ಬೆಳಗಾಗೆದ್ದು ಬಾಗಿಲಿನ ಸಂದಿಯಲ್ಲಿ ಬಿದ್ದಿದ್ದ ಪೇಪರನ್ನು ತಂದು ಓದಲು ತೆರೆಯುತ್ತಿದ್ದಂತೆ, ಪಟಪಟನೆ ಒಂದಷ್ಟು ಪ್ಯಾಂಪ್ಲೆಟ್ಟುಗಳು ಕಾಲಮೇಲೆ ಬಿದ್ದವು. ಎಲ್ಲವೂ ಮನೆ ಹತ್ತಿರ ನಡೆವ ಸಮ್ಮರ್ ಕ್ಯಾಂಪಿನ ಕರಪತ್ರಗಳು. ಈಗಾಗಲೇ ವಾಟ್ಸ್ಯಾಪಿನಲ್ಲಿಯೂ ಒಂದಷ್ಟು ಫಾರ್ವರ್ಡ್ ಮೆಸೇಜ್‌ಗಳು ಬಂದಿದ್ದವು. ಆದರೆ ಇಂಥ ಯಾವ ಕ್ಯಾಂಪ್‍ಗಳ ಆಕರ್ಷಣೆಯೂ ನನಗಿಲ್ಲ.
ಏಕೆಂದರೆ ಶಾಲೆಗಳಿಗೆ ರಜೆ ಶುರುವಾದೊಡನೆ ಓಡುವುದು ನನ್ನೂರಿಗೆ. ಕೋಟದ ಉರಿಬಿಸಿಲು ನನಗೆ ಮಾತ್ರವಲ್ಲ ಮಕ್ಕಳಿಗೂ ತಂಪರೆಯುವ ಕ್ಯಾಂಪ್ ಆಗಿರುತ್ತದೆ. ಇನ್‍ಡೋರ್ ಅಂದ್ರೆ ಮನೆ, ಔಟ್‍ಡೋರ್ ಅಂದ್ರೆ ರಸ್ತೆ ಎಂದೇ ಆಡುವ ಮಕ್ಕಳು, ಅಜ್ಜನ ಮನೆಯಲ್ಲಿ ಅವು ಕಲ್ಲುಕುಟ್ಟಿದರೆ ದಿಕ್ಕಾಪಾಲಾಗಿ ಹಾರುವ ಜೇನು ನೊಣಗಳಂತೆ ಕಾಣುತ್ತಾರೆ.
ಬೆಳ್ಳಂಬೆಳಿಗ್ಗೆ ಏಳುತ್ತಲೇ ‘ದೊಡ್ಡ’ ಹಾಲು ಕರೆಯುವಾಗ ಹುಲ್ಲುಹಾಕುವುದು, ದನದ ಮುಖ ಸವರುವುದು, ಅದು ಕಲಗಚ್ಚನ್ನು ಸೊರ್ರ್ ಎನ್ನುತ್ತಾ ಕುಡಿಯುವುದು – ಎಲ್ಲವೂ ಸೋಜಿಗ ಅವರಿಗೆ. 1 ಎಚ್.ಪಿ. ಪಂಪ್ಸೆಟ್ಟಿನ ಸ್ಪೀಡಿನಲ್ಲಿ ಹೊಯ್ಯುವ ಉಚ್ಚೆ, ಬಾಲ ಎತ್ತಿ ಪಟಪಟನೆ ಹಾಕುವ ಸಗಣಿಯಿಂದ ಹಟ್ಟಿಯೆಲ್ಲಾ ವಿಚಿತ್ರ ವಾಸನೆಯಿಂದ ಕೂಡಿದ್ದರೂ ಅದೇನೋ ಹೊಸತೊಂದನ್ನು ಲೈವ್ ಆಗಿ ಕಂಡ ಸಂಭ್ರಮ ಅವರದ್ದು.
ಕಳೆದ ಬಾರಿ ರೆಡ್ಡಿ ಡಾಕ್ಟರು ಗಬ್ಬ ನಿಲ್ಲಲು ಕೊಟ್ಟ ಮಾರುದ್ದದ ಇಂಜೆಕ್ಷನ್ ನೋಡಿ ಯಾಕೆ? ಏನು? ಎಲ್ಲಾ ಪ್ರಶ್ನೆಗಳನ್ನು ಕೇಳಿ ನನ್ನ ಬಾಯಿಂದ ಉತ್ತರ ಹೊರಡಿಸಿದ್ದರು. ಈ ಪ್ರಕ್ರಿಯೆಗೆ ಸಾಕ್ಷಿಯಾಗಿ, ಹಟ್ಟಿಯಲ್ಲಿ ನಿಂತಿರುವ ಕರುವನ್ನು ತೋರಿಸಲಿಕ್ಕಿದೆ. ಇವೆಲ್ಲವುದರಲ್ಲಿ, ಬಾಲ್ಯದಲ್ಲಿ ತಾವೇ ತಾವಾಗಿ ಕಲಿವ ನಿಸರ್ಗದ ಪಾಠ, ಪ್ರಾಣಿದಯೆ, ಹೊಸಹುಟ್ಟು ಇವೆ.
ಈ ಬಾರಿ ಮಗಳಿಗೆ ಪ್ಯೂಪಾವೊಂದು ಚಿಟ್ಟೆಯಾಗಿ ಬದಲಾಗುವ ಕ್ರಿಯೆಯನ್ನು ಪ್ರಾಯೋಗಿಕವಾಗಿ ನೋಡಬೇಕಂತೆ. ಅವಳ ವಯಸ್ಸಿನಲ್ಲಿ ತೆರೆದ ಪ್ಲಾಸ್ಟಿಕ್ ಡಬ್ಬಿಯೊಳಗೆ ಚಿಟ್ಟೆಯ ಹುಳುವೊಂದನ್ನು ಹಾಕಿ, ಸೂಕ್ತವಾದ ಆಹಾರವನ್ನು ಹಾಕಿ ತೂತಾದ ಕವರೊಂದನ್ನು ಕಟ್ಟಿ ಅದು ಬೆಳೆಯುವ ಪ್ರತಿ ಹಂತವನ್ನೂ ಗಮನಿಸಿದ್ದು ಇನ್ನೂ ನೆನಪಿದೆ. ಅದು ಚಿಟ್ಟೆಯಾದ ದಿನ, ಅನುಭವಿಸಿದ ಖುಷಿ ಯಾವ ಅನಿಮಲ್ ಪ್ಲಾನೆಟ್ಟಿನ, ಯಾವ ಅತ್ಯಾಧುನಿಕ ಕ್ಯಾಮರಾಗಳು, ಯಾವ ಆ್ಯಂಗಲ್‌ನಲ್ಲಿ ಜೂಮ್‍ಗಳಲ್ಲಿ ಕಟ್ಟಿ ಕೊಟ್ಟರೂ ಸಿಗಲಾರದು. ಇಂಥ ಒಂದು ರಸಕ್ಷಣಕ್ಕೆ ಇನ್ನೊಮ್ಮೆ ಅವಳಷ್ಟೇ ಕಾತರಳಾಗಿರುವೆ. ಮ್ಯಾಂಗ್ರೋವ್ ಕಾಡುಗಳನ್ನು ಪಾಠದಲ್ಲಿ ಓದಿದವಳಿಗೆ, ಮನೆಯ ಪಡುದಿಕ್ಕಿನಲ್ಲಿರುವ ಸಣ್ಣತೊರೆಯ ಸಣ್ಣ ಸಂಕದಲ್ಲಿ, ಉಪ್ಪು, ಸಿಹಿನೀರಿನಲ್ಲಿ ಬೆಳೆದ ಈ ವನಗಳನ್ನು ಪ್ರತ್ಯಕ್ಷವಾಗಿ ತೋರಿಸಿದರೆ ಓದಿದ್ದು ಇನ್ನಷ್ಟು ಸ್ಫುಟವಾಗಬಹುದು. ಇನ್ನು ಸಮುದ್ರದ ಕಡೆಗೆ ಹೋದರೆ ಡಿಟ್ಟೋ ರಾಮನ ಮನಗೆದ್ದ ಅಳಿಲುಗಳೇ. ನೀರಿನಿಂದ ಒದ್ದೆಯಾಗಿ ಮೈಯೆಲ್ಲಾ ಉಸುಕನ್ನು ಹೊದ್ದ ಅವರಿಗೆ, ಅಳಿಲಿನ ಕತೆ ಹೇಳುವ ಸುಸಮಯ ಇದಲ್ಲದೆ ಮತ್ತ್ಯಾವುದು?
ರಾತ್ರಿ ಚಂಡೆಮದ್ದಳೆಯ ದನಿ ಕೇಳುತ್ತಲೇ, ಆಟ ನಡೆಯುವ ಸ್ಥಳ ಹುಡುಕುತ್ತಾ ಹೋಗಿ. ಹಾಸ್ಯಗಾರ ‘ಸಲಾಮು, ಸಲಾಮು’ ಹಾಡಿಗೆ ವಿಚಿತ್ರವಾಗಿ ಕುಣಿವುದನ್ನು ಕಂಡು, ಅವರು ನಗುವ ಕ್ಷಣಕ್ಕೆ ನಾನು ಸಾಕ್ಷಿಯಾಗಬೇಕು, ಪ್ರೇಕ್ಷಕರ ನಡುವಿನಿಂದ ಬೆಂಕಿ ಉಗುಳುತ್ತಾ ಬರುವ ಬಣ್ಣದ ವೇಷವನ್ನು ಕಂಡು ಭಯಬೀಳುವಾಗ ಸಮಾಧಾನವನ್ನು ಪಡಿಸಬೇಕು, ಚೌಕಿಯಲ್ಲಿ ಬೀಡಿ ಸೇದುವ ಸ್ತ್ರೀವೇಷವನ್ನು, ನಿಜವಾಗಿ ಗೊರಕೆ ಹೊಡೆಯುವ ಕುಂಭಕರ್ಣನನ್ನು ತೋರಿಸಿದಾಗ ಅವರ ಮುಖದಲ್ಲಿ ಮೂಡುವ ಭಾವವನ್ನು ಹುಡುಕಬೇಕು.
ಎರಡಕ್ಕಿಂತ ಜಾಸ್ತಿ ದೋಸೆಗಳನ್ನು ತಿನ್ನಲು ಸತಾಯಿಸುವ ಮಕ್ಕಳು, ಅಜ್ಜ– ಅಜ್ಜಿ, ಅತ್ತೆ–ಮಾವಂದಿರೊಡನೆ ಕುಳಿತು ಮಾತಾಡುತ್ತ ತಿನ್ನುತ್ತಿದ್ದರೆ ಇಷ್ಟ ಇಲ್ಲದ ಅವಲಕ್ಕಿಯಾದರೂ ಗಂಟಲೊಳಗೆ ಇಳಿಯುತ್ತದೆ. ಎಲ್ಲರೊಡನೆ ಒಟ್ಟಾಗಿ ಉಣ್ಣುವಾಗ ಸಿಗುವ ಖುಷಿ, ಮನಸ್ಸಿಗೆ ಹಿತ ಇವುಗಳನ್ನು ನಾನು ಹೇಳಿಕೊಡಬೇಕಾಗಿಲ್ಲ. ಬೇಸಿಗೆ ರಜೆಯೆಂದರೆ ಮದುವೆ, ಉಪನಯನ, ಸಣ್ಣ ಸಣ್ಣ ಸಮಾರಂಭಗಳ ಸುಗ್ಗಿಯ ಕಾಲ. ಅನುಕೂಲ ಆದಾಗೆಲ್ಲಾ ಅವರನ್ನು ಕರೆದುಕೊಂಡು ಹೋಗಿ ಸಂಬಂಧಿಕರನ್ನು, ಗೆಳೆಯರನ್ನು ಪರಿಚಯಿಸಿಕೊಡಬೇಕು. ಬರೀ ವಾಟ್ಸ್ಯಾಪ್ಪು, ಫೇಸ್ಬುಕ್ಕಿನಲ್ಲಿ ಮಾತ್ರ ಜೋಪಾನವಾಗಿರುವ ಈ ಸಂಬಂಧಗಳನ್ನು ನಿಜವಾಗಿಯೂ ಕಾಪಿಟ್ಟುಕೊಳ್ಳಬೇಕಾದರೆ ಇಂಥ ಪರಿಚಯ ಎಳೆಯರಿಗೆ ತುಂಬ ಅಗತ್ಯ.
ಹೀಗೆ ಇಂಥ ಉಚಿತ ತರಗತಿಗಳಲ್ಲಿ ಮಿಂದೇಳುತ್ತಿರುವಾಗ, ಪ್ರತಿವರ್ಷದ ಕತೆಯಂತೆ ಜೂನ್ ಮೊದಲಾಗುತ್ತಿದ್ದಂತೆ, ನನ್ನಪ್ಪ ಮಕ್ಕಳಿಗೆ- ‘ಅಮ್ಮ ಇನ್ನು ನಿಮ್ಮನ್ನು ಜೈಲಿಗೆ ಹಾಕುತ್ತಾಳೆ’ ಎನ್ನುತ್ತಾರೆ. ಇಷ್ಟುದಿನದ ಉತ್ಸಾಹವೆಲ್ಲಾ ಜರ್ರ್ ಎಂದು ಇಳಿದುಹೋಗುತ್ತದೆ. ಬಾಡಿದ ಅವರ ಮುಖವನ್ನು ನೋಡಿ ಬೆಂಗಳೂರಿನಲ್ಲಿ ಗೆಳೆಯರಿದ್ದಾರೆ, ಮಾಲ್ ಇದೆ, ಫೋರ್ತ್ ಬ್ಲಾಕಿದೆ – ಎಂದು ಇಲ್ಲಸಲ್ಲದೆಲ್ಲಾ ಹೇಳಿ ಪುಸಲಾಯಿಸಿ ಕೈಕೋಳ ಹಾಕಿಸಿ ನಾನೂ ಹೊರಡುತ್ತೇನೆ - ಜೈಲಿಗೆ ಅಲ್ಲಲ್ಲ, ಮನೆಗೆ...!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.