ADVERTISEMENT

ಕೊಡು- ಕೊಳ್ಳುವ ಅನುಬಂಧ

ಡಾ.ಉಮಾ ಎನ್.
Published 16 ಆಗಸ್ಟ್ 2013, 19:59 IST
Last Updated 16 ಆಗಸ್ಟ್ 2013, 19:59 IST
ಕೊಡು- ಕೊಳ್ಳುವ ಅನುಬಂಧ
ಕೊಡು- ಕೊಳ್ಳುವ ಅನುಬಂಧ   

ಶ್ರಾವಣ ಮಾಸ ಬಂತೆಂದರೆ ಹೆಣ್ಣು ಮಕ್ಕಳಿಗೆ ಇನ್ನಿಲ್ಲದ ಸಂಭ್ರಮ. ಮದುವೆ ಆದವರಿಗಂತೂ ಪಂಚಮಿ ಅಥವಾ ರಾಖಿ ಹಬ್ಬದ ನೆಪದಲ್ಲಿ  ತವರಿಗೆ ಹೋಗಿ ತಂದೆ-ತಾಯಿ, ಸಹೋದರ-ಸಹೋದರಿಯರನ್ನು ಭೇಟಿ ಮಾಡಿ ಬಾಯ್ತುಂಬಾ ಮಾತನಾಡುವ, ಸುಖ-ದುಃಖ, ನೋವು-ನಲಿವುಗಳನ್ನು ಹಂಚಿಕೊಳ್ಳುವ ತವಕ.

ರಾಖಿ ಹಿನ್ನೆಲೆ ಅರಿಯಿರಿ
ಪ್ರಾಚೀನ ಉತ್ತರ ಭಾರತದಲ್ಲಿ ಯುದ್ಧಕ್ಕೆ ತೆರಳುತ್ತಿದ್ದ ಪತಿಯ ಪ್ರಾಣ ರಕ್ಷಣೆಗಾಗಿ ಪ್ರಾರ್ಥಿಸಿ ಹೆಣ್ಣು ಮಕ್ಕಳು ಅವರಿಗೆ ರಾಖಿ ಕಟ್ಟುತ್ತಿದ್ದರು. ಅದೇ ಮುಂದೆ ಬದಲಾವಣೆ ಕಂಡು ಅಣ್ಣ ಅಥವಾ ತಮ್ಮನಿಗೆ ರಾಖಿ ಕಟ್ಟುವುದು ರೂಢಿಗೆ ಬಂತು.

ಹಿಂದೆ ಅಸುರಕ್ಷತೆಯಿಂದ ಬಳಲುತ್ತಿದ್ದ ಹೆಣ್ಣು ಮಕ್ಕಳು ರಕ್ಷಣೆಗಾಗಿ ಪರ ಪುರುಷನಿಂದ ರಕ್ಷೆ ಬೇಡಿ ರಾಖಿ ಕಟ್ಟುವ ಮೂಲಕ ಸಹೋದರ ಸಂಬಂಧವನ್ನು ಗಿಟ್ಟಿಸಿಕೊಳ್ಳುತ್ತಿದ್ದರು. ರಕ್ಷಾ ಬಂಧನಕ್ಕೆ ಗೌರವ ಕೊಡುತ್ತಿದ್ದಂತಹ ಸಹೋದರರು ಈ ಕೋರಿಕೆಯನ್ನು ಮನ್ನಿಸಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸಹೋದರಿಯರನ್ನು ರಕ್ಷಿಸುತ್ತಿದ್ದರು.

ರಾಣಿ ಕರವಂತಿಯು ತನ್ನ ರಾಜ್ಯದ ಮೇಲೆ ದಂಡೆತ್ತಿ ಬಂದ ಹುಮಾಯೂನ್‌ಗೆ ರಾಖಿಯನ್ನು ಉಡುಗೊರೆಯಾಗಿ ಕಳುಹಿಸಿದ್ದಳು. ಅದರ ಬಂಧನಕ್ಕೆ ಒಳಗಾದ ಆತ ತನ್ನ ನಿರ್ಧಾರವನ್ನೇ ಬದಲಿಸಿ ಕರವಂತಿಯನ್ನು ತಂಗಿಯನ್ನಾಗಿ ಸ್ವೀಕರಿಸಿದ. ಬಳಿಕ ಆತ ಗುಜರಾತ್‌ನ ರಕ್ಷಣೆಗೆ ನಿಂತಿದ್ದು ಇತಿಹಾಸ.

ರಕ್ಷಾ ಬಂಧನದ ಮಹತ್ವವನ್ನು ಪುರಾಣಗಳಲ್ಲಿ ಗಮನಿಸಿದರೆ, ದೇವತೆಗಳು ಮತ್ತು ದಾನವರಿಗೆ ಯುದ್ಧ ಸಂಭವಿಸಿದಾಗ ದೇವೇಂದ್ರನಿಗೆ ಸೋಲುಂಟಾಗುವ ಸ್ಥಿತಿ ಬರುತ್ತದೆ. ಆಗ ಇಂದ್ರನ ಪತ್ನಿ ಶಚಿದೇವಿ ರಕ್ಷಾ ಬಂಧನ ವ್ರತ ಆಚರಿಸಿ ಪತಿಗೆ ರಕ್ಷೆ ಕಟ್ಟುತ್ತಾಳೆ.

ಅದರ ಬಲದಿಂದ ಇಂದ್ರ ರಾಕ್ಷಸರನ್ನು ಗೆಲ್ಲುತ್ತಾನೆ. ಅದೇ ರೀತಿ ಕುಂತಿ ದೇವಿ ತನ್ನ ಮಕ್ಕಳು ಯುದ್ಧಕ್ಕೆ ಹೋಗುವಾಗೆಲ್ಲ ರಕ್ಷಾ ಬಂಧನ ಕಟ್ಟುತ್ತಿದ್ದಳು. ಅದು ಅವರ ವಿಜಯಕ್ಕೆ ನಾಂದಿಯಾಯಿತು ಎಂಬ ಉಲ್ಲೇಖ ಇದೆ.

ದ್ವಾಪರ ಯುಗದಲ್ಲಿ ಒಮ್ಮೆ ವಿಷ್ಣುವಿನ ಕೈಗೆ ಗಾಯವಾದಾಗ ಸಹೋದರಿ ದ್ರೌಪದಿ ತನ್ನ ಸೀರೆಯನ್ನು ಹರಿದು ಅವನ ಕೈಗೆ ಕಟ್ಟುತ್ತಾಳೆ. ಅದೇ ಮುಂದೊಮ್ಮೆ ಆಕೆಯ ಮಾನ ಕಾಪಾಡಿತು ಎಂಬ ಪ್ರತೀತಿ ಇದೆ. ಆದಿ ಮಾನವ ಆಧುನಿಕ ಮಾನವ ಆಗುವಲ್ಲಿ ನೂಲು ಮಹತ್ವದ ಪಾತ್ರ ವಹಿಸುತ್ತದೆ.

ADVERTISEMENT

ಇದನ್ನು ನೆನಪಿಸಲೆಂದೇ ನೂಲು ಹುಣ್ಣಿಮೆಯನ್ನು ಸಾಂಕೇತಿಕವಾಗಿ ಆಚರಿಸಲಾಗುತ್ತದೆ.
ಆದರೆ ಈಗ ಅಣ್ಣ-ತಂಗಿ ನಡುವಿನ ಮಧುರ ಬಾಂಧವ್ಯ ಬದಲಾಗುತ್ತಿದೆ. ಪ್ರೀತಿ- ಸ್ನೇಹ ಇರಬೇಕಾದ ಜಾಗವನ್ನು ಸ್ವಾರ್ಥ, ಅಸೂಯೆಗಳು ಆಕ್ರಮಿಸಿಕೊಂಡಿವೆ. ಹಿಂದೆ ತಂಗಿಯ ಮದುವೆಯಾಗಿ ಗಂಡನ ಮನೆಗೆ ತೆರಳುವ ತನಕ ಅಣ್ಣ ತನ್ನ ಮದುವೆಗೆ ಸಮ್ಮತಿಸುತ್ತಿರಲಿಲ್ಲ.

ತಂಗಿಯೂ ಅಷ್ಟೆ, ಅತ್ತಿಗೆ ಮನೆಗೆ ಬರುವವರೆಗೂ ತಾನೂ ಮದುವೆಯಾಗುವುದಿಲ್ಲ ಎಂದು ಹಟ ಹಿಡಿಯುತ್ತಿದ್ದಳು. ಆದರೆ ಇಂದು ಆ ಸಂಬಂಧ ಎಷ್ಟು ಸೂಕ್ಷ್ಮವಾಗುತ್ತಿದೆ ಎಂದರೆ, ಬೆಳೆದು ನಿಂತ ತಂಗಿ ಕಣ್ಣೆದುರಿಗೆ ಇದ್ದರೂ ಅಣ್ಣನಿಗೆ ಮೊದಲು ತನ್ನ ಮದುವೆಯ ಚಿಂತೆ.

ತಂಗಿಯರೂ ಅಷ್ಟೆ. ಅಣ್ಣ ಇರುವುದನ್ನೇ ಮರೆತು, ತಾನಿಷ್ಟ ಪಟ್ಟವರಿಂದ ತಾಳಿ ಕಟ್ಟಿಸಿಕೊಳ್ಳುವ ಧಾವಂತ ತೋರುತ್ತಾರೆ. ಹೀಗಾಗಿ ಇಬ್ಬರಲ್ಲೂ ಈಗ ಭಾವುಕತೆ ನಾಪತ್ತೆಯಾಗುತ್ತಿದೆ.

ನನ್ನ ತಂಗಿ, ನನ್ನ ಅಣ್ಣ ಎನ್ನುವ ಸ್ವಂತಕ್ಕಿಂತ ನಾನು, ನನ್ನದು ಎಂಬ ಸ್ವಾರ್ಥವೇ ಹೆಚ್ಚಾಗಿದೆ. ಅಪ್ಪ ಮಾಡಿಟ್ಟ ಆಸ್ತಿ ಇದ್ದರಂತೂ ಕೇಳುವುದೇ ಬೇಡ. ಆ ಆಸ್ತಿಗಾಗಿ ಇಬ್ಬರೂ ಬಾಂಧವ್ಯದ ಮಹತ್ವ ಮರೆತು ಬೀದಿಗಿಳಿಯುತ್ತಾರೆ.

ನಂಬಿಕೆ, ಪ್ರೀತಿಯಿಂದ ರಾಖಿ ಕಟ್ಟಿದರೆ ಒಂದು ಸಾಮಾನ್ಯ ದಾರವೂ ರಕ್ಷಾ ಬಂಧನವಾಗುತ್ತದೆ. ಗೌರವವೇ ಇಲ್ಲದೆ, ಶುದ್ಧ ಭಾವನೆಗಳಿಲ್ಲದೆ ಕಟ್ಟುವ ವಜ್ರಖಚಿತ ದುಬಾರಿ ರಾಖಿಯಾದರೂ ಅದಕ್ಕೆ ನೂಲಿನಷ್ಟೂ ಬೆಲೆ ಇರುವುದಿಲ್ಲ.

ಸಂಬಂಧದ ದೃಢತೆಯನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇದ್ದವರಿಗೆ ಒಡಹುಟ್ಟಿದವರ ವಾತ್ಸಲ್ಯದ ಮಹತ್ವ ಅರಿವಾಗುತ್ತದೆ.
-ವಿ.ಜಿ.ವೃಷಭೇಂದ್ರ.


ಬಾಲ್ಯದಿಂದ ಬಂದ ಪ್ರೀತಿ ಒಲುಮೆಗಳಲ್ಲಿ ಹೆಚ್ಚಿನ ಪಾತ್ರ ವಹಿಸುವುದು ಸಹೋದರ- ಸಹೋದರಿಯರ ಪ್ರೀತಿ- ವಿಶ್ವಾಸ. ಬಾಳಿನ ಮುಂಜಾವಿನಿಂದ ಅಂತಿಮ ಪಯಣದವರೆಗೂ ಜೊತೆಯಾಗಿ ಬರುವ ಈ ಬಾಂಧವ್ಯದ ಸವಿ ವರ್ಣನಾತೀತ.

ಒಂದೇ ಕುಟುಂಬ, ಒಂದೇ ರಕ್ತ, ಒಂದೇ ಬಗೆಯ ಒಡನಾಟ- ಹವ್ಯಾಸಗಳನ್ನು ಹೊಂದಿರುವ ಈ ಸಂಬಂಧಕ್ಕೆ ಬೇರೆ ಸಂಬಂಧಗಳು ಸಾಟಿಯಾಗುವುದೇ ಇಲ್ಲ.

ಒಡಹುಟ್ಟಿದವರು ಬಾಹ್ಯ ಪ್ರಪಂಚಕ್ಕೆ ಎಷ್ಟೇ ದೊಡ್ಡವರಾದರೂ ಆಂತರ್ಯದಲ್ಲಿ ಒಬ್ಬರಿಗೊಬ್ಬರು `ಕಿರಿಯ'ರೇ. ಬಾಲ್ಯದಲ್ಲಿ ಉಡುಗೆ-ತೊಡುಗೆಗೆ, ಆಟದ ಸಾಮಾನುಗಳಿಗೆ, ತಿಂಡಿ-ತೀರ್ಥಕ್ಕೆ, ಕೊನೆಗೆ ಪೋಷಕರ ಪ್ರೀತಿಗೂ ಪ್ರತಿಸ್ಪರ್ಧಿಗಳಾಗುತ್ತಿದ್ದ ಈ ಎರಡು ಜೀವಗಳು `ಕಳೆದು'ಕೊಳ್ಳುವುದಕ್ಕಿಂತ `ಹಂಚಿ'ಕೊಳ್ಳುವುದೇ ಅಧಿಕ.

ಬೈಯ್ದುಕೊಂಡು, ಹೊಡೆದಾಡಿಕೊಂಡು ಬೆಳೆಯುವ ಸಹೋದರಿ- ಸಹೋದರರ ನಡುವೆ, ಅವರಿಗೇ ಅರಿವಿಲ್ಲದಂತೆ ಗಾಢವಾದ ಒಲುಮೆಯೂ ಬೆಳೆಯುತ್ತಿರುತ್ತದೆ. `ಇವನು ನನ್ನ ಸಾಮಾನು ಮುಚ್ಚಿಟ್ಟ', `ಇವಳು ನನ್ನ ಸಾಮಾನು ಉಪಯೋಗಿಸಿದ್ದಾಳೆ' ಎಂದು ಕ್ಷುಲ್ಲಕ ಕಾರಣಗಳಿಗೆ ಮನೆಯನ್ನು ರಣಾಂಗಣ ಮಾಡಿಕೊಳ್ಳುವ ಈ ಎರಡು ಜೀವಗಳು, ಕಾಲ ಸಂದಂತೆ ತಮ್ಮಲ್ಲಿ ಇರುವುದರಲ್ಲೇ ಇನ್ನೊಬ್ಬರಿಗೆ ಧಾರಾಳವಾಗಿ ಹಂಚಿಕೊಟ್ಟು ಜೀವನದುದ್ದಕ್ಕೂ ಒಬ್ಬರಿಗೊಬ್ಬರು ಆಧಾರವಾಗಿ ಧನ್ಯತೆಯನ್ನು ಪಡೆಯುತ್ತಾರೆ!

ಹೀಗೆ ಒಂದೆಡೆ `ಸಹೋದರ- ಸಹೋದರಿ'ಯರ ಅದ್ಭುತವಾದ ಒಲುಮೆ ಕಂಡುಬಂದರೆ, ಮತ್ತೊಂದೆಡೆ ವಿರಸವೆಂಬ ವಿಷದ ವರ್ತುಲದಲ್ಲಿ ಬೇಯುತ್ತಿರುವ 'ದಾಯಾದಿ'ಗಳೂ ಇದ್ದಾರೆ. ಲೌಕಿಕ ಆಮಿಷಗಳಿಗೇ ಹೆಚ್ಚು ಬೆಲೆ ಕೊಡುವ ಕೆಲವರು ತಮ್ಮ ರಕ್ತಸಂಬಂಧಿಯನ್ನೇ ತ್ಯಜಿಸುವುದು ವಿಪರ್ಯಾಸ.

ಅಣ್ಣ-ತಮ್ಮ, ಅಕ್ಕ- ತಂಗಿಯರನ್ನು ಪಡೆದ ಜೀವಿಗಳೇ ಅದೃಷ್ಟವಂತರು. ಭೂಮಿಯ ಮೇಲೆ ನೆಲೆಸಿರುವ ಪ್ರತಿ ಸಂಬಂಧಕ್ಕೂ ಒಂದು ಅರ್ಥವಿರುತ್ತದೆ ಹಾಗೂ ಅದರ ಅವಶ್ಯಕತೆಯೂ ಇರುತ್ತದೆ.

ಅಂತಹ ಸಂಬಂಧಗಳಲ್ಲಿ ಮಹತ್ವವಾದ ಸಹೋದರ- ಸಹೋದರಿಯರ ಸಂಬಂಧ ಕೇವಲ ಒಂದು ಹಬ್ಬ ಅಥವಾ ಆಚರಣೆಯೊಂದಿಗೆ ಸೇರಿ ಹೋಗುವುದು ಬೇಡ. ಅದು ಪ್ರತಿ ದಿನವೂ ಹೊಚ್ಚ ಹೊಸದಾಗಿ ಸಂಭ್ರಮಿಸುವ ಮಹೋತ್ಸವ ಆಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.