ನವದೆಹಲಿ: ಉದ್ದದ ಬಿಳಿ ಗಡ್ಡ, ಅದೇ ಬಣ್ಣದ ಮೀಸೆ, ಹುಬ್ಬು. ಕೆಂಪು ನಿಲುವಂಗಿ ಉಡುಗೆ ತೊಡುವ ಸಾಂತಾಗೆ ದೊಡ್ಡ ಹೊಟ್ಟೆಯೂ ಇದೆ. ಅದೇ ಸಾಂತಾಕ್ಲಾಸ್ ವೇಷದಲ್ಲಿ ಬಂದ ವಿರಾಟ್ ಕೊಹ್ಲಿ ಮಕ್ಕಳನ್ನು ವಿಸ್ಮಯಗೊಳಿಸಿದರು.
ಕೋಲ್ಕತ್ತದ ಆಶ್ರಯ ಮನೆಯೊಂದಕ್ಕೆ ಸಾಂತಾ ಕ್ಲಾಸ್ ಆಗಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ದಿಢೀರ್ ಭೇಟಿ ಕೊಟ್ಟು ಮಕ್ಕಳಿಗೆಲ್ಲ ಉಡುಗೊರೆ ಕೊಟ್ಟು ಖುಷಿಪಡಿಸಿದ್ದಾರೆ.
ಮಕ್ಕಳ ಆಸೆಗಳನ್ನೆಲ್ಲ ಕೇಳಿಕೊಂಡ ವಿರಾಟ್ ಉಡುಗೊರೆ ಮೂಟೆಯನ್ನು ತಂದು ಯಾರು ಏನೆಲ್ಲ ಬಯಸಿದ್ದರೊ ಅದೆಲ್ಲವನ್ನೂ ಹಂಚಿರುವುದನ್ನು ಸ್ಟಾರ್ ಸ್ಫೋರ್ಟ್ಸ್ ಪ್ರಕಟಿಸಿರುವ ವಿಡಿಯೊದಲ್ಲಿ ಕಾಣಬಹುದು.
ನಂತರ ಮಕ್ಕಳನ್ನು 'ಸ್ಪೈಡರ್‌ಮ್ಯಾನ್ ಮತ್ತು ಸೂಪರ್‌ಮ್ಯಾನ್ ರಜೆಯಲ್ಲಿದ್ದಾರೆ. ಹಾಗಾಗಿ ಕೊಹ್ಲಿ ಭೇಟಿ ಮಾಡೋಕೆ ಇಷ್ಟ ಪಡುವಿರೇ?‘ ಎಂದು ಕೇಳಲಾಗಿದೆ. ಓ...ಎಂದು ಕೂಗುತ್ತ ಮಕ್ಕಳು ಹೌದು ಎನ್ನುತ್ತಿದ್ದಂತೆ, ವಿರಾಟ್ ಟೊಪ್ಪಿ ಮತ್ತು ಗಡ್ಡ ತೆಗೆದು ಮಕ್ಕಳ ಎದುರು ನಿಲ್ಲುತ್ತಾರೆ.
ಕ್ರಿಸ್‌ಮಸ್ ಮತ್ತು ಹೊಸ ವರ್ಷ ಸಮೀಪಿಸುತ್ತಿರುವ ಸಮಯದಲ್ಲಿ ಪ್ರಕಟಗೊಂಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಮಕ್ಕಳೊಂದಿಗೆ ಸಮಯ ಕಳೆದಿರುವುದು ಹಾಗೂ ಅವರಿಗೆ ಅಚ್ಚರಿಯ ಉಡುಗೊರೆ ನೀಡಿರುವುದಕ್ಕೆ ನೆಟಿಜನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಭಾರತ ಮತ್ತು ವೆಸ್ಟ್‌ಇಂಡಿಸ್ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದ್ದು, ಕೊಹ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಭಾನುವಾರ ಕಟಕ್‌ನಲ್ಲಿ ಮೂರನೇ ಪಂದ್ಯ ನಡೆಯಲಿದೆ.
ಸಾಂತಾಕ್ಲಾಸ್ ಇತಿಹಾಸ
ಸಾಂತಾಕ್ಲಾಸ್ ಸೇಂಟ್ ನಿಕೋಲಸ್ ಎಂದೂ ಪ್ರಖ್ಯಾತ. `ಫಾದರ್ ಕ್ರಿಸ್‌ಮಸ್' ಎಂದೂ ಕರೆಯುವ ವಾಡಿಕೆ ಇದೆ. ಹೆಚ್ಚಿನವರ ನಂಬಿಕೆ ಪ್ರಕಾರ ಡಿ.24ರ ಸಂಜೆ ಅಥವಾ ರಾತ್ರಿ ಸನ್ನಡತೆ ಇರುವ ಮಕ್ಕಳ ಮನೆಗೆ ಚಾಕೊಲೇಟ್ ಹಾಗೂ ಉಡುಗೊರೆಯನ್ನು ಸಾಂತಾ ತಂದುಕೊಡುತ್ತಾನೆ. ಉತ್ತಮ ನಡವಳಿಕೆ ಗುರುತಿಸಿ ಹರಸುವುದು ಅವನ ವಿಶೇಷತೆ. ಡಚ್ ಮೂಲದ `ಸಿಂಟೆರ್‌ಕ್ಲಾಸ್' ಪದವೇ `ಸಾಂತಾಕ್ಲಾಸ್' ಪದದ ಮೂಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.