ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆಯುವ ಮಹಿಳೆಯರ ಪ್ರಮಾಣ ಶೇ 20 ದಾಟಿಲ್ಲ! ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರಿದ್ದರೂ ಯುಪಿಎಸ್‌ಸಿ ಪರೀಕ್ಷಾರ್ಥಿಗಳಲ್ಲಿ ಅವರ ಪ್ರಾತಿನಿಧ್ಯ ತೀರಾ ಕಡಿಮೆ. ಇದಕ್ಕೆ ಪ್ರೇರಣೆ ಮತ್ತು ಪ್ರೋತ್ಸಾಹದ ಕೊರತೆಯೇ ಪ್ರಮುಖ ಕಾರಣ.
ಕೆಲವು ವರ್ಷಗಳಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರಲ್ಲಿ ಮತ್ತು ಉತ್ತೀರ್ಣರಾದವರಲ್ಲಿ ಬಾಲಕಿಯರೇ ಮುಂದಿದ್ದಾರೆ. ಆದರೆ, ಉನ್ನತ ಶಿಕ್ಷಣ ಪಡೆಯುತ್ತಿರುವ ಹೆಣ್ಣುಮಕ್ಕಳ ಸಂಖ್ಯೆ ಮಾತ್ರ ಹಿಂದಿದೆ. ಹೀಗಾಗಿ ಯುಪಿಎಸ್‌ಸಿ ಪರೀಕ್ಷೆ ಬರೆಯುವ ಮತ್ತು ಅದರಲ್ಲಿ ಯಶಸ್ಸು ಸಾಧಿಸುವ ಮಹಿಳೆಯರ ಸಂಖ್ಯೆ ಕಡಿಮೆ. ಪರೀಕ್ಷೆ ಬರೆಯುವ ಮಹಿಳೆಯರ ಸಂಖ್ಯೆ ಮೊದಲು ಹೆಚ್ಚಾಗಬೇಕು.
ಈ ಕ್ಷೇತ್ರದಲ್ಲಿ ಪುರುಷ ಅಭ್ಯರ್ಥಿಗಳಿಗೆ ದೊರೆಯುವಷ್ಟು ಪ್ರೋತ್ಸಾಹ, ಪ್ರೇರಣೆ, ಸಹಕಾರ ಮಹಿಳಾ ಅಭ್ಯರ್ಥಿಗಳಿಗೆ ಸಿಗುತ್ತಿಲ್ಲ. ಹೆಣ್ಣನ್ನು ಹುಟ್ಟಿನಿಂದಲೇ ನೋಡುವ ತಾರತಮ್ಯದ ಮನೋಭಾವ ಇದಕ್ಕೆ ಪ್ರಮುಖ ಕಾರಣ. ಪೋಷಕರಲ್ಲಿ ಇತ್ತೀಚೆಗೆ ಕೆಲವು ಧನಾತ್ಮಕ ಬದಲಾವಣೆಗಳಾಗಿರುವುದು ಆಶಾದಾಯಕ ಬೆಳವಣಿಗೆ. ಉನ್ನತ ವ್ಯಾಸಂಗ ಮಾಡಲು, ಆರ್ಥಿಕವಾಗಿ ಸ್ವಾವಲಂಬಿಯಾಗಲು ತಾನು ಅರ್ಹಳು ಎಂಬುದನ್ನು ಮಹಿಳೆ ಪ್ರತಿ ಹಂತದಲ್ಲೂ ಪೋಷಕರಿಗೆ, ಸಂಬಂಧಿಕರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಎಲ್ಲ ಸಂದರ್ಭದಲ್ಲೂ ಅವರ ವಿಶ್ವಾಸ ಗಳಿಸಬೇಕಾಗಿದೆ.
ಕುಟುಂಬದಿಂದ ಪ್ರೋತ್ಸಾಹ ಸಿಗುವಂತೆ ಮಾಡಿಕೊಳ್ಳುವುದೇ ಮಹಿಳೆಯರ ಮುಂದಿರುವ ದೊಡ್ಡ ಸವಾಲು. ಒಂದು ವೇಳೆ ಪ್ರೋತ್ಸಾಹ ಸಿಕ್ಕರೂ ಈ ಕ್ಷೇತ್ರದಲ್ಲಿ ಯಶಸ್ಸು ಅನಿಶ್ಚಿತ. ಅದಕ್ಕಾಗಿ ಸಾಕಷ್ಟು ಅಧ್ಯಯನ ಮಾಡಬೇಕು. ಒಂದರಿಂದ ಐದು ವರ್ಷಕ್ಕೂ ಹೆಚ್ಚು ಕಾಯಬೇಕು. ಯಶಸ್ಸು ಸಿಕ್ಕೇ ಸಿಗುತ್ತದೆ ಎಂದೂ ಹೇಳ ಲಾಗದು. ಛಲ, ಆತ್ಮವಿಶ್ವಾಸ, ನಿರಂತರ ಪ್ರಯತ್ನ ಇದ್ದರೆ ಯಶಸ್ಸು ಖಚಿತವಾಗಿ ಸಿಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅಷ್ಟು ಸಮಯ ಕೇವಲ ಅಧ್ಯಯನಕ್ಕೆಂದೇ ಮಹಿಳೆಯರು ಮೀಸಲಿಡಬೇಕಿದೆ.
ನನಗೆ ಪೋಷಕರ ಸಂಪೂರ್ಣ ಸಹಕಾರ, ಪ್ರೋತ್ಸಾಹ ಸಿಕ್ಕಿತು. ಅಪ್ಪ, ಅಮ್ಮ ಇಬ್ಬರೂ ಶಿಕ್ಷಿತರಾದ್ದರಿಂದ ನನಗೆ ಕಷ್ಟವಾಗಲಿಲ್ಲ. ಹೆಣ್ಣಾಗಿ ಹುಟ್ಟಿದ್ದಕ್ಕೆ ನನಗೆ ಹೆಮ್ಮೆಯಿದೆ. ಇದೊಂದು ರೀತಿ ನನಗೆ ವರದಾನವೂ ಆಗಿದೆ. ಗ್ರಾಮೀಣ ಬದುಕನ್ನು ಕಂಡಿರುವುದರಿಂದ ಹೆಚ್ಚು ಸಂವೇದನಾಶೀಲಳಾಗಲು ಸಾಧ್ಯವಾಗಿದೆ. ಇಂಥದ್ದೇ ಬೆಂಬಲ ಎಲ್ಲ ಹೆಣ್ಣುಮಕ್ಕಳಿಗೂ ಸಿಗಬೇಕು.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಒಲವು ತೋರುವ ಮಹಿಳೆಯರನ್ನು ಪ್ರೋತ್ಸಾಹಿಸುವಂತಹ ಯೋಜನೆಯನ್ನು ಸರ್ಕಾರ ರೂಪಿಸಬೇಕು. ಗ್ರಾಮ, ತಾಲ್ಲೂಕು ಮಟ್ಟದಲ್ಲಿ ಮಹಿಳೆಯರಿಗೆ ಕೈಗೆಟಕುವಂತೆ ಎಲ್ಲ ಸೌಲಭ್ಯಗಳು ದೊರೆಯುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಸುಸ್ಥಿರ ಅಭಿವೃದ್ಧಿ ಮಾದರಿಯ ಯೋಜನೆ ಜಾರಿಗೊಳಿಸಬೇಕು. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಪ್ರಗತಿಯ ಜತೆಗೆ ಸ್ವಾವಲಂಬಿ ಜೀವನ ನಡೆಸುವುದಕ್ಕೆ ಪೂರಕ ವಾತಾವರಣ ಸೃಷ್ಟಿಸಬೇಕು. ಮಹಿಳೆಯರಿಗೆ ಪ್ರತ್ಯೇಕ ಯೋಜನೆಯಡಿ ವಿಶೇಷ ತರಬೇತಿ ಒದಗಿಸುವ ಕಾರ್ಯಕ್ರಮ ರೂಪಿಸಬೇಕಾದ ಅಗತ್ಯವಿದೆ.
ಕೆಲ ಸೇವಾ ನಿಯಮಗಳಲ್ಲೂ ಬದಲಾವಣೆಗಳಾಗಬೇಕು. ಉದಾಹರಣೆಗೆ, ಶಿಶುಪಾಲನೆ ವಿಚಾರ ಬಂದಾಗ ಅದರ ಸಂಪೂರ್ಣ ಜವಾಬ್ದಾರಿ ಮಹಿಳೆಯರದ್ದೇ ಎಂಬಂತೆ ನಿಯಮಗಳಿವೆ. ಅಂದರೆ ಮಹಿಳಾ ಸಿಬ್ಬಂದಿಗೆ 6 ತಿಂಗಳು ಹೆರಿಗೆ ರಜೆ ನೀಡಲಾಗಿದೆ. ಪುರುಷ ಸಿಬ್ಬಂದಿಗೆ ಕೇವಲ 14 ದಿನ ರಜೆ. ಶಿಶುಪಾಲನೆಯಲ್ಲಿ ತಂದೆಯ ಜವಾಬ್ದಾರಿಯನ್ನೂ ಅರಿತು ನಿಯಮಗಳನ್ನು ರೂಪಿಸಬೇಕು. ಹಳ್ಳಿಗಾಡಿನಲ್ಲಿ ಎಲ್ಲ ಕಷ್ಟಗಳೊಂದಿಗೆ ಬೆಳೆದು, ಕೃಷಿ, ಹೈನುಗಾರಿಕೆ ನಡೆಸಿಕೊಂಡು ಸಂಸಾರವನ್ನೂ ನೋಡಿಕೊಳ್ಳುತ್ತಿರುವ ಮಹಿಳೆಯರು ನನಗೆ ಮಾದರಿ. ಪಿ.ಲಂಕೇಶರ ‘ಅವ್ವ’ ಕವನದಲ್ಲಿನ ತಾಯಿಯ ಪಾತ್ರ ಕೂಡ ನನಗೆ ಮಾದರಿ.
(2016ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದ ಹೆಮ್ಮೆ ಕೆ.ಆರ್. ನಂದಿನಿ ಅವರದು)
–ನಿರೂಪಣೆ: ಎಸ್. ಸಂಪತ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.