ಲಖನೌ:ಪ್ರತಿಭಟನಾಕಾರರನ್ನು ಪಾಕಿಸ್ತಾನಕ್ಕೆ ಹೋಗಲು ಹೇಳಿ ಎಂದು ಉತ್ತರ ಪ್ರದೇಶದ ಮೀರತ್‌ನ ಎಸ್‌ಪಿ ಸ್ಥಳೀಯ ನಿವಾಸಿಗಳಲ್ಲಿ ಹೇಳುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದು ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಡಿಸೆಂಬರ್ 20ರಂದು ನಡೆದಿದ್ದ ಪ್ರತಿಭಟನೆ ಸಂದರ್ಭದ ವಿಡಿಯೊ ಎನ್ನಲಾಗಿದೆ. ಆದರೆ, ಅಲ್ಲಿ ಸಮಾಜವಿರೋಧಿ ಚಟುವಟಿಕೆ ನಡೆಯುತ್ತಿತ್ತು. ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಲಾಗಿತ್ತು ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ.
ಕೆಲವು ಪ್ರತಿಭಟನಾಕಾರರನ್ನು ಪೊಲೀಸರು ಬೆನ್ನಟ್ಟುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಆಗ ಅಲ್ಲಿಗೆ ಬಂದ ಎಸ್‌ಪಿ ಅಖಿಲೇಶ್ ಎನ್ ಸಿಂಗ್, ‘ಎಲ್ಲಿಗೆ ಹೋಗುತ್ತಿದ್ದೀರಿ, ಈ ಗಲ್ಲಿಯನ್ನು ನಾನು ಸರಿ ಮಾಡುತ್ತೇನೆ’ ಎಂದು ಹೇಳಿದ್ದಾರೆ. ನಂತರ ಅಲ್ಲಿದ್ದ ಮೂವರ ಬಳಿ ತಿರುಗಿದ ಅವರು, ‘ಕಪ್ಪು ಮತ್ತು ಹಳದಿ ಬ್ಯಾಂಡ್ ಧರಿಸಿದವರಿಗೆ ಪಾಕಿಸ್ತಾನಕ್ಕೆ ಹೋಗಲು ಹೇಳಿ. ನೀವು ಇಲ್ಲಿನ ಆಹಾರ ತಿಂದು ಮತ್ತೊಂದು ಕಡೆಯವರನ್ನು ಹೊಗಳುತ್ತಿದ್ದೀರಿ. ಈ ಗಲ್ಲಿ ನನಗೆ ಚಿರಪರಿಚಿತ. ಒಂದು ವೇಳೆ ಏನಾದರೂ ಆದರೆ ನೀವು ಬೆಲೆ ತೆರೆಬೇಕಾದೀತು. ಪ್ರತಿಯೊಂದು ಮನೆಯಿಂದಲೂ ಒಬ್ಬೊಬ್ಬನನ್ನು ಬಂಧಿಸಬೇಕಾದೀತು’ ಎಂದು ಎಚ್ಚರಿಕೆ ನೀಡಿದ್ದಾರೆ.
ಆ ಪ್ರದೇಶದಲ್ಲಿ ಸಮಾಜವಿರೋಧಿ ಚಟುವಟಿಕೆ ನಡೆಯುತ್ತಿತ್ತು ಮತ್ತು ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಲಾಗುತ್ತಿತ್ತು ಎಂದು ಎಸ್‌ಪಿ ಪ್ರತಿಕ್ರಿಯಿಸಿರುವುದಾಗಿದಿ ಇಂಡಿಯನ್ ಎಕ್ಸ್‌ಪ್ರೆಸ್ವರದಿ ಮಾಡಿದೆ.
ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗುವವರು ಯಾರೆಂದು ತಿಳಿಯಲು ನಾವು ಆ ಪ್ರದೇಶಕ್ಕೆ ತೆರಳಿದ್ದೆವು. ನಾವಲ್ಲಿಗೆ ತಲುಪಿದಾಗ ಅವರು ಓಡಿಹೋದರು. ಅಂತಹ 3–4 ಮಂದಿ ಅಲ್ಲಿರುವುದು ನಮಗೆ ತಿಳಿಯಿತು. ಆ ಕುರಿತು ಸ್ಥಳೀಯರ ಬಳಿ ಚರ್ಚಿಸಿದ್ದೆವು ಎಂದುಅಖಿಲೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.