ನಾಗ್ಪುರ, ಮಹಾರಾಷ್ಟ್ರ: ಕಳೆದ ಮಂಗಳವಾರ, ಬುಧವಾರ ಟೆಕ್ ದೈತ್ಯ ‘ಮೈಕ್ರೊಸಾಫ್ಟ್’ ಸಂಸ್ಥಾಪಕ ಹಾಗೂ ಜಗತ್ತಿನ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ ಅವರು ಭಾರತಕ್ಕೆ ಭೇಟಿ ನೀಡಿದ್ದರು.
ಇದೇ ವೇಳೆ ಅವರು ಹೈದರಾಬಾದ್‌ಗೆ ಭೇಟಿ ನೀಡಿದ್ದಾಗ ಸರ್ಧಾರ್ ಏರಿಯಾದ ವಿಸಿಎ ಸ್ಟೇಡಿಯಂ ಬಳಿ ನಾಗ್ಪುರ್‌ದ ಖ್ಯಾತ ಚಹಾ ಮಾರಾಟಗಾರ ‘ಡಾಲಿ ಚಾಯ್‌ವಾಲಾ’ ಬಳಿ ಚಹ ಮಾಡಿಸಿ, ಅದನ್ನು ಕುಡಿದು ಸುದ್ದಿಯಾಗಿದ್ದರು.
ವಿಶೇಷವೆಂದರೆ ಈ ಡಾಲಿ ಚಾಯ್‌ವಾಲಾ ಅವರಿಗೆ, ತಾನು ಚಹಾ ಮಾಡಿ ಕೊಟ್ಟಿದ್ದು ಜಗತ್ತಿನ ಶ್ರೀಮಂತ ವ್ಯಕ್ತಿಗೆ ಎಂಬುದು ಗೊತ್ತೇ ಇರಲಿಲ್ಲವಂತೆ.
ಗೇಟ್ಸ್ ಅವರಿಗೆ ಚಹಾ ಮಾಡಿಕೊಟ್ಟ ನಂತರ ನಾಗ್ಪುರ್‌ದಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ಡಾಲಿ ಚಾಯ್‌ವಾಲಾ, ‘ಅವರು (ಬಿಲ್‌ಗೇಟ್ಸ್ ಟೀಂ) ನನಗೆ ಹೈದರಾಬಾದ್‌ಗೆ ಬರಲು ಹೇಳಿದ್ದರು. ವ್ಯಕ್ತಿಯೊಬ್ಬರಿಗೆ ನಾನು ಮಾಡುವ ವಿಶೇಷ ಚಹಾ ಮಾಡಿ ಕೊಡುವಂತೆ ಹೇಳಿದ್ದರು. ಆ ಪ್ರಕಾರ ನಾನು ಅಲ್ಲಿಗೆ ಹೋಗಿ, ಅವರು ಬಂದಾಗ ಚಹಾ ಮಾಡಿ ಕೊಟ್ಟಿದ್ದೆ. ಆಗ ಅವರು ಯಾರು ಎಂಬುದೇ ಗೊತ್ತಿರಲಿಲ್ಲ. ವಿದೇಶಿ ವ್ಯಕ್ತಿಯೊಬ್ಬರು ಚಹಾ ಕುಡಿಯಲು ಬಂದಿದ್ದರು ಎಂದುಕೊಂಡಿದ್ದೆ’ ಎಂದಿದ್ದಾರೆ.
‘ಅವರು ಚಹಾ ಕುಡಿದ ಸುದ್ದಿ ವ್ಯಾಪಕವಾಗಿ ಹರಿದಾಡಿದ ನಂತರ ನಾಗ್ಪುರದಲ್ಲಿ ನನ್ನ ಸ್ನೇಹಿತರು ನೀನು ಚಹಾ ಮಾಡಿ ಕೊಟ್ಟಿದ್ದು ಬಿಲ್ ಗೇಟ್ಸ್ ಅವರಿಗೆ ಎಂದು ತಿಳಿಸಿದರು. ಇದರಿಂದ ತುಂಬಾ ಖುಷಿಯಾಯಿತು’ ಎಂದಿದ್ದಾರೆ.
ಡಾಲಿ ಚಾಯ್‌ವಾಲಾ ಬಳಿ ಚಹಾ ಕುಡಿಯುವ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಬಿಲ್‌ಗೇಟ್ಸ್ ಅವರು, ‘ಭಾರತದಲ್ಲಿ ನೀವು ಎಲ್ಲಿಗೆ ಹೋದರೂ ಹೊಸ ಹೊಸ ಆವಿಷ್ಕಾರಗಳನ್ನು ಗುರುತಿಸಬಹುದು. ಅದನ್ನೂ ಒಂದು ಚಹಾ ಮಾಡುವುದರಲ್ಲಿಯೂ ನೋಡಬಹುದು’ ಎಂದು ಬಣ್ಣಿಸಿದ್ದರು.
‘ನನಗೆ ಪ್ರಧಾನಿ ಮೋದಿ ಅವರಿಗೆ ಚಹಾ ಮಾಡಿ ಕೊಡಬೇಕು ಎಂಬ ಕನಸಿದೆ’ ಎಂದು ಡಾಲಿ ತಮ್ಮ ಮನದ ಇಂಗಿತವನ್ನು ಹೇಳಿಕೊಂಡಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದ ನಿವಾಸಿಯಾಗಿರುವ ಸುನೀಲ್ ಪಾಟೀಲ್ ಡಾಲಿ ಚಾಯ್‌ವಾಲಾ ಎಂದೇ ಪ್ರಸಿದ್ಧಿ. ಅವರು ತಾವು ಮಾಡುವ ವಿಶೇಷ ಚಹಾ ಮತ್ತು ಅದನ್ನು ಕೊಡುವ ಶೈಲಿಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ದೇಶದಾದ್ಯಂತ ಸಾಕಷ್ಟು ಗಮನ ಸೆಳೆದಿದ್ದಾರೆ. ಅನೇಕ ನೆಟ್ಟಿಗರು ಇದೊಂದು ‘ಸಿಗ್ನೇಚರ್ ಸ್ಟೈಲ್’ ಎಂದು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.