ADVERTISEMENT

ಮನೆ ಸ್ವಚ್ಛಗೊಳಿಸುವಾಗ ಮಹಿಳೆಗೆ ಸಿಕ್ಕಿತು 100 ವರ್ಷ ಹಳೆಯ ಚಾಕೊಲೇಟ್ ಬಾಕ್ಸ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಮಾರ್ಚ್ 2023, 11:15 IST
Last Updated 5 ಮಾರ್ಚ್ 2023, 11:15 IST
ಚಾಕೊಲೇಟ್
ಚಾಕೊಲೇಟ್    

ಲಂಡನ್: ಇಂಗ್ಲೆಂಡ್ ದೇಶದ ಪ್ಲೇಮೌತ್‌ ಎಂಬಲ್ಲಿನ ಮಹಿಳೆಯೊಬ್ಬರಿಗೆ ತಮ್ಮ ಮನೆಯನ್ನು ಸ್ವಚ್ಛಗೊಳಿಸುವಾಗ 100 ವರ್ಷದಷ್ಟು ಹಳೆಯದಾದ ಡೈರಿಮಿಲ್ಕ್ ಚಾಕೊಲೇಟ್ ಬಾಕ್ಸ್ (ರಾಪರ್) ಸಿಕ್ಕಿದೆ.

ಈ ಸಂತೋಷವನ್ನು ಅವರು ಸಾಮಾಜಿಕ ಜಾಲತಾಣಗಳ ಮುಖಾಂತರ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಎಮ್ಮಾ ಯಂಗ್ ಎನ್ನುವ ಮಹಿಳೆ ಮನೆಯ ಬಾತ್‌ರೂಂ ಸ್ವಚ್ಛಗೊಳಿಸುವಾಗ ಅಟ್ಟದ ಹೊದಿಕೆಯ ಸಂದಿಯಲ್ಲಿ ಡೈರಿ ಮಿಲ್ಕ್‌ನ ಚಾಕೊಲೇಟ್ ಬಾಕ್ಸ್ ಸುಸ್ಥಿತಿಯಲ್ಲಿ ಸಿಕ್ಕಿದೆ. ಇದನ್ನು ಕಂಡು ಅವರು ಡೈರಿ ಮಿಲ್ಕ್ ಕಂಪನಿಗೆ ಹೋಗಿ ವಿಚಾರಿಸಿದ್ದರು.

ADVERTISEMENT

ನಂತರ ಈ ಚಾಕೊಲೇಟ್ ಇಂಗ್ಲೆಡ್‌ನ ಬೌರ್ನ್‌ವಿಲ್ಲೆ ಎಂಬಲ್ಲಿ ತಯಾರಿಸಲಾಗಿದ್ದು 1930ಕ್ಕಿಂತ ಮೊದಲು ಇದನ್ನು ತಯಾರಿಸಲಾಗಿದೆ ಎಂದು ತಿಳಿದು ಬಂದಿದೆ.

‘ನಾನಿರುವ ಮನೆಯನ್ನು 1930ರ ಸಮಯದಲ್ಲಿ ನಿರ್ಮಿಸಲಾಗಿದೆ. ಚಾಕೊಲೇಟ್ ರಾಪರ್ ತುದಿಯಲ್ಲಿ ಇಲಿ ಕಡಿದು ಸ್ವಲ್ಪವೇ ಹಾಳಾಗಿದ್ದು ಬಿಟ್ಟರೇ ಸುಸ್ಥಿತಿಯಲ್ಲಿದೆ. ಇದನ್ನು ಮನೆಯಲ್ಲಿ ಫೋಟೊ ಪ್ರೇಮ್ ಮಾಡಿ ಹಾಕುತ್ತೇನೆ. ಇದನ್ನು ಜೋಪಾನವಾಗಿ ಕಾಯ್ದಿಟ್ಟುಕೊಳ್ಳುತ್ತೇನೆ. ಏಕೆಂದರೆ ನಾನು ಚಾಕೊಲೇಟ್ ಪ್ರಿಯೆ’ ಎಂದು ಎಮ್ಮಾ ಹೇಳಿರುವುದನ್ನು ಮೆಟ್ರೊ ಸುದ್ದಿವಾಹಿನಿ ಉಲ್ಲೇಖಿಸಿದೆ.

ಇನ್ನು ಈ ಬಗ್ಗೆ ಕ್ಯಾಡ್‌ಬರಿ ಡೈರಿ ಮಿಲ್ಕ್ ಯುಕೆ ಕೂಡ ಪ್ರತಿಕ್ರಿಯಿಸಿದ್ದು, ‘ನೂರು ವರ್ಷಗಳಿಂದಲೂ ಕ್ಯಾಡ್‌ಬರಿಸ್ ಸಂತೋಷದ ಸಿಹಿಯನ್ನು ಹಂಚುತ್ತಿರುವುದು ಹಾಗೂ ಇತಿಹಾಸದ ಭಾಗವಾಗಿರುವುದು ನಮಗೆ ಸಂತೋಷ ತಂದಿದೆ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.