ನರ್ಮದಾಪುರ(ಮಧ್ಯಪ್ರದೇಶ): ಸಾಮಾನ್ಯವಾಗಿ ಮನುಷ್ಯರಿಗೆ ಉಸಿರಾಟದ ಸಮಸ್ಯೆಯಾದಾಗ ಬಾಯಿಗೆ ಬಾಯಿ ಇಟ್ಟು ಕೃತಕ ಉಸಿರಾಟ ನಡೆಸಿ ಪ್ರಾಣ ಉಳಿಸಲಾಗುತ್ತದೆ. ಆದರೆ ಇಲ್ಲೊಬ್ಬ ಪೊಲೀಸ್ ಅಧಿಕಾರಿ ಪ್ರಜ್ಞೆತಪ್ಪಿದ್ದ ಹಾವಿನ ಬಾಯಿಗೆ ಬಾಯಿ ಇಟ್ಟು ಉಸಿರಾಟ ನಡೆಸಿ ಪ್ರಾಣ ಉಳಿಸಿದ್ದಾರೆ.
ಇದರ ವಿಡಿಯೊ ಸಾಮಾಜಿಕ ಜಾಲತಾಣಲ್ಲಿ ಹರಿದಾಡುತ್ತಿದೆ. ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ನರ್ಮದಾಪುರ ಜಿಲ್ಲೆಯ ಸೆಮಾರಿ ಹರಿಚಂದನ್ ಎನ್ನುವ ನಗರದಲ್ಲಿ. ಹಾವನ್ನು ರಕ್ಷಿಸಿದ ಪೊಲೀಸ್ ಅಧಿಕಾರಿಯನ್ನು ಅತುಲ್ ಶರ್ಮಾ ಎಂದು ಗುರುತಿಸಲಾಗಿದೆ.
ಪೊಲೀಸ್ ಅಧಿಕಾರಿಯು ಮೊದಲು ಹಾವಿನ ಉಸಿರಾಟದ ಬಗ್ಗೆ ಪರೀಕ್ಷಿಸುತ್ತಾರೆ. ಬಳಿಕ ಹಾವಿನ ಬಾಯಿಗೆ ಬಾಯಿ ಇಟ್ಟು ಉಸಿರಾಡುತ್ತಾರೆ, ನಂತರ ಅದರ ತಲೆ ಮೇಲೆ ನೀರು ಹಾಕಿ, ಮತ್ತೆ ಕೃತಕ ಉಸಿರಾಟ ನಡೆಸುತ್ತಾರೆ. ಕ್ಷಣದಲ್ಲೇ ಹಾವು ಎಚ್ಚರಗೊಳ್ಳುವುದನ್ನು ವಿಡಿಯೊದಲ್ಲಿ ಕಾಣಬಹುದು. ಈ ವಿಡಿಯೊ ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.
ಅತುಲ್ ಶರ್ಮಾ 2008ರಿಂದ ಪ್ರಾಣಿಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದು, ಇದುವರೆಗೆ ಸುಮಾರು 500 ಹಾವುಗಳನ್ನು ರಕ್ಷಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.