ADVERTISEMENT

ದೇಣಿಗೆ ಸಂಗ್ರಹಿಸಿ ಜೊಮ್ಯಾಟೊ ಡೆಲಿವರಿ ಬಾಯ್‌ಗೆ ಬೈಕ್ ಕೊಡಿಸಿದ ಯುವಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜೂನ್ 2021, 8:39 IST
Last Updated 22 ಜೂನ್ 2021, 8:39 IST
ಹೈದರಾಬಾದ್‌ನಲ್ಲಿ ಜೊಮ್ಯಾಟೊ ಡೆಲಿವರಿ ಬಾಯ್‌ಗೆ ದೇಣಿಗೆ ಮೂಲಕ ಬೈಕ್
ಹೈದರಾಬಾದ್‌ನಲ್ಲಿ ಜೊಮ್ಯಾಟೊ ಡೆಲಿವರಿ ಬಾಯ್‌ಗೆ ದೇಣಿಗೆ ಮೂಲಕ ಬೈಕ್   

ಬೆಂಗಳೂರು: ಹೈದರಾಬಾದ್‌ನಲ್ಲಿ ಜೊಮ್ಯಾಟೊ ಕಂಪನಿಯ ಫುಡ್ ಡೆಲಿವರಿ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡುತ್ತಿರುವ ಮೊಹಮ್ಮದ್ ಅಕೀಲ್ ಎಂಬ ಯುವಕನಿಗೆ ಆನ್‌ಲೈನ್ ದೇಣಿಗೆ ಸಂಗ್ರಹದ ಮೂಲಕ ಬೈಕ್ ಲಭಿಸಿದೆ.

ಅಕೀಲ್ ಬಳಿ ಬೈಸಿಕಲ್ ಇದ್ದು, ಅದರಲ್ಲಿಯೇ ಜೊಮ್ಯಾಟೊ ಫುಡ್ ಡೆಲಿವರಿ ಮಾಡುತ್ತಿದ್ದರು. ಜೂನ್ 14 ರಂದು ರಾತ್ರಿ ರಾಬಿನ್ ಮುಕೇಶ್ ಎಂಬವರು ಹೈದರಾಬಾದ್‌ನ ಕಿಂಗ್ ಕೋಟಿ ಪ್ರದೇಶದಿಂದ ಜೊಮ್ಯಾಟೊದಲ್ಲಿ ಚಹಾ ಬುಕ್ ಮಾಡಿದ್ದರು.

ರಾಬಿನ್ ಅವರ ಫುಡ್ ಆರ್ಡರ್ ಪಡೆದುಕೊಂಡ ಅಕೀಲ್, ಮಳೆಯಿದ್ದರೂ, ಬೈಸಿಕಲ್‌ನಲ್ಲಿಯೇ ನಿಗದಿತ ಸಮಯಕ್ಕೆ ತಲುಪಿಸಿದ್ದರು.

ADVERTISEMENT

ಅಕೀಲ್, ಎಂಜಿನಿಯರಿಂಗ್ ಪದವಿ ವ್ಯಾಸಂಗ ಕೂಡ ಮಾಡುತ್ತಿದ್ದು, ಅದರ ಜತೆಗೇ ಜೊಮ್ಯಾಟೊದಲ್ಲಿ ಕೆಲಸ ಮಾಡಿಕೊಂಡಿದ್ದರು. ಅಕೀಲ್ ಕಷ್ಟ ಗಮನಿಸಿದ ರಾಬಿನ್ ಮುಕೇಶ್, ಆನ್‌ಲೈನ್‌ನಲ್ಲಿ ದೇಣಿಗೆ ಸಂಗ್ರಹ ಅಭಿಯಾನ ಆರಂಭಿಸಿದ್ದರು. ಅಕೀಲ್‌ಗೆ ಬೈಕ್ ಕೊಡಿಸುವ ಉದ್ದೇಶ ಅವರದ್ದಾಗಿತ್ತು.

ದೇಣಿಗೆ ಅಭಿಯಾನ ಆರಂಭಿಸಿದ 12 ಗಂಟೆಯಲ್ಲೇ ರಾಬಿನ್, ₹73,000 ಸಂಗ್ರಹಿಸಿದ್ದು, ಅದರಲ್ಲಿ ಅಕೀಲ್‌ಗೆ ಟಿವಿಎಸ್ ಎಕ್ಸ್‌ಎಲ್ಸ್ ಬೈಕ್ ಕೊಡಿಸಿದ್ದಾರೆ. ಜತೆಗೆ ರೈನ್‌ಕೋಟ್, ಮಾಸ್ಕ್ ಮತ್ತು ಹೆಲ್ಮೆಟ್ ಕೂಡ ಕೊಡಿಸಿದ್ದಾರೆ.

ಉಳಿಕೆಯಾದ ₹5,000 ಮೊತ್ತವನ್ನು ಅಕೀಲ್ ಕಾಲೇಜು ಶುಲ್ಕ ಕಟ್ಟಲು ಬಳಸುವಂತೆ ಕೊಟ್ಟಿದ್ದಾರೆ. ನಂತರವೂ ಸಾಕಷ್ಟು ದೇಣಿಗೆ ಪಡೆದುಕೊಳ್ಳುವಂತೆ ರಾಬಿನ್ ಅವರಿಗೆ ಮನವಿ ಬಂದಿತ್ತು, ಆದರೆ ಈಗಾಗಲೇ ನಿಗದಿತ ಮೊತ್ತ ಸಂಗ್ರಹವಾಗಿದ್ದರಿಂದ, ರಾಬಿನ್ ಅಭಿಯಾನ ನಿಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.