ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಹೊನ್ನಾಳಿ ಹೊಡೆತ ತಿಂದು ನರಳುತ್ತಿರುವ ಸಣ್ಣಬೀರನನ್ನು ತಾಯಿ ಸೇಸಿ ಆತುಕೊಳ್ಳುವಾಗ ಕುವೆಂಪು ಬರೆಯುತ್ತಾರೆ: ‘ಹೊಲೆಯಳಾದರೂ ಬಡವಳಾದರೂ ಯಾವ ವಿಧವಾದ ವ್ಯಕ್ತಿತ್ವ ವಿಶೇಷ ಲವಲೇಶವೂ ಇಲ್ಲದವಳಾದರೂ, ಸಂಕಟತಪ್ತ ತಾಯ್ತನ ಎಂತಹ ಅಲ್ಪ ಸ್ತ್ರೀಯನ್ನಾದರೂ ಭೂಮಪಟ್ಟಕ್ಕೇರಿಸಿಬಿಡುತ್ತದೆಯೋ ಏನೋ ಎಂಬಂತೆ, ಅವರ ಮಾತೃದುಃಖಜನ್ಯಕ್ರೋಧದ ಸಾನ್ನಿಧ್ಯ ಭೀಷಣೆಗೆ ಕ್ಷಣಮಾತ್ರ ಭೀತಚೇತಸನಾದನು ಇಜಾರದ ಸಾಬಿ’ - ಎಂದು.
ಕುವೆಂಪು ಕೊಡುವ ತಾಯ್ತನದ ಔನ್ನತ್ಯವೇ ಅಲ್ಲವೇ ಬೇರೆ ಬೇರೆ ರೂಪದಲ್ಲಿ ನಮ್ಮ ಮುಂದೆ ಉಜ್ವಲವಾಗಿ ಮೆರೆಯುವುದು? ತಾಯ್ತನವೆನ್ನುವುದನ್ನು ಅತ್ಯುನ್ನತ ಮೌಲ್ಯವನ್ನಾಗಿ ಭಾವಿಸಿದ ರಾಷ್ಟ್ರೀಯತೆಯನ್ನು ಸಂವೇದನೆಯಾಗಿ ಪಡೆದಿದ್ದ ಕನ್ನಡದ ಲೇಖಕ ಕುವೆಂಪು ಮಾತೃಸಂಸ್ಕೃತಿಯ ಬಗೆಗೆ ಅತಿಯಾದ ಗೌರವವನ್ನು ತೋರುವುದು ಅಸಹಜವೇನಲ್ಲ.
ಸಂಸ್ಕೃತಿಯ ಪ್ರಶ್ನೆ ಬಂದಾಗಲೆಲ್ಲ ನಮ್ಮ ಸಮಾಜದಲ್ಲಿ ಹೆಣ್ಣು ಮಾತೃಸ್ವರೂಪಿ ಎಂದು ಉನ್ನತೀಕರಿಸಲಾಗುತ್ತದೆ. ಹೆಣ್ಣನ್ನು ತಾಯಿ ಎಂದು ನೋಡುವುದನ್ನು ಅಂತರ್ಗತಗೊಳಿಸಿಕೊಂಡ ಸಮಾಜದಲ್ಲಿ ತಾಯಿದಿನವೆನ್ನುವುದು ಕ್ಯಾಲೆಂಡರ್‌ನ ಒಂದು ದಿನಕ್ಕೆ ಸೀಮಿತವಾಗಲಾರದೇನೋ?
ಸದ್ಯ ವರ್ಷಪೂರ್ತಿ ಏನಾದರೊಂದು ವಿಶೇಷ ದಿನಗಳಿಗೆ ಮೀಸಲಾದ ದಿನಗಳಿವೆ. ಅವುಗಳಲ್ಲಿ ಮೇ ತಿಂಗಳಲ್ಲಿ ಬರುವ ಅಮ್ಮಂದಿರ ದಿನಾಚರಣೆಯೂ ಒಂದು. ಈ ವಾರ್ಷಿಕ ವಿಶೇಷ ದಿನದಲ್ಲಿ ಅಡಗಿ ಕುಳಿತ ಅಮ್ಮನ ವಿಶೇಷತೆಗಳು ಮಾತ್ರ ದಿನಮಾನಗಳಿಗೆ ಮೀರಿದ್ದು.
ಹಾಗೆಂದೇ ಪ್ರತಿವರ್ಷದ ಆನಿವರ್ಸರಿ ಶುಭಾಶಯಗಳಲ್ಲಿ ಹೊಸಗಾಲದಲ್ಲಿ ವಿನಿಮಯವಾಗುವ ‘ಅಮ್ಮಾ ಐ ಲವ್ ಯೂ’ ಎನ್ನುವ ಪದ ಕೃತಕವಾಗಿ ಕಾಣುತ್ತದೆ. ಗ್ರೀಟಿಂಗ್ ಕಾರ್ಡುಗಳಲ್ಲಿ ಇರುವ ಅಕ್ಷರಗಳಿಗೆ ಮೀರಿದ ಅಳು, ನಗು, ಸಂಕಟ ದುಮ್ಮಾನಗಳೆಲ್ಲಾ ಮಿಳಿತಗೊಂಡು ಅಮ್ಮನ ಇರವನ್ನೂ ನೆನಪನ್ನೂ ಇನ್ನಷ್ಟು ಮತ್ತಷ್ಟು ಜೀವಂತಗೊಳಿಸುತ್ತವೆ.
ತಾಯಿ ಎನ್ನುವುದು ವಾಸ್ತವವಾಗಿ ಹೆಣ್ಣಿನ ಜೈವಿಕತೆಯನ್ನು ನೆನಪಿಸುವ ಪದ. ಆದರೆ ತಾಯಿ ಎನ್ನುವುದು ಬರಿಯ ದೇಹವಲ್ಲ; ಅದೊಂದು ಮನಸ್ಸು, ಮನಃಸ್ಥಿತಿ. ತಾಯಿಯಾಗುವುದೆಂದರೆ ಒಂಬತ್ತು ತಿಂಗಳು ಹೊತ್ತು, ಹೊಟ್ಟೆ ಇಳಿಸಿಕೊಳ್ಳುವ ಜೈವಿಕ ಕ್ರಿಯೆ ಮಾತ್ರವಾಗಿದ್ದರೆ, ತಾಯ್ತನ ಎನ್ನುವುದಕ್ಕೆ ತುಂಬ ಸೀಮಿತವಾದ ಅರ್ಥವಿರುತ್ತಿತ್ತು. ಹಾಗಾಗಿದ್ದರೆ ಯಶೋದೆಯರಿಗೆ ಮಹತ್ವವೇ ಇರುತ್ತಿರಲಿಲ್ಲ.
ಹೆತ್ತ ತಾಯಿಯಾದ ದೇವಕಿಗಿಂತ ಕೃಷ್ಣ ಕಥೆಯಲ್ಲಿ ಪಾರಮ್ಯವನ್ನು ಪಡೆಯುವುದು ಯಶೋದೆ ತಾನೆ? ಮಹಾಭಾರತದ ಕುಂತಿ ತನ್ನ ಮೂರು ಮಕ್ಕಳಿಗೆ ಮಾತ್ರ ತಾಯಿಯಾಗಿ ಉಳಿದಿದ್ದರೆ ಮಹಾಭಾರತದ ಕಥೆಯ ದಿಕ್ಕೇ ಬದಲಾಗುತ್ತಿತ್ತಲ್ಲವೇ?
ಜರ್ಮನ್ ನಾಟಕಕಾರ, ಕವಿ ಬ್ರೆಕ್ಟ್ ತನ್ನ ‘ಕಕೇಶಿಯನ್ ಚಾಕ್ ಸರ್ಕಲ್’ ನಾಟಕದಲ್ಲಿ ತಾಯ್ತನದ ಹೊಸ ವ್ಯಾಖ್ಯಾನವನ್ನು ಮಾಡಿದ್ದಾನೆ. ಮೂಲ ಚಾಕ್ ಸರ್ಕಲ್ ಕಥೆ ಚೀನೀದೇಶದ್ದು. ಅದರಲ್ಲಿ ಒಂದು ಮಗುವಿನ ನಿಜವಾದ ತಾಯಿ ಯಾರು ಎಂಬ ಸಮಸ್ಯೆಯನ್ನು ಬಿಡಿಸಲೆಂದು ಚಾಕ್ ಸರ್ಕಲ್ ಅನ್ನು ಬರೆದು ಅದರೊಳಗೆ ಮಗುವನ್ನು ಮಲಗಿಸಿ ಮಗು ತಮ್ಮದೆಂದು ಜಗಳವಾಡುತ್ತಿದ್ದ ಇಬ್ಬರು ತಾಯಂದಿರಿಗೆ ಮಗುವಿನ ಕೈಕಾಲುಗಳನ್ನು ಎಳೆಯಲು ತಿಳಿಸುತ್ತಾರೆ. ಯಾರು ಜೋರಾಗಿ ಎಳೆದುಕೊಳ್ಳುತ್ತಾರೊ ಅವರಿಗೆ ಮಗು ಸೇರುತ್ತದೆ ಎನ್ನುತ್ತಾರೆ.
ಹುಸಿ ತಾಯಿ ಈ ಸವಾಲನ್ನು ಸ್ವೀಕರಿಸಿ ಮಗುವನ್ನು ಜೋರಾಗಿ ಎಳೆಯಲು ತೊಡಗುತ್ತಾಳೆ. ನಿಜವಾದ ತಾಯಿ ಮಾತ್ರ ಮಗುವಿಗೆ ನೋವಾಗುತ್ತದೆಂದು ಸ್ಪರ್ಧೆಯಿಂದ ಹಿಂದೆ ಸರಿಯುತ್ತಾಳೆ.
ಈ ಕಥೆಯನ್ನು ತಿರುವು ಮುರುವು ಮಾಡುವ ಬ್ರೆಕ್ಟ್ ತನ್ನ ನಾಟಕದಲ್ಲಿ ಜೈವಿಕವಾಗಿ ಹೆತ್ತತಾಯಿ ಮಗುವನ್ನು ಪಡೆಯುವುದಕ್ಕೆ ಪ್ರಾಶಸ್ತ್ಯ ನೀಡುವುದೇ ಇಲ್ಲ. ಅವನ ಪ್ರಕಾರ ಜೈವಿಕತೆ ಸಂಬಂಧಗಳನ್ನು ನಿರ್ಧರಿಸುವಂಥದ್ದಲ್ಲ. ಆದ್ದರಿಂದ ಯಾರು ಮಗುವನ್ನು ಯಾರು ಸಾಕಿರುತ್ತಾಳೊ ಅವಳಿಗೆ ಮಗುವನ್ನು ಸೇರುವಂತೆ ಮಾಡುತ್ತಾನೆ.
ಜೈವಿಕ ಹಕ್ಕು ಮಾತ್ರವೇ ಸಂಬಂಧಗಳನ್ನು ಸೃಷ್ಟಿಸಲಾರದು ಎನ್ನುವುದು ಬ್ರೆಕ್ಟನ ಅಚಲವಾದ ನಂಬಿಕೆ. ಈ ತತ್ವದ ಮೇಲೆಯೇ ಅಲ್ಲವೆ ಜಗತ್ತು ನಡೆಯುತ್ತಿರುವುದು?
ತಾಯ್ತನವೆನ್ನುವುದು ಸಂಸಾರದ ಬಿಂಬದಲ್ಲಿ ಕಾಣುವ ಒಂದು ರೂಪ ಎಂದಷ್ಟೆ ಭಾವಿಸಲಾಗದು. ತಾಯ್ತನವೆನ್ನುವುದು ಒಂದು ಭಾವ. ಅದನ್ನು ವಾತ್ಸಲ್ಯದ ಅತ್ಯುನ್ನತ ಭಾವವಾಗಿ ಭಾವಿಸಿ ಭಕ್ತರು ತಮ್ಮ ಇಷ್ಟದೇವರುಗಳಿಗೇ ತಾಯ್ತನದ ಸವಿಯನ್ನು ಉಣಿಸಿದ್ದಾರೆ. ವಿಶ್ವಾತ್ಮಕ ಮೌಲ್ಯಗಳಲ್ಲಿ ತಾಯಿಭಾವವನ್ನು ಅನುಭವಿಸಿದ ಆಧ್ಯಾತ್ಮಿಕರಿಗೆ ಅದನ್ನು ಲೋಕಕ್ಕೆ ಉಣಿಸುವುದೆಂದರೆ ಬಹಳ ಪ್ರೀತಿಯ ಕೆಲಸ. ಪರಮ ಪ್ರೇಮಮಯಿಯಾದ ಬುದ್ಧಗುರುವನ್ನು ತಾಯಿಯೆಂದು ಯಾರು ತಾನೇ ಒಪ್ಪರು?
ಪರಮಹಂಸರಂತಹ ಗುರುಗಳು, ಝೆನ್ ಗುರುಗಳು ತೋರುತ್ತಿದ್ದ ವಾತ್ಸಲ್ಯ ಮತ್ತು ಪ್ರೇಮಗಳು ಮಾದರಿ ತಾಯ್ತನವನ್ನು ಸೂಸುವಂಥವು. ಆಧ್ಯಾತ್ಮಿಕವಾದ ಸಾಧನೆಯಲ್ಲಿ ಕಾಳಿಮಾತೆಯೊಡನೆ ತಾಯಿಭಾವವನ್ನು ಅನುಭವಿಸಿದ ರಾಮಕೃಷ್ಣ ಪರಮಹಂಸರು ತಮ್ಮ ಹೆಂಡತಿಯಲ್ಲೂ ಅದೇ ಭಾವವನ್ನು ಕಂಡುಕೊಂಡರು.
ಶಾರದಾದೇವಿಯನ್ನು ಮಾತೆಯೆಂದು ಕರೆದು ಪೂಜ್ಯಸ್ಥಾನ ನೀಡಿದರು. ಇಂತಹ ರಾಮಕೃಷ್ಣ ಪರಮಹಂಸರಿಂದ ಸ್ಫೂರ್ತಿಗೊಂಡ ಕುವೆಂಪು ಅವರು ಸಹ ತಮ್ಮ ಹೆಂಡತಿಯನ್ನು ತಾಯಿಯೆಂದು, ದೇವಿಯೆಂದು ಕರೆದು ’ಯಾ ದೇವಿ ಸರ್ವಭೂತೇಷು ಸಂಸ್ಥಿತಾ’ ಎಂದು ನೆಲೆಗೊಳಿಸಿಕೊಂಡರು.
ಹೆಂಡತಿಯರು ಹೀಗೆ ತಾಯಿಯಾಗುವುದು ಹೆಣ್ಣುತನದ ವಿಸ್ತರಣೆಯೇ ಹೌದು. ಮಾಗುವಿಕೆಯಲ್ಲಿ ಪ್ರಕೃತಿ ನೀಡಿದ ತಾಯ್ತನದ ವರವನ್ನು ತನ್ನ ಇಡೀ ಕುಟುಂಬಕ್ಕೆ ವಿಸ್ತರಿಸುವ ಶಕ್ತಿ ಹೆಣ್ಣಿಗಿದೆ. ಹೆಣ್ಣು ತನ್ನ ಗಂಡನಿಗೇ ತಾಯಿಯಾಗಿ, ಕುಟುಂಬವನ್ನು ಪೊರೆಯುತ್ತಾಳೆ. ಅನ್ನಾ ಕರೆನಿನಾದ ಪುಟ್ಟ ಹುಡುಗಿ ಕಿಟಿ ತನ್ನನ್ನು ತಾನು ಪುಟ್ಟ ಹೆಂಗಸಾಗಿ ಬಿಂಬಿಸಿಕೊಳ್ಳುವುದು ಹೀಗೆ ತಾಯ್ತನವನ್ನು ತೋರುವುದರಿಂದಲೇ.
ಜೈವಿಕತೆಯನ್ನು ಪ್ರಧಾನಗೊಳಿಸುವ ಇಂತಹ ಪ್ರಮೇಯಗಳನ್ನು ಸ್ತ್ರೀವಾದಿಗಳ ಒಂದು ಗುಂಪು ಒಪ್ಪಲಾರದು. ಆದರೆ ತಾಯ್ತನವನ್ನೇ ಸ್ತ್ರೀ ಅನನ್ಯತೆಯನ್ನಾಗಿಸಿ ಸ್ತ್ರೀ ಅಸ್ಮಿತೆಗೊಂದು ವಿಶಿಷ್ಟತೆಯನ್ನು ತಂದುಕೊಡುವ ಸ್ತ್ರೀವಾದಿಗಳ ಗುಂಪು ತಾಯ್ತನವನ್ನು ಧನಾತ್ಮಕವಾಗಿ ಸ್ವೀಕರಿಸುತ್ತದೆ.
ಆ ಮಾತು ಅಂತಿರಲಿ, ಇಂದು ಇಡೀ ವಿಶ್ವದಲ್ಲಿ ತಾಯ್ತನವೆನ್ನುವುದು ರಕ್ಷಣಾತ್ಮಕವಾದ, ಜೀವಕಾರುಣ್ಯವಾದ ಪರ್ಯಾಯ ಚಿಂತನೆಯಾಗಿ ಹೊರಹೊಮ್ಮುತ್ತಿದೆ. ಇಂದು ತಾಯ್ತನವೆಂದರೆ ವಿಶಾಲಾರ್ಥದಲ್ಲಿ ಪ್ರೀತಿ.
ತಾಯಿಯಾಗುವುದೆಂದರೆ ದೊಡ್ಡತನ; ತನ್ನ ಪ್ರೀತಿಯನ್ನು ವಿಸ್ತರಿಸಿಕೊಳ್ಳುವುದು. ಮಾನವೀಯತೆಯನ್ನು ಸೂಸುವ ಜೀವಂತಿಕೆ. ಇದಕ್ಕೆ ಗಂಡಸು – ಹೆಂಗಸು ಎನ್ನುವ ಬೇಧವಿಲ್ಲ. ಹಾಗೆ ನೋಡಿದರೆ ತಂದೆಯೇ ತಾಯಿಯಾಗಿರುವ ಎಷ್ಟೋ ಜೀವಂತ ಉದಾಹರಣೆಗಳು ನಮ್ಮ ಮುಂದಿದೆ.
ನನ್ನದೇ ಉದಾಹರಣೆ ನೀಡುವುದಾದರೆ ನನ್ನ ತಂದೆಯೇ ತಾಯಿಯಂತೆ ನನ್ನನ್ನೂ ನನ್ನ ತಂಗಿಯನ್ನೂ ಸಾಕಿದ್ದು. ಹದಿನೆಂಟು ವರ್ಷ ಕೆಲಸದ ಸಲುವಾಗಿ ದೂರ ಇರಬೇಕಾದ ನನ್ನ ಅಮ್ಮ ಅಣ್ಣ (ತಂದೆ) ಆ ದೂರದ ಅನಿವಾರ್ಯತೆಯನ್ನು ಪರಸ್ಪರ ಒಪ್ಪಿಕೊಂಡಿದ್ದರು. ನಾವು ಬೆಳೆದಿದ್ದು, ಬದುಕಿನ ಪ್ರಾಥಮಿಕ ಪಾಠಗಳನ್ನು ಕಲಿತಿದ್ದೆಲ್ಲಾ ನಮ್ಮ ಅಣ್ಣನಿಂದಲೇ.
ಅವರೇ ನಮಗೆ ತಲೆ ಬಾಚುತ್ತಿದ್ದುದು, ಸ್ಕೂಲ್ ಯೂನಿಫಾರ್ಮ್ ಹಾಕುತ್ತಿದ್ದುದು, ಶಾಲೆಯಿಂದ ಬರುವಾಗ ಹಸಿದಿರುತ್ತಿದ್ದ ಹೊಟ್ಟೆಗೆ ತಿಂಡಿ ಕೊಡಿಸುತ್ತಿದ್ದುದು ಎಲ್ಲ.
ಕಡೆಗೆ ಅಣ್ಣನೇ ಅಡುಗೆ ಕೂಡ ಮಾಡುತ್ತಿದ್ದರು. ಅದನ್ನು ನಾವು ಯಾವ ಸಂಕೋಚವೂ ಇಲ್ಲದೆ ನಮ್ಮ ಗೆಳೆತಿಯರ ಜೊತೆ ಬಂದು ತಿಂದು ತೇಗುತ್ತಿದ್ದೆವು. ಆದ್ದರಿಂದ ಸ್ತ್ರೀರೂಪದಲ್ಲಿ ಮಾತ್ರ ನಾವು ಅಮ್ಮನೆಂದು ಕಲ್ಪಿಸುವ ಸ್ವರೂಪ ನಮ್ಮ ಮಟ್ಟಿಗಂತೂ ಇರಲೇ ಇಲ್ಲ. ಅಮ್ಮನ ಸೆರಗಿಗಿಂತ ಅಪ್ಪನ ಸೆರಗು ಹಿಡಿದೇ ಬೆಳೆದ ನನ್ನಂತ ಎಷ್ಟೊ ಮಕ್ಕಳು ತಾಯಿ ಎಂದರೆ ಏನನ್ನು ಕಲ್ಪಿಸಿಕೊಳ್ಳಬಹುದು?
ತಾಯ್ತನದ ಸ್ವರೂಪವು ದೊಡ್ಡ ದೊಡ್ಡ ಸಂಗತಿಗಳಲ್ಲಿ ಕಾಣುವುದಕ್ಕಿಂತಲು ಚಿಕ್ಕಪುಟ್ಟ ಸಂಗತಿಗಳಲ್ಲಿ ಮಿನುಗುವುದನ್ನು ಗುರುತಿಸುವುದೇ ನನಗೆ ಇಷ್ಟ. ಬೇಂದ್ರೆ ತಾವು ಚಪ್ಪಲಿ ಹೊಲಿಸಿಕೊಳ್ಳಲೆಂದು ಚಮ್ಮಾರನ ಹತ್ತಿರ ಕಾಲುಕೊಟ್ಟು ನಿಂತಾಗ ಅವನಿಗೆ ಬಿಸಿಲು ಎಂದು ತಮ್ಮ ಕೊಡೆ ಹಿಡಿದಿದ್ದರಂತೆ. ಆ ಚಿತ್ರವನ್ನು ಎಸ್. ಮಂಜುನಾಥ್ ಒಂದು ಸುಂದರ ಕವಿತೆಯನ್ನೇ ಮಾಡಿದ್ದಾರೆ. ಕವಿಯ ಕಣ್ಣು ಹುಡುಕುವುದು ಇಂತಹ ಸಣ್ಣ ಪುಟ್ಟ ಸಂಗತಿಗಳಲ್ಲಿ ಅಡಗಿರುವ ತಾಯಿ ಮನಸ್ಸನ್ನೇ.
ಎಷ್ಟೊ ಸಾರಿ ಲೇಟಾಗುತ್ತದೆ ಮನೆಗೆ ಹೋಗಿ ಎನ್ನುವ ಸಹೋದ್ಯೋಗಿ ಮಿತ್ರರು, ಕತ್ತಲಾಯಿತು ಮನೆ ತನಕ ಬಿಡಲೆ ಎನ್ನುವ ಆಟೊ ಚಾಲಕರು, ಅಲ್ಲಿಂದ ನಿಂತು ಬಂದಿದ್ದೀರಿ ತುಸು ಕುಳಿತುಕೊಳ್ಳಿ ಎಂದು ಸೀಟು ಬಿಟ್ಟುಕೊಡುವವರು, ಹಸಿದು ಬಂದಾಗ ಹೊಟ್ಟೆ ತುಂಬ ಅನ್ನ ಹಾಕಿದವರು ಇವರನ್ನೆಲ್ಲ ತಾಯಿಯರೆನ್ನದೆ ಏನೆನ್ನುವುದು? ಜೀವಕಾರುಣ್ಯದ ಸವಿಯನ್ನು ಹಂಚುವ ಎಲ್ಲ ಜೀವಿಗಳಲ್ಲೂ ನಿಃಸ್ವಾರ್ಥವಾದ ಪ್ರೀತಿಯ ಸೆಲೆ ಇರುವುದಾದರೆ ಅದು ತಾಯ್ತನದ್ದೇ ಎನ್ನುವುದರಲ್ಲಿ ಅನುಮಾನವಿಲ್ಲ.
ಹೆಣ್ತನ ಎನ್ನುವುದರ ವಿಸ್ತೃತ ಅರ್ಥವು ತಾಯ್ತನದ ಇನ್ನೊಂದು ಮುಖವಷ್ಟೆ. ಎಷ್ಟೋ ಬಾರಿ ಗಂಡು ಹೆಣ್ಣಾಗಬಯಸುತ್ತಾನೆ! ಗಂಡು ಮಾತ್ರವಲ್ಲ, ಮೂರನೇ ಲಿಂಗಿಗಳಲ್ಲೂ ತಾಯಿತನ ಭಾವನೆ ಇದ್ದು ಅವರು ಸಹ ಇಂದು ಮಗುವನ್ನು ಸಾಕಬಯಸುತ್ತಿದ್ದಾರೆ. ಅಂದರೆ ತಾಯ್ತನವೆನ್ನುವುದು ಲಿಂಗಾತೀತವಾದ ಭಾವನೆಯಾಯಿತು ಅಲ್ಲವೇ?
ಈ ಬಗೆಯ ತಾಯ್ತನವು ಜೀವಕಾರುಣ್ಯದ ತವರು. ಮಾತೃತ್ವದ ಮೌಲ್ಯವು ಸಾಧಾರಣವಾಗಿ ಪಿತೃಪ್ರಧಾನ ವ್ಯವಸ್ಥೆಯಲ್ಲಿರುವ ಮೌಲ್ಯಕ್ಕಿಂತ ಭಿನ್ನವಾಗಿರುತ್ತದೆ. ಮಾತೃಮೂಲದ ಸಮುದಾಯಗಳಲ್ಲಿ ತಾಯ್ತನವನ್ನು ನೆಲಸಹಜ ಗುಣವೆಂದು ಭಾವಿಸಿ ಅದೇ ಮೌಲ್ಯಗಳಿಗೆ ಆದ್ಯತೆ ನೀಡುವುದನ್ನು ಕಾಣಬಹುದು. ಬುಡಕಟ್ಟು ಸಮಾಜಗಳಲ್ಲಿ ಇರುವ ಮಾತೃ ಆರಾಧನೆ ಹಾಗೂ ಅಲ್ಲಿರುವ ಮೌಲ್ಯಗಳು ಜೀವಪರವಾದ ಮೌಲ್ಯಗಳಾಗಿರುವುದನ್ನು ಗಮನಿಸಬಹುದು.
ತಮ್ಮ ಕೃತಿಗಳಲ್ಲಿ ಮಾತೃಪ್ರಧಾನತೆಯನ್ನು ಮುನ್ನೆಲೆಗೆ ತರುವ ಚಂದ್ರಶೇಖರ ಕಂಬಾರರು ಆದಿಮವಾದ ತಾಯಿಯನ್ನು ಕಲ್ಪಿಸುತ್ತಾರೆ. ಅವಳು ಜೀವ ನೀಡುವವಳು; ಸಂರಕ್ಷಕಿ. ಅಂತೆಯೇ ಅವಳ ಮೌಲ್ಯಗಳು ಜೀವಪರವಾದವು. ಸಾಧಾರಣವಾಗಿ ಎಲ್ಲರೂ ಚಿಕ್ಕ ವಯಸ್ಸಿನಲ್ಲಿ ಕೇಳಿ, ಓದಿ ತಿಳಿದಿರುವ ಪುಣ್ಯಕೋಟಿಯ ಕಥೆಯಲ್ಲಿ ಹುಲಿ ತಿನ್ನಬಯಸುವ ಹಸು ಪುಣ್ಯಕೋಟಿಯು ಸತ್ಯವಂತೆಯಾಗಿ ಉಳಿದು ತನ್ನ ಅಸುವನ್ನು ಹುಲಿಗರ್ಪಿಸಲು ತಾನೇ ಹಟ್ಟಿಯಿಂದ ಹಿಂದಿರುಗಿ ಬರುತ್ತದೆ.
ಆದರೆ ಕಂಬಾರರ ಶಿವಾಪುರ ಕಾದಂಬರಿಯಲ್ಲಿ ಅಮ್ಮನ ದರ್ಶನಕ್ಕೆಂದು ಹೊರಟ ಜೋಗತಿಯರು ಹೇಳುವ ಕಥೆಯ ಆವೃತ್ತಿಯೇ ಬೇರೆ. ಅವರ ಕಥೆಯಲ್ಲಿ ಸುಳ್ಳು ಸತ್ಯವಾಗುತ್ತದೆ, ಸತ್ಯ ಸುಳ್ಳಾಗುತ್ತದೆ! ಅವರ ಕಥೆಯಲ್ಲಿ ಹಸು ತನ್ನನ್ನು ತಿನ್ನಲೆಂದು ಬೆನ್ನಟ್ಟಿ ಬರುವ ಹುಲಿಯಿಂದ ತಪ್ಪಿಸಿಕೊಳ್ಳಲೆಂದು ಮೂರು ಲೋಕಗಳಲ್ಲಿ ತನ್ನ ಕಾಪಾಡುವವರನ್ನು ಹುಡುಕುತ್ತಾ ಓಡೋಡಿ ಬರುತ್ತದೆ.
ಹರಿಹರ ಬ್ರಹ್ಮರೂ ಅದನ್ನು ಕಾಪಾಡಲು ಮುಂದೆ ಬರುವುದಿಲ್ಲ. ಆಗ ಅದು ಅಮ್ಮನ ಬಳಿ ಬಂದಿತು. ಅಮ್ಮ ಹಸುವನ್ನು ತನ್ನ ಹಿಂದೆ ಅಡಗಿಸಿಟ್ಟಳು. ಹಸುವನ್ನು ಹುಡುಕುತ್ತ ಹುಲಿ ಅಮ್ಮನ ಬಳಿಯೂ ಬಂದಿತು. ‘ಅಮ್ಮಾ ಪುಣ್ಯಕೋಟಿ ಇಲ್ಲಿ ಬಂತೆ?’ ಎಂದು ಕೇಳಿದಾಗ ‘ತಾಯಿ ಇಲ್ಲವಲ್ಲ ಮಗನೆ, ಅದು ಇಲ್ಲಿ ಬಂದಿಲ್ಲ’ ಎಂದು ಸುಳ್ಳು ಹೇಳಿದಳು. ಯಾಕೆ ತಾಯಿ ಸುಳ್ಳು ಹೇಳಿದಳು ಹೇಳಿ.
ಹಸು ಒಂದು ಮಗುವಿನ ತಾಯಿ; ತಾಯಿ ಅಂದರೆ ಸಂಬಂಧಗಳು. ಅಂತಹ ತಾಯಿಯನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ. ಆದುದರಿಂದ ಸುಳ್ಳು ಹೇಳಿದರೆ ಬಾಧಕವಿಲ್ಲ ಎಂದು ಜೋಗತಿಯರು ಹೇಳುತ್ತಾರೆ. ಇಂತಹ ಅನೇಕ ಮಾತೃನ್ಯಾಯದ ಕಥೆಗಳು ಬುಡಕಟ್ಟು ಜನಾಂಗಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. ಇವು ತಾಯ್ತನದ ವಿಸ್ತಾರ ಅರ್ಥಗಳನ್ನು ಹೇಳುವಂಥವು.
ಇಂದು ತಾಯ್ತನದ ಮೌಲ್ಯವು ವಿಶ್ವಶಾಂತಿಯ ದೃಷ್ಟಿಯಿಂದ ಎಲ್ಲರಿಗೂ ಬೇಕಾದ ಮೌಲ್ಯವಾಗಿದೆ. ಇಂತಹ ಸನ್ನಿವೇಶದಲ್ಲಿ ಸಂಸಾರದಲ್ಲಿ ನಮ್ಮೊಂದಿಗಿರುವ ಅನೇಕ ಬಗೆಯ ತಾಯಂದಿರು ನಮಗೆ ಹಿರಿದಾದ ವಿಶ್ವಶಾಂತಿಯ ಮೌಲ್ಯವನ್ನು ಸೂಚಿಸುತ್ತಿದ್ದರೆ ಅದನ್ನು ಸ್ವೀಕರಿಸೋಣ. ತಾಯ್ತನವನ್ನು ಆಸ್ವಾದಿಸೋಣ, ಒಪ್ಪಿಕೊಳ್ಳೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.