ADVERTISEMENT

4ನೇ ಮಹಡಿಯಿಂದ ಬಿದ್ದಿದ್ದ ಮಗು ರಕ್ಷಣೆ ಘಟನೆ: ಟೀಕಿಸಿದ್ದಕ್ಕೆ ತಾಯಿ ಆತ್ಮಹತ್ಯೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಮೇ 2024, 15:53 IST
Last Updated 20 ಮೇ 2024, 15:53 IST
   

ಚೆನ್ನೈ: ಕೆಲ ದಿನಗಳ ಹಿಂದೆ ಚೆನ್ನೈನ ಹೊರವಲಯದಲ್ಲಿರುವ ಅಪಾರ್ಟ್‌ಮೆಂಟ್‌ವೊಂದರ ನಾಲ್ಕನೇ ಮಹಡಿಯಿಂದ ಬಿದ್ದು ಎಂಟು ತಿಂಗಳ ಮಗು ಅದೃಷ್ಟವೆಂಬಂತೆ ಬದುಕುಳಿದಿತ್ತು. ತಾಯಿ ಹಾಲುಣಿಸುತ್ತಿದ್ದಾಗ ಕೈಜಾರಿ ಮಗು ಬಿದ್ದಿತ್ತು ಎಂದು ಹೇಳಲಾಗಿತ್ತು. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ಅಲ್ಲದೆ ಮಗುವನ್ನು ಸರಿಯಾಗಿ ನೋಡಿಕೊಳ್ಳದ್ದಕ್ಕೆ ತಾಯಿಯ ಬಗ್ಗೆ ಟೀಕೆ ವ್ಯಕ್ತವಾಗಿತ್ತು.  

ಈಗ ಆ ಮಗುವಿನ ತಾಯಿ ರಮ್ಯಾ (33) ಶವವಾಗಿ ಪತ್ತೆಯಾಗಿದ್ದಾರೆ. ಘಟನೆ ನಡೆದ ಬಳಿಕ ರಮ್ಯಾ ಮಕ್ಕಳೊಂದಿಗೆ ಕೊಯಮತ್ತೂರಿನಲ್ಲಿರುವ ತವರುಮನೆಗೆ ತೆರಳಿದ್ದರು. ಮೇ 18 ರಂದು ರಮ್ಯಾ ಪೋಷಕರು ಕಾರ್ಯಕ್ರಮಕ್ಕೆಂದು ಮನೆಯಿಂದ ಹೊರಹೋಗಿದ್ದರು. ವಾಪಸ್‌ ಬರುವಷ್ಟರಲ್ಲಿ ರಮ್ಯಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದರೂ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.

ಎರಡನೇ ಮಗುವಿನ ಜನನದ ನಂತರ ರಮ್ಯಾ ಬಾಣಂತಿ ಸನ್ನೆಯಿಂದ ಬಳಲುತ್ತಿದ್ದರು, ಅದಕ್ಕೆ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಇದರ ನಡುವೆ ಮಗು ಬಿದ್ದ ಘಟನೆ ಅವರನ್ನು ಇನ್ನಷ್ಟು ಘಾಸಿಗೊಳಿಸಿತ್ತು ಎಂದು ರಮ್ಯಾ ಅವರ ಕುಟುಂಬದವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ADVERTISEMENT

ವಿಡಿಯೊದಲ್ಲಿ ಏನಿದೆ?

ಸಾಮಾಜಿಕ ಜಾಲತಾಣದಲ್ಲಿ  ಹರಿದಾಡಿದ ವಿಡಿಯೊದಲ್ಲಿ ಕಟ್ಟಡದ ತಗಡಿನ ಶೀಟ್‌ ಮೇಲೆ ಬಿದ್ದಿರುವ ಮಗುವನ್ನು ಸ್ಥಳೀಯರು ರಕ್ಷಿಸುತ್ತಿರುವ ದೃಶ್ಯಗಳಿವೆ. 4ನೇ ಮಹಡಿಯಿಂದ ಬಿದ್ದರೂ ಮಗು ಆರೋಗ್ಯವಾಗಿತ್ತು. ಸ್ಥಳೀಯರು ಕಟ್ಟಡದ ಕಾಂಪೌಂಡ್‌ ಹತ್ತಿ ಯಾವುದೇ ಅಪಾಯವಾಗದಂತೆ ಮಗುವನ್ನು ರಕ್ಷಿಸಿದ್ದರು. ಹೀಗಿದ್ದರೂ ತಾಯಿ ಮಗುವನ್ನು ಕಾಳಜಿಯಿಂದ ನೋಡಿಕೊಳ್ಳಬೇಕಿತ್ತು ಎಂದು ಹಲವರು ನಿಂದಿಸಿದ್ದರು.

ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.