ಯಾವ ಹಬ್ಬ ಇಷ್ಟ? ಈ ಪ್ರಶ್ನೆಯನ್ನು ಇದುವರೆಗೂ ಕೇಳಿಕೊಂಡೇ ಇರಲಿಲ್ಲ. ಏಕೆಂದರೆ ಯಾವುದೇ ಹಬ್ಬ ಸಂಭ್ರಮ, ಸಡಗರ, ಭಯ-ಭಕ್ತಿ ಇವುಗಳಿಗೆ ಇನ್ನೊಂದು ಹೆಸರು ಹಾಗೂ ಬಹುತೇಕವಾಗಿ ಆ ಕಾರಣಕ್ಕೇ ಹಬ್ಬಗಳು ಎಲ್ಲರಿಗೂ ಪ್ರಿಯ. ಹಬ್ಬಗಳನ್ನು ಕೇವಲ ಆಚರಣೆಗಳಾಗಿ ಮಾತ್ರ ನೋಡದೇ ಅವುಗಳ ಸಾಮಾಜಿಕ, ಧಾರ್ಮಿಕ ತಿರುಳನ್ನು ಸವಿದಾಗ ಹಬ್ಬಗಳು ನೀಡುವ ಆನಂದವೇ ಬೇರೆ. ಈ ಆನಂದದೊಂದಿಗೆ ನನಗೆ ಹಬ್ಬಗಳು ಬಾಲ್ಯದ ಸುಂದರ ನೆನಪುಗಳು.
ಚಿಕ್ಕಂದಿನಲ್ಲಿ ಎದುರು ನೋಡುತ್ತಿದ್ದ ಹಬ್ಬವೆಂದರೆ ನಾಗರಪಂಚಮಿ. ಅದು ನಾಗಪ್ಪನಿಗೆ ಹಾಲೆರೆಯುವುದಕ್ಕಾಗಿ ಖಂಡಿತ ಅಲ್ಲ. ಬದಲಾಗಿ ಮನೆಯಲ್ಲಿ ಕಟ್ಟುತ್ತಿದ್ದ ಜೋಕಾಲಿಗಾಗಿ! ನಾಗರಪಂಚಮಿ ಇನ್ನೂ ನಾಲ್ಕು ದಿನ ಇರುವಾಗ ಮನೆಯ ಮಧ್ಯದಲ್ಲಿ ಇದ್ದ ದಪ್ಪನೆಯ ತೊಲೆಗೆ ಸರಿಹೊಂದುವ ಗಟ್ಟಿ ಹಗ್ಗವನ್ನು ಆರಿಸಿ ನಮ್ಮ ತಂದೆ ಉದ್ದನೆಯ ನಾಲ್ಕೆಳೆಯ ಜೋಕಾಲಿ ಕಟ್ಟುತ್ತಿದ್ದರು. ಅದರ ಜೀಕಾಟ ಕಟ್ಟಿದ ದಿನದಿಂದಲೇ ಪ್ರಾರಂಭವಾದರೂ ಅದರ ಮಜ ಸಿಗುತ್ತಿದ್ದುದು ಹಬ್ಬದ ದಿನದಿಂದ. ಅಂದು ನಮ್ಮ ಮನೆಯ ನಾಗಪ್ಪನಿಗೆ ಹಾಲೆರೆಯಲು ಚಿಕ್ಕಪ್ಪ-ದೊಡ್ಡಪ್ಪಂದಿರ ಹೆಣ್ಣುಮಕ್ಕಳೆಲ್ಲ ಬರುತ್ತಿದ್ದರು. ಅದೊಂದು ನೆವ ಮಾತ್ರ. ಮುಖ್ಯವಾಗಿ ಎಲ್ಲರ ಆಕರ್ಷಣೆ ನಮ್ಮ ಮನೆಯ ಉದ್ದನೆಯ ಜೋಕಾಲಿ.
ಹಾಲೆರೆದ ಶಾಸ್ತ್ರ ಮಾಡಿ ಜೋಕಾಲಿಗೆ ಮುಗಿಬಿದ್ದರೆ ಸಮಯದ ಪರಿವೆಯೇ ಇರುತ್ತಿರಲಿಲ್ಲ. ನಾಲ್ಕೆಳೆಯನ್ನು ಎರಡೆರಡು ಎಳೆ ಮಾಡಿಕೊಂಡು ಒಂದು ಬಾರಿಗೆ ಇಬ್ಬರು ಆಡುತ್ತಿದ್ದವು. ಪ್ರತಿಯೊಬ್ಬರ ಹಿಂದೂ ಜೀಕುವವರು ನಾಲ್ಕಾರು ಮಂದಿ ಇರುತ್ತಿದ್ದುದು ಮುಂದಿನ ಸರತಿಗೆ ರಿಸರ್ವೇಶನ್ ಮಾಡಲು ಎಂಬುದು ಎಲ್ಲರಿಗೂ ತಿಳಿದ ಗೌಪ್ಯವಾಗಿತ್ತು. ಅಲ್ಲಿ ಜೀಕಾಟ ಮಾತ್ರ ಇರುತ್ತಿರಲಿಲ್ಲ. ಜೋಕಾಲಿ ಮೇಲೆ ಹೋದಾಗ ಒಬ್ಬರು ಇನ್ನೊಬ್ಬರನ್ನು ಕಾಲಿನಿಂದ ನೂಕಿ ಹಿಡಿಯಬೇಕಿತ್ತು.
ಆಗ ಸೇರಿದ್ದ ಎಲ್ಲ ಹೆಣ್ಣುಮಕ್ಕಳ ನಗು ಬೀದಿಯ ತುದಿಯವರೆಗೂ ಕೇಳುತ್ತಿದ್ದು ಅದನ್ನು ಕೇರಿಗೆ ಕೇರಿಯೇ ಆನಂದಿಸುತ್ತಿತ್ತು. ಅದನ್ನು ಎಲ್ಲರಿಗೂ ಉಣಬಡಿಸುವ ಸಲುವಾಗಿಯೇ ತಂದೆ ಜೋಕಾಲಿ ಕಟ್ಟುತ್ತಿದ್ದರು! ಜೋಕಾಲಿ ಆಡುತ್ತ ಹಾಡುವ ಹಾಡುಗಳಿಗೆ ಲೆಕ್ಕವಿರಲಿಲ್ಲ. ಅಂದು ರಾತ್ರಿ ಒಲ್ಲದ ಮನಸ್ಸಿನಿಂದ ಸೇರಿದ್ದ ಎಲ್ಲ ಹೆಣ್ಣುಮಕ್ಕಳು ತಮ್ಮ ತಮ್ಮ ಮನೆಗಳಿಗೆ ಹೋದವರು ಮತ್ತೆ ಮಾರನೇ ದಿನ ಪ್ರತ್ಯಕ್ಷ.
ಅಂತೂ ಸಾಕಪ್ಪ ಅನ್ನಿಸುವಷ್ಟು ಜೋಕಾಲಿ ಆಡಿ, ಮನೆಯವರಿಗೆ ಇನ್ನು ಈ ಕೂಗಾಟ-ಚೀರಾಟ ಸಹಿಸುವುದು ಸಾಧ್ಯವಿಲ್ಲ ಎನ್ನಿಸಿದಾಗ ತಂದೆ ಜೋಕಾಲಿ ಬಿಚ್ಚುತ್ತಿದ್ದರು. ಅಲ್ಲಿಗೆ ತಿಂಗಳುಗಳು ಕಳೆದಿರುತ್ತಿದ್ದವು. ಜೋಕಾಲಿ ಬಿಚ್ಚಿಕೊಂಡು ದಪ್ಪನೆಯ ತೊಲೆ ಅನಾಥವಾದಂತೆ, ಮನೆಯೆಲ್ಲ ಭಣಭಣ ಎನ್ನಿಸುವಂತೆ ಆಗುತ್ತಿದ್ದುದು ಮಾತ್ರ ಸುಳ್ಳಲ್ಲ. ಎಂಥ ಕಾಲ ಅದು. ನೆಂಟರನ್ನೆಲ್ಲ ಸಾಮಾಜಿಕವಾಗಿ, ಧಾರ್ಮಿಕವಾಗಿ ಆ ಹಬ್ಬ ಒಂದು ಮಾಡುತ್ತಿತ್ತು. ಮಾತ್ರವಲ್ಲ ಹೆಣ್ಣುಮಕ್ಕಳಿಗೆ ಮಾತ್ರ ಪ್ರಾಶಸ್ತ್ಯವಿರುವ ಏಕೈಕ ಹಬ್ಬ ಇದು. ಈಗಲೂ ಪ್ರತಿವರ್ಷ ಹಬ್ಬದಲ್ಲಿ ನಾಗಪ್ಪನಿಗೆ ಹಾಲು, ನಮಗೆ ತಿನ್ನಲು ಉಂಡೆ ನೆನಪಾಗುವುದಕ್ಕಿಂತ ಮೊದಲು ಜೋಕಾಲಿಯದೇ ನೆನಪು.
ಗೌರಿ-ಗಣೇಶ ನನಗೆ ದೇವರುಗಳಿಗಿಂತಲೂ ಅಕ್ಕ-ತಮ್ಮರಂತೆ. ಗೌರಿಯಲ್ಲಿ ಹಿರಿಯಕ್ಕನಂತೆ ಎಲ್ಲವನ್ನೂ ನಿವೇದಿಸಿಕೊಂಡು ಹಗುರಾಗಬಹುದು; ಗಣೇಶನಿಗೆ ತಮ್ಮನಂತೆ ಕೀಟಲೆ ಮಾಡಿ ಆನಂದಿಸಬಹುದು. ಗೌರೀಹಬ್ಬ ಬಂತೆಂದರೆ ನನಗೆ ಹಿರಿಯಕ್ಕ ಮನೆಗೆ ಬರುತ್ತಿದ್ದಾಳೆನ್ನುವ ಸಂತಸ. ಆಕೆಗಾಗಿ ಹೊಸ ಸೀರೆ, ಹೊಸ ಅಲಂಕಾರ, ಮುಡಿಯಲ್ಲಿಡಲು ಬಗೆಬಗೆ ಹೂವುಗಳು, ತಳಿರು ತೋರಣಗಳನ್ನು ಕಟ್ಟಿ ಕಲಶ ತುಂಬಿ ಆಕೆಯನ್ನು ಆಹ್ವಾನಿಸುವಾಗ ಆಕೆ ನನ್ನೊಂದಿಗೆ ಇರುವಂಥ ಭಾವ.
ಕಲಶದ ಸುತ್ತ ಹೊಸ ಸೀರೆಯನ್ನು ಉಡಿಸಿ ತಲೆಯ ಮೇಲೆ ಸೆರಗು ಹೊದಿಸಿ ನಾನೇ ಕೈಯಾರೆ ಅಲಂಕಾರ ಮಾಡಿ ಆನಂದಿಸುತ್ತೇನೆ. ಎಲ್ಲರೂ ಮಾಡುವಂತೆ ನಾನೂ ಮಣ್ಣಿನ ಮೂರ್ತಿಯನ್ನು ತಂದು ಪೂಜಿಸಿ, ನಂತರ ನೀರಿನಲ್ಲಿ ಅದನ್ನು ಬಿಟ್ಟು ಕರಗುವುದನ್ನು ನೋಡಲಾಗದೆ ಈಗ ಕಲಶ ತುಂಬಿ ಅದಕ್ಕೇ ಅಲಂಕಾರ ಮಾಡುತ್ತೇನೆ. ಅಕ್ಕಪಕ್ಕದವರಿಗೂ ನಮ್ಮ ಮನೆಯ ಈ ಹಬ್ಬಕ್ಕೆ ಬರುವ ಉಮೇದು. ಅವರೆಲ್ಲ ತಮ್ಮ ಮಕ್ಕಳೊಂದಿಗೆ ಬಂದು ತಿಂಡಿ ತಿನ್ನಿಸಿ ತಿಂದು ಹೋದರೆ ಹಬ್ಬ ಮಾಡಿದ ಸಾರ್ಥಕತೆ.
ಆದರೆ ಗೌರಿಯನ್ನು ಕಳಿಸುವ ದಿನ ಮಾತ್ರ ಈಗಲೂ ಕಣ್ಣು ತುಂಬಿಕೊಳ್ಳುತ್ತೇನೆ. ಅಕ್ಕನನ್ನು ನೋಡಲು ಮತ್ತೆ ಒಂದು ವರ್ಷ ಕಾಯಬೇಕಲ್ಲ ಎಂದು ಮನಸ್ಸು ತುಂಬಿ ಬರುತ್ತದೆ. ಅದರಂತೆ ಗಣೇಶ ಕೂಡ ನನಗೆ ಬಹು ಆತ್ಮೀಯ. ಚಿಕ್ಕಂದಿನಲ್ಲಿ ಗಣಪತಿ ಮಾಡುವವರ ಮನೆಗೆ ಹೋಗಿ ಮಣ್ಣಿನಲ್ಲಿ ಅವರು ಮಾಡುತ್ತಿದ್ದ ಗಣಪತಿ ನೋಡುತ್ತಿದ್ದುದು ಈಗ ಸುಂದರ ನೆನಪು. ಗಣೇಶನ ಒಂದೊಂದಂಗುಲವೂ ರೂಪ ತಳೆದು ಅದು ದೈವವಾಗಿ ಪೂಜಿಸಲ್ಪಡುವವರೆಗಿನ ಎಲ್ಲ ಹಂತಕ್ಕೂ ನಾವು ಮಕ್ಕಳು ಪ್ರತ್ಯಕ್ಷ ಸಾಕ್ಷಿಗಳಾಗಿರುತ್ತಿದ್ದೆವು.
ಹಬ್ಬದ ದಿನ ಅಪ್ಪಿ ತಪ್ಪಿ ಚಂದಿರನನ್ನೇದಾರೂ ನೋಡಿಬಿಟ್ಟರೆ ಯಾರದ್ದಾದರೂ ಮನೆಯ ಗಣಪತಿಯ ಎದುರು ಪ್ರಸಾದಕ್ಕೆಂದು ಇಟ್ಟಿದ್ದ ಭಕ್ಷಗಳನ್ನೇ ಕದ್ದು ತಿಂದು ಪಾಪಮುಕ್ತರಾದೆವು ಎಂದು ನಿರುಮ್ಮಳವಾಗುತ್ತಿದ್ದುದನ್ನು ನೆನೆಸಿಕೊಂಡು ಆ ಮುಗ್ಧ ದಿನಗಳಿಗಾಗಿ ಮನ ಮತ್ತೆ ಹಂಬಲಿಸುತ್ತದೆ. ಮೂರು ದಿನಗಳ ಕಾಲ ಆಚರಿಸುವ ದೀಪಾವಳಿ ಮನ–ಮನೆಗಳಲ್ಲಿ ಕತ್ತಲೆಗೆ ಬೆಳಕಿನ ಭಾಷ್ಯ ಬರೆಯುವ ಹಬ್ಬ. ‘ದೊಡ್ಡ ಹಬ್ಬ’ ಎಂದೇ ಕರೆಯಲ್ಪಡುವ ಈ ಹಬ್ಬದಲ್ಲಿ ಒಳಗೊಳ್ಳುವ ಸಾಂಸ್ಕೃತಿಕ ಸಂಭ್ರಮ, ಸಡಗರದಿಂದ ಈ ಹಬ್ಬ ನನಗೆ ಬಲು ಅಚ್ಚುಮೆಚ್ಚು.
ಎಲ್ಲೋ ಎಂದೋ ಹತನಾದ ನರಕಾಸುರನ ವಧೆಗಾಗಿ ನಾನ್ಯಾಕೆ ಸಡಗರಿಸಬೇಕು ಎಂದು ಕೇಳಿಕೊಳ್ಳುತ್ತಲೇ ಲಕ್ಷ್ಮೀಪೂಜೆಯಲ್ಲಿ ಅದನ್ನು ಮರೆಯುತ್ತೇನೆ. ಬಲೀಂದ್ರನನ್ನು ಪ್ರೀತಿಯಿಂದ ಬರಮಾಡಿಕೊಂಡು ಅವನಿಗಾದ ಅನ್ಯಾಯಕ್ಕೆ ಬೇಸರಪಟ್ಟುಕೊಳ್ಳುತ್ತಲೇ ಪೂಜಿಸುತ್ತೇನೆ. ಗಾಢ ಕತ್ತಲ ಆ ರಾತ್ರಿಯಲ್ಲಿ ಮನೆಯ ಮೂಲೆಮೂಲೆಗಳನ್ನು, ಅಂಗಳವನ್ನು ದೀಪಗಳಿಂದ ಬೆಳಗಿಸುವುದು ನನಗೆ ಬಹಳ ಪ್ರಿಯವಾದದ್ದು. ಈ ದೀಪಗಳಿಗೆ ಬೇಕಾದ ಬತ್ತಿಗಳನ್ನು ವಾರಕ್ಕೆ ಮೊದಲೇ ನಾನೇ ಕೈಯಾರೆ ಸಿದ್ಧಪಡಿಸುತ್ತೇನೆ.
ಈ ಒಳಗೊಳ್ಳುವಿಕೆಯೇ ಹಬ್ಬದ ಜೀವಾಳ ಎಂದು ನನ್ನ ಬಲವಾದ ನಂಬಿಕೆ. ಉಳಿದಂತೆ ಆಚರಣೆಗಳು ಅನೇಕ ಕಾರಣಗಳಿಂದ ಆಚರಿಸಲ್ಪಡುತ್ತವೆ. ಅವುಗಳಿಗಿಂತ ನನಗೆ ಈ ಎಲ್ಲ ಹಬ್ಬಗಳೂ ಮುಖ್ಯವಾಗುವುದು ನನ್ನ ನಾಡಿನ ಸಾಂಸ್ಕೃತಿಕ ಹಿರಿಮೆಯ ಪ್ರತೀಕವಾಗಿರುವುದರಿಂದ. ಈ ಹಿರಿಮೆಯನ್ನು ನಾನು ಮೊಟಕು ಮಾಡಬಾರದು ಎಂಬುದು ನನ್ನ ಕಾಳಜಿ. ಹಾಗಾಗಿಯೇ ಎಲ್ಲ ಹಬ್ಬಗಳೂ ನನಗೆ ಬಹುಪ್ರಿಯ.
ಎಲ್ಲ ಹಬ್ಬಗಳೂ ಮುಖ್ಯವಾಗುವುದು ನನ್ನ ನಾಡಿನ ಸಾಂಸ್ಕೃತಿಕ ಹಿರಿಮೆಯ ಪ್ರತೀಕವಾಗಿರುವುದರಿಂದ. ಈ ಹಿರಿಮೆಯನ್ನು ನಾನು ಮೊಟಕು ಮಾಡಬಾರದು ಎಂಬುದು ನನ್ನ ಕಾಳಜಿ. ಹಾಗಾಗಿಯೇ ಎಲ್ಲ ಹಬ್ಬಗಳೂ ನನಗೆ ಬಹುಪ್ರಿಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.