ನವದೆಹಲಿ: ಚೀನಾದ ಕಂಪನಿಯೊಂದು ಅಭಿವೃದ್ಧಿಪಡಿಸಿದ ಡ್ರೋನ್, ಮೌಂಟ್ ಎವರೆಸ್ಟ್ ಮೇಲೆ ಹಾರಾಟ ನಡೆಸಿದೆ. ಪರ್ವತದ ಪ್ರತಿ ಕೊರಕಲು ಹಾದಿಯಲ್ಲಿ ಹಾರಿದ ಈ ಡ್ರೋನ್ ಅತ್ಯಾಧುನಿಕ ತಂತ್ರಜ್ಞಾನದಿಂದ ಸೆರೆ ಹಿಡಿದ ದೃಶ್ಯ ಈಗ ನೋಡುಗರನ್ನು ನಿಬ್ಬೆರಗಾಗಿಸಿದೆ.
ಡ್ರೋನ್ ತಯಾರಕರು ಡಿಜೆಐ ಹಾಗೂ 8KRAW ಜತೆಗೂಡಿ ಅಭಿವೃದ್ಧಿಪಡಿಸಿರುವ ಈ ಸಾಧನಕ್ಕೆ ಡಿಜೆಐ ಮೇವಿಕ್ 3 ಡ್ರೋನ್ ಎಂದು ಹೆಸರಿಟ್ಟಿದ್ದಾರೆ.
ಎವರೆಸ್ಟ್ ಮೇಲಿನ ನಾಲ್ಕು ನಿಮಿಷಗಳ ಈ ವೀಡಿಯೊದಲ್ಲಿ ಸಮುದ್ರ ಮಟ್ಟದಿಂದ 5,300 ಮೀಟರ್ ಎತ್ತರದಲ್ಲಿರುವ ಬೇಸ್ ಕ್ಯಾಂಪ್‌ನಿಂದ ಹಿಡಿದು, 6 ಸಾವಿರ ಮೀಟರ್ ಎತ್ತರದಲ್ಲಿರುವ ಕ್ಯಾಂಪ್ ಸೈಟ್, ಕುಂಬು ಐಸ್‌ಫಾಲ್‌ನ ಸುತ್ತಮುತ್ತಲಿನ ನೀರ್ಗಲ್ಲುಗಳನ್ನು ಸೆರೆಯಾಗಿದೆ.
ಬಿಳಿ ಮಂಜು ಹೊದ್ದ ಎವರೆಸ್ಟ್‌ನ ಕೊರಕಲು ಹಾದಿಯಲ್ಲಿನ ಬೇಸ್ ಕ್ಯಾಂಪ್‌ನಲ್ಲಿ ಬಣ್ಣ ಬಣ್ಣದ ಟೆಂಟ್‌ಗಳು ಮುದ ನೀಡುತ್ತವೆ. ಈ ವಿಡಿಯೊಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ‘ಈ ವೀಡಿಯೊ ನೋಡಿದ ಮೇಲೆ ಪರ್ವತಾರೋಹಣದ ನನ್ನ ಪಟ್ಟಿಯಿಂದ ಎವರೆಸ್ಟ್ ಕೈಬಿಡುತ್ತೇನೆ’ ಎಂದಿದ್ದಾರೆ.
ಮತ್ತೊಬ್ಬರು ಪ್ರತಿಕ್ರಿಯಿಸಿ, ‘ಅಷ್ಟು ಎತ್ತರದಲ್ಲಿ ಡ್ರೋನ್ ಹಾರಾಟ ನಡೆಸಿದೆ ಎಂಬುದೇ ಅಚ್ಚರಿ. ಹಿಂದೆಂದೂ ನೋಡದ ಅದ್ಭುತ ವಿಡಿಯೊ’ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಮೌಂಟ್ ಎವರೆಸ್ಟ್ ಜಗತ್ತಿನ ಅತಿ ಎತ್ತರದ ಪರ್ವತ. ಸಮುದ್ರ ಮಟ್ಟದಿಂದ 8,848 ಮೀಟರ್ ಎತ್ತರದಲ್ಲಿರುವ ಈ ಪರ್ವತ ನೇಪಾಳ, ಚೀನಾ ಹಾಗೂ ಟಿಬೆಟ್‌ನ ಗಡಿಯನ್ನು ಹಂಚಿಕೊಳ್ಳುತ್ತದೆ. ಅತಿ ಎತ್ತರ, ಪ್ರತಿಕೂಲ ಹವಾಮಾನ ಹಾಗೂ ಕಠಿಣ ಹಾದಿಯಿಂದಾಗಿ ಇಂದಿಗೂ ಪರ್ವತಾರೋಹಿಗಳಿಗೆ ಇದು ಸವಾಲಿನ ಸಾಹಸವೇ ಆಗಿದೆ. 1953ರಲ್ಲಿ ಶೇರ್ಪಾ ತೇನ್‌ಸಿಂಗ್ ಹಾಗೂ ಎಡ್ಮಂಡ್ ಹಿಲೇರಿ ಅವರು ಮೊದಲ ಬಾರಿಗೆ ಎವರೆಸ್ಟ್‌ನ ತುದಿ ತಲುಪಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.