ಪಟ್ನಾ: ನಿರುದ್ಯೋಗದಿಂದ ತೊಂದರೆಗೀಡಾದ ಅರ್ಥಶಾಸ್ತ್ರ ಪದವೀಧರೆಯೊಬ್ಬರು ಪಟ್ನಾದ ಮಹಿಳಾ ಕಾಲೇಜು ಬಳಿ ಟೀ ಸ್ಟಾಲ್ ಸ್ಥಾಪಿಸುವ ಮೂಲಕ ಗಮನ ಸೆಳೆದಿದ್ದಾರೆ.
ಪದವಿ ಪಡೆದಿದ್ದರೂ ಉದ್ಯೋಗ ಸಿಗದೇ ಮನೆಯಲ್ಲಿ ಕೈಕಟ್ಟಿ ಕುಳಿತುಕೊಳ್ಳುವ ಅನೇಕ ಉದಾಹರಣೆಗಳಿವೆ. ಆದರೆ, ಬಿಹಾರದ ಪ್ರಿಯಾಂಕಾ ಗುಪ್ತಾ ಅವರು ಅರ್ಥಶಾಸ್ತ್ರದಲ್ಲಿ ಪದವಿ ಪಡೆದುಕೊಂಡು ಉದ್ಯೋಗ ಸಿಗದ ಕಾರಣ, ಟೀ ಸ್ಟಾಲ್ ತೆರೆದು ಬದುಕು ಕಟ್ಟಿಕೊಂಡಿದ್ದಾರೆ.
2019ರಲ್ಲಿ ಪದವಿ ಪಡೆದುಕೊಂಡ ಪ್ರಿಯಾಂಕಾ, ಉದ್ಯೋಗಕ್ಕಾಗಿ ಅನೇಕ ಬಾರಿ ಹುಡುಕಾಟ ನಡೆಸಿದ್ದರು. ಎರಡು ವರ್ಷಗಳ ಕಾಲ ಯಾವುದೇ ಕೆಲಸ ಸಿಗದ ಕಾರಣ ಟೀ ಸ್ಟಾಲ್ ತೆರೆಯಲು ನಿರ್ಧರಿಸಿದ್ದರು. ಅದರಂತೆ ಪಟ್ನಾದ ಮಹಿಳಾ ಕಾಲೇಜು ಬಳಿ ಟೀ ಸ್ಟಾಲ್ ತೆರೆದಿದ್ದು, ಅದರಲ್ಲಿ ಯಶಸ್ಸು ಗಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ, ‘ನಾನು 2019 ರಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದೇನೆ. ಆದರೆ, ಕಳೆದ 2 ವರ್ಷಗಳಲ್ಲಿ ಕೆಲಸ ಪಡೆಯಲು ಸಾಧ್ಯವಾಗಲಿಲ್ಲ. ನಾನು ಎಂಬಿಎ ಪದವೀಧರರಾಗಿರುವ ಅಹಮದಾಬಾದ್‌ನ ಪ್ರಫುಲ್ ಬಿಲ್ಲೋರ್ ಅವರಿಂದ ಸ್ಫೂರ್ತಿ ಪಡೆದಿದ್ದೇನೆ. ಪ್ರಸ್ತುತ ಅನೇಕ ಚಾಯ್‌ವಾಲಾಗಳಿದ್ದಾರೆ. ಚಾಯ್‌ವಾಲಿ ಏಕೆ ಇರಬಾರದು’ ಎಂದುಪ್ರಶ್ನಿಸಿದ್ದಾರೆ.
ಪ್ರಿಯಾಂಕಾ ಗುಪ್ತಾ ಅವರ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಉದ್ಯೋಗ ಸಮಸ್ಯೆ ಕುರಿತು ಚರ್ಚೆಗೆ ಗ್ರಾಸವಾಗಿದೆ.
ಉದ್ಯೋಗ ತ್ಯಜಿಸಿ ಅಹಮದಾಬಾದ್‌ನಲ್ಲಿ ‘ಎಂಬಿಎ–ಮಿಸ್ಟರ್ ಬಿಲ್ಲೋರ್ ಚಾಯ್‌ವಾಲಾ’ ಎಂಬ ಸ್ಟಾಲ್ ಆರಂಭಿಸಿ ಜನಪ್ರಿಯವಾಗಿದ್ದ ಪ್ರಫುಲ್, 2020ರ ದೆಹಲಿ ಚುನಾವಣೆ ಸಂದರ್ಭದಲ್ಲಿ ಕೇಜ್ರೀವಾಲ್ ಅವರಿಗೆ ಸಹಾಯ ಮಾಡಲೆಂದೇ ದೆಹಲಿಗೆ ಬಂದಿದ್ದರು.
ಬಿಹಾರದಲ್ಲಿ 2022 ಮಾರ್ಚ್ ವೇಳೆಗೆ ನಿರುದ್ಯೋಗ ಪ್ರಮಾಣ ಶೇ 14.4 ರಷ್ಟಿತ್ತು. ಕೋವಿಡ್‌ನಿಂದಾಗಿ ದೇಶದಾದ್ಯಂತ ನಿರುದ್ಯೋಗ ಸಮಸ್ಯೆ ಎದುರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.