ಚಂಡೀಗಡ: ಪಂಜಾಬ್‌ನ ಪಠಾಣ್‌ಕೋಟ್‌ನ ನಿವಾಸಿಗಳು ಶುಕ್ರವಾರ ಸಂಜೆ ಆಕಾಶದಲ್ಲಿ ನಿಗೂಢ ಬೆಳಕಿನ ಗೆರೆಯನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಸಂಜೆ 7 ಗಂಟೆಗೆ ಕೆಲವು ನಿಮಿಷಗಳ ಕಾಲ ಮಿನುಗಿದ ಬೆಳಕಿನ ಗೆರೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
'ಪ್ರಕಾಶಮಾನ ಬೆಳಕಿನೊಂದಿಗೆ ವಸ್ತುವೊಂದು ವೇಗವಾಗಿ ಸಂಚರಿಸುವುದನ್ನು ನೋಡಿದೆವು. ದೂರದಲ್ಲಿ ರೈಲು ಹೋಗುತ್ತಿರುವಂತೆ ಭಾಸವಾಯಿತು. ಬೆಳಕು ತುಂಬ ಪ್ರಕಾಶಮಾನವಾಗಿತ್ತು ಮತ್ತು ಬಿಳಿಯಾಗಿತ್ತು. ಇದೇ ಮೊದಲ ಬಾರಿಗೆ ನಾವು ಇಂತಹದ್ದೊಂದು ವಿಸ್ಮಯವನ್ನು ನೋಡಿದೆವು. ಪೂರ್ಣ 5 ನಿಮಿಷಗಳ ವರೆಗೆ ನಮಗೆ ಈ ದೃಶ್ಯ ಕಾಣಿಸಿತು, ನಂತರ ಮಾಯವಾಯಿತು' ಎಂದು ಪಠಾಣ್‌ಕೋಟ್‌ನ ನಿವಾಸಿ ಒಬ್ಬರು ತಿಳಿಸಿದ್ದಾರೆ.
ನಿಗೂಢ ಬೆಳಕಿನ ಗೆರೆಯ ದೃಶ್ಯವನ್ನು ಚಿತ್ರೀಕರಿಸಿದ ನಿವಾಸಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಕಳೆದ ವರ್ಷ ಇಂತಹದ್ದೇ ವಿಸ್ಮಯ ಘಟನೆ ಗುಜರಾತ್‌ನ ಜೂನಗಡದ ಸುತ್ತಲಿನ ಪ್ರದೇಶದಲ್ಲಿ ಕಂಡುಬಂದಿತ್ತು. ಭೂಮಿಯ ಮೇಲ್ಮೈಗೆ ಸಮೀಪವಾಗಿ ಉಪಗ್ರಹಗಳು ಸಾಗಿದ್ದರಿಂದ ಹೀಗೆ ಬೆಳಕು ಗೋಚರಿಸಿದೆ ಎಂದು ತಜ್ಞರು ವಿಶ್ಲೇಷಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.