ಚಾಮರಾಜ ಜಿಲ್ಲೆಯ ೨೮ ವರ್ಷದ ಸ್ಮೃತಿ ಹಾಗೂ ದಲಿತ ವರ್ಗದ ೨೮ ವರ್ಷದ ಸುದೀಪ್ ಇಬ್ಬರೂ ತಮ್ಮ ಏಳು ವರ್ಷಗಳ ಪ್ರೀತಿಗೆ ವಿವಾಹದ ಮುದ್ರೆ ಹಾಕಲು ಬಯಸಿ ರಿಜಿಸ್ಟ್ರಾರ್ ಕಚೇರಿಯಲಿ ಮದುವೆಯಾದರು. ಈ ವಿವಾಹಕ್ಕೆ ಮನೆಯವರ ವಿರೋಧವಿತ್ತು. ಆದರೂ ಅದನ್ನು ಕಡೆಗಣಿಸಿ ಇಬ್ಬರೂ ವಿವಾಹವಾದುದು ಮನೆಯವರನ್ನು ರೊಚ್ಚಿಗೆಬ್ಬಿಸಿತು. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಸ್ಮೃತಿಯ ತಮ್ಮನೇ ಅಕ್ಕನನ್ನು ಕತ್ತು ಹಿಚುಕಿ ಕೊಂದು ಗೆಳೆಯನೊಂದಿಗೆ ಪರಾರಿಯಾಗಿದ್ದಾನೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದ ಕಾಲೇಜಿನಲ್ಲಿ ಅಂತಿಮ ಬಿ.ಎ ತರಗತಿಯಲ್ಲಿ ಓದುತ್ತಿದ್ದ ಸುವರ್ಣ ಎಂಬ ವಿದ್ಯಾರ್ಥಿ ಅದೇ ಹಳ್ಳಿಯ ಆಲೆಮನೆಯಲ್ಲಿ ಕೆಲಸ ಮಾಡುತ್ತಿದ್ದ ಗೋವಿಂದರಾಜು ಎಂಬ ಹುಡುಗನನ್ನು ಪ್ರೀತಿಸತೊಡಗಿದಳು. ಬೇರೆ ಬೇರೆ ಜಾತಿಗಳಿಗೆ ಸೇರಿದ ಇವರ ಪ್ರೇಮ ಕೊನೆಗೊಂಡುದುದೂ ದುರಂತದಲ್ಲೇ. ಆ ಹುಡುಗನಿಂದ ದೂರವಿರುವಂತೆ ಹುಡುಗಿಗೆ ಸೂಚಿಸಿದರು. ಆದರೆ ಸುವರ್ಣ ಗೋವಿಂದ ರಾಜನೊಡನೆ ಓಡಿಹೋಗಲು ನಿರ್ಧರಿಸಿದಾಗ ಮನೆಯವರೇ ಅವಳಿಗೆ ನೇಣು ಬಿಗಿದು ಅವಳನ್ನು ಸಾಯಿಸಿದರು.
ಮರ್ಯಾದೆಯ ಹೆಸರಿನಲ್ಲಿ ಹತ್ಯೆಗಳಾಗುವುದು ಉತ್ತರ ಭಾರತದ ರಾಜ್ಯಗಳಲ್ಲಿ ಸಾಮಾನ್ಯ. ಆದರೆ ಮೇಲಿನ ಘಟನೆಗಳು ನಡೆದಿರುವುದು ನಮ್ಮದೇ ರಾಜ್ಯದಲ್ಲಿ, ನಮ್ಮ ಅಕ್ಕಪಕ್ಕದ ಊರುಗಳಲ್ಲಿ. ಏಕೆ ಹೀಗೆ? ತಾನು ಇಚ್ಛಿಸುವ ವ್ಯಕ್ತಿಯೊಂದಿಗೆ ಬಾಳು ನಡೆಸುವ ಸ್ವಾತಂತ್ರ್ಯ ವ್ಯಕ್ತಿಗಳಿಗೆ ಇಲ್ಲವೇ? ಹಾಗೆ ಬಾಳಲು ಇಚ್ಛಿಸುವ ವ್ಯಕ್ತಿಗಳಿಗೆ ರಕ್ಷಣೆ ಇಲ್ಲವೇ? ಇದಕ್ಕೆ ಪರಿಹಾರವೇನು ಎಂಬ ಅನೇಕ ಪ್ರಶ್ನೆಗಳು ಇಂಥ ವರದಿಗಳನ್ನು ಓದಿದಾಗ ಯಾರೇ ಪ್ರಜ್ಞಾವಂತ ನಾಗರಿಕನನ್ನು ಕಾಡುತ್ತವೆ.
ಇದಕ್ಕೆ ಕಾರಣ ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿರುವ ಜಾತಿ ಪದ್ಧತಿ. ಹಾಗಾಗಿ ವಿವಾಹ ಸಂಬಂಧಗಳು ಏರ್ಪಡುವುದು ಸಹ ಆಯಾ ಜಾತಿಯವರಿಗೆ ಸೇರಿದವರ ನಡುವೆಯೇ. ವಿವಾಹಕ್ಕೆ ಸಂಬಂಧಿಸಿದಂತೆ ಅನ್ವಯವಾಗುವುದು ಅವರವರ ಧರ್ಮಕ್ಕೆ ಸೇರಿದ ವಿವಾಹ ಕಾನೂನುಗಳು (ಇವನ್ನು ವೈಯಕ್ತಿಕ ಕಾನೂನುಗಳು ಎನ್ನತ್ತಾರೆ).
ಹಿರಿಯರ ಒಪ್ಪಿಗೆ ಪಡೆದು ತಮ್ಮ ಧರ್ಮದೊಳಗೆ ಅಥವಾ ತಮ್ಮ ಜಾತಿಯೊಳಗೆ ವಿವಾಹವಾದಾಗ ಸಮಸ್ಯೆ ಉಂಟಾಗುವುದಿಲ್ಲ. ಮತ್ತು ಇಂಥ ವಿವಾಹಗಳನ್ನು ಆಯಾ ಧರ್ಮ ಅಥವಾ ಆಯಾ ಜಾತಿಯ ಸಂಪ್ರದಾಯಕ್ಕನುಸಾರವಾಗಿ ನೆರವೇರಿಸಲಾಗುತ್ತದೆ. ಅಂಥ ವಿವಾಹಗಳು ಕಾನೂನು ಬದ್ಧ ವಿವಾಹಗಳೆನಿಸಿಕೊಳ್ಳುತ್ತವೆ. ಇದನ್ನು ಮೀರಿ ತಾವು ಇಚ್ಛಿಸಿದವರನ್ನು ಆಯ್ಕೆ ಮಾಡಿಕೊಂಡಾಗ, ಅದರಲ್ಲೂ ಹಾಗೆ ಆಯ್ಕೆ ಮಾಡಿಕೊಂಡ ವ್ಯಕ್ತಿ ತಮ್ಮದಲ್ಲದ ಜಾತಿಗೆ, ಪಂಗಡಕ್ಕೆ ಅಥವಾ ಧರ್ಮಕ್ಕೆ ಸೇರಿದವರಾಗಿದ್ದರೆ ತೀವ್ರ ವಿರೋಧ ವ್ಯಕ್ತವಾಗುತ್ತದೆ. ಈ ವಿರೋಧದ ನಡುವೆಯೂ ನೆಮ್ಮದಿಯ ಜೀವನ ನಡೆಸಲು ಕಾನೂನು ಅವರಿಗೆ ಅನುವು ಮಾಡಿಕೊಡುತ್ತದೆ.
ಭಾರತದ ಸಂವಿಧಾನ ಸ್ತ್ರೀ ಪುರುಷರಿಗೆ ಸಮಾನ ಹಕ್ಕುಗಳನ್ನು ನೀಡುತ್ತದೆ. ಸಂವಿಧಾನದ ಈ ಆಶಯವನ್ನು ಜಾರಿಗೆ ತರಲು ಅನೇಕ ಕಾನೂನುಗಳ ರಚನೆಯಾಗಿವೆ. ಆದರೆ ಈ ಕಟ್ಟಳೆಗಳನ್ನು ಮೀರಿ ಅಂತರ್ ಜಾತಿ ಹಾಗೂ ಅಂತರ್‌ಧರ್ಮೀಯ ವಿವಾಹವಾಗ ಬಯಸುವವರಿಗೆ ೧೯೫೪ ರಲ್ಲಿ ಜಾರಿಗೆ ಬಂದ ‘ವಿಶೇಷ ವಿವಾಹ ಅಧಿನಿಯಮ’ ಎಂಬ ಕಾನೂನು ಅವಕಾಶ ಮಾಡಿಕೊಡುತ್ತದೆ. ಅಂಥ ವಿವಾಹಗಳನ್ನು ಈ ಕಾನೂನಿನ ಅಡಿಯಲ್ಲಿ ನೋಂದಾಯಿಸುವುದು ಕಡ್ಡಾಯ.
ಆಗ ಮಾತ್ರ ಅಂಥ ವಿವಾಹಗಳು ಊರ್ಜಿತ (ಕಾನೂನು ಬದ್ಧ) ವಾಗುತ್ತವೆ. ಈ ಕಾನೂನಿನ ಅಡಿಯಲ್ಲಿ ಆದ ವಿವಾಹ ಊರ್ಜಿತವಾಗಬೇಕಾದರೆ ಯುವಕ ೨೧ ವರ್ಷಗಳನ್ನು ಪೂರೈಸಿರಬೇಕು ಮತ್ತು ಯುವತಿ ೧೮ ವರ್ಷಗಳನ್ನು ಪೂರೈಸಿರಬೇಕು, ವಿವಾಹಕ್ಕೆ ಒಪ್ಪಿಗೆ ಕೊಡುವಂಥ ಮಾನಸಿಕ ಸ್ವಾಸ್ಥ್ಯವನ್ನು ಹೊಂದಿರಬೇಕು, ವಿವಾಹದ ಸಮಯದಲ್ಲಿ ಜೀವಂತವಿರುವ ಪತಿ ಅಥವಾ ಪತ್ನಿಯನ್ನು ಹೊಂದಿರಬಾರದು, ಇಬ್ಬರೂ ನಿಷೇಧಿತ ಸಂಬಂಧದೊಳಗೆ ಇರುವವರಾಗಿರಬಾರದು, ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ವಿವಾಹ ನೆರವೇರಿದಲ್ಲಿ(ಈ ಕಾನೂನಿನ ಅಡಿಯಲ್ಲಿ ರಕ್ಷಣೆ ಸಿಗಬೇಕಿದ್ದರೆ) ಇಬ್ಬರೂ ಈ ಅಧಿನಿಯಮ ಅನ್ವಯಿಸುವ ರಾಜ್ಯಗಳಲ್ಲಿ ನೆಲೆಸಿದ್ದವರಾಗಿರಬೇಕು. (ಮುಸಲ್ಮಾನರನ್ನು ಬಿಟ್ಟು ಉಳಿದೆಲ್ಲ ಧರ್ಮದವರಿಗೂ ಈ ಷರತ್ತುಗಳೇ ಅನ್ವಯವಾಗುತ್ತವೆ) ಈಗ ಎಲ್ಲ ವಿವಾಹಗಳನ್ನು ನೋಂದಾಯಿಸುವುದು ಎಲ್ಲ ಧರ್ಮದವರಿಗೂ ಕಡ್ಡಾಯ.
ವೈಯಕ್ತಿಕ ಕಾನೂನುಗಳೆಲ್ಲವೂ ಧರ್ಮಾಧಾರಿತವಾದವುಗಳು. ಎಲ್ಲ ಧರ್ಮಗಳಲ್ಲೂ ಕಟ್ಟುಕಟ್ಟಳೆಗಳನ್ನು ರೂಪಿಸುತ್ತಿದ್ದವರು ಪುರುಷರು ಮತ್ತು ಅವುಗಳೆಲ್ಲವನ್ನೂ ಪಾಲಿಸಬೇಕಾಗುತ್ತಿದ್ದುದು ಮಹಿಳೆಯರು. ಹಾಗಾಗಿ ನಿರ್ಬಂಧಗಳೆಲ್ಲವೂ ಮಹಿಳೆಯರಿಗೇ! ಇಂಥವರನ್ನೇ ವಿವಾಹವಾಗಬೇಕು ಎಂದು ಒತ್ತಾಯಿಸುವುದು ಅಥವಾ ಇಂಥವರನ್ನು ವಿವಾಹ ಆಗಬಾರದು ಎಂದು ನಿರ್ಬಂಧಿಸುವುದು ವೈಯಕ್ತಿಕ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ, ನಿಜ.
ಆದರೆ ಹೆಣ್ಣು ಮಕ್ಕಳು ವಿರೋಧಿಸುವಂತೆ ಇರಲಿಲ್ಲ. ಗಂಡ ಹೊಡೆಯಲಿ ಬಡಿಯಲಿ ಎದುರಾಡುವಂತಿರಲಿಲ್ಲ. (ಈಗಲೂ ಬಹಳಷ್ಟು ಹೆಣ್ಣು ಮಕ್ಕಳು ಇದೇ ಸ್ಥಿತಿಯಲ್ಲಿಯೇ ಇದ್ದಾರೆ). ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಹಿಂದಿನಂತೆ ಮಹಿಳೆ ಈಗ ತನ್ನ ವೈಯಕ್ತಿಕ ಸ್ವಾತಂತ್ರ್ಯವನ್ನು ಬಲಿಕೊಟ್ಟು ಬಾಳಬೇಕಿಲ್ಲ. ಅವಳಿಗೆ ಆಯ್ಕೆಯ ಸ್ವಾತಂತ್ರ್ಯವಿದೆ. ವಿವಾಹ ವಯಸ್ಸನ್ನು ತಲುಪಿದ, ಮಾನಸಿಕವಾಗಿ ಸ್ವಸ್ಥವಿರುವ ಹಾಗೂ ಅವಿವಾಹಿತ ಯುವತಿ ತನ್ನಿಚ್ಛೆಯ ಯುವಕನೊಡನೆ ವಿವಾಹವಾಗುವ ಹಕ್ಕನ್ನು ಹೊಂದಿರುತ್ತಾಳೆ.
ಎಚ್ಚೆತ್ತ ಮಹಿಳೆಗೆ ಕಾನೂನಿನ ಬೆಂಬಲವಿದೆ.
೨೦೦೬ ರಲ್ಲಿ ಜಾರಿಗೆ ಬಂದ ‘ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರಿಗೆ ರಕ್ಷಣೆ ನೀಡುವ ಅಧಿನಿಯಮ’ ಇಂಥ ದೌರ್ಜನ್ಯಗಳಿಗೆ ಕಡಿವಾಣ ಹಾಕುತ್ತದೆ. ಈ ಕಾನೂನಿನ ಅಡಿಯಲ್ಲಿ ಮಹಿಳೆಗೆ ಇಷ್ಟವಿಲ್ಲದ ಯಾವುದೇ ಕೆಲಸವನ್ನು ಮಾಡುವಂತೆ ಅಥವಾ ಮಾಡಲು ಇಷ್ಟವಿರುವ ಯಾವುದೇ ಕೆಲಸವನ್ನು ಮಾಡದಿರುವಂತೆ ಒತ್ತಾಯ ಮಾಡುವುದು ದೌರ್ಜನ್ಯ ಎನಿಸಿಕೊಳ್ಳುತ್ತದೆ. ಇಂಥ ದೌರ್ಜನ್ಯಗಳ ವಿರುದ್ಧ ಸರ್ಕಾರ ನೇಮಿಸಿರುವ ರಕ್ಷಣಾಧಿಕಾರಿಗಳಿಂದ ಅಥವಾ ಪೊಲೀಸರಿಂದ ರಕ್ಷಣೆ ಪಡೆಯಬಹುದು.
ಅಲ್ಲದೆ ಈ ಕಾನೂನಿನ ಪ್ರಕಾರ ಹೆಣ್ಣು ಮಕ್ಕಳನ್ನು ಗಂಡನ ಮನೆಯಿಂದ ಹೊರದೂಡುವಂತಿಲ್ಲ. ಈ ಕಾನೂನು ವಿವಾಹಿತ ಹೆಣ್ಣು ಮಕ್ಕಳಿಗೆ ಗಂಡನ ಮನೆಯಲ್ಲಿ ವಾಸಿಸುವ ಹಕ್ಕನ್ನೂ ಸಹ ಕೊಡುತ್ತದೆ. ಮಹಿಳೆಯೂ ತನ್ನಂತೆಯೇ ನೆಮ್ಮದಿಯಿಂದ ಮತ್ತು ಘನತೆಯಿಂದ ಜೀವಿಸಲು ಹಕ್ಕಿರುವ ವ್ಯಕ್ತಿ ಎಂಬುದನ್ನು ಪುರುಷ ಸಮುದಾಯ ಒಪ್ಪಿಕೊಳ್ಳುವವರೆಗೆ ಈ ಎಲ್ಲ ಕಾನೂನುಗಳ ಅಗತ್ಯ ಅನಿವಾರ್ಯವಾಗಿದೆ.
ಕುಟುಂಬ ಸಮಾಜದ ಮೂಲ ಘಟಕ. ಕುಟುಂಬ ನೆಮ್ಮದಿಯಿಂದ ಇದ್ದಲ್ಲಿ ಸಮಾಜ ಆರೋಗ್ಯಪೂರ್ಣವಾಗಿರುತ್ತದೆ. ಕುಟುಂಬದ ನೆಮ್ಮದಿಗೆ ಮನೆಯ ಸದಸ್ಯರೆಲ್ಲರ ಸಹಕಾರ ಮುಖ್ಯ. ಇಂಥ ದೌರ್ಜನ್ಯಗಳಿಗೆ ಸಿಲುಕಿ ನಲುಗುತ್ತಿರುವ ಅಸಹಾಯಕ ಹೆಣ್ಣು ಮಕ್ಕಳಿಗೆ ಧೈರ್ಯ ನೀಡುವ, ಅಗತ್ಯ ಬಿದ್ದಲ್ಲಿ ಕಾನೂನಿನ ರಕ್ಷಣೆಯನ್ನು ಒದಗಿಸುವ ಮತ್ತು ಅವರ ಕುಟುಂಬದವರನ್ನು ಕರೆಸಿ ತಿಳಿಹೇಳುವ ಕೆಲಸವನ್ನು ಪೊಲೀಸು ಠಾಣೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ’ಮಹಿಳಾ ಸಹಾಯ ವಾಣಿ’ಗಳು ಮಾಡುತ್ತಿವೆ. ಇದಲ್ಲದೆ, ಕರ್ನಾಟಕ ಸರ್ಕಾರ ಸ್ಥಾಪಿಸಿರುವ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಎಲ್ಲ ಮಹಿಳೆಯರಿಗೂ ಉಚಿತ ಕಾನೂನು ನೆರವನ್ನು ಒದಗಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.