ADVERTISEMENT

ಅಪ್ಪ ನನ್ನ ಪಾಲಿನ ದೊಡ್ಡ ಸ್ತ್ರೀವಾದಿ

ಸಾರಾ ಅಬೂಬಕ್ಕರ್‌, ಮಂಗಳೂರು
Published 23 ಡಿಸೆಂಬರ್ 2016, 19:30 IST
Last Updated 23 ಡಿಸೆಂಬರ್ 2016, 19:30 IST
ಸಾರಾ ಅಬೂಬಕ್ಕರ್‌
ಸಾರಾ ಅಬೂಬಕ್ಕರ್‌   

‘ಯಾರಿಗೆ ಎಲ್ಲಿಯೇ ಅನ್ಯಾಯವಾದರೂ ಪ್ರಶ್ನಿಸು. ಬಾಯಿ ಮುಚ್ಚಿ ಕುಳಿತುಕೊಳ್ಳಬೇಡ.’ ಇದು ನನ್ನಪ್ಪ ಪಿ. ಅಹಮದ್ ನನಗೆ ಸದಾ ಹೇಳುತ್ತಿದ್ದ ಮಾತು. ತಪ್ಪನ್ನು ಪ್ರಶ್ನಿಸುವ ದನಿಯನ್ನು ಅಪ್ಪನ ಈ ಮಾತು ಹುರಿದುಂಬಿಸುತ್ತದೆ.

ಅಪ್ಪ ವೃತ್ತಿಯಲ್ಲಿ ವಕೀಲರಾಗಿದ್ದರು. ಅವರು ಸತ್ಯಸಂಧರು, ಪ್ರಾಮಾಣಿಕರು. ಅವರ ಆದರ್ಶಮಯ ಬದುಕು, ಪ್ರಾಮಾಣಿಕತೆ, ದೂರದೃಷ್ಟಿ, ಸ್ತ್ರೀಪರ ಕಾಳಜಿಯೇ ನನ್ನನ್ನು ಇಂದಿಗೂ ಕೈ ಹಿಡಿದು ನಡೆಸುತ್ತಿದೆ.

ಪಶ್ಚಿಮದ ಕಡಲ ದಂಡೆಯ ಮೇಲೆ ಇರುವ ಚಿಕ್ಕ ಊರು ಕಾಸರಗೋಡು. ಈ ಊರಿನ ಮೂರು ಭಾಗವನ್ನು ಸುತ್ತುವರಿದಿರುವುದು ಚಂದ್ರಗಿರೀನದಿ. ಈ ನದೀತೀರದಲ್ಲಿರುವ ಪಿಲಿಕುಂಜೆ ಗುಡ್ಡೆಯನ್ನು ಹತ್ತಿಳಿದು, ನದಿಯನ್ನು ದಾಟಿದರೆ ನನ್ನಜ್ಜಿಯ ಊರು ಚಮನಾಡು. ಹೆಣ್ಣು ಹುಟ್ಟಲಿ – ಎಂದು ಪ್ರಾರ್ಥಿಸುತ್ತಿದ್ದ ಮನೆಯಲ್ಲಿ ನಾನು ಹುಟ್ಟಿದೆ. ನನ್ನ ಅಜ್ಜ ಅಜ್ಜಿಗೆ ನನ್ನಪ್ಪನೂ ಸೇರಿದಂತೆ ಆರು ಜನ ಗಂಡುಮಕ್ಕಳು. ನನ್ನ ತಂದೆಯೇ ಹಿರಿಯ ಮಗ. ನನ್ನ ತಂದೆಗೂ ಸಾಲಾಗಿ ಮೂರು ಜನ ಗಂಡುಮಕ್ಕಳು ಹುಟ್ಟಿದರು. ಹಾಗಾಗಿ ಅಜ್ಜ ‘ಈ ಬಾರಿ ಹೆಣ್ಣಾದರೆ  ಸಾರಾ ಎಂದು ಹೆಸರಿಡೋಣ; ಹಜ್ರತ್ ಇಬ್ರಾಹಿಂ ಅವರ ಪ್ರಿಯ ಪತ್ನಿಯ ಹೆಸರು’ ಎಂದು ಹರಕೆ ಹೊತ್ತಿದ್ದರಂತೆ.

ನಾನು 1936ರಲ್ಲಿ ಜನಿಸಿದೆ. 1941ರಲ್ಲಿ ಶಾಲೆಗೆ ಸೇರಿಸಿದರು. ಕೋರ್ಟ್‌ ಕೆಲಸಕ್ಕಾಗಿ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಪ್ಪ ಕಾಸರಗೋಡಿನಲ್ಲಿ ಮನೆ ಮಾಡಿಕೊಂಡಿದ್ದರು. ಆರಂಭದಲ್ಲಿ ಅಜ್ಜಿಮನೆ ಚಮನಾಡಿನಲ್ಲಿ ಉಳಿದುಕೊಂಡು ಮಲಯಾಳಂ ಮಾಧ್ಯಮದಲ್ಲಿ ಓದಿದೆ. ಆದರೆ, ಕನ್ನಡಮಾಧ್ಯಮದಲ್ಲಿ ಮಗಳು ಓದಿದರೆ ಮೆಟ್ರಿಕ್ಯುಲೇಷನ್‌ವರೆಗೂ ತಲುಪಬಹುದೆಂಬ ದೂರದೃಷ್ಟಿ ಅಪ್ಪನಿಗಿತ್ತು.

ಹಾಗಾಗಿ ಕಾಸರಗೋಡುವಿಗೆ ಕರೆಸಿಕೊಂಡರು. ನನಗೆ ಶಾಲೆಗಿಂತ ಅಜ್ಜಿಮನೆ ಇಷ್ಟವಾಗುತ್ತಿದ್ದರಿಂದ ಕನ್ನಡಮಾಧ್ಯಮದ ಶಾಲೆಗೆ ಹೋಗಲು ಮನಸ್ಸಿರಲಿಲ್ಲ. ಅಪ್ಪನ ಪೆಟ್ಟಿನ ಭಯಕ್ಕೆ ಶಾಲೆಗೆ ಹೋಗುತ್ತಿದ್ದೆ. ಆಗಾಗ ಶಾಲೆ ತಪ್ಪಿಸಲು ಪ್ರಯತ್ನಿಸುತ್ತಿದ್ದೆ. ಮನೆಯ ಮುಂದೆ ಕಚೇರಿ ಮಾಡಿಕೊಂಡಿದ್ದ ಅಪ್ಪ, ‘ಯಾಕೆ ತರಗತಿ ಇಲ್ಲವಾ?’ ಎಂದು ಮತ್ತೆ ಶಾಲೆಗೆ ಬಿಟ್ಟು ಬರುತ್ತಿದ್ದರು.

‘ನೀನು ಕಲಿಯುವುದಕ್ಕಾಗಿ ಮಾತ್ರ ನಿನ್ನನ್ನು ಶಾಲೆಗೆ ಕಳುಹಿಸುತ್ತಿಲ್ಲ. ನಿನ್ನನ್ನು ಕಂಡು ಇಡೀ ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳು ಶಾಲೆಯ ಮುಖ ನೋಡುವಂತಾಗಬೇಕು. ಹಾಗಾಗಿ ನೀನು ಅಕ್ಷರ ಕಲಿಯಬೇಕು’ ಎಂದು ಅಪ್ಪ ಸದಾ ಹೇಳುತ್ತಿದ್ದರು. ಆಗಿನ ಕಾಲದಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಒಂದೊಂದು ಕಿವಿಯ ಮೇಲ್ಭಾಗದಲ್ಲೂ ಐದೊ, ಆರೋ ತೂತುಗಳನ್ನು ಮಾಡುತ್ತಿದ್ದರು.

ಈ ಹುಣ್ಣು ವಾಸಿಯಾಗಲು ಎರಡು ತಿಂಗಳು ಬೇಕಾಗುತ್ತಿತ್ತು. ಮದುವೆಯಲ್ಲಿ ಚಿನ್ನದ  ಅಲಿಕತ್ತ್ (ಒಂದು ಬಗೆಯ ಆಭರಣ) ಹಾಕುವುದು ಹೇಗೆ? ಚಿನ್ನ ಹಾಕದಿದ್ದರೆ ಹೆಣ್ಣುಮಕ್ಕಳಿಗೆ ಮದುವೆಯಾಗುವುದಾದರೂ ಹೇಗೆ? ಕಾಣದ ಕೇಳದ ಎಂದೋ ಬರುವ ಗಂಡನಿಗಾಗಿ ಬರೀ ಸೂಜಿ ದಾರ ಬಳಸಿ ಕಿವಿ ಚುಚ್ಚುತ್ತಿದ್ದರು.  ನನಗೂ ಹೀಗೆ ಕಿವಿ ಚುಚ್ಚಲು ಅಜ್ಜಿ, ಅಮ್ಮ ಸಿದ್ಧರಾದರು. ಆದರೆ, ನನ್ನ ತಂದೆ ಸುತರಾಂ ಒಪ್ಪಲಿಲ್ಲ. ದೊಡ್ಡವಳಾದ ಮೇಲೆ ಅವಳಿಗೆ ಬೇಕಾದರೆ ಚುಚ್ಚಿಸಿಕೊಳ್ಳಲಿ. ಈಗ ಅವಳಿಗೆ ಯಾವ ಹಿಂಸೆ ಕೊಡುವುದು ಬೇಡ ಎಂದು ಹಟ ಹಿಡಿದರು.

ನನಗೆ ಎಂಟು ವರ್ಷ ತುಂಬುತ್ತಿದ್ದಂತೆ ಅಜ್ಜಿ ಮತ್ತು ಅಮ್ಮ ನನ್ನ ಮದುವೆಯ ಬಗ್ಗೆ ಕನಸು ಕಾಣುತ್ತಿದ್ದರು. ಈ ವಿಚಾರದಲ್ಲಿ ನನ್ನ ತಂದೆಗೆ ಸ್ಪಷ್ಟತೆ ಇತ್ತು. ‘ನನ್ನ ಮಗಳಿಗೆ ಹದಿನಾರು ವರ್ಷವಾಗದೇ, ಅವಳನ್ನು ಎಸ್ಸೆಸ್ಸೆಲ್ಸಿವರೆಗೆ ಓದಿಸದೇ ಮದುವೆ ಮಾಡುವುದಿಲ್ಲ’ ಎಂದು ಹೇಳಿಯೇ ಬಿಟ್ಟರು. ಅಪ್ಪನಿಗೆ ಎದುರಾಡುವ ಧೈರ್ಯ ಯಾರಿಗೂ ಇರಲಿಲ್ಲ.

ಕಾಸರಗೋಡಿನಲ್ಲಿ ಎರಡು ಪದವಿ ಪಡೆದ ಮುಸ್ಲಿಮರಲ್ಲಿ ನನ್ನ ತಂದೆಯೇ ಮೊತ್ತಮೊದಲಿಗರು. ಬಿ.ಎಲ್. ಪದವಿಯಲ್ಲಿ ‘ಮಹಮಡನ್ ಲಾ’ದಲ್ಲಿ ಮದರಾಸು ವಿಶ್ವವಿದ್ಯಾಲಯದಿಂದ ಚಿನ್ನದ ಪದಕವನ್ನೂ ಗಳಿಸಿದ್ದರು. ಆಗಿನ ಕಾಲದಲ್ಲಿ ಇಂಗ್ಲೆಂಡು, ಅಮೆರಿಕದಿಂದ ಬರುತ್ತಿದ್ದ ವಾರ ಮತ್ತು ಮಾಸಪತ್ರಿಕೆಗಳಲ್ಲಿ ಹೆಚ್ಚಿನವು ನಮ್ಮ ಮನೆಗೆ ಬರುತ್ತಿತ್ತು. ‘ನಿನ್ನ ತಂದೆ ನಿನಗೇನೂ ಒಡವೆ ಮಾಡಿಸುವುದಿಲ್ಲ. ಅವರು ದುಡಿದದ್ದೆಲ್ಲ  ಪುಸ್ತಕ, ಪತ್ರಿಕೆಗಳಿಗೆ ಮೀಸಲು’ ಎಂದು ತಾಯಿ ಗೊಣಗಿದ್ದಿದೆ.

ಅಪ್ಪ ವಾರಕ್ಕೊಮ್ಮೆ ಕಾಸರಗೋಡಿನಿಂದ ಮಂಗಳೂರಿಗೆ ಹೋಗುತ್ತಿದ್ದರು. ರೈಲು ನಿಲ್ದಾಣ ಸಮೀಪವಿದ್ದ ಹಿಗ್ಗಿನ್ ಬಾಥಮ್ಸ್‌ ಪುಸ್ತಕ ಮಳಿಗೆಗೆ ಹೋಗಿ ಇಂಗ್ಲಿಷ್ ಪುಸ್ತಕಗಳನ್ನು ಖರೀದಿಸುತ್ತಿದ್ದರು. ಮನೆಯಲ್ಲಿ ದೊಡ್ಡ ಗ್ರಂಥಾಲಯವೇ ಇತ್ತು. ಅಕ್ಷರದ ಮೇಲೆ ವ್ಯಾಮೋಹ ಉಳಿಯಲು ಅಪ್ಪನ ಪುಸ್ತಕ ಪ್ರೀತಿಯೇ ಕಾರಣ. ಎಷ್ಟೊ ಬಾರಿ ಕಥೆಪುಸ್ತಕಗಳ ನಡುವೆ ಹುದುಗಿಹೋಗಿದಿದ್ದೆ.

ಒಂದು ದಿನ ನಾನು ನನ್ನ ಸಹಪಾಠಿಗಳ ಜೊತೆ ನಮ್ಮೂರಿನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹೋದೆ. ಅವರು ಮಾಡುವಂತೆ ಗರ್ಭಗುಡಿಗೆ ಸುತ್ತು ಬಂದು ಅರ್ಚಕರಿಂದ ಪ್ರಸಾದ ತೆಗೆದುಕೊಂಡು ಬಂದೆ. ಇದನ್ನು ಅಣ್ಣಂದಿರೊಡನೆ ಹೇಳಿದೆ. ಎಲ್ಲರೂ ‘ಇಂದಿನಿಂದ ನೀನು ಹಿಂದೂ ಆದೆ’ ಎಂದು ತಮಾಷೆ ಮಾಡಲು ಆರಂಭಿಸಿದರು. ಅಪ್ಪನೂ ಅವರೊಂದಿಗೆ ದೊಡ್ಡದಾಗಿ ನಕ್ಕರು.

ಅಪ್ಪನಿಗೆ ಪ್ರವಾದಿ ಅವರ ಬಗ್ಗೆ ಅಪಾರ ಗೌರವವಿತ್ತು. ದುಷ್ಟತನವೇ ತುಂಬಿದ್ದ ಅರಬ್ ಸಮಾಜವನ್ನು ಮೂವತ್ತು ವರ್ಷಗಳಲ್ಲಿ ಪ್ರಾಮಾಣಿಕತೆ, ಸತ್ಯಸಂಧತೆಯಿಂದಲೇ ತಿದ್ದಿದ್ದರ ಬಗ್ಗೆ ಅವರಿಗೆ ಶ್ರದ್ಧೆಯಿತ್ತು. ತಾಯಿ ಹಾಡುತ್ತಿದ್ದ ಮಾಪ್ಪಿನ ಪಾಟ್ಟು ಮತ್ತು ಒಪ್ಪನ ಪಾಟ್ಟು ಜಾನಪದೀಯ ಹಾಡುಗಳು ನನಗೆ ಇಂದಿಗೂ ಅಚ್ಚುಮೆಚ್ಚು. ಹಾಗೇಯೇ ಸಿನಿಮಾಗಳ ಬಗ್ಗೆ ಎಲ್ಲಿಲ್ಲದ ಆಸಕ್ತಿ ಇತ್ತು. ಟೆಂಟ್ ಸಿನಿಮಾಗಳಿಗೆ ಅಣ್ಣಂದಿರೊಂದಿಗೆ ಹೋಗುತ್ತಿದ್ದೆ. ಅಪ್ಪ ಇದಕ್ಕೆ ಪ್ರೋತ್ಸಾಹ ಕೊಡುತ್ತಿದ್ದರು. ಅಮ್ಮನಿಗೆ ಸಿಟ್ಟು. ‘ಮಗಳು ಸಿನಿಮಾ, ಓದು ಅಂತ ಇದ್ದರೆ ಮನೆ ಕೆಲಸ ಕಲಿಯೊದು ಯಾವಾಗ’ ಎಂದು ಅಪ್ಪನಲ್ಲಿ ದೂರಿಡುತ್ತಿದ್ದರು. ಅದಕ್ಕೆ ಅಪ್ಪ, ‘ಓದುವ ಮಕ್ಕಳು ಎಂದಿಗೂ ಕೆಟ್ಟ ನಡತೆ ಹೊಂದಿರಲು ಸಾಧ್ಯವಿಲ್ಲ’ ಎನ್ನುತ್ತಿದ್ದರು. ಅಕ್ಷರದ ಬಗ್ಗೆ ಅಷ್ಟೊಂದು ನಂಬಿಕೆ ಅವರಿಗೆ.  

ಹತ್ತು ವರ್ಷ ದಾಟಿದ ಯಾವ ಮುಸ್ಲಿಂ ಹುಡುಗಿಯೂ ಮನೆಯ ಹೊರಕೋಣೆಗೂ ಬಾರದಿದ್ದ ಆ ದಿನಗಳಲ್ಲಿ ನಾನು ಘೋಷಾ ಇಲ್ಲದೇ ಕೊನೆಯ ಪಕ್ಷ ತಲೆಯ ಮೇಲೆ ಸೆರಗೂ ಎಳೆದುಕೊಳ್ಳದೇ ಹಿಂದೂ ಹುಡುಗಿಯಂತೆ ಶಾಲೆಗೆ ಹೋಗುತ್ತಿದ್ದೆ. ಇದನ್ನು ಕಂಡು ಕೆಲವರು ‘ನಿಮ್ಮ ಮಗಳು ತುಂಬಾ ಬೆಳೆದು ಬಿಟ್ಟಿದ್ದಾಳೆ; ಹೀಗೆ ಅವಳನ್ನು ಶಾಲೆಗೆ ಕಳುಹಿಸುವುದು ಸರಿಯಲ್ಲ’ ಎಂದು ಚುಚ್ಚುವಾಗ ತಂದೆ , ‘ಹೆಣ್ಣುಮಕ್ಕಳಿಗೆ ವಿದ್ಯೆ ಕೊಡಬಾರದೆಂದು ಕುರಾನ್‌ನಲ್ಲಿ ಎಲ್ಲೂ ಹೇಳಿಲ್ಲವಲ್ಲ? ಮಕ್ಕಳನ್ನು ಉತ್ತಮ ಪ್ರಜೆಯಾಗಿಸುವವಳು ತಾಯಿಯಾಗಿದ್ದರಿಂದ ಗಂಡಿಗಿಂತಲೂ ಹೆಣ್ಣಿಗೆ ವಿದ್ಯಾಭ್ಯಾಸದ ಅಗತ್ಯವಿದೆ’ ಎಂದು ಉತ್ತರ ನೀಡುತ್ತಿದ್ದರು.

ಅಪ್ಪನ ಮನೆಯಲ್ಲಿದ್ದಷ್ಟು ದಿನ ನಾನೆಂದೂ ಬುರ್ಖಾ ಹಾಕಿದವಳೇ ಅಲ್ಲ. ‘ಮುಸ್ಲಿಂ ಹುಡುಗಿಯರೆಲ್ಲ ಘೋಷಾ ಇಲ್ಲದೇ ಬೀದಿಯಲ್ಲಿ ತಿರುಗಿದರೆ ಇಸ್ಲಾಂ ಮತ ಉಳಿದಿತೇ?’ – ಎನ್ನುವ  ನೆರೆಹೊರೆಯವರ ಪ್ರಶ್ನೆಗೆ ಅಪ್ಪನದು ಖಡಕ್ ಮಾತು, ‘ನನ್ನ ಮಗಳು ಹೀಗಿದ್ದರೆ ಯಾರಿಗೂ ನಷ್ಟವಿಲ್ಲ. ಅವಳೇನಾದರೂ ತಪ್ಪು ಮಾಡಿದಾಗ ನೋಡೋಣ’ ಎನ್ನುತ್ತಿದ್ದರು.

ಶಾಲೆಯ ಥ್ರೋಬಾಲ್ ತಂಡದಲ್ಲಿ ಅತ್ಯುತ್ತಮ ಆಟಗಾರ್ತಿಯಾಗಿದ್ದೆ. ಒಮ್ಮೆ ಆಟಕ್ಕಾಗಿ ಪರವೂರಿಗೆ ಕಳುಹಿಸಲು ಅಪ್ಪನಿಗೆ ಇಷ್ಟವಿರಲಿಲ್ಲ. ಕಳುಹಿಸುವಂತೆ ಗೋಗರೆದೆ. ಊಟ, ತಿಂಡಿ ಬಿಟ್ಟು ಮಲಗಿದೆ. ಆಗ ಅಪ್ಪ ನನ್ನನ್ನು ಕರೆದು, ‘ಶಾಲೆಗೆ ಹೋಗುತ್ತಿರುವ ಪ್ರಥಮ ಮುಸ್ಲಿಂ ಹುಡುಗಿ ನೀನು. ನಿನ್ನಿಂದ ಯಾವ ತಪ್ಪು ಆಗಬಾರದು. ನೀನು ತಪ್ಪು ಮಾಡಿದರೆ, ನಮ್ಮ ಮುಸ್ಲಿಂ ಹೆಣ್ಣುಮಕ್ಕಳು ಶಾಲೆ ಕಡೆಗೆ ಹೋಗದಂತೆ ಆಗುತ್ತದೆ’ ಎಂದು ಬುದ್ಧಿ ಹೇಳಿದ್ದರು. 

ವಕೀಲನಾಗಿದ್ದುಕೊಂಡೇ ಮುಸ್ಲಿಂ ಹೆಣ್ಣುಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ತಲಾಖ್‌ನಿಂದ ನೊಂದ ಹೆಣ್ಣುಮಕ್ಕಳಿಗೆ ಜೀವನಾಂಶ ಕೊಡಿಸುವಲ್ಲಿ ಪ್ರಯತ್ನ ಮಾಡುತ್ತಿದ್ದರು. ಮಗಳಿಗೆ ವಿದ್ಯಾವಂತ ಅಳಿಯನನ್ನೇ ಹುಡುಕಿದರು. ನನ್ನ ಮದುವೆಯಾಗುವಾಗ ಅಬೂಬಕ್ಕರ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿದ್ದರು.  ಮದುವೆಯಾದ ಮೇಲೂ ಅಪ್ಪನ ಪ್ರೋತ್ಸಾಹ ಎಂದಿನಂತೆ ಇತ್ತು. ನಾನು ಕಥನ ಪ್ರಪಂಚದೊಳಗೆ ಕಾಲಿರಿಸಿದೆ. ನಾಲ್ಕು ಗಂಡುಮಕ್ಕಳ ನಂತರ 31 ವಯಸ್ಸಿಗೆ ಬರವಣಿಗೆಯಲ್ಲಿ ತೊಡಗಿಕೊಂಡೆ.  ಅನಿಸಿದ್ದೆನ್ನಲ್ಲ ಬರೆದೂ ಪತ್ರಿಕೆಗೆ ಕಳುಹಿಸುತ್ತಿದ್ದೆ. ಯಾರೂ ಪ್ರಕಟ ಮಾಡುವ ಧೈರ್ಯ ತೋರಿಸಲಿಲ್ಲ.

1980ರಲ್ಲಿ ನನ್ನ ಗಂಡ ಅಬೂಬಕ್ಕರ್‌ಗೆ ಬೆಂಗಳೂರಿಗೆ ವರ್ಗಾವಣೆಯಾಯಿತು. ಕತೆ, ಕಾದಂಬರಿಗಳನ್ನು ಹೆಚ್ಚು ಓದಲು ಶುರು ಮಾಡಿದೆ. ಪಿ. ಲಂಕೇಶ್ ‘ದಲಿತರು, ಮುಸ್ಲಿಮರು, ಹಿಂದುಳಿದವರು ಒಂದಾಗಬೇಕು’ ಎಂದು ಲೇಖನ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಲೇಖನ ಬರೆದೆ. ನಂತರ 41ನೇ ವಯಸ್ಸಿಗೆ ‘ಚಂದ್ರಗಿರಿ ತೀರದಲ್ಲಿ’ ಕಾದಂಬರಿಯನ್ನು ಲಂಕೇಶ್ ಪತ್ರಿಕೆಗೆ ಬರೆದೆ.

ಲಂಕೇಶ್ ಅವರಿಗೆ ಅಪ್ಪನ ವಿಳಾಸಕ್ಕೂ ಪತ್ರಿಕೆ ಕಳುಹಿಸಿ ಎಂದು ಮನವಿ ಮಾಡಿದ್ದೆ. ಅಪ್ಪ ಕಾದಂಬರಿಯನ್ನು ಓದಿ ಖುಷಿ ಪಡುತ್ತಿದ್ದರು. ಬರವಣಿಗೆಯ ಹಾದಿ ವಿಸ್ತಾರಗೊಳ್ಳಲಿ ಎಂದು ಪ್ರೋತ್ಸಾಹ ಕೊಡುತ್ತಿದ್ದರು.  87 ವರ್ಷಗಳ ಕಾಲ ಬದುಕಿದ್ದ ಅಪ್ಪನಿಗೆ ಧಾರ್ಮಿಕ ನಿಷ್ಠೆ ಇತ್ತು. ಆದರೆ, ಎಂದೂ ಧರ್ಮಾಂಧರಾಗಿರಲಿಲ್ಲ. ಅಪ್ಪನದ್ದು ಪ್ರಗತಿಪರ ಮನೋಧರ್ಮ. ಅದನ್ನು ಮನೆಯ ಸದಸ್ಯರಿಗೆಲ್ಲ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿದ್ದರು. ನಿರ್ಭಿಡೆಯಿಂದ ಅನಿಸಿದ್ದನ್ನು ಹೇಳುವ ಮನಃಸ್ಥಿತಿಯನ್ನು ಅಪ್ಪ ಬೆಳೆಸಿದರು. ದನಿಯೇ ಇಲ್ಲದ ಹೆಣ್ಣಿನ ನೋವಿಗೆ ದನಿಯಾಗುವುದನ್ನು ಕಲಿಸಿದರು. ನನಗೆ ಅಕ್ಷರ ಕೊಟ್ಟು, ಬರವಣಿಗೆಯ ಹಾದಿಯಲ್ಲಿ ಸಾಗುವಂತೆ ಮಾಡಿದ ಅಪ್ಪ ನನ್ನ ಪಾಲಿನ ದೊಡ್ಡ ಸ್ತ್ರೀವಾದಿ. 
- ನಿರೂಪಣೆ: ರೂಪಾ ಕೆ. ಎಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.