋಬರ್‌ನಲ್ಲಿ ಈ ಕುಂಬಳಕಾಯಿಯನ್ನು ಕೊಯ್ಲು ಮಾಡಲಾಗಿತ್ತು.
ವಾಷಿಂಗ್ಟನ್ ಬಳಿಯ ಕೊಲಂಬಿಯಾ ನದಿಯಲ್ಲಿ 73.03 ಕಿ.ಮೀ ಈ ದೋಣಿಯಲ್ಲಿ ಕುಳಿತು ಸಾಗಿದ ಗ್ಯಾರಿ ಅವರು ಕಡೆಗೂ ಗಿನ್ನಿಸ್ ದಾಖಲೆ ನಿರ್ಮಿಸಿದರು. ಈ ಹಿಂದೆ ಇದೇ ರೀತಿಯ ದೋಣಿಯಲ್ಲಿ 60 ಕಿ.ಮೀ ಗ್ಯಾರಿ ಅವರು ಸಾಗಿದ್ದರು. ಈ ಸಾರಿ ಗಿನ್ನಿಸ್ ದಾಖಲೆಗಾಗಿಯೇ ಸಾಕಷ್ಟು ಶ್ರಮ ಹಾಕಿದ್ದರು.
ಈ ಕುಂಬಳಕಾಯಿ ದೋಣಿ 429.26 ಸೆಂ.ಮೀ ಸುತ್ತಳತೆಯನ್ನು ಹೊಂದಿತ್ತು. 2011ರಿಂದಲೂ ಬೃಹತ್ ಕುಂಬಳಕಾಯಿಗಳನ್ನು ಗ್ಯಾರಿ ಅವರು ಬೆಳೆಯುತ್ತಿದ್ದಾರೆ.
ಬೃಹತ್ ಕುಂಬಳಕಾಯಿಗಳು ಸುಮಾರು 100ರಿಂದ 1,300 ಕೆ.ಜಿ ವರೆಗೂ ತೂಗುತ್ತವೆ. ಈ ಕುರಿತು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ತನ್ನ ವೆಬ್‌ಸೈಟಿನಲ್ಲಿ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.