ADVERTISEMENT

Video|ಹಾಸಿಮಾರಾ ಸೇನಾ ಕ್ಯಾಂಟಿನ್‌ಗೆ ನುಗ್ಗಿದ ಆನೆ; ಮೇಜು, ಕುರ್ಚಿ ತೂರಿ ದಾಂದಲೆ

ಏಜೆನ್ಸೀಸ್
Published 30 ನವೆಂಬರ್ 2019, 8:08 IST
Last Updated 30 ನವೆಂಬರ್ 2019, 8:08 IST
ಹಾಸಿಮಾರಾ ಸೇನಾ ಕ್ಯಾಂಟಿನ್‌ಗೆ ನುಗ್ಗಿರುವ ಆನೆ
ಹಾಸಿಮಾರಾ ಸೇನಾ ಕ್ಯಾಂಟಿನ್‌ಗೆ ನುಗ್ಗಿರುವ ಆನೆ    

ಪಶ್ಚಿಮ ಬಂಗಾಳದ ಹಾಸಿಮಾರಾ ಸೇನಾ ಕ್ಯಾಂಟಿನ್‌ಗೆ ನುಗ್ಗಿರುವ ಆನೆ ದಾಂದಲೆ ನಡೆಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಸೊಂಡಿಲನ್ನು ಬೀಸುತ್ತ ಕ್ಯಾಂಟಿನ್‌ನ ಊಟದ ಸ್ಥಳಕ್ಕೆ ನುಗ್ಗಿದ ಒಂಟಿ ಸಲಗ, ಎದುರಿಗೆ ಸಿಕ್ಕ ಮೇಜು ಮತ್ತು ಕುರ್ಚಿಗಳನ್ನು ಬಡಿದು ತೂರಿದೆ. ಕ್ಯಾಂಟಿನ್‌ನಲ್ಲಿ ದಾಂದಲೆ ಮಾಡುತ್ತಿರುವ ಆನೆ ಕಂಡು ಗಾಬರಿಯಾಗಿರುವ ಸಿಬ್ಬಂದಿ ಕೂಗಾಡಿ ಹೊರಗಟ್ಟಲು ಪ್ರಯತ್ನಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು.

ಆನೆ ನುಗ್ಗಿರುವ ಸಮಯದಲ್ಲಿ ಕ್ಯಾಂಟಿನ್‌ನಲ್ಲಿ ಯಾರೊಬ್ಬರು ಸಹ ಊಟಕ್ಕೆ ಕುಳಿತಿರಲಿಲ್ಲ. ಮುನ್ನುಗ್ಗುತ್ತಿದ್ದ ಸಲಗವನ್ನು ನಿಯಂತ್ರಿಸಲು ಸಿಬ್ಬಂದಿ ರಟ್ಟಿಗೆ ಬೆಂಕಿ ಹಚ್ಚಿ ಎಸೆದಿದ್ದಾರೆ, ಯಾವುದಕ್ಕೂ ಜಗ್ಗದೆ ಇನ್ನಷ್ಟು ಹೆಜ್ಜೆ ಮುಂದಿಟ್ಟಿರುವ ಆನೆಗೆ ಬೆಂಕಿ ತೋರಿಸಿ ಬೆದರಿಸುವ ಉಪಾಯವೇ ಉಪಯುಕ್ತವಾಯಿತು.

ADVERTISEMENT

ಸಿಬ್ಬಂದಿಯೊಬ್ಬ ಧೈರ್ಯ ಮಾಡಿ ಪಂಜು ಹಿಡಿದು ಮುನ್ನುಗ್ಗಿದ್ದೇ ತಡ ಆನೆಯು ಬೆಂಕಿಗೆ ಹೆದರಿ ಹಿಂದೆ ಸರಿದಿದೆ. ಅಷ್ಟಕ್ಕೆ ನಿಲ್ಲದೆ ಸಿಬ್ಬಂದಿ ಆನೆಯನ್ನು ಹೊರಗೆ ದೂರದವರೆಗೂ ಓಡಿಸಿಕೊಂಡು ಹೋಗಿದ್ದಾರೆ. ಕ್ಯಾಂಟಿನ್‌ ಹೊರಗೆ ಉದ್ಯಾನದಲ್ಲಿ ನಿಂತ ಆನೆ ಪ್ರತಿರೋಧ ತೋರುತ್ತಿರುವುದನ್ನು ವಿಡಿಯೊದಲ್ಲಿ ಗಮನಿಸಬಹುದು.

ಟೀ ಗಾರ್ಡನ್‌ಗಳಿಂದ ಸುತ್ತುವರಿದಿರುವ ದೊಆರ್‌ ವಲಯದಲ್ಲಿ ಈ ಘಟನೆ ನಡೆದಿದೆ. ಹಾಸಿಮಾರಾ ಕ್ಯಾಂಟಿನ್‌ನಿಂದ ಚಿಲಾಪಾಟಾ ಅರಣ್ಯ ಕೂಗಳತೆ ದೂರದಲ್ಲಿದ್ದು,ಇಲ್ಲಿ ಆನೆಗಳ ಓಡಾಟ ಸಾಮಾನ್ಯವಾಗಿದೆ. ಇಲ್ಲಿಂದ ಭೂತಾನ್‌ ಕೇವಲ 15 ಕಿ.ಮೀ ದೂರದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.