ನವದೆಹಲಿ: ಭಾರತಕ್ಕೆ ಬಂದಿರುವ ಮೈಕ್ರೋಸಾಪ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ವಿವಿಧ ಪ್ರದೇಶಗಳಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ನಿನ್ನೆ (ಬುಧವಾರ) ಒಡಿಶಾದಲ್ಲಿ ಕೊಳಗೇರಿ ಪ್ರದೇಶದ ಜನರನ್ನು ಭೇಟಿಯಾಗಿ ಸಂವಾದ ನಡೆಸಿದ್ದರು, ಜತೆಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೊಂದಿಗೆ ರೈತರ ಸಬಲೀಕರಣಕ್ಕೆ ಕೈಗೊಳ್ಳಬಹುದಾದ ಉಪಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ.
ಇವೆಲ್ಲದರ ನಡುವೆ ರಸ್ತೆ ಬದಿ ಚಹಾ ಸವಿದ ವಿಶೇಷ ವಿಡಿಯೊವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೊದಲ್ಲಿ, ಬಿಲ್ ಗೇಟ್ಸ್ ಅವರು ‘ಒನ್ ಚಾಯ್ ಪ್ಲೀಸ್’ ಎನ್ನುತ್ತಾರೆ, ಅದಕ್ಕೆ ಚಹಾ ಮಾಡುವ ವ್ಯಕ್ತಿ ತನ್ನದೇ ಸ್ಟೈಲ್‌ನಲ್ಲಿ ಚಹಾ ತಯಾರಿಸಿದ್ದಾನೆ. ಅದನ್ನು ವಿಭಿನ್ನ ಆಯಾಮದಲ್ಲಿ ಚಿತ್ರೀಕರಿಸಲಾಗಿದೆ. ಕೊನೆಯಲ್ಲಿ ಬಿಲ್‌ಗೇಟ್ಸ್ ಅವರು ಚಹಾ ಸವಿದಿದ್ದಾರೆ. ಜತೆಗೆ ಚಹಾ ತಯಾರಿಸಿದ ಅಂಗಡಿಯ ವ್ಯಕ್ತಿಯೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಇಂಥಹ ಹಲವಾರು 'ಚಾಯ್ ಪೇ ಚರ್ಚೆ’ಗಾಗಿ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಟ್ರೆಂಡ್ ಆಗಿದೆ. ಗೇಟ್ಸ್ ಅವರು ಸ್ಥಳೀಯ ಸಂಸ್ಕೃತಿಯನ್ನು ಆನಂದಿಸಿ ಬೆಂಬಲಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಗೇಟ್ಸ್ ಅವರು ಹಂಚಿಕೊಂಡ ವಿಡಿಯೊ 4 ಲಕ್ಷಕ್ಕೂ ವೀಕ್ಷಣೆ ಪಡೆದಿದ್ದು, 3 ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.