ತಿಂಪು, ಭೂತಾನ್: ಕಳೆದ ಶುಕ್ರವಾರ ಹಾಗೂ ಶನಿವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನೆರೆಯ ಭೂತಾನ್ ದೇಶಕ್ಕೆ ಭೇಟಿ ನೀಡಿದ್ದರು.
ಭೇಟಿಯ ಅಂಗವಾಗಿ ಶುಕ್ರವಾರ ರಾತ್ರಿ ಭೂತಾನ್ ದೊರೆ ಜಿಗ್ಮಿ ಕೇಸರ್ ಅವರು ಮೋದಿ ಅವರಿಗಾಗಿ ತಿಂಪುವಿನ ಲಿಂಗ್‌ಕಾನಾ ಅರಮನೆಯಲ್ಲಿ (Lingkana Palace) ವಿಶೇಷ ಔತಣ ಕೂಡ ಏರ್ಪಡಿಸಿದ್ದರು.
ಊಟವಾದ ನಂತರ ಮೋದಿ ಅವರು ದೊರೆಯ ಮಕ್ಕಳ ಜೊತೆ ಕೆಲ ಹೊತ್ತು ಆಟವಾಡಿದ್ದಾರೆ. ಇದೀಗ ಆ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿವೆ. ಜಿಗ್ಮಿ ಕೇಸರ್ ಪತ್ನಿ ರಾಣಿ ಜತ್ಸುನ್ ಪೇಮಾ ಕೂಡ ಹಾಜರಿದ್ದರು. ಜಿಗ್ಮಿ ಕೇಸರ್ ದಂಪತಿಗೆ ಒಂದು ಹೆಣ್ಣು ಮಗು ಸೇರಿದಂತೆ ಮೂವರು ಮಕ್ಕಳಿದ್ದಾರೆ. ಇವರ ಜೊತೆ ಮೋದಿ ಅವರು ಕೆಲಹೊತ್ತು ಲೋಕಾಭಿರಾಮವಾಗಿ ಹರಟಿದ್ದಾರೆ.
ಅರಮನೆ ಕಚೇರಿ ಸೋಮವಾರ ಈ ಫೋಟೊಗಳನ್ನು ಬಹಿರಂಗಗೊಳಿಸಿದೆ.
ಶುಕ್ರವಾರ ಭಾರತದ ಸಹಭಾಗಿತ್ವದಲ್ಲಿ ಭೂತಾನ್‌ನ ತಿಂಪುವಿನಲ್ಲಿ ನಿರ್ಮಿಸಲಾಗಿರುವ ತಾಯಿ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ (Gyaltsuen Jetsun Pema Mother and Child Hospital) ಲೋಕಾರ್ಪಣೆ ಸೇರಿದಂತೆ ಹಲವು ಒಪ್ಪಂದಗಳಿಗೆ, ಯೋಜನೆಗಳಿಗೆ ಸಹಿ ಹಾಕಿದ್ದರು.
ಭೇಟಿಯ ವೇಳೆ ಇಂಧನ, ವ್ಯಾಪಾರ, ಡಿಜಿಟಲ್ ಸಂಪರ್ಕ, ಬಾಹ್ಯಾಕಾಶ ಮತ್ತು ಕೃಷಿ ವಲಯದಲ್ಲಿ ಸಹಕಾರ ಸೇರಿ ಹಲವು ಒಪ್ಪಂದಗಳಿಗೆ ಭಾರತ ಮತ್ತು ಭೂತಾನ್ ಶುಕ್ರವಾರ ಸಹಿ ಹಾಕಿವೆ. ಉಭಯ ರಾಷ್ಟ್ರಗಳ ನಡುವೆ ರೈಲು ಸಂಪರ್ಕ ಕಲ್ಪಿಸುವ ಯೋಜನೆಗೂ ಒಡಂಬಡಿಕೆ (ಎಂಒಯು) ಅಂತಿಮಗೊಳಿಸಲಾಗಿದೆ.
ಭೂತಾನ್ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೊ’ ಅನ್ನು ನರೇಂದ್ರ ಮೋದಿ ಅವರಿಗೆ ನೀಡಿ ಗೌರವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.