ADVERTISEMENT

ಹರಿದ್ವಾರ: ಗಂಗಾ ನದಿಗೆ ಹಾರಿ ಈಜಿದ 70ರ ವೃದ್ಧೆ – ವಿಡಿಯೊ ವೈರಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜುಲೈ 2022, 13:38 IST
Last Updated 1 ಜುಲೈ 2022, 13:38 IST
ವೃದ್ಧೆ ಗಂಗಾ ನದಿಗೆ ಹಾರುತ್ತಿರುವುದು (ಚಿತ್ರ ಕೃಪೆ – ಸಚಿನ್ ಕೌಶಿಕ್ ಟ್ವೀಟ್ ಮಾಡಿರುವ ವಿಡಿಯೊದ ಸ್ಕ್ರೀನ್‌ಗ್ರ್ಯಾಬ್)
ವೃದ್ಧೆ ಗಂಗಾ ನದಿಗೆ ಹಾರುತ್ತಿರುವುದು (ಚಿತ್ರ ಕೃಪೆ – ಸಚಿನ್ ಕೌಶಿಕ್ ಟ್ವೀಟ್ ಮಾಡಿರುವ ವಿಡಿಯೊದ ಸ್ಕ್ರೀನ್‌ಗ್ರ್ಯಾಬ್)   

ಹರಿದ್ವಾರ: ವಯಸ್ಸು ಕೇವಲ ಸಂಖ್ಯೆಯಷ್ಟೇ, ಸಾಧನೆ ಮಾಡಲು ವಯಸ್ಸಿನ ಹಂಗಿಲ್ಲ ಎಂಬ ಮಾತನ್ನು ಕೇಳುತ್ತಿರುತ್ತೇವೆ. ಅನೇಕ ಹಿರಿಯ ನಾಗರಿಕರು ಇಳಿ ವಯಸ್ಸಿನಲ್ಲೂ ಸಾಧನೆ, ಸಾಹಸ ಪ್ರದರ್ಶಿಸಿ ಗಮನ ಸೆಳೆದಿರುವ ಉದಾಹರಣೆಗಳೂ ಇವೆ. ಇದೀಗ ಉತ್ತರಾಖಂಡದ ಹರಿದ್ವಾರದಲ್ಲಿ 70ರ ವೃದ್ಧೆಯೊಬ್ಬರು ಗಂಗಾ ನದಿಗೆ ಹಾರಿ ಈಜುವ ಮೂಲಕ ನೋಡುಗರು ಹುಬ್ಬೇರಿಸುವಂತೆ ಮಾಡಿದ್ದಾರೆ.

ವೃದ್ಧೆ ಗಂಗಾ ನದಿಗೆ ಹಾರಿ ಲೀಲಾಜಾಲವಾಗಿ ಈಜುತ್ತಿರುವ ವಿಡಿಯೊವನ್ನು ಪೊಲೀಸ್ ಸಚಿನ್ ಕೌಶಿಕ್ ಎಂಬುವವರು ಟ್ವೀಟ್ ಮಾಡಿದ್ದಾರೆ. ಜತೆಗೆ, ‘ವಯಸ್ಸು ಸುಮಾರು 70 ವರ್ಷ, ಸ್ಥಳ – ಗಂಗಾ ಮಾತೆ, ಹರ್ ಕೀ ಪೈಡೀ,ಹರಿದ್ವಾರ’ ಎಂದು ಸ್ಮೈಲಿ ಹಾಗೂ ಹೃದಯದ ಇಮೋಜಿ ಉಲ್ಲೇಖಿಸಿದ್ದಾರೆ.

ಮುಂದುವರಿದು, ‘ಅಜ್ಜಿ ಮಾಡಿದ್ದು ರೋಚಕತೆಯ ಜೊತೆಗೆ ಅಪಾಯಕಾರಿಯೂ ಆಗಿರಬಹುದು. ದಯವಿಟ್ಟು ಯಾರೂ ಹೀಗೆ ಮಾಡಬೇಡಿ’ ಎಂದು ಮನವಿ ಮಾಡಿದ್ದಾರೆ.

ADVERTISEMENT

ಈ ಟ್ವೀಟ್‌ ಅನ್ನು ಶುಕ್ರವಾರ ಸಂಜೆ ವೇಳೆಗೆ ಸುಮಾರು 20,000 ಮಂದಿ ವೀಕ್ಷಿಸಿದ್ದು, ನೂರಾರು ಮಂದಿ ರಿಟ್ವೀಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯೆ ನೀಡುವ ಮೂಲಕ ವೃದ್ಧಯೆ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಅಜ್ಜಿಯನ್ನು ನೋಡಿದಾಗ ಒಂದು ವಿಷಯ ಸ್ಪಷ್ಟವಾಯಿತು, ಅದೆಂದರೆ, ಭಾರತದಲ್ಲಿ ದೇವಿಯನ್ನು ಏಕೆ ಪೂಜಿಸಲಾಗುತ್ತದೆ ಎಂಬುದು. ಜೀವನದ ಪ್ರತಿ ಕ್ಷಣದಲ್ಲಿಯೂ ಬದುಕುವ ಚೈತನ್ಯ ಮತ್ತು ಶೌರ್ಯ ತಾಯಿಯಿಂದ ಮಾತ್ರ ದೊರೆಯುತ್ತದೆ’ ಎಂದು ಅಶೋಕ್ ಕುಮಾರ್ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಇದು ಸರಿಯಲ್ಲ. ಇಂಥದ್ದಕ್ಕೆ ಪ್ರೋತ್ಸಾಹ ನೀಡಬಾರದು’ ಎಂದು ಸುನಿತಾ ಶರ್ಮಾ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

‘ಇದು ಮಾತೆ ಗಂಗೆಯ ಮೇಲೆ ಹಿಂದೂ ನಾಗರಿಕತೆಗೆ ಇರುವ ನಿಜವಾದ ಭಕ್ತಿಯನ್ನು ತೋರಿಸಿದೆ’ ಎಂದು ರಾಜ್‌ಕುಮಾರ್ ಯಾದವ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.