ಬೆಂಗಳೂರು: ಇತ್ತೀಚೆಗೆ ಆಫ್ರಿಕಾ ಖಂಡದ ದಕ್ಷಿಣ ಭಾಗದಲ್ಲಿರುವ ಬೊಟ್ಸ್‌ವಾನ ದೇಶದ ವಜ್ರದ ಗಣಿಯಲ್ಲಿ ಬೃಹತ್ ವಜ್ರವೊಂದು ಪತ್ತೆಯಾಗಿದೆ. ಈ ವಜ್ರದ ಬೆಲೆ ಎಷ್ಟು ಇರಬಹುದು ಎಂದು ಚರ್ಚೆಗಳು ಶುರುವಾಗಿವೆ.
2,492 ಕ್ಯಾರಟ್ ಇರುವ (500 ಗ್ರಾಂ) ಈ ವಜ್ರವನ್ನು ಕೊಂಡುಕೊಳ್ಳಲು ಈಗಾಗಲೇ ಅನೇಕ ಕಂಪನಿಗಳು ತಯಾರಿ ಆರಂಭಿಸಿವೆ.
ಫಿನಾನ್ಸಿಯಲ್ ಟೈಮ್ಸ್ ಪತ್ರಿಕೆ ವರದಿ ಪ್ರಕಾರ ಈ ಅಮೂಲ್ಯ ವಜ್ರದ ಆರಂಭಿಕ ಬೆಲೆಯೇ ₹335 ಕೋಟಿ ಎನ್ನಲಾಗಿದೆ. ಇದರ ಬೆಲೆ ಇನ್ನೂ ಮೂರ್ನಾಲ್ಕು ಪಟ್ಟು ಹೆಚ್ಚಳವಾಗುವ ಸಂಭವವಿದೆ ಎಂದು ತಿಳಿಸಿದೆ. ಈ ಕುರಿತು ಎನ್‌ಡಿಟಿವಿ ವೆಬ್‌ಸೈಟ್ ವರದಿ ಮಾಡಿದೆ.
ಪ್ರಪಂಚದಲ್ಲಿ ಹೆಚ್ಚು ವಜ್ರವನ್ನು ಉತ್ಪಾದಿಸುವ 2ನೇ ದೇಶವಾಗಿರುವ ಬೊಟ್ಸ್‌ವಾನದ ಕರೋವೆ ಗಣಿಯೊಂದರಲ್ಲಿ ಈ ಬೃಹತ್ ವಜ್ರ ಪತ್ತೆಯಾಗಿದೆ.
ಇದು ಬೊಟ್ಸ್‌ವಾನದಲ್ಲಿ ಈವರೆಗೆ ದೊರೆತ ಅತಿ ಹೆಚ್ಚು ತೂಕದ ವಜ್ರವಾಗಿದೆ. ಅಲ್ಲದೇ ಪ್ರಪಂಚದಲ್ಲೇ ಇದು ಈವರೆಗೆ ದೊರೆತಿರುವ 2ನೇ ದೊಡ್ಡ ವಜ್ರ ಎನ್ನಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಈ ಮೊದಲು 1905ರಲ್ಲಿ ಅತಿ ಹೆಚ್ಚು ತೂಕದ 3,106 ಕ್ಯಾರಟ್‌ನ ವಜ್ರ ದೊರಕಿತ್ತು.
ಈ ಹಿಂದೆ 2019ರಲ್ಲಿ ಇದೇ ಕರೋವೆ ಗಣಿಯಲ್ಲಿ ಪತ್ತೆಯಾಗಿದ್ದ 1,758 ಕ್ಯಾರಟ್ ‘ಸೆವೆಲೊ’ ವಜ್ರವನ್ನು ಪ್ರಪಂಚದ ಎರಡನೇ ಅತಿ ದೊಡ್ಡ ವಜ್ರ ಎಂದು ಗುರುತಿಸಲಾಗಿತ್ತು. ಫ್ರೆಂಚ್ ಫ್ಯಾಷನ್ ಹೌಸ್ ‘ಲೂಯಿ ವಿಟೋನ್’ ಆ ವಜ್ರವನ್ನು ಖರೀದಿಸಿತ್ತು. ಆದರೆ ಅದರ ಮೊತ್ತವನ್ನು ಬಹಿರಂಗಪಡಿಸಿರಲಿಲ್ಲ.
ಈಗ ಸಿಕ್ಕಿರುವ 2,492 ಕ್ಯಾರಟ್ ಇರುವ ವಜ್ರವನ್ನು ಪ್ರದರ್ಶನಕ್ಕೆ ಇಡಲಾಗುವುದು ಎಂದು ಬೋಟ್ಸ್‌ವಾನ ತಿಳಿಸಿದೆ. ಕಳೆದ ನೂರು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಇಷ್ಟು ತೂಕದ ವಜ್ರ ಪತ್ತೆಯಾಗಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.