ADVERTISEMENT

ಉತ್ತಮ ಕಾರ್ಯ ಮಾಡಲು ಲಾಕ್‍ಡೌನ್ ಅಡ್ಡಿಯಾಗಲ್ಲ: ಸರ್ಫ್ ಜಾಹೀರಾತಿಗೆ ಜನಮೆಚ್ಚುಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಏಪ್ರಿಲ್ 2020, 18:05 IST
Last Updated 29 ಏಪ್ರಿಲ್ 2020, 18:05 IST
ಸರ್ಫ್ ಎಕ್ಸೆಲ್ ಜಾಹೀರಾತು
ಸರ್ಫ್ ಎಕ್ಸೆಲ್ ಜಾಹೀರಾತು   

ನವದೆಹಲಿ:ರಂಜಾನ್ ಪವಿತ್ರ ಮಾಸ. ಈ ತಿಂಗಳಲ್ಲಿ ಇತರರಿಗೆ ಸಹಾಯ ಮಾಡುವುದು ಪುಣ್ಯದ ಕಾರ್ಯ ಎಂದು ಪರಿಗಣಿಸಲಾಗುತ್ತಿದೆ. ಕೊರೊನಾ ಲಾಕ್‍ಡೌನ್ ಹೊತ್ತಿನಲ್ಲಿಯೂ ಒಳ್ಳೆಯ ಕಾರ್ಯಗಳನ್ನು ಹೇಗೆ ಮಾಡಬಹುದು ಎಂಬ ಸಂದೇಶವಿರುವ ಸರ್ಫ್ ಎಕ್ಸೆಲ್ ಡಿಟರ್ಜೆಂಟ್‌ನ ಜಾಹೀರಾತು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗಿದೆ.

ಪಾಕಿಸ್ತಾನದಲ್ಲಿ ಬಿಡುಗಡೆಯಾಗಿರುವ ಈ ಜಾಹೀರಾತಿನಲ್ಲಿ ಬಾಲಕನೊಬ್ಬ ಅಪ್ಪನಲ್ಲಿ ಕೇಳುವ ಪ್ರಶ್ನೆ-ಲಾಕ್‍ಡೌನ್ ಹೊತ್ತಲ್ಲಿ ಒಳ್ಳೆಯ ಕಾರ್ಯ ಮಾಡುವುದು ಹೇಗೆ? ಅದಕ್ಕೆ ಅಪ್ಪನ ಉತ್ತರ- ಒಳ್ಳೆಯ ಕಾರ್ಯ ಮಾಡಬೇಕು ಎಂಬ ಮನಸ್ಸಿದ್ದರೆ ಅದಕ್ಕೆ ದಾರಿಯೂ ಇರುತ್ತದೆ.
ಆನಂತರ ಆ ಬಾಲಕ ಮತ್ತು ಇತರ ಮಕ್ಕಳು ಅಂತರ ಕಾಯ್ದುಕೊಂಡೇ ಇನ್ನೊಬ್ಬರಿಗೆ ಯಾವ ರೀತಿ ಸಹಾಯ ಮಾಡುತ್ತಾರೆ ಎಂದು ತೋರಿಸುವ ದೃಶ್ಯಗಳಿವೆ. ಸೆಕ್ಯುರಿಟಿ ಗಾರ್ಡ್‌ಗೆ ಊಟ ನೀಡುವುದು, ಪಕ್ಕದ ಮನೆಯ ಹಿರಿಯ ವ್ಯಕ್ತಿಗೆ ಆಹಾರ ಸಾಮಾಗ್ರಿಗಳನ್ನು ನೀಡುವುದು, ವೈದ್ಯಕೀಯ ಕಾರ್ಯಕರ್ತೆಗೆ ಥ್ಯಾಂಕ್ಸ್ ಎಂದು ಬರೆದು ಕಳುಹಿಸುವುದು ಹೀಗೆ ಮಕ್ಕಳು ತಮ್ಮ ಕೈಲಾದ ಕಾರ್ಯಗಳನ್ನು ಮಾಡುತ್ತಿರುವುದನ್ನುಇಲ್ಲಿ ತೋರಿಸಲಾಗಿದೆ.

ಉತ್ತಮ ಕಾರ್ಯಗಳನ್ನು ಮಾಡುವಾಗ ಅಂಗಿ ಮೇಲೆ ಕಲೆಯಾದರೆ ಕಲೆ ಒಳ್ಳೆಯದೇ ಎಂಬ ಟ್ಯಾಗ್‌ಲೈನ್ ಇರುವ ಈ ಜಾಹೀರಾತು ಉತ್ತಮ ಕಾರ್ಯಗಳು ನಿಲ್ಲುವುದಿಲ್ಲ ಎಂಬ ಸಂದೇಶದೊಂದಿಗೆ ಮುಕ್ತಾಯವಾಗುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.