ADVERTISEMENT

ಮಾಲಿನ್ಯರಹಿತ ಜಲಜನಕ ರೈಲು

ಜಕ್ಕಣಕ್ಕಿ ಎಂ ದಯಾನಂದ
Published 25 ಸೆಪ್ಟೆಂಬರ್ 2018, 19:30 IST
Last Updated 25 ಸೆಪ್ಟೆಂಬರ್ 2018, 19:30 IST
ಜರ್ಮನಿಯಲ್ಲಿ ಸಂಚಾರ ಆರಂಭಿಸಿದ  ಎರಡು ಬೋಗಿಗಳ ಜಲಜನಕ ರೈಲು
ಜರ್ಮನಿಯಲ್ಲಿ ಸಂಚಾರ ಆರಂಭಿಸಿದ  ಎರಡು ಬೋಗಿಗಳ ಜಲಜನಕ ರೈಲು   

ತೈಲ ದರ ಏರಿಕೆಯು ದೇಶದಾದ್ಯಂತ ಭಾರಿ ಚರ್ಚೆಗೊಳಗಾಗುತ್ತಿದೆ. ಇಂಧನ ದರ ಹಲವು ದೇಶಗಳ ಅರ್ಥವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಪರ್ಯಾಯ ಇಂಧನ ಮೂಲಗಳ ಬಗ್ಗೆ ಪ್ರತಿಯೊಬ್ಬರೂ ಗಂಭೀರವಾಗಿ ಯೋಚಿಸುವಂತಾಗಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಹೆಜ್ಜೆ ಮುಂದಿಟ್ಟಿರುವ ಜರ್ಮನಿಯು ಜಲಜನಕವನ್ನೂ ಇಂಧನವಾಗಿ ಬಳಸಿಕೊಳ್ಳುತ್ತಿದೆ. ಪ್ರಪಂಚದಲ್ಲೇ ಮೊದಲ ಬಾರಿಗೆ ಜಲಜನಕದಿಂದ ಸಾಗುವ ರೈಲಿನ ಪರೀಕ್ಷೆಯನ್ನು ಇತ್ತೀಚೆಗೆ ಯಶಸ್ವಿಯಾಗಿ ನಡೆಸಿದೆ. ಪರಿಸರ ಸ್ನೇಹಿಯಾದ ಇದು ಅಪಾರ ಪ್ರಮಾಣದಲ್ಲಿ ವಾಯುಮಾಲಿನ್ಯ ಮಾಡುವ ಡೀಸೆಲ್‌ಗೆ ಉತ್ತಮ ಪರ್ಯಾಯವಾಗಿದೆ.

ರೈಲುಗಳು ದೇಶದ ನರನಾಡಿಯಂತೆ. ಎಲ್ಲಾ ದೇಶಗಳಲ್ಲೂ ಸಮೂಹ ಸಾರಿಗೆಯಲ್ಲಿ ಇವು ಮಹತ್ತರ ಪಾತ್ರ ವಹಿಸುತ್ತವೆ. ರೈಲುಗಳ ಚಾಲನೆಗೆ ಸಾಕಷ್ಟು ಇಂಧನದ ಅಗತ್ಯವೂ ಇದೆ. ಡೀಸೆಲ್‌, ವಿದ್ಯುತ್‌ ಹೀಗೆ ಹಲವು ಇಂಧನಗಳಿಂದ ರೈಲುಗಳು ಸಂಚರಿಸುತ್ತವೆ. ಜರ್ಮನಿಯಲ್ಲಿ ಈಗ ಬಳಸಿರುವ ಜಲಜನಕದ ರೈಲು ದುಬಾರಿಯಾದರೂ ಮುಂದಿನ ದಿನಗಳಲ್ಲಿ ಬಹುಬೇಡಿಕೆ ಸೃಷ್ಟಿಸಲಿದೆ ಎನ್ನಲಾಗುತ್ತಿದೆ.

ಫ್ರಾನ್ಸ್‌ನ ಅಲ್‌ಸ್ಟಾಂ ಕಂಪನಿ ಎರಡು ಬೋಗಿಗಳ ನೀಲಿ ಬಣ್ಣದ ರೈಲನ್ನು ನಿರ್ಮಾಣ ಮಾಡಿದ್ದು, ಉತ್ತರ ಜರ್ಮನಿಯ ಎರಡು ಪ್ರಾಂತ್ಯಗಳಲ್ಲಿ ಸಂಚಾರ ನಡೆಸಿದೆ. ಈ ಭಾಗದಲ್ಲಿನ ಹಳಿಗಳಲ್ಲಿ ಹೆಚ್ಚಿನ ಡೀಸೆಲ್‌ ರೈಲುಗಳು ಸಂಚರಿಸುತ್ತಿವೆ. ಉತ್ತರ ಜರ್ಮನಿಯ ಬ್ರೆಮೆರ್‌ವೊರ್ಡೆಯಲ್ಲಿ ಜಲಜನಕದ ಮರುಭರ್ತಿ ಕೇಂದ್ರವಿದ್ದು, ಇಲ್ಲಿಂದಲೇ ರೈಲಿಗೆ ಇಂಧನ ತುಂಬಿಸಲಾಗುತ್ತದೆ. ಶೂನ್ಯಮಾಲಿನ್ಯದ ಇಂತಹ ಇನ್ನೂ 14 ರೈಲುಗಳನ್ನು ತಯಾರಿಸಿ 2021 ರ ವೇಳೆಗೆ ಸ್ಯಾಕ್ಸೊನಿ ರಾಜ್ಯಕ್ಕೆ ನೀಡುವ ಗುರಿಯನ್ನು ಕಂಪನಿ ಹೊಂದಿದೆ. ಜರ್ಮನಿಯ ಇನ್ನೂ ಹಲವು ರಾಜ್ಯಗಳು ತಮಗೂ ಜಲಜನಕದ ರೈಲು ಬೇಕು ಎಂಬ ಬೇಡಿಕೆ ಮುಂದಿಟ್ಟಿವೆ.

ADVERTISEMENT

ಶಕ್ತಿ ಉತ್ಪಾದನೆ: ಜಲಜನಕ ಮತ್ತು ಆಮ್ಲಜನಕ ಸಂಯೋಜನೆಯ ಇಂಧನ ಕೋಶಗಳು ವಿದ್ಯುತ್‌ ಉತ್ಪಾದಿಸುತ್ತವೆ. ಕೇವಲ ನೀರು ಮತ್ತು ಉಗಿ ಮಾತ್ರವೇ ಸೃಷ್ಟಿಯಾಗುವುದರಿಂದ ಇವನ್ನು ಶೂನ್ಯ ಮಾಲಿನ್ಯದ ರೈಲುಗಳು ಎಂದು ಕರೆಯಲಾಗುತ್ತದೆ. ಈ ಇಂಧನ ಕೋಶಗಳು ಎರಡು ಬೋಗಿಗಳ ಮಧ್ಯದಲ್ಲಿರುತ್ತವೆ. ಹೆಚ್ಚಿನ ಶಕ್ತಿಯನ್ನು ರೈಲಿನಲ್ಲಿರುವ ಲಿಥಿಯಂ ಬ್ಯಾಟರಿಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಲಾಗುತ್ತದೆ. ಸದ್ಯ ಅಲ್‌ಸ್ಟಾಂ ಕಂಪನಿಯ ಕೊರಾಡಿಯಾ ಐಲಿಂಟ್‌ ರೈಲಿನ ಒಂದು ಪೂರ್ಣ ಜಲಜನದ ಟ್ಯಾಂಕ್‌, 1000 ಕಿ.ಮೀ ದೂರ ಸಾಗಿಸುತ್ತದೆ. ಈ ರೈಲು ಡೀಸೆಲ್‌ಗೆ ಪರ್ಯಾಯವಾಗಿರುವುದರ ಜತೆಗೆ ವಿದ್ಯುದ್ದೀಕರಣವಾಗಿರದ ರೈಲು ಮಾರ್ಗಗಳಿಗೂ ಅನುಕೂಲವಾಗಲಿದೆ.

‘ಜಲಜನಕದ ರೈಲುಗಳನ್ನು ನಿರ್ಮಿಸುವುದು ಮತ್ತು ಆಮದು ಮಾಡಿಕೊಳ್ಳುವುದು ದುಬಾರಿಯಾದರೂ ಇದರ ಚಾಲನೆ ಕಡಿಮೆ ಖರ್ಚಿನದು’ ಎನ್ನುತ್ತಾರೆ ಅಲ್‌ಸ್ಟಾಂನ ಪ್ರಾಜೆಕ್ಟ್‌ ಮ್ಯಾನೇಜರ್‌ ಸ್ಟೀಫೆನ್‌ ಶ್ರಾಂಕ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.