ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ‘ಡ್ರೀಮ್ ಬಜಾರ್’ ಹೆಸರಿನ ಮಾಲ್ ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ಜನರು ಲೂಟಿ ಮಾಡಿದ್ದಾರೆ.
ಮಾಲ್ ಉದ್ಘಾಟನೆಯ ಪ್ರಯುಕ್ತ ಬಟ್ಟೆ, ಆಭರಣ, ಮನೆಯಲಂಕಾರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳ ಮೇಲೆ ಭಾರಿ ಪ್ರಮಾಣದ ಕೊಡುಗೆ ನೀಡಲಾಗಿತ್ತು. ಮಾಲ್ ಬಾಗಿಲು ತೆರೆಯುತ್ತಿದ್ದಂತೆ ಏಕಾಏಕಿ ನುಗ್ಗಿದ ಸಾವಿರಾರು ಜನರು ಅಲ್ಲಿರುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ.
ಜನರನ್ನು ನಿಯಂತ್ರಿಸಲು ಸೆಕ್ಯುರಿಟಿಗಳು, ಮಾಲ್ ಆಡಳಿತ ಮಂಡಳಿ ಪ್ರಯತ್ನಿಸಿದರೂ ಗ್ಲಾಸ್ ಬಾಗಿಲುಗಳನ್ನು ಒಡೆದು ಜನರು ನುಗ್ಗಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮಾಲ್ ಓಪನ್ ಮಾಡಲಾಗಿತ್ತು, 3.30 ಎನ್ನುವಷ್ಟರಲ್ಲಿ ಮಾಲ್ ಸಂಪೂರ್ಣವಾಗಿ ಲೂಟಿಯಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ.
ಮಾಲ್‌ನಲ್ಲಿ ಸಾವಿರಾರು ಜನರು ನೂಕುನುಗ್ಗಲಿನಲ್ಲಿ ಓಡಾಡುತ್ತಿರುವ ದೃಶ್ಯಗಳ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಮಾಲ್ ಸುತ್ತಮುತ್ತ ಭಾರಿ ಪ್ರಮಾಣದ ಸಂಚಾರ ದಟ್ಟಣೆ ಉಂಟಾಯಿತು, ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ ಎನ್ನಲಾಗಿದ್ದು, ಮಾಲ್‌ನ ಹೊರಗೆ ಸಾವಿರಾರು ಜನರು ಸಿಲುಕಿರುವ ದೃಶ್ಯಗಳನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.
ವಿದೇಶದಲ್ಲಿ ನೆಲೆಸಿರುವ ಪಾಕಿಸ್ತಾನಿ ಉದ್ಯಮಿಯೊಬ್ಬರು ಈ ಮಾಲ್ ನಿರ್ಮಿಸಿದ್ದರು ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.