ADVERTISEMENT

ಗೋಡೆ ಗೋಚರ

ತಾರಿಣಿ ಶುಭದಾಯಿನಿ
Published 8 ಮಾರ್ಚ್ 2013, 19:59 IST
Last Updated 8 ಮಾರ್ಚ್ 2013, 19:59 IST

ಸಂಕ್ರಾಂತಿ ಪ್ರಬಂಧ ಸ್ಪರ್ಧೆ : 3 ನೇ ಬಹುಮಾನ

ಅಗೋ ಸಿನಿಮಾ ಶುರುವಾಗೇ ಬಿಟ್ಟಿದೆ. ಚಳಿಯಲ್ಲಿ ನಡುಗುತ್ತಾ ಕೆಳಗೆ ಮಣ್ಣಲ್ಲಿ ಕೂತು ಅಂಬರೀಷು ಬರೋದನ್ನ ನೋಡುತ್ತಾ ಇದ್ದ ಹಾಗೆ ಕಸಿವಿಸಿ ಆಗತೊಡಗಿತು. ಏಕೆಂದರೆ ಅಂಬರೀಷು ಮುಖವೆಲ್ಲಾ ಉರುಕು ಉರುಕು. ಒಮ್ಮೆ ಮುಖ ಸೊಟ್ಟಗಾದರೆ, ಇನ್ನೊಮ್ಮೆ ಉಬ್ಬು ಶಿಲ್ಪದಂತೆ ಮುಂದೆ ಬಂದಂತೆ ಕಾಣುತ್ತಿದ್ದ ಅವನ ಓರೆ ಕೋರೆ ನೋಡಿ ಸಾಕಾಗಿ ಬಿಟ್ಟಿತು. ಇದಕ್ಕೆ ಕಾರಣ ಏನೆಂದರೆ ಗೋಡೆ ಮಧ್ಯೆ ಬೀಮ್‌ಗಳಿದ್ದು, ಗೋಡೆ ನೈಸಾಗಿ ಇಲ್ಲದೇ ಇದ್ದುದು. ಒರಟು ಗೋಡೆಗೆ ಸುಣ್ಣ ಮೆತ್ತಿದ್ದ ಆ ಗೋಡೆಯ ಮೇಲೆ ಸಿನಿಮಾದ ರಂಗು ರಸ ಎಲ್ಲಾ ಕರಗಿ ಹೋಗತೊಡಗಿತು.     

                                               ******

ADVERTISEMENT

ಕತ್ತೆ ಮುನಿಸಿಕೊಂಡರೆ ಮೋಟುಗೋಡೆಯ ಹತ್ತಿರ ಅನ್ನೋ ಗಾದೆ ಮಾತು ಕೇಳಿರತೀವಿ. ಪಾಪ ಕತ್ತೆಗೆ ಅಂತ ಸಿಗ್ತಾ ಇದ್ದುದು ಮೋಟುಗೋಡೆ ತಾನೇ. ಪ್ರಾಮಾಣಿಕ ಪ್ರಾಣಿ ದುಡಿದು ದುಡಿದು ಹೈರಾಣಾಗಿ ನಿಂತರೂ ಒದೆ ಕೊಟ್ಟರೆ ಅದು ತಾನೇ ಎಲ್ಲಿಗೆ ಹೋಗಬೇಕು? ತನ್ನ ಪೆದ್ದು ಬುದ್ಧಿಗೆ ತಕ್ಕನಾಗಿ ಮೋಟುಗೋಡೆಯ ಹತ್ತಿರ ಹೋಗಿ ದುಃಖ ತೋಡಿಕೊಳ್ಳುತ್ತಾ, ಯಾರಾದರೂ ಮತ್ತೆ ಬಂದು ರಮಿಸಿ ಕರೆದೊಯ್ಯುವರೆಂಬ ಭರವಸೆಯಲ್ಲಿ ಕಾಯುತ್ತಾ ಕಾಣುವಂತೆ ನಿಂತಿರುತ್ತಿತ್ತೇನೋ. ಅಂತಹಾ ಪುಟ್ಟ ಮೋಟುಗೋಡೆಯ ನೆನಪು ಮಾತ್ರ ಜೀವಂತವಾಗಿದೆ.

ನಮ್ಮೂರಿನ ಹಳೆ ಚಹರೆಯಲ್ಲಿ ಇದ್ದ ಮನೆಗಳೆಲ್ಲಾ ಮಣ್ಣಿನ ಮನೆಗಳೇ. ಅಂತದ್ದೊಂದು ಮನೆಗಳ ಓಣಿಯಲ್ಲಿ ಒಂದು ಮೋಟುಗೋಡೆ. ಅದರ ಮೇಲೆ ಮಳೆಗಾಳಿ ಆಡಿ ಅದಾಗಲೇ ಬಣ್ಣ ಬಿಟ್ಕೊಂಡಿತ್ತು. ಒಳಗಿನ ಕಲ್ಲು ಮಣ್ಣು ಎಲ್ಲಾ ಹೊರಗೆ ಇಣುಕುತ್ತಾ, ಇನ್ನೆಷ್ಟು ದಿನ ನಾವಿಲ್ಲಿ ವಾಸಿಸಬೇಕು ಎಂಬುದನ್ನು ತಿಳಿಯದೆ ಕಕರ ಮಕರಾಗಿ ನಿಂತುಬಿಟ್ಟಿದ್ದವು.

ನಿಜ ಅಂದ್ರೆ ಅದು ಒಬ್ಬ ಮುದುಕಿಗೆ ಸೇರಿದ ಮನೆ. ಕಾಲಾಂತರದಲ್ಲಿ ಒಂದೆಡೆ ಪೂರಾ ಬಿದ್ದು ಪಳೆಯುಳಿಕೆಯಂತೆ ಈ ಗೋಡೆ ಮಾತ್ರ ಉಳಿದಿತ್ತು. ಅದರ ಓನರ್ ಮುದುಕಿಗೆ ಅದನ್ನು ಕಟ್ಟಿಸುವ, ಮೆತ್ತಿಸುವ ತಾಕತ್ತು ಉಳಿದಿರಲಿಲ್ಲ. ಹಾಗಾಗೇ ಅದು ಸುಮ್ಮನೆ ಇದ್ದಂಗೆ ಇರಲಿ ಅಂತ ಬಿಟ್ಟಂತೆ ಇತ್ತು. ಮುದುಕಿಯ ಪೋಲಿ ಮಗ ಬೇರೆ ಅದನ್ನು ತನ್ನ ಹೆಸ್ರಿಗೆ ಬರೆದುಕೊಡು ಅಂತಾ ಆಗಾಗ ಕುಡಿದು ಧಮಕಿ ಹಾಕತಾ ಇದ್ದು, ಅದನ್ನು ರಿಪೇರಿ ಮಾಡಿಸುವ ಯಾವ ಆಸೆಯೂ ಉಳಿಯದಂತೆ ಮಾಡಿಬಿಟ್ಟಿದ್ದ.

ಆ ಗೋಡೆ ಸಹ ಆಸ್ತಿ ವಿವಾದದಲ್ಲಿ ಸಿಕ್ಕ ಮುದುಕಿಯಂತೆ ಸವೆದು ಹೋಗುತ್ತಾ ಇತ್ತು. ಅದು ಯಾರಿಗೆ ಸೇರುತ್ತೆ ಅಮ್ಮನಿಗೋ ಮಗನಿಗೋ ಅಂತಾ ಮೊದ ಮೊದಲು ಬಾಜಿ ಕಟ್ಟಿದವರೆಲ್ಲಾ ಮೋಟುಗೋಡೆಯ ಜೊತೆಗೆ ಸಹಬಾಳ್ವೆ ಮಾಡುತ್ತಾ ಉಳಿದುಕೊಂಡು ಬಂದಿದ್ದರು. ಗೋಡೆಯಿಂದ ಸಾರ್ವಜನಿಕರಿಗೆ ತೊಂದರೆಗಿಂತ ಉಪಯೋಗಾನೇ ಹೆಚ್ಚಾಗಿತ್ತು ಅನ್ನಿಸುತ್ತೆ. ಹೆಂಗಸರು ಗುಟ್ಟಾಗಿ ಮಾತಾಡೋದಿದ್ರೆ ಆ ಜಾಗಕ್ಕೆ ಬರೋರು. ಏನೋ ಚೆಲ್ಲೋರ ಹಾಗೆ ಕೈಯಲ್ಲಿ ಮೊರ ಹಿಡಕೊಂಡು ಅಲ್ಲೇ ನಿಂತು ಅನುಮಾನ ಬರದ ರೀತಿಯಲ್ಲಿ ಗುಟ್ಟು ದಾಟಿಸುತ್ತಿದ್ದರು.

ಕೆಲವರು ವಾರಸುದಾರರಿಲ್ಲದ ಬೀಡಾಡಿ ದನಗಳು ಹಾಕಿದ ಸೆಗಣಿ ತಂದು ಬೆರಣಿ ತಟ್ಟಿಕೊಳ್ಳುತ್ತಿದ್ದರು. ರಾತ್ರೋರಾತ್ರಿ ಸಿನಿಮಾ ಪೋಸ್ಟರ್ ಹಚ್ಚೋರಿಗೆ ಅದು ತುಂಬಾ ಪ್ರಶಸ್ತ ಜಾಗವಾಗಿತ್ತು. ಹೊಸ ಸಿನಿಮಾಗೆ ಅದೊಂದು ನೋಟೀಸು ಬೋರ್ಡಿನ ತರ. ಏಕೆಂದರೆ ಪಡ್ಡೆಗಳಿಗೆ ಹೊಸ ಸಿನಿಮಾ ಬಂದಿದ್ದು ತಿಳಿಯುತ್ತಿದ್ದುದೇ ಅದರ ಮೂಲಕ. ಕತ್ತಲಲ್ಲಿ ಮೂತ್ರ ವಿಸರ್ಜನೆ ಮಾಡೋರಿಗೆ ಒಳ್ಳೆ ಜಾಗವೂ ಅದಾಗಿತ್ತು...ಇದೆಲ್ಲಾ ಆಗಿ ಬಹಳ ಕಾಲವೇ ಆಯಿತು.

ದುರ್ಗದ ಪೊಲೀಸು ಪೆರೇಡು ಗ್ರೌಂಡು ಶಾಲೆಗೆ ಹೋಗುವ ದಾರಿಯಲ್ಲೇ. ರಪ ರಪ ಕೈಬೀಸಿ ಧಪ ಧಪ ಹೆಜ್ಜೆ ಹಾಕೋ ಪೊಲೀಸ್ನೋರು. ಅವರೋ ಅವರ ಬಂದೂಕುಗಳೋ ಹೆದರಿಕೆ ಹುಟ್ಟಿಸದೇ ಇರುವ ದಿನವೇ ಇಲ್ಲ. ದಿನಾ ನಿತ್ಯದ ನೋಟದಲ್ಲಿ ಈ ಪಥಸಂಚಲನದ ಹಿಂದೆ ಒಂದು ದೊಡ್ಡ ಗೋಡೆ ಪ್ರಭಾವಳಿಯಂತೆ. ಕವಾಯತು ಮುಂದುವರಿದಂತೆ ಪೊಲೀಸರು ಆ ಗೋಡೆಯ ಮೇಲೆ ನೆರಳಾಗಿ ಮೂಡುತ್ತಿದ್ದರು. ಸುಮ್ಮಿ ಒಂದಿನ `ಲೇ ಈ ಗೋಡೆ ಮೇಲೆ ಪಿಕ್ಚರ್ ತೋರಿಸ್ತಾರಂತೆ ಕಣೇ, ನಮ್ಮನೆ ಪಕ್ಕದ ಹುಡುಗಿ ಅವರಮ್ಮನ ಜೊತೆ ಬಂದು ನೋಡಿಕೊಂಡು ಹೋದ್ಲಂತೆ, ಫ್ರೀಯಂತೆ ಕಣೇ' ಅಂದಳು.

ವ್ಹಾವ್, ಹೀಗೂ ಉಂಟೆ? ಪುಕ್ಕಟೆಯಾಗಿ ಸಿನಿಮಾ, ಏನು ಮಜಾ... ಆ ಹುಡುಗಿ ನಿರ್ಭಯವಾಗಿ ಸಿನಿಮಾ ನೋಡ್ತಾಳಲ್ವ ಏನು ಅದೃಷ್ಟ ಅವಳದು ಅಂತ ಅವತ್ತೆಲ್ಲಾ ಅದನ್ನೇ ಹೇಳುತ್ತಾ ಕೊರಗುತ್ತಾ ಹೋದೆವು ನಾನು ಮತ್ತು ರೇಖಿ. ಸಿನಿಮಾ ಅಂದರೆ ಮನೆಯಲ್ಲಿ ಹಾರಾಡೋ ಹಿರಿಯರು ನಮ್ಮನ್ನು ಪೋಸ್ಟರ್ ಕೂಡ ನೋಡಬಾರದು ಎಂದು ನಿರೀಕ್ಷಿಸುತ್ತಿದ್ದರು. ಸಿನಿಮಾ ನೋಡುವವರು ಅವರ ದೃಷ್ಟಿಯಲ್ಲಿ ಪೋಲಿಗಳು.

ಮಕ್ಕಳ ಚಿತ್ರ ಅಂತಾ ಬಂದು, ಅವು ಎಲ್ಲರೂ ಪರವಾಗಿಲ್ಲ ಎಂದ ಮೇಲಷ್ಟೆ ಸಿನಿಮಾಗೆ ಹೋಗುವ ಅವಕಾಶ ಸಿಗುತ್ತಿದ್ದುದು. ಅದರಲ್ಲೂ ಗ್ರಾಂಡ್ ಎಸ್ಕಾರ್ಟ್ ಜೊತೆಗೆ. ಆದರೂ ಎಂದೋ ನೋಡಲು ಸಿಗಬಹುದಾದ ಸಿನಿಮಾಕ್ಕೆ ನಮಗೆ ಸಿಕ್ಕ ಎಂಟಾಣೆ, ನಾಕಾಣೆಗಳನ್ನೆಲ್ಲಾ ಒಟ್ಟು ಮಾಡಿಡುತ್ತಿದ್ದೆವು. ಪಾಪ, ನಾವು! ಅಂತಾದ್ರಲ್ಲಿ ಪುಕ್ಕಟೆ ಸಿನಿಮಾ ಅಂದ್ರೆ ಅದನ್ನು ಹೇಗಾದರೂ ಮಾಡಿ ನೋಡಿಯೇ ಬಿಡಬೇಕು.

ಪೊಲೀಸು ಗ್ರೌಂಡಿನಲ್ಲಿ ಸಿನಿಮಾ ಹಾಕುತ್ತಿದ್ದುದು ರಾತ್ರಿ ಒಂಬತ್ತು ಗಂಟೆ ಮೇಲೆ. ಅಷ್ಟು ಹೊತ್ತಿಗೆ ನಮ್ಮನ್ ಯಾರು ಕರಕೊಂಡು ಹೋಗೋರು. ಎಲ್ಲಾ ದೊಡ್ಡೋರು ಸಿನಿಮಾವನ್ನು ಬೈಯ್ಯುತ್ತಿದ್ರೂ ಅವರು ಮಾತ್ರ ಸಿನಿಮಾ ನೋಡ್ತಿದ್ದರು. ಬಿಡಿ, ಅವರ ತಪ್ಪು ಯಾರು ಎಣಿಸೋರು... ಆದರೆ ನಮ್ಮನ್ನು ಕರೆದುಕೊಂಡು ಹೋಗಿ ಸಿನಿಮಾ ತೋರಿಸುವ ಆಸಕ್ತಿ ಯಾರಿಗಿತ್ತು.

`ಪೊಲೀಸ್ ಕ್ವಾರ್ಟರ್ಸ್ ಜನಕ್ಕೆ ಅಂತಾ ಹಾಕೋ ಸಿನಿಮಾ, ನಾವೆಲ್ಲ ಹೋಗಬಾರದು' ಅಂತ ಚಿಕ್ಕಮ್ಮ ರಾಗ ಎಳೆದರೆ, `ಕಾರ ಮಂಡಕ್ಕಿ ಕೊಡಿಸೋದಾದ್ರೆ ನಾನು ಬರ‌್ತೀನಿ' ಅಂತಾ ಸಣ್ ಚಿಕ್ಕಪ್ಪ ಒಪ್ಪಿಕೊಂಡು ರಾತ್ರಿ ನಮ್ಮ ದಂಡು ಕಟ್ಟಿಕೊಂಡು ಹೊರಡೋ ವೇಳೆಗಾಗಲೇ ಕತ್ತಲು ಗವ್ವೆನ್ನುತ್ತಾ ನಾವು ಬೆಳಿಗ್ಗೆ ಓಡಾಡೋ ರಸ್ತೆ ಇನ್ನೂ ಭೀಕರವಾಗಿ ಕಾಣತೊಡಗಿತು .  

ಗ್ರೌಂಡ್ಸ್‌ನ ತುಂಬಾ ಜನ. ಕಿಚಿ ಪಿಚಿ ಸೇರಿಬಿಟ್ಟಿದ್ದಾರೆ. ಬರೀ ಗಲಾಟೆ. ಅದರ ಮಧ್ಯೆ ಗೋಡೆ ತಾನೇ ತಾನಾಗಿ ನಿಂತಿತ್ತು. ಅದರ ಮೇಲೆ ನಿಧಾನಕ್ಕೆ ಬೆಳಕು ಬೀಳುತ್ತಿದ್ದಂತೆ, ತಗೋ ಶಿಳ್ಳುಗಳ ಸರಮಾಲೆ. ಅಗೋ ಸಿನಿಮಾ ಶುರುವಾಗೇ ಬಿಟ್ಟಿದೆ. ಚಳಿಯಲ್ಲಿ ನಡುಗುತ್ತಾ ಕೆಳಗೆ ಮಣ್ಣಲ್ಲಿ ಕೂತು ಅಂಬರೀಷು ಬರೋದನ್ನ ನೋಡುತ್ತಾ ಇದ್ದ ಹಾಗೆ ಕಸಿವಿಸಿ ಆಗತೊಡಗಿತು. ಏಕೆಂದರೆ ಅಂಬರೀಷು ಮುಖವೆಲ್ಲಾ ಉರುಕು ಉರುಕು.

ಒಮ್ಮೆ ಮುಖ ಸೊಟ್ಟಗಾದರೆ, ಇನ್ನೊಮ್ಮೆ ಉಬ್ಬು ಶಿಲ್ಪದಂತೆ ಮುಂದೆ ಬಂದಂತೆ ಕಾಣುತ್ತಿದ್ದ ಅವನ ಓರೆ ಕೋರೆ ನೋಡಿ ಸಾಕಾಗಿ ಬಿಟ್ಟಿತು. ಇದಕ್ಕೆ ಕಾರಣ ಏನೆಂದರೆ ಗೋಡೆ ಮಧ್ಯೆ ಬೀಮ್‌ಗಳಿದ್ದು, ಗೋಡೆ ನೈಸಾಗಿ ಇಲ್ಲದೇ ಇದ್ದುದು. ಒರಟು ಗೋಡೆಗೆ ಸುಣ್ಣ ಮೆತ್ತಿದ್ದ ಆ ಗೋಡೆಯ ಮೇಲೆ ಸಿನಿಮಾದ ರಂಗು ರಸ ಎಲ್ಲಾ ಕರಗಿ ಹೋಗತೊಡಗಿತು.

`ಥೂ... ಥೂ... ಇದನ್ನೇನು ನೋಡ್ತೀರೆ ನಡೀರಿ ಮನೆಗೆ, ನಿಮ್ಮಪ್ಪ ಬೈಯ್ತಾರೆ, ರಾತ್ರಿಯಾಯ್ತು' ಎಂದು ಚಿಕ್ಕಪ್ಪ ಓಡಿಸಿಕೊಂಡು ಬಂದರು. ಬೆಳಿಗ್ಗೆ ಯಥಾಪ್ರಕಾರ ಆ ಗೋಡೆ ಬಿಳಿಯಾಗಿ ಪೊಲೀಸರ ನೆರಳು ತೋರಿಸುತ್ತಾ ನೈಜ ಸಿನಿಮಾವನ್ನು ರೀಲ್ ಸುತ್ತುತ್ತಾ ಇತ್ತು, ದರಿದ್ರದ್ದು.

ಇದೆಲ್ಲಾ ನಡೆದು ಬಹಳವೇ ದಿನ ಆಯ್ತು...
ಗೋಡೆಗಳಿಗೆ ಕಿವಿ ಇರುತ್ತಂತೆ, ಪಕ್ಕದ ಮನೇಲಿ ಆಗೋದನ್ನೆಲ್ಲಾ ಕೇಳಿಸಿಕೊಳ್ಳುತ್ತವಂತೆ ಗೊತ್ತಾ? ಪಕ್ಕದ್ಮನೆ ಜಗಳ ಕೇಳಿದ್ರಂತೂ ಕರ್ಣಾನಂದ. ಕಿವಿ ಚೂಪು ಮಾಡಿಕೊಂಡು ನಿಂತೇ ಬಿಡೋದೆ. ಎಷ್ಟೆಲ್ಲಾ ಮಸಾಲೆ ಇರುತ್ತೆ. ಬರೀ ಕಿವಿಯಷ್ಟೇ ಯಾಕೆ ಕೆಲ ಗೋಡೆಗಳಿಗೆ ಕಣ್ಣು, ಮೂಗು ಎಲ್ಲಾ ಇರುತ್ತೆ. ಅಲ್ಲಿಂದ ಅವು ಕಿಂಡಿ ಕೊರೆದು ಸಾರಿನ ವಾಸನೆ ನೋಡುತ್ತವೆ, ಇನ್ನು ಕೆಲವು ಕಿಂಡಿ ಕೊರೆದು ಗಂಡ ಹೆಂಡಿರ ಜಗಳ, ಗುಟ್ಟುಗಳನ್ನೆಲ್ಲಾ ವರ್ಣರಂಜಿತವಾಗಿ ನೋಡಿ ಆನಂದಿಸುತ್ತವೆ. ಜಾಯಿಂಟ್ ಗೋಡೆಯ ಮಾತಿದ್ದರಂತೂ ಮುಗಿದೇ ಹೋಯಿತು.

ಅರ್ಧ ಗೋಡೆ ನಮ್ಮದಾದ ಮೇಲೆ ಪಕ್ಕದ ಮನೆಯ ಸಂಸಾರದ ಮಾತು ಯಾಕೆ ನಮ್ಮದಲ್ಲ? ಅದರಲ್ಲೂ ಈ ಕಡೆಯೋರಿಗೆ ಹಕ್ಕಿದೆ ತಾನೇ. ಅದೆಲ್ಲಾ ಸರಿ, ಗಂಡ ಹೊಡೆದು ಹೆಂಡತಿ ಅಳುವ ದನಿ ಕೇಳಿದರೂ ಯಾರೂ ಯಾಕೆ ಎದ್ದು ಹೋಗಿ ನೋಡೋದೆ ಇಲ್ಲ? ಗೋಡೆ ಮರೆಗೆ ನಿಂತು ಕೇಳುತ್ತಾ ನಿಂತೇ ಇರುತ್ತಾರೇಕೆ?
 

ಮುಗ್ಧ ಪ್ರೇಮಿಗಳಾದ ಪೈರಮಸ್ ಥಿಸ್ಬೆಯರು ಮಾತಾಡಿಕೊಂಡಿದ್ದು ಗೋಡೆಗೆ ಮುಖವಿಟ್ಟುಕೊಂಡು. ಗೋಡೆ ಬರಬರುತ್ತಾ ಒಂದು ಮನುಷ್ಯನೇ ಆಗಿಬಿಟ್ಟಂತೆ ಕಾಣುವ ಈ ಪ್ರಹಸನದಲ್ಲಿ ಮಧ್ಯರಾತ್ರಿಯಲ್ಲಿ ಮಧು ಸುರಿದುಕೊಳ್ಳುವ ಪ್ರೇಮಿಗಳನ್ನು ನೋಡುತ್ತದೆ. ಆದರೆ ಮಧ್ಯರಾತ್ರಿ ಊಳಿಡುವ, ಅಳುವ ಎಷ್ಟೋ ದನಿಗಳನ್ನು ಗೋಡೆ ತನ್ನ ದಪ್ಪಚರ್ಮದ ಮೂಲಕ ಅಡಗಿಸಿಬಿಡುತ್ತದೆ.

ಬಾಡಿಗೆಗೆಂದು ಮನೆ ಹುಡುಕುತ್ತಿದ್ದಾಗ ಗೋಡೆ ಮೇಲಿನ ಗುರುತುಗಳನ್ನು ನೋಡುವುದು ಅಭ್ಯಾಸವಾಗಿ ಬೆಳೆದಿತ್ತು. ಕನ್ನಡಿ ಹಾಕುವ ಜಾಗದಲ್ಲಿ ಕಣ್‌ಕಪ್ಪನ್ನು ತೀಡಿರುವ ಗುರುತುಗಳು. ಕೆಂಪು ಕುಂಕುಮದ ಗುರುತುಗಳು. ಮಕ್ಕಳಿರುವ ಮನೆಯಾದರೆ ಅಆಇಈ... ಎಬಿಸಿಡಿ..., ಇಲಿ, ಹುಲಿಗಳೆಲ್ಲಾ ಪೆನ್ಸಿಲಿನಲ್ಲಿ ಒಡಮೂಡಿರುತ್ತಿದ್ದವು. ಅಡುಗೆ ಮನೆಯ ಗೋಡೆಯ ಮೇಲೂ ಇಂಗಿನ, ಮಸಾಲೆಯ ವಾಸನೆಗಳು. ಹಸಿ ಹಸಿಯಾಗಿ ಕರೆಗಟ್ಟಿರುವ ನೀರಿನ ಜಾಗಗಳು. ಬಿಕೋ ಎನ್ನುವ ಮೊಳೆಗಳು, ಷೆಲ್ಫುಗಳು ಇವನ್ನೆಲ್ಲಾ ನೋಡ ನೋಡುತ್ತಾ ನನಗೆ ನಾನೇ, ಅಲ್ಲಿದ್ದು ಹೋಗಿರಬಹುದಾದ ಜನರನ್ನು ಕಲ್ಪಿಸಿಕೊಳ್ಳುತ್ತಿದ್ದೆ.

ನಿರ್ಮಲ, ಮಂಜುಳ, ಮಂಜುನಾಥ, ಸಾಯಿರಾಬಾನು, ಸರ್ಪಭೂಷಣ ರಾವ್ ಯಾರ‌್ಯಾರು ಈ ಮೊಳೆಗಳನ್ನು ಹೊಡೆಸಿರಬಹುದು? ಯಾರು ಯಾರು ಎಲ್ಲೆಲ್ಲಿ ಪಟ ಹಾಕಿ `ಕರಾಗ್ರೆ ವಸತೇ...' ಎಂದಿರಬಹುದು ಎಂದೆಲ್ಲಾ ಊಹಿಸುತ್ತಾ ಮೊಳೆಯ ಹಿಂದಿನ ಕತೆಯನ್ನ, ಕತೆಯ ಪಾತ್ರಧಾರಿಗಳನ್ನ ನೆನೆದಂತೆ ಮನೆಯ ಗೋಡೆಯಲ್ಲೆಲ್ಲಾ ಅವರು ಇದ್ದುಬಿಟ್ಟ ಕುರುಹುಗಳನ್ನೇ ಕಾಣುತ್ತಿದ್ದೆ. ತಮಾಷೆಯಲ್ಲ, ನಾನು ಇವರೆಲ್ಲರ ಜೊತೆ ಬದುಕಬೇಕಲ್ಲ ಎಂದುಕೊಳ್ಳುತ್ತಿದ್ದೆ.

ನಾನು ಓದಿದ ಒಂದು ಒಳ್ಳೆ ಕತೆ ಎಂದರೆ `ಮ್ಯಾರೇಜ್ ಮ್ಯೂಸಿಯಂ'. ವಿಚ್ಛೇದನಕ್ಕೆ ಬಂದ ಗಂಡ ತನ್ನ ಹಳೆ ಹೆಂಡತಿಯನ್ನೊಮ್ಮೆ ಭೇಟಿಯಾಗಿ ತನ್ನೊಡನೆ ಒಮ್ಮೆಯಾದರೂ ತಾವಿಬ್ಬರೂ ವಾಸಿಸುತ್ತಿದ್ದ ತಮ್ಮ ಹಳೆ ಮನೆಗೆ ಹೋಗೋಣವೆಂದು ಅವಳಿಗೆ ಕರುಣೆ ಬರುವಂತೆ ಕೇಳಿಕೊಂಡು ಅಲ್ಲಿಗೆ ಕರೆದೊಯ್ಯುತ್ತಾನೆ. ಅಲ್ಲಿ ಅವನ ನಿಜ ಬಣ್ಣ ಬಯಲಾಗುತ್ತದೆ. ಒಂದೊಂದೇ ಕೋಣೆಗೆ ಹೋಗುತ್ತಿದ್ದಂತೆ ಅವರು ಅಲ್ಲಿ ಕಳೆದ ನೆನಪುಗಳನ್ನು ಜಾಗೃತಗೊಳಿಸುತ್ತಾ ಅವಳನ್ನು ಭಾವಬಂಧನದಲ್ಲಿ ಕಟ್ಟಿ ಹಾಕುತ್ತಾನೆ. ಆದರೆ ನಿಜಕ್ಕೂ ಅವನ ಉದ್ದೇಶ ಅವಳೊಡನೆ ಕಳೆದ ಕ್ಷಣಗಳನ್ನು ಮಾರಾಟಕ್ಕಿಟ್ಟು ಹಣ ಸಂಪಾದಿಸುವುದೇ ಆಗಿರುತ್ತದೆ.

ಹಾಗಾಗಿ ಅವಳೊಡನೆ ಆಡಿದ ಮಾತುಗಳನ್ನೆಲ್ಲಾ ರೆಕಾರ್ಡ್ ಮಾಡಿಟ್ಟಿರುತ್ತಾನೆ. ಗೋಡೆ ಗೋಡೆಗಳಲ್ಲೂ ಪ್ರತಿಧ್ವನಿಸುವಂತೆ ತೋರುತ್ತಿದ್ದ ತಮ್ಮ ದಾಂಪತ್ಯದ ಸಂಬಂಧಗಳನ್ನೆಲ್ಲಾ ಒಬ್ಬ ಸ್ವಾರ್ಥಿ ಮನುಷ್ಯ ಹೀಗೆ ದುರುಪಯೋಗ ಪಡಿಸಿಕೊಳ್ಳಬಹುದೆಂಬ ಊಹೆಯೇ ಇಲ್ಲದ ಹೆಣ್ಣು ಪೆಚ್ಚಾಗಿ ಬಿಟ್ಟಿರುತ್ತಾಳೆ.

ಗೋಡೆಗಳ ಒಳಗೆ ನಡೆಯುವುದನ್ನು ಗೋಡೆಗಳಾಚೆ ಪರದೆ ಹಾಕಿ ಶೋಗೆಂದು ಇಟ್ಟಾಗ ಏನಾಗಬಹುದು ಎಂಬುದನ್ನು ನೆನೆದರೆ ತಲ್ಲಣ ಹುಟ್ಟಿಸುವ ಈ ಕತೆ ಇನ್ನೂ ನನ್ನೊಳಗೆ ಉಳಿದುಕೊಂಡಿರುವಂತೆ ಕಾಣುತ್ತಿರುವಾಗಲೇ ಟಿ.ವಿ.ಗಳಲ್ಲಿ ಬಿಚ್ಚಿಕೊಳ್ಳುವ ಸತ್ಯ ಶೋಧನೆ, ರಿಯಾಲಿಟಿ ಶೋಗಳಲ್ಲಿ ಆ ಗೋಡೆ ಮಧ್ಯದ ಮಾತುಗಳು ಎಂದೋ ಬಟಾಬಯಲಾಗುತ್ತಾ ಇವೆಯಲ್ಲ ಎನಿಸುತ್ತಿದೆ. ನೆರೆಮನೆಯ ಗೋಡೆಯ ಕಡೆ ಕಿವಿ, ಕಣ್ಣುಗಳನ್ನಿಟ್ಟು ನೋಡುತ್ತಿದ್ದ ಕುತೂಹಲವೀಗ ನಡುಮನೆಯ ಗೋಡೆಯ ಮೇಲೆ ಪ್ರತಿಷ್ಠಾಪನೆಯಾಗಿರುವ ಸುದ್ದಿ ಸುಬ್ಬಮ್ಮನತ್ತಲೇ ನೆಟ್ಟುಕೊಳ್ಳುತ್ತಿದೆ. ಇದೇ ಗೋಡೆ ವೀಕ್ಷಣೆಯೇ ಸದ್ಯದಲ್ಲಿ ಚಾಲನೆಯಲ್ಲಿರುವುದು.

ಗೋಡೆ ನನ್ನೊಳಗೆ ಉಳಿದುಬಿಟ್ಟಿತೋ ಎನ್ನುವಂತೆ, ಹೆಣ್ಣು ನಾಲ್ಕು ಗೋಡೆಗಳ ಮಧ್ಯೆ ಎನ್ನುವ ಮಾತಿನಲ್ಲಿ ನಾನು ಕೂಡ ಎಂದಾದರೂ ಸಿಕ್ಕಿ ಹಾಕಿಕೊಳ್ಳುವಂತೆ ಮಾಡಿತು. ಹಿಂದೆ ಯಾರಾದರೂ `ಹೆಂಗಸರು ಹೀಗೆ ಗೋಡೆಗಳ ಮಧ್ಯೆ ಬದುಕುವ ಜೀವಿಗಳು' ಎಂದು ಹೇಳಿದರೆ ಅದು ನನಗಲ್ಲ ಎಂದುಕೊಂಡು ಬಿಟ್ಟಿದ್ದೆ! ಏಕೆಂದರೆ ಹೆಣ್ಣು ಅಂದರೆ ನಮ್ಮಮ್ಮ, ಅಜ್ಜಿ, ಚಿಕ್ಕಮ್ಮ, ದೊಡ್ಡಮ್ಮ ಇವರು ತಾನೇ.

ಅಡುಗೆ ಮನೆಯ ಗೋಡೆಗಳೆಲ್ಲಾ ಕಪ್ಪು ಕಪ್ಪಾಗಿ ಭೀಕರವಾಗಿ ಹೊಗೆ ಬಿಡುವ ಕಾರ್ಖಾನೆಯಂತೆ ಕಾಣುವ ತಾಣಗಳು. ಅಲ್ಲಿ ನಾನಿರುವುದೇ?, ಎಂದಿಗೂ ಇಲ್ಲ ಎಂದುಕೊಳ್ಳುತ್ತಿದ್ದೆ. ಗೋಡೆ ಬಂಧನ ವಯಸ್ಸು ಹೋದಂತೆ ಭದ್ರವಾಗುತ್ತಾ ಹೋಯಿತು. ಗೋಡೆಗಳು ಕಲ್ಲು, ಕಾಂಕ್ರೀಟಿನವೇ ಆಗಬೇಕಿಲ್ಲ. ಒಮ್ಮಮ್ಮೆ ಗೋಡೆಗಳು `ಕಾಣದೇ ಕಾಣುವ' ಮಾಯಾ ಬಗೆಯವು ಸಹ.

ಅದೇನೋ ಪಾಂಡವರ ಅರಮನೆಯಲ್ಲಿ ನೀರು ನೆಲದಂತೆ, ನೆಲ ನೀರಿನಂತೆ ಕಾಣುತ್ತಿತ್ತಂತಲ್ಲ, ಹಾಗೆ. ಹೆಣ್ಣಿನ ಸುತ್ತ ಇರುವ ಗೋಡೆಗಳು ನಾಲ್ಕು ಮಾತ್ರವಲ್ಲವೇ ಅಲ್ಲ. ಅವು ಒಂದು ರೀತಿಯಲ್ಲಿ ಮೂಡುಬಿದರೆಯ ಸಹಸ್ರ ಕಂಬಗಳ ಹಾಗೆ. ಇಂದಿನ ಅಡುಗೆ ಕೋಣೆಗೆ ಬಾಗಿಲು ಇರುವುದೇ ಇಲ್ಲ, ಗೋಡೆ ಮುಕ್ತ ಅದು. ಆದರೆ ಅಡುಗೆ ಕೋಣೆ `ಕಿಚನ್' ಆದ ತಕ್ಷಣ ಗೋಡೆಗಳು ಬಿದ್ದುಹೋಗಿಲ್ಲ.

ಅವು ಒಳವಿನ್ಯಾಸದಲ್ಲಿ ಕಂಡೂ ಕಾಣದಂತಿವೆ ಅಷ್ಟೆ. ಗೋಡೆಯಷ್ಟೇ ಅಲ್ಲ ಗೋಡೆ ಬರಹಗಳು ಸಹ ಹೆಣ್ಣಿಗೆ ತರುವ ಅಪಮಾನವೇನು ಕಮ್ಮಿಯೇ? ಅಶ್ಲೀಲವಾಗಿ ಚಿತ್ರ ಬರೆಯುವ, ಜೋರಾಗಿರುವವರಿಗೆ ಅಡ್ಡ ಹೆಸರಿಟ್ಟು ಬೇರೊಬ್ಬರಿಗೆ ಕಟ್ಟಿ ಕಾಲೇಜಿನ ಗೋಡೆಗಳ ಮೇಲೆ, ಟಾಯ್ಲೆಟ್ ಗೋಡೆಗಳ ಒಳಗೆ ಬರೆದು ವಿಕೃತ ಆನಂದ ಪಡೆದುಕೊಳ್ಳುವ ಹುಡುಗರೀಗ ಎಸ್ಸೆಮ್ಮೆಸ್ಸುಗಳಿಗೆ ಶಿಫ್ಟ್ ಆಗುತ್ತಿದ್ದಾರಾದರೂ ಗೋಡೆ ಬರಹದ ಪ್ರಾಮುಖ್ಯತೆಯೇನೂ ಕಡಿಮೆಯಾಗಿಲ್ಲ. ಆ ವಿಷಯಕ್ಕೆ ಹೋದರೆ ಅದೊಂದು ದೊಡ್ಡ ಪುರಾಣವೇ ಆದೀತು.

ಎಲ್ಲ ಆರಂಭವಾಗಿದ್ದು ಒಂದು ಗೋಡೆಯಿಂದ ಅಂದರೆ ನೀವು ನಂಬಲಾರಿರಿ. ಒಂದು ಗೋಡೆ ಕೆಡವುವ, ಒಂದು ಗೋಡೆ ಕಟ್ಟುವ ಕೆಲಸಗಳು ರಾತ್ರೋರಾತ್ರಿ ಗಪ್ ಚುಪ್ ಆಗಿ ನಡೆದು ಮರುದಿವಸ ಒಂದು ಕೋರ್ಟ್ ವ್ಯಾಜ್ಯಕ್ಕೆ ಚಾಲನೆ ನೀಡಿರುತ್ತವೆ. ಮುರಿದುಬಿದ್ದ ಇಟ್ಟಿಗೆಗಳು ಗೋಡೆಯನ್ನು ಅಕ್ಷರಶಃ ಬೀಳಿಸಿದ್ದರೂ ಗೋಡೆ ಅಮೂರ್ತವಾಗಿ ಸಾಕಷ್ಟು ದೊಡ್ಡದಾಗಿ ಬೆಳೆದುಬಿಟ್ಟಿರುತ್ತದೆ. ಇವಕ್ಕೆ ಏಡಿಹುಣ್ಣಿನ ಹಾಗೆ ಮತ್ತೆ ಸೆಕೆಂಡರೀಸ್ ಬರುವುದಿಲ್ಲ, ಮತ್ತೊಮ್ಮೆ ಇವು ಏಳುವುದಿಲ್ಲ ಎನ್ನುವುದಕ್ಕೆ ಏನು ಖಾತ್ರಿ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.