ವಾಷಿಂಗ್ಟನ್: ಜಗತ್ತಿನ ಅತಿ ಕುಬ್ಜ ಮಹಿಳೆ ಎಂದು ಹೆಸರು ಪಡೆದಿರುವ ಭಾರತದ ಜ್ಯೋತಿ ಆಮ್ಗೆ (30) ಅವರು ಜಗತ್ತಿನ ಅತಿ ಎತ್ತರದ ಮಹಿಳೆ ಎನ್ನುವ ಖ್ಯಾತಿ ಪಡೆದಿರುವ ಟರ್ಕಿಶ್ ವೆಬ್ ಡೆವಲಪರ್ ರುಮೆಯ್ಸಾ ಗೆಲ್ಗಿ (27) ಅವರನ್ನು ಭೇಟಿಯಾಗಿದ್ದಾರೆ.
20ನೇ ಗಿನ್ನೀಸ್ ವಿಶ್ವ ದಾಖಲೆಯ ದಿನವಾದ ನ.13ರಂದು ಈ ಇಬ್ಬರು ಮಹಿಳೆಯರು ಮೊದಲ ಬಾರಿಗೆ ಭೇಟಿಯಾಗಿದ್ದಾರೆ.
ಗೆಲ್ಗಿ ಅವರು 7 ಅಡಿ 1 ಇಂಚು (215.16 ಸೆಂ.ಮೀ) ಎತ್ತರವಿದ್ದಾರೆ. ಈ ಮೂಲಕ ಜಗತ್ತಿನ ಅತಿ ಎತ್ತರದ ಮಹಿಳೆಯಾಗಿ ಗಿನ್ನೀಸ್ ದಾಖಲೆ ನಿರ್ಮಿಸಿದ್ದಾರೆ.
ಭಾರತದ ಜ್ಯೋತಿ ಅವರು, 2 ಅಡಿ 1 ಇಂಚು (62.8 ಸೆಂ.ಮೀ) ಎತ್ತರವಿದ್ದಾರೆ. ಈ ಮೂಲಕ ಜಗತ್ತಿನ ಕುಬ್ಜ ಮಹಿಳೆಯಾಗಿ ಗಿನ್ನೀಸ್ ದಾಖಲೆ ನಿರ್ಮಿಸಿದ್ದಾರೆ.
ಭೇಟಿಯ ವೇಳೆ ಈ ಇಬ್ಬರೂ ತಮ್ಮ ಗಿನ್ನೀಸ್ ದಾಖಲೆಯ ಪ್ರಮಾಣಪತ್ರವನ್ನು ತೋರಿಸಿದ್ದಾರೆ.
‘ಜ್ಯೋತಿ ಅವರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಸಾಧ್ಯವಾಗಲಿಲ್ಲ, ಅದನ್ನು ಹೊರತುಪಡಿಸಿದರೆ ಅವರನ್ನು ಭೇಟಿಯಾಗಿ ಬಹಳ ಸಂತೋಷವಾಯಿತು’ ಎಂದು ಗೆಲ್ಗಿ ಪ್ರತಿಕ್ರಿಯಿಸಿದ್ದಾರೆ.
‘ಸಾಮಾನ್ಯವಾಗಿ ನನಗಿಂತ ಎತ್ತರವಿರುವವರನ್ನು ನೋಡುತ್ತಲೇ ಇರುತ್ತೇನೆ, ಆದರೆ ಜಗತ್ತಿನ ಅತಿ ಎತ್ತರದ ಮಹಿಳೆಯನ್ನು ನೋಡಿ ಬಹಳ ಸಂತಸವಾಯಿತು’ ಎಂದು ಜ್ಯೋತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.