ADVERTISEMENT

ನಿಮಗಿದು ನಂಬಲು ಸಾಧ್ಯವೇ? ಮೆಕ್ಸಿಕೊ ಸಾಗರದ ಮಧ್ಯೆ ಬೆಂಕಿ ಜ್ವಾಲೆ

ರಾಯಿಟರ್ಸ್
Published 3 ಜುಲೈ 2021, 14:22 IST
Last Updated 3 ಜುಲೈ 2021, 14:22 IST
ಚಿತ್ರ ಕೃಪೆ: ಟ್ವಿಟರ್ ಸ್ಕ್ರೀನ್‌ಶಾಟ್, @MLopezSanMartin
ಚಿತ್ರ ಕೃಪೆ: ಟ್ವಿಟರ್ ಸ್ಕ್ರೀನ್‌ಶಾಟ್, @MLopezSanMartin   

ಮೆಕ್ಸಿಕೊ ಸಿಟಿ: ಸಾಗರದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ನೀವು ಎಂದಾದರೂ ನೋಡಿರುವೀರಾ? ಹೌದು, ನಂಬಲಾಗದ ಇಂತಹದೊಂದು ಘಟನೆ ಮೆಕ್ಸಿಕೊದಿಂದ ವರದಿಯಾಗಿದೆ.

ಮೆಕ್ಸಿಕೊದ ಯೂಕಟನ್ ಪರ್ಯಾಯ ದ್ವೀಪದ ಪಶ್ಚಿಮ ಸಾಗರದಲ್ಲಿ ಅಗ್ನಿ ಜ್ವಾಲೆಯ ರೌದ್ರ ನರ್ತನವಾಗಿದೆ.

ಸಮುದ್ರದಡಿಯಲ್ಲಿ ಹಾಕಿರುವ ಪೈಪ್‌ಲೈನ್‌ನಿಂದ ಅನಿಲ ಸೋರಿಕೆಯಾಗಿರುವುದು ಅವಘಡಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ADVERTISEMENT

ಪ್ರಸ್ತುತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೊನೆಗೂ ಅಗ್ನಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಮೆಕ್ಸಿಕೊದ ತೈಲ ಕಂಪನಿ ಪೆಮೆಕ್ಸ್ ತಿಳಿಸಿದೆ.

ಜ್ವಾಲಾಮುಖಿ ಸ್ಫೋಟಗೊಂಡಾಗ ಲಾವಾರಸ ಹೊರಚಿಮ್ಮುವ ರೀತಿಯಲ್ಲಿ ನೀರಿನ ಮಧ್ಯೆ ಬೆಂಕಿಯ ಜ್ವಾಲೆ ಹೊರಹೊಮ್ಮುತ್ತಿತ್ತು. ವೃತ್ತಕಾರಾದ ಈ ಅಗ್ನಿಯನ್ನು 'ಐ ಆಫ್ ಫೈರ್' (Eye of Fire) ಎಂದೇ ಹೆಸರಿಸಲಾಯಿತು.

ಈ ಕುರಿತು ಪ್ರತಿಕ್ರಿಯಿಸಿರುವ ನೆಟ್ಟಿಗರು, ಸಾಗರದಲ್ಲೂ ಬೆಂಕಿ ಹೊತ್ತಿಕೊಳ್ಳಲು ಸಾಧ್ಯವೇ? ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಅಭಿಪ್ರಾಯ ಮಂಡಿಸಿದ್ದಾರೆ.

ಬಳಿಕ ಹಡಗು, ದೋಣಿಗಳ ಸಹಾಯದಿಂದ ಐದು ತಾಸಿಗೂ ಹೆಚ್ಚು ಹೊತ್ತು ನೀರಿನ ವರ್ಷಾಧಾರೆಯೆರೆದು ಬೆಂಕಿಯನ್ನು ನಂದಿಸಲಾಯಿತು.

ಘಟನೆಯಲ್ಲಿ ಯಾವುದೇ ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ. ಈ ಪೈಪ್‌ಲೈನ್ ಪೆಮೆಕ್ಸ್‌ನ 'ಕೂ ಮಲೂಬ್ ಜಾಪ್' ತೈಲ ಘಟಕವನ್ನು ಸಂಪರ್ಕಿಸುತ್ತದೆ.

ಈ ಅವಘಡ ಹಿಂದಿನ ನಿಖರ ಕಾರಣ ಕಂಡುಹಿಡಿಯಲು ತನಿಖೆ ನಡೆಸಲಾಗುವುದು ಎಂದು ಕಂಪನಿಯು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.