ADVERTISEMENT

IPL ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಬೀದಿ ನಾಯಿಯನ್ನು ಫುಟ್‌ಬಾಲ್ ರೀತಿ ಒದ್ದರು

ಮುಂಬೈ ಇಂಡಿಯನ್ಸ್ ವರ್ಸಸ್ ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ನಡೆದ ಒಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸದ್ದು ಮಾಡುತ್ತಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಮಾರ್ಚ್ 2024, 10:16 IST
Last Updated 26 ಮಾರ್ಚ್ 2024, 10:16 IST
<div class="paragraphs"><p>ಘಟನೆ ನಡೆದ ಸಂದರ್ಭ</p></div>

ಘಟನೆ ನಡೆದ ಸಂದರ್ಭ

   

ಬೆಂಗಳೂರು: ಮೊನ್ನೆ ಅಹಮದಾಬಾದ್‌ನಲ್ಲಿ ಭಾನುವಾರ ಐಪಿಎಲ್ ಟೂರ್ನಿಯ ಮುಂಬೈ ಇಂಡಿಯನ್ಸ್ ವರ್ಸಸ್ ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ನಡೆದ ಒಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸದ್ದು ಮಾಡುತ್ತಿದೆ.

ಪಂದ್ಯ ನಡೆಯುವಾಗ ಬೀದಿ ನಾಯಿಯೊಂದು ಪಿಚ್‌ ಒಳಗೆ ನುಗ್ಗಿ ಓಡಾಡಿತ್ತು. ನಾಯಿ ಕಂಡು ಆಟಗಾರರೂ ಕೆಲಕಾಲ ಗಾಬರಿಯಾಗಿದ್ದರು. ಆದರೆ ನಾಯಿ ವಿಚಾರದಲ್ಲಿ ಕ್ರೀಡಾಂಗಣದ ಭದ್ರತಾ ಸಿಬ್ಬಂದಿ, ಪೊಲೀಸರ ವರ್ತನೆ ವ್ಯಾಪಕ ಟೀಕೆಗೆ ಒಳಗಾಗಿದೆ. ಅಲ್ಲದೇ ವಿಡಿಯೊ ಸಾಕಷ್ಟು ಟ್ರೋಲ್ ಕೂಡ ಆಗುತ್ತಿದೆ.

ADVERTISEMENT

ಅಹಮದಾಬಾದಿನ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸುಮಾರು ಒಂದು ಲಕ್ಷ ಪ್ರೇಕ್ಷಕರು ಸೇರಿದ್ದಾಗ ಈ ಘಟನೆ ನಡೆದಿದೆ.

ನಾಯಿಯನ್ನು ಹೊರ ಹಾಕುವ ಭರದಲ್ಲಿ ಭದ್ರತಾ ಸಿಬ್ಬಂದಿ ಅದನ್ನು ಮನಸೋಇಚ್ಛೆ ಒದ್ದಿದ್ದಾರೆ. ನಾಯಿಯನ್ನು ಫುಟ್‌ಬಾಲ್ ರೀತಿ ಒದ್ದಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಯಿ ತಪ್ಪಿಸಿಕೊಂಡು ಹೊರಟರೂ ಬಿಡದೇ ಕೆಲವರು ಅದನ್ನು ಒದ್ದು ಓಡಿಸಲು ಪ್ರಯತ್ನಿಸಿದ್ದಾರೆ.

ಇದಕ್ಕೆ ಅನೇಕ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಯಿ ಸುತ್ತುವರಿದಿದ್ದ ಹಲವರು ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ದೂರಿದ್ದಾರೆ.

ಅಮಾನವೀಯವಾಗಿ ವರ್ತಿಸಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಷ್ಟು ದೊಡ್ಡ ಕ್ರೀಡಾಂಗಣದಲ್ಲಿ ಪ್ರಾಣಿಗಳು ಬಂದರೆ ಏನು ಮಾಡಬೇಕು ಎಂಬ ಕನಿಷ್ಠ ತಿಳಿವಳಿಕೆ ಇಲ್ಲದವರು ಅಲ್ಲಿ ಇದ್ದಾರೆಯೇ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆ ಪಂದ್ಯದಲ್ಲಿ ಟೈಟನ್ಸ್ ವಿರುದ್ಧ ಮುಂಬೈ ಸೋಲು ಕಂಡಿದೆ. ಇದರಿಂದ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪ್ರೇಕ್ಷಕರ ಗ್ಯಾಲರಿಗಳಿಂದ ಹಾರ್ದಿಕ್‌ ಅವರಿಗೆ ಬೂ..ಬೂ.. ಎಂದು ಗೇಲಿ ಮಾಡಿದ್ದರು. ಎರಡೂ ತಂಡಗಳ ಅಭಿಮಾನಿಗಳಿಂದಲೂ ಹಾರ್ದಿಕ್ ಟೀಕೆಗೆ ಗುರಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.