ಪೋರ್ಚುಗಲ್: ಜಗತ್ತಿನ ಅತ್ಯಂತ ಹಿರಿಯ ನಾಯಿ ಎಂದು ಖ್ಯಾತಿ ಪಡೆದು ಗಿನ್ನೆಸ್ ವಿಶ್ವ ದಾಖಲೆ ಪುಸ್ತಕ ಸೇರಿದ್ದ ನಾಯಿ ಬೊಬಿ ಮೃತಪಟ್ಟಿದೆ.
ಮೇ 11, 1992ರಲ್ಲಿ ಜನಿಸಿದ ಬೊಬಿ ಅತ್ಯಂತ ದೀರ್ಘ ಕಾಲದವರೆಗೆ ಬದುಕಿತ್ತು. ಮೃತಪಟ್ಟ ವೇಳೆ ಬೊಬಿಗೆ 31 ವರ್ಷ 165 ದಿನಗಳಾಗಿತ್ತು ಎಂದು ಮಾಲೀಕ ಲಿಯೊನಲ್ ಕೋಸ್ಟಾ ತಿಳಿಸಿದ್ದಾರೆ.
ವಿಶ್ವದ ಅತ್ಯಂತ ಹಳೆಯ ಜೀವಂತ ನಾಯಿ ಎಂದು ಖ್ಯಾತಿ ಪಡೆದಿದ್ದ ಬೊಬಿ, ಆಸ್ಟ್ರೇಲಿಯಾದ ನಾಯಿ ಬ್ಲೂಯ್ ದಾಖಲೆಯನ್ನು ಮುರಿದಿತ್ತು. ಬ್ಲೂಯ್ 29 ವರ್ಷ ಬದುಕಿತ್ತು.
ಬೊಬಿ ಸಾವಿನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಡಾ. ಕರೆನ್, ‘ಬೊಬಿಯನ್ನು ಕಳೆದುಕೊಂಡಿದ್ದಕ್ಕೆ ತುಂಬಾ ದುಃಖವಾಗಿದೆ. ಬೊಬಿ ದೀರ್ಘಾಯುಷ್ಯಕ್ಕೆ ಅವನ ಮಾಲೀಕ ಲಿಯೊನೆಲ್ ಹಲವು ಕಾರಣಗಳನ್ನು ನೀಡಿದ್ದಾರೆ. ಉತ್ತಮ ಆಹಾರ, ಪ್ರಕೃತಿಯೊಂದಿಗೆ ಒಡನಾಟ, ಸ್ವಾತಂತ್ರ್ಯ ಮತ್ತು ಪ್ರೀತಿ. ನಾವು ಅವನನ್ನು ತುಂಬಾ ಪ್ರೀತಿಸುತ್ತೇವೆ ಎಂಬುವುದು ಅವನಿಗೂ ಗೊತ್ತಿದೆ’ ಎಂದು ಬರೆದುಕೊಂಡಿದ್ದಾರೆ.
‘ಈ ತಳಿಯ ನಾಯಿಗಳು (Rafeiro do Alentejo) ಸುಮಾರು 12ರಿಂದ 14 ವರ್ಷ ಬದುಕುತ್ತವೆ. ಆದರೆ ಬೊಬಿ ಅದನ್ನು ಸುಳ್ಳು ಮಾಡಿದ್ದಾನೆ. ಬೊಬಿಗೆ ಪ್ರಪಂಚಾದಾದ್ಯಂತ ಹಲವು ಅಭಿಮಾನಿಗಳು ಇದ್ದಾರೆ. ಅವನನ್ನು ಕಳೆದುಕೊಂಡಿದ್ದಕ್ಕೆ ತುಂಬಾ ದುಃಖವಾಗುತ್ತಿದೆ’ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.