ಬೆಂಗಳೂರು: ಇತ್ತೀಚೆಗೆ ಕೆಲದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರನ್ನು ಹೋಲುವ ಡೀಪ್‌ಫೇಕ್ ವಿಡಿಯೊ ಒಂದು ಸಾಕಷ್ಟು ಹರಿದಾಡುತ್ತಿದೆ.
ಈ ಬಗ್ಗೆ ತೀವ್ರ ಅಸಮಾಧಾನ ಹಾಗೂ ಆಘಾತ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ರಶ್ಮಿಕಾ, ಈ ರೀತಿಯ ವಿಡಿಯೊದಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ ಎಂದಿದ್ದಾರೆ.
ತಂತ್ರಜ್ಞಾನವನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ಇದನ್ನು ನೋಡಿದರೆ ಗೊತ್ತಾಗುತ್ತದೆ. ಈ ವಿಚಾರ ನಮ್ಮಲ್ಲಿ ಪ್ರತಿಯೊಬ್ಬರಿಗೂ ಭಯ ತರಿಸಿದೆ ಎಂದಿದ್ದಾರೆ.
ನಾನು ಶಾಲೆ ಅಥವಾ ಕಾಲೇಜಿನಲ್ಲಿದ್ದಾಗ ಇದು ಸಂಭವಿಸಿದ್ದರೇ ನಾನು ಇದನ್ನು ಹೇಗೆ ನಿಭಾಯಿಸಬಹುದುದಿತ್ತು ಎಂಬುದನ್ನು ನಿಜವಾಗಿಯೂ ಊಹಿಸಲು ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೊದ ಅಸಲಿಯತ್ತನ್ನು ತಿಳಿದು ನನ್ನ ಕುಟುಂಬ, ಸ್ನೇಹಿತರು, ಹಿತೈಷಿಗಳು, ಅಭಿಮಾನಿಗಳು ನನಗೆ ಬೆಂಬಲ ನೀಡಿದ್ದಕ್ಕೆ ನಾನು ಋಣಿಯಾಗಿದ್ದೇನೆ ಎಂದು ಹೇಳಿದ್ದಾರೆ
ಈ ಗಂಭೀರ ಸಮಸ್ಯೆಯನ್ನು ನಾವು ಸಮುದಾಯದೊಂದಿಗೆ ಸೇರಿ ಅತ್ಯಂತ ತ್ವರಿತವಾಗಿ ಬಗೆಹರಿಸಬೇಕಿದೆ ಎಂದು ಆಗ್ರಹಿಸಿ ಹೈದರಾಬಾದ್‌ನ ಸೈಬರಾಬಾದ್ ಪೊಲೀಸರಿಗೆ ಟ್ವೀಟ್ ಅನ್ನು ಟ್ಯಾಗ್ ಮಾಡಿದ್ದಾರೆ.
ಲಿಫ್ಟ್‌ನಲ್ಲಿ ಝಾರಾ ಪಟೇಲ್ ಎಂಬ ಯುವತಿ ಪ್ರವೇಶ ಮಾಡುತ್ತಿರುವ ವಿಡಿಯೊ ಇಟ್ಟುಕೊಂಡು ಯಾರೊ ಕಿಡಿಗೇಡಿಗಳು, ರಶ್ಮಿಕಾ ಮಂದಣ್ಣ ಮುಖ ಜೋಡಿಸಿ ವಿಡಿಯೊ ಮಾಡಿ ಹರಿಬಿಟ್ಟಿದ್ದಾರೆ.
ಇದೊಂದು ಡೀಪ್‌ಫೇಕ್ ವಿಡಿಯೊ ಆಗಿದ್ದು ಹೊರದೇಶದಲ್ಲಿರುವ ಭಾರತೀಯ ಮೂಲದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೇನ್ಸರ್ ಝಾರಾ ಪಟೇಲ್ ಎನ್ನುವ ಯುವತಿಯದ್ದಾಗಿದೆ ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.