ADVERTISEMENT

ನಿಯಂತ್ರಣ ಕಳೆದುಕೊಂಡ ಚೀನಾ ರಾಕೆಟ್ ಭೂಮಿಯ ಯಾವ ಭಾಗದಲ್ಲಿ ಪತನವಾಗಲಿದೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಮೇ 2021, 2:59 IST
Last Updated 9 ಮೇ 2021, 2:59 IST
   

ನವದೆಹಲಿ: ನಿಯಂತ್ರಣ ಕಳೆದುಕೊಂಡಿರುವ ಚೀನಾದ ರಾಕೆಟ್ ಯಾವುದೇ ಕ್ಷಣ ಬೇಕಾದರೂ ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಇದು ಆತಂಕಕ್ಕೆ ಕಾರಣವಾಗಿದ್ದರೂ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ಟ್ವಿಟರ್‌ನಲ್ಲಿ ವಿಶ್ವದಾದ್ಯಂತ ಟ್ರೆಂಡ್ ಆಗಲು ಕಾರಣವಾಗಿದೆ.

22 ಟನ್ ಭಾರ ಹಾಗೂ 100 ಅಡಿ ಎತ್ತರದ ಚೀನಾದ ಲಾಂಗ್ ಮಾರ್ಚ್-5ಬಿ ರಾಕೆಟ್‌‌ನ ಭಗ್ನಾವಶೇಷ ವಾರಾಂತ್ಯದಲ್ಲಿ ಭೂಮಿಗೆ ಪತನವಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಚೀನಾದ ಮಹತ್ವಕಾಂಕ್ಷೆಯ ಶಾಶ್ವತ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಯೋಜನೆಯ ಭಾಗವಾಗಿ ಏಪ್ರಿಲ್ 29ರಂದು ಮೊದಲ ಮಾಡ್ಯೂಲ್ ಅನ್ನು ಕಕ್ಷೆಗೆ ಉಡಾಯಿಸಿತ್ತು.

ADVERTISEMENT

ಏತನ್ಮಧ್ಯೆ ರಾಕೆಟ್ ಭಗ್ನಾವಶೇಷ ಭೂಮಿಗೆ ಯಾವುದೇ ಹಾನಿಯನ್ನುಂಟು ಮಾಡಲಾರದು ಎಂದು ಚೀನಾ ಹೇಳಿದೆ. ರಾಕೆಟ್ ಅವಶೇಷ ಭೂಮಿಗೆ ಪತನವಾಗುವ ಮುನ್ನವೇ ನಾಶವಾಗಬಹುದು. ಸುಟ್ಟು ಹೋಗದಿರುವ ಭಗ್ನಾವಶೇಷಗಳು ಸಮುದ್ರಕ್ಕೆ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ವಿಶ್ಲೇಷಿಸಲಾಗಿದೆ.

ವಿಷಯ ಇಷ್ಟೊಂದು ಗಂಭೀರತೆ ಪಡೆದಿದ್ದರೂ ಪ್ರತಿಯೊಂದರಲ್ಲೂ ತಮಾಷೆಯನ್ನು ಹುಡುಕುತ್ತಿರುವ ಟ್ರೋಲ್ ಪ್ರಿಯರು, ಟ್ವಿಟರ್‌ನಲ್ಲಿ ಟ್ರೆಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವದಾದ್ಯಂತ #chineserocket ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಮೀಮ್ಸ್‌ಗಳು ವೈರಲ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.