ADVERTISEMENT

ಮಹಿಳೆಯರನ್ನು ಅವಮಾನಿಸುವ ಆಕ್ಷೇಪಾರ್ಹ ಅಂಶ; ಲೋಗೊ ಬದಲಾಯಿಸಿದ ಮಿಂತ್ರಾ

ಪಿಟಿಐ
Published 30 ಜನವರಿ 2021, 14:32 IST
Last Updated 30 ಜನವರಿ 2021, 14:32 IST
ವಿವಾದಕ್ಕೀಡಾದ ಮಿಂತ್ರಾ ಲೋಗೊ
ವಿವಾದಕ್ಕೀಡಾದ ಮಿಂತ್ರಾ ಲೋಗೊ   

ನವದೆಹಲಿ: ಇ-ಕಾಮರ್ಸ್ ದೈತ್ಯ ಫ್ಲಿ‌ಪ್‌ಕಾರ್ಟ್‌ನ ಅಂಗಸಂಸ್ಥೆಯಾಗಿರುವ ದೇಶದ ಮುಂಚೂಣಿಯ ಫ್ಯಾಶನ್ ವಸ್ತುಗಳ ಮಾರಾಟ ಜಾಲತಾಣ (ಇ-ಟೇಲರ್) ಮಿಂತ್ರಾ, ಮಹಿಳೆಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ತನ್ನ ಲೋಗೊ ಬದಲಾಯಿಸಲು ನಿರ್ಧರಿಸಿದೆ.

ಮುಂಬೈ ಮೂಲದ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಸೈಬರ್ ಸೆಲ್‌ಗೆ ನೀಡಿದ ದೂರಿನಲ್ಲಿ, ಮಿಂತ್ರಾ ಲೋಗೋದಲ್ಲಿ ಮಹಿಳೆಯರನ್ನು ಅವಮಾನಿಸುವಂತಹ ಆಕ್ಷೇಪಾರ್ಹ ಅಂಶಗಳಿವೆ ಎಂದು ಆರೋಪಿಸಿದ್ದರು. ಇದಾದ ಬಳಿಕ ವಿವಾದ ಭುಗಿಲೆದ್ದಿತ್ತು.

ಪ್ರಸ್ತುತ ದೂರನ್ನು ಮಿಂತ್ರಾ ಖಚಿತಪಡಿಸಿದ್ದು, ಲೋಗೊ ಬದಲಾಯಿಸಲು ಮುಂದಾಗಿದೆ ಎಂದು ತಿಳಿಸಿದೆ. ಮಿಂತ್ರಾ ವೆಬ್‌ಸೈಟ್, ಆ್ಯಪ್ ಹಾಗೂ ಪ್ಯಾಕೇಜಿಂಗ್ ವಸ್ತುಗಳಲ್ಲೂ ಲೋಗೊ ಬದಲಾಗಲಿದೆ.

ADVERTISEMENT

ಅವೆಸ್ತಾ ಫೌಂಡೇಷನ್‌ನ ನಾಜ್ ಪಟೇಲ್ ಎಂಬಾಕೆ ಕಳೆದ ತಿಂಗಳು ಮುಂಬೈನ ಸೈಬರ್ ಸೆಲ್‌ಗೆ ದೂರು ನೀಡಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೈಬರ್ ಕ್ರೈಮ್ ಪೊಲೀಸ್ ವಿಭಾಗದ ಡೆಪ್ಯೂಟಿ ಕಮಿಷನರ್ ರಶ್ಮಿ ಕರಂಧಿಕರ್, ದೂರಿನನ್ವಯ ನಾವು ಮಿಂತ್ರಾ ಜೊತೆ ಮಾತುಕತೆ ನಡೆಸಿದ್ದೇವೆ. ಅವರು ಲೋಗೊ ಬದಲಾಯಿಸಲು ಒಪ್ಪಿಗೆ ಸೂಚಿಸಿದ್ದಾರೆ. ಈ ಸಂಬಂಧ ಇ-ಮೇಲ್ ಸಹ ಕಳುಹಿಸಲಾಗಿದೆ ಎಂದು ತಿಳಿಸಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಅವೆಸ್ತಾ ಫೌಂಡೇಷನ್, ನಮ್ಮ ಸಂಸ್ಥಾಪಕರಿಗೆ ಅಭಿನಂದನೆಗಳು. ಅಸಾಧ್ಯವೆಂದು ಅಂದುಕೊಂಡಿದ್ದನ್ನು ಸಾಧ್ಯವಾಗಿಸಿದ್ದಾರೆ. ನಿಮ್ಮೆಲ್ಲರ ಬೆಂಬಲಕ್ಕಾಗಿ ಧನ್ಯವಾದಗಳು. ಲಕ್ಷಾಂತರ ಮಹಿಳೆಯರ ಭಾವನೆಗಳನ್ನು ಗೌರವಿಸಲು ಮತ್ತು ಅವರ ಕಳವಳವನ್ನು ಪರಿಹರಿಸಿದ್ದಾಗಿ ಮಿಂತ್ರಾಗೂ ಧನ್ಯವಾದಗಳು ಎಂದು ತಿಳಿಸಿದೆ.

ಏತನ್ಮಧ್ಯೆ, ಮಿಂತ್ರಾ ಲೋಗೊ ಬದಲಾವಣೆ ಸಂಬಂಧ ನೆಟ್ಟಿಗರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ನಿರ್ಧಾರವನ್ನು ಸ್ವಾಗತಿಸಿದರೆ ಇನ್ನು ಕೆಲವರು ವಿರೋಧಿಸಿದ್ದಾರೆ.

ಫ್ಲಿಪ್‌ಕಾರ್ಟ್ ಅಂಗಸಂಸ್ಥೆಯಾಗಿರುವ ಮಿಂತ್ರಾ, ದೇಶದ ಅತಿದೊಡ್ಡ ಫ್ಯಾಷನ್ ವಸ್ತುಗಳ ಮಾರಾಟ ಜಾಲತಾಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.