ನವದೆಹಲಿ: ಬಾಂಗ್ಲಾದೇಶದಿಂದ ಭಾರತಕ್ಕೆ ಹೇಗೆ ಅನಧಿಕೃತವಾಗಿ ಸುಲಭವಾಗಿ ಪ್ರವೇಶಿಸಬಹುದು ಎನ್ನುವ ಕುರಿತು ಬಾಂಗ್ಲಾ ಯುಟ್ಯೂಬರ್ ಮಾಡಿದ್ದ ವಿಡಿಯೊವೊಂದು ಸಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
‘ಡಿಎಚ್ ಟ್ರಾವಲಿಂಗ್ ಇನ್ಫೊ’ ಎನ್ನುವ ಯುಟ್ಯೂಬ್ ಚಾನಲ್‌ನಲ್ಲಿ ವರ್ಷದ ಹಿಂದೆ ವಿಡಿಯೊವನ್ನು ಹಂಚಿಕೊಳ್ಳಲಾಗಿತ್ತು.
ಬಾಂಗ್ಲಾದೇಶದಿಂದ ಭಾರತಕ್ಕೆ ಹೇಗೆ ಬರಬಹುದು ಎನ್ನುವುದನ್ನು ವಿಡಿಯೊದಲ್ಲಿ ತೋರಿಸಿ, ‘ಆದಿವಾಸಿ ಜನಾಂಗದವರು ಸಾಮಾನ್ಯವಾಗಿ ಅಕ್ರಮವಾಗಿ ಭಾರತವನ್ನು ಪ್ರವೇಶಿಸಲು ಭೂಗತ ಸುರಂಗಗಳನ್ನು ಬಳಸುತ್ತಾರೆ. ಆದರೆ ಹಾಗೆ ಮಾಡದಿರಿ’ ಎಂದು ವೀಕ್ಷಕರಿಗೆ ವಿಡಿಯೊದಲ್ಲಿ ಸಲಹೆ ನೀಡಿದ್ದಾನೆ.
ವಿಡಿಯೊದಲ್ಲಿ ಮತ್ತೊಬ್ಬ ವ್ಯಕ್ತಿ ಸುರಂಗವನ್ನು ತೋರಿಸಿದ್ದು, ‘ಅದು ಭಾರತದ ಗಡಿಯನ್ನು ತಲುಪಲಿದೆ, ಗಡಿ ದಾಟಲು ಯಾವ ವಿಸಾ ಕೂಡ ಅಗತ್ಯವಿಲ್ಲ’ ಎಂದಿದ್ದಾನೆ.
ಈ ವಿಡಿಯೊವನ್ನು ವಿವಿಧ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಹಂಚಿಕೊಂಡಿದ್ದಾರೆ.
ಈ ಕುರಿತು ವಿಡಿಯೊ ಹಂಚಿಕೊಂಡ ಸೌರಿಶ್ ಮುಖರ್ಜಿ ಎನ್ನುವ ಎಕ್ಸ್ ಬಳಕೆದಾರರೊಬ್ಬರು ‘ಅಕ್ರಮವಾಗಿ ಬಾಂಗ್ಲಾದಿಂದ ಭಾರತಕ್ಕೆ ಬರುವುದು ಹೇಗೆ ಎನ್ನುವುದನ್ನು ಯುಟ್ಯೂಬರ್ ಒಬ್ಬರು ತೋರಿಸಿಕೊಟ್ಟಿದ್ದಾರೆ. ಅದೇ ರೀತಿ ಭಾರತದಿಂದ ಹಸುಗಳನ್ನು ನದಿಗಳ ಮೂಲಕ ಬಾಂಗ್ಲಾ ದೇಶಕ್ಕೆ ಸಾಗಿಸಲಾಗುತ್ತದೆ ಎನ್ನುವುದನ್ನೂ ತೋರಿಸಿದ್ದಾರೆ. ಗಡಿ ಪ್ರದೇಶಗಳ ಬಗ್ಗೆ ಗಮನಹರಿಸಬೇಕು ಎನ್ನುವುದಕ್ಕೆ ಇದು ಎಚ್ಚರಿಕೆ ಗಂಟೆಯಾಗಿದೆ. ಕೇಂದ್ರ ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ’ ಎಂದು ಬರೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಗೃಹ ಸಚಿವ ಅಮಿತ್ ಶಾ, ಎನ್‌ಐಎ ಸೇರಿದಂತೆ ಹಲವರನ್ನು ಟ್ಯಾಗ್ ಮಾಡಿ, ಗಡಿ ಭದ್ರತೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಳಕೆದಾರರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.