ಬೆಂಗಳೂರು:‘ಚಂದ್ರಯಾನ-2 ವಿಫಲವಾಯಿತು ಎಂದು ಬೇಸರ ಮಾಡಿಕೊಳ್ಳಬೇಡಿ. ಈ ಸೋಲೇ ನಾಳೆಯ ಗೆಲುವಿಗೆ ಸೋಪಾನವಾಗುತ್ತದೆ. ದೇಶ ನಿಮ್ಮೊಂದಿಗಿದೆ’ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನಗರದ ಪೀಣ್ಯದ ಇಸ್ರೊ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿಜ್ಞಾನಿಗಳು ಹಾಗೂದೇಶವನ್ನುದ್ದೇಶಿಸಿ ಭಾಷಣ ಮಾಡಿದರು.
‘ಭಾರತ ಯಾವಾಗಲೂ ನಿಮ್ಮೊಂದಿಗೆಇರುತ್ತದೆ. ಯಾರೂ ಹತಾಶರಾಗಬೇಡಿ ನಿಮ್ಮೊಂದಿಗೆ ನಾನಿದ್ದೇನೆ. ನಿನ್ನೆ ರಾತ್ರಿ ನಿಮ್ಮ ಮನಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದೇನೆ’ ಎಂದು ತಿಳಿಸಿದರು.
‘ಚಂದ್ರಯಾನ ಪ್ರಯಾಣ ಒಂದು ಸುಂದರ ಕ್ಷಣ.ನಿಮ್ಮ ಪ್ರಯತ್ನವನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಇಂದಿನ ನಮ್ಮ ಕಲಿಕೆ ನಾಳೆ ನಮ್ಮನ್ನು ಗಟ್ಟಿಗೊಳಿಸುತ್ತದೆ. ಚಂದ್ರನನ್ನು ತಲುಪುವ ನಮ್ಮ ಆಸೆ ಇನ್ನಷ್ಟು ಬಲಗೊಂಡಿದೆ. ಆರ್ಬಿಟರ್ ಈಗಲೂ ಚಂದ್ರನ ಸುತ್ತ ಸುತ್ತುತ್ತಿದೆ. ಇದೇನು ಸಣ್ಣ ಸಾಧನೆಯಲ್ಲ’ಎಂದು ಪ್ರಧಾನಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನಸುಕಿನ ಮೂರು ಗಂಟೆಗೆ ವಾಪಸ್ ಮುಂಬೈಗೆ ಹೋಗುತ್ತಾರೆ ಎಂದು ಮೊದಲಿಗೆ ತಿಳಿಸಲಾಗಿತ್ತು. ಆದರೆ ವಿಜ್ಞಾನಿಗಳಿಗೆ ಆತ್ಮ ವಿಶ್ವಾಸದ ಮಾತನಾಡಬೇಕು ಎಂಬ ಕಾರಣಕ್ಕೆ ಅವರು ಬೆಳಿಗ್ಗೆ ವರೆಗೆ ನಗರದಲ್ಲೇ ಇದ್ದು, ಮತ್ತೆ ಇಸ್ರೊ ಕೇಂದ್ರಕ್ಕೆ ಬಂದು ಧೈರ್ಯದ ಮಾತನ್ನು ಆಡಿದರು. ಭಾಷಣ ಮುಗಿಸಿ ಹೊರಡುವ ಮೊದಲು ಕಳೆಗುಂದಿದ್ದ ಇಸ್ರೊ ಅಧ್ಯಕ್ಷ ಕೆ.ಶಿವನ್ ಅವರ ಬೆನ್ನುತಟ್ಡಿ ಹುರಿದುಂಬಿಸಿದರು ಹಾಗೂ ಇತರ ಹಿರಿಯ ವಿಜ್ಞಾನಿಗಳೊಂದಿಗೆ ಭರವಸೆಯ ಮಾತನಾಡಿದರು.
ಭಾವುಕರಾದ ಇಸ್ರೊ ಅಧ್ಯಕ್ಷ
‘ಚಂದ್ರಯಾನ-2 ವಿಫಲವಾದ ಹಿನ್ನೆಲೆ ಇಸ್ರೊ ಅಧ್ಯಕ್ಷ ಕೆ.ಶಿವನ್ ಅವರು ಪ್ರಧಾನಿ ಮೋದಿ ಅವರ ಸಮ್ಮುಖದಲ್ಲಿ ಭಾವುಕರಾದರು.
ಕೂಡಲೇ ಪ್ರಧಾನಿ, ಶಿವನ್ ಅವರನ್ನು ತಬ್ಬಿಕೊಂಡ ಸಮಾಧಾನಪಡಿಸಿದರು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.