ಮುಂಬೈ: ಮುಂಗಾರನ್ನು ಸಂಭ್ರಮಿಸಲು ಉಕ್ಕಿ ಹರಿಯುತ್ತಿರುವ ಜಲಪಾತಕ್ಕಿಳಿದ ಒಂದೇ ಕುಟುಂಬದ ಏಳು ಜನ ನೀರಿನಲ್ಲಿ ಕೊಚ್ಚಿಹೋದ ಘಟನೆ ಮುಂಬೈ ಸಮೀಪದ ಲೋನಾವಾಲದಲ್ಲಿ ಭಾನುವಾರ ಸಂಭವಿಸಿದೆ.
ಭಾನುವಾರ ರಜೆಯ ಮಜವನ್ನು ಸವಿಯಲು ಘಟ್ಟ ಪ್ರದೇಶವಾದ ಲೋನಾವಾಲಕ್ಕೆ ಈ ಕುಟುಂಬ ತೆರಳಿತ್ತು. ಅಲ್ಲಿನ ಭೂಸಿ ಆಣೆಕಟ್ಟೆಯ ಹಿನ್ನೀರಿನಲ್ಲಿರುವ ಜಲಪಾತ ವೀಕ್ಷಿಸಿದ ಈ ತಂಡ, ರಭಸವಾಗಿ ಹರಿಯುವ ನೀರಿನಲ್ಲಿ ನಿಂತಿದ್ದರು. ನೀರಿನ ಹರಿವು ಹೆಚ್ಚಾಗಿದ್ದರಿಂದ ನಿಯಂತ್ರಣ ಕಳೆದುಕೊಂಡು ಇವರು ಕೊಚ್ಚಿಹೋಗಿದ್ದಾರೆ.
ಇವರಲ್ಲಿ ಇಬ್ಬರು ಈಜಿ ದಡ ಸೇರಿದ್ದಾರೆ. ಉಳಿದವರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಇವರಲ್ಲಿ ಮೂರು ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಇನ್ನಿಬ್ಬರ ಮೃತದೇಹಕ್ಕಾಗಿ ಸೋಮವಾರವೂ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮುಂಗಾರಿನಲ್ಲಿ ಸಾಕಷ್ಟು ಪ್ರವಾಸಿಗರು ಈ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಅದರಂತೆಯೇ ಈ ಕುಟುಂಬವೂ ಭುಸಿ ಆಣೆಕಟ್ಟೆಗೆ ಭಾನುವಾರ ಮಧ್ಯಾಹ್ನ ಭೇಟಿ ನೀಡಿತ್ತು. ಬೆಳಿಗ್ಗೆಯಿಂದ ಮಳೆಯ ಪ್ರಮಾಣ ಹೆಚ್ಚಾಗಿತ್ತು. ಇದರಿಂದ ಆಣೆಕಟ್ಟೆಯಲ್ಲೂ ನೀರಿನ ಪ್ರಮಾಣ ಹೆಚ್ಚಳವಾಗಿತ್ತು. ಆಣೆಕಟ್ಟೆಯಿಂದ ಹೆಚ್ಚುವರಿ ನೀರನ್ನು ಹೊರಕ್ಕೆ ಬಿಟ್ಟ ಪರಿಣಾಮ, ಜಲಪಾತದಲ್ಲಿ ನೀರಿನ ಹರಿವು ಏರುಮುಖವಾಗಿತ್ತು.
ಧುಮ್ಮಿಕ್ಕುತ್ತಿದ್ದ ಜಲಪಾತದ ನಡುವೆ ಇದ್ದ ಕಲ್ಲು ಬಂಡೆಗಳ ಮೇಲೆ ಈ ಕುಟುಂಬ ಕೊನೆಯದಾಗಿ ನಿಂತಿದ್ದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎಲ್ಲರೂ ಪರಸ್ಪರ ಕೈ ಹಿಡಿದು ನೀರಿನ ಹರಿವಿಗೆ ವಿರುದ್ಧವಾಗಿ ಏರುವ ಪ್ರಯತ್ನ ನಡೆಸಿದ್ದರು. ನಿಮಿಷದೊಳಗಾಗಿ ನೀರಿನ ಹರಿವು ಹೆಚ್ಚಾದ ಕಾರಣ ಏಳೂ ಜನ ಕೊಚ್ಚಿಹೋಗಿದ್ದಾರೆ. ಸಹಾಯಕ್ಕಾಗಿ ಇವರು ಮೊರೆ ಇಟ್ಟಿದ್ದಾರೆ. ಇವರನ್ನು ಗಮನಿಸುತ್ತಿದ್ದ ಇತರ ಪ್ರವಾಸಿಗರೂ ಸಹಾಯಕ್ಕಾಗಿ ಮೊರೆ ಇಟ್ಟಿದ್ದಾರೆ. ಆದರೆ ನೀರಿನ ಹರಿವು ಹೆಚ್ಚಳವಾಗಿದ್ದರಿಂದ ನೀರಿಗೆ ಇಳಿಯುವುದು ಅಸಾಧ್ಯವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಸ್ಥಳೀಯರ ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಹಗ್ಗದ ಸಹಾಯದಿಂದ ರಕ್ಷಣಾ ಕಾರ್ಯ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.