ಮುಂಬೈ: ಹುಡುಗಿಯೊಬ್ಬಳಿಗೆ ಪ್ರೊಪೋಸ್ ಮಾಡಿದ್ದೇನೆ,ಸಹಾಯ ಬೇಕಿದೆ ಎಂದು ನೀವು ಕರೆ ಮಾಡಿದರೆ ನಾನು ಖಂಡಿತಾ ನಿಮಗೆ ಸಹಾಯ ಮಾಡುತ್ತೇನೆ. ನಾನು ನಿಮ್ಮ ಹೆತ್ತವರಿಗೆ ಕರೆ ಮಾಡಿ ಕೇಳುವೆ. ಅವರಿಗೂ ಆ ಹುಡುಗಿ ಒಪ್ಪಿಗೆ ಆದರೆ ನಾನು ಆ ಹುಡುಗಿಯನ್ನು ಅಪಹರಿಸಿ ನಿಮಗೆ ತಂದು ಕೊಡುತ್ತೀನಿ.ಈಗ ನನ್ನ ಫೋನ್ ನಂಬರ್ ತೆಗೆದುಕೊಳ್ಳಿ' ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಂ ಈ ರೀತಿ ಹುಡುಗರಿಗೆ 'ಸಹಾಯವಾಣಿ' ನೀಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಮುಂಬೈಯ ಘಟ್ಕೋಪರ್ ಕ್ಷೇತ್ರದ ಶಾಸರಾಗಿರುವ ಕದಂ, ಸೋಮವಾರ ನಡೆದ ದಹೀ ಹಂಡಿ (ಮೊಸರು ಕುಡಿಕೆ ಉತ್ಸವ) ಕಾರ್ಯಕ್ರಮದಲ್ಲಿ ಈ ರೀತಿಯ ವಾಗ್ದಾನ ನೀಡಿದ್ದಾರೆ.
ಗಂಡಸರ ಗುಂಪನ್ನುದ್ದೇಶಿಸಿ ಕದಂ ಅವರು ಮಾತನಾಡುತ್ತಿರುವ ವಿಡಿಯೊವನ್ನು ಎನ್‍ಸಿಪಿ ಶಾಸಕ ಜಿತೇಂದ್ರ ಅಹ್ವಾದ್ ಟ್ವೀಟ್ ಮಾಡಿದ್ದರು.
ಕದಂ ಮಾತಿಗೆ ನೆಟ್ಟಿಗರ ಆಕ್ರೋಶ
ಆಡಳಿತಾರೂಢ ಪಕ್ಷದ ಸದಸ್ಯರೊಬ್ಬರು ಮಹಿಳೆಯನ್ನು ಅಪಹರಿಸುತ್ತೇನೆ ಎಂದು ಹೇಳುವುದಾದರೆ ಈ ದೇಶದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತರು? ಎಂದು ಎನ್‍ಸಿಪಿ ಶಾಸಹ ಅಹ್ವಾದ್ ಕದಂ ವಿಡಿಯೊವನ್ನು ಶೇರ್ಮಾಡಿದ್ದರು.
ತಮ್ಮ ಸಚಿವರಿಗೆ ಮಹಿಳೆಯರನ್ನು ಅಪಹರಿಸುವ ಹೊಸ ಕೆಲಸ ನೀಡಿದ್ದಕ್ಕಾಗಿ ಎಎಪಿ ರಾಷ್ಟ್ರೀಯ ವಕ್ತಾರರಾದ ಪ್ರೀತಿ ಶರ್ಮಾ ಮೆನನ್ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡಣವಿಸ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಂದಹಾಗೆ, ಕದಂ ಅವರ ಟ್ವಿಟರ್ ಖಾತೆ ಪರಿಶೀಲಿಸಿದರೆ ಗಿನ್ನಿಸ್ ದಾಖಲೆ ಹೊಂದಿದ ವ್ಯಕ್ತಿ ಮತ್ತು 60,000 ಸಹೋದರಿಯರಿಗೆ ಅಣ್ಣಎಂಬ ವೈಯಕ್ತಿಕ ವಿವರಣೆಯನ್ನು ಅಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.