ADVERTISEMENT

‘ಘನತೆಯ ಬದುಕಿನ ಪ್ರತಿಪಾದನೆಯೇ ಸ್ತ್ರೀವಾದ’

ಮಹಿಳಾದಿನ ವಿಶೇಷ

ಎಚ್.ಎಸ್.ಅನುಪಮಾ
Published 3 ಮಾರ್ಚ್ 2017, 19:30 IST
Last Updated 3 ಮಾರ್ಚ್ 2017, 19:30 IST
ರಂಜನಾ ಪಾಡಿ ಸಂದರ್ಶನ
ರಂಜನಾ ಪಾಡಿ ಸಂದರ್ಶನ   

* ಮಹಿಳಾ ಚಳವಳಿ ನಿಮ್ಮನ್ನು ಸೆಳೆದದ್ದು ಹೇಗೆ?
ನಾನು ಒರಿಸ್ಸಾದವಳು. ಎಂಬತ್ತರ ದಶಕದ ಕೊನೆಯ ಭಾಗದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನಕ್ಕೆಂದು ಭುವನೇಶ್ವರ ಬಿಟ್ಟು ದೆಹಲಿ ಸೇರಿದೆ. ಆಗಲ್ಲಿ ‘ಸಹೇಲಿ’, ‘ಮಾನುಷಿ’ ಮೊದಲಾದ ಮಹಿಳಾಗುಂಪುಗಳು ಶಾಬಾನೊ ಪ್ರಕರಣ, ವರದಕ್ಷಿಣೆ ವಿರೋಧಗಳ ಸುತ್ತ ತೀವ್ರ ಚರ್ಚೆ ಹುಟ್ಟುಹಾಕಿದ್ದವು. ಏಕವ್ಯಕ್ತಿ ನಾಯಕತ್ವಕ್ಕಿಂತ ಸಾಮೂಹಿಕ ಪ್ರಯತ್ನದಲ್ಲಿ ಹೆಚ್ಚು ನಂಬಿಕೆಯಿದ್ದುದರಿಂದ ಸ್ವಾಯತ್ತ ಸಂಘಟನೆ ‘ಸಹೇಲಿ’ ಸೇರಿದೆ. ಆಗ ಮಹಿಳಾ ಸಂಘಟನೆಗಳು ಪ್ರತಿಯೊಬ್ಬ ಮಹಿಳೆಗೂ ತಾನು ಮುಕ್ತಳಾಗುವುದು ಸಾಧ್ಯವಾದರೆ, ಸಮಷ್ಟಿಯಲ್ಲೂ ಮಹಿಳೆಗೆ ಅದೇ ವಾಸ್ತವವಾಗುವುದೆಂದು ನಂಬಿದ್ದವು. ಅಲ್ಲಿ ಕೊಂಚ ನಿರಾಸೆಯಾಯಿತೆಂದೇ ಹೇಳಬೇಕು. ಅಕಡೆಮಿಕ್ ಸಭೆ–ಸಮಾರಂಭಗಳಿಗೆ ಹೋದರೆ ಮೆಥಡಾಲಜಿ, ತಾತ್ವಿಕತೆ ಮುಂತಾದ ಮಾತುಗಳು ತಲೆಚಿಟ್ಟು ಹಿಡಿಸುತ್ತಿದ್ದವು. ಇದೆಲ್ಲದರಿಂದ ಸಾಮಾನ್ಯ ಮಹಿಳೆಗೆ, ರೈತಮಹಿಳೆಗೆ ಏನು ಉಪಯೋಗ ಎಂಬ ಪ್ರಶ್ನೆ ಕೊರೆಯುತ್ತಿತ್ತು. ಅದನ್ನೇ ಅಲ್ಲಿದ್ದವರಿಗೂ ಕೇಳಿದರೆ ತಬ್ಬಿಬ್ಬುಗೊಳ್ಳುತ್ತಿದ್ದರು.

ಆಗ ‘ಕ್ಲೀನ್ ಡೆಲ್ಲಿ, ಬ್ಯೂಟಿಫೈ ಡೆಲ್ಲಿ’ ಅಭಿಯಾನ ನಡೆಯುತ್ತಿತ್ತು. ರಸ್ತೆಬದಿಯ ಬಸ್ತಿಗಳ ಜನರನ್ನು, ಸಂದುಗೊಂದುಗಳಲ್ಲಿ ವಾಸಿಸುತ್ತಿದ್ದವರನ್ನು ಒಕ್ಕಲೆಬ್ಬಿಸಿದರು. ಅಂಗೈಯಗಲದ ಗೂಡುಗಳಲ್ಲೇ ಬದುಕು ಕಟ್ಟಿಕೊಂಡವರು ಏಕಾಏಕಿ ಅತಂತ್ರವಾದರು. ಆ ವರ್ಷ ದೀಪಾವಳಿಯಂದು ರಸ್ತೆಗೆ ಬಿದ್ದ ಬಸ್ತಿಗಳ ಜನರ ಕೊನೆಮೊದಲಿರದ ಕಷ್ಟದ ಬದುಕು ಕಣ್ಣೆದುರು ತಂತಾನೇ ಅನಾವರಣಗೊಂಡಿತು. ಅದ್ಯಾವುದರ ಪರಿವೆಯೇ ಇಲ್ಲದ ಸಿರಿವಂತರ ದೆಹಲಿ ಸಿಲ್ಕ್ ಸ್ಯಾರಿ – ಕಟೋರಿ ಚೋಲಿ ತೊಟ್ಟು, ಸಿಹಿಯುಂಡು, ಪಟಾಕಿ ಸುಟ್ಟು ಸಂಭ್ರಮಿಸಿತು. ನಾವು ಯಾರಿಗಾಗಿ ಹೋರಾಡುತ್ತಿದ್ದೇವೆ ಎಂದು ನನ್ನ ಮೇಲೆ ನನಗೇ ಅನುಮಾನವಾಯಿತು. ಜನಸಾಮಾನ್ಯ ಮಹಿಳೆಯರೊಡನೆಯೇ ಕೆಲಸ ಮಾಡಬೇಕೆಂಬ ನಿರ್ಧಾರ ಗಟ್ಟಿಯಾಯಿತು.

* ರೈತಸಮುದಾಯದತ್ತ ಗಮನ ಕೇಂದ್ರೀಕರಿಸಲು ಕಾರಣವೇನು?
ವಿದರ್ಭ ಕುರಿತ ವರದಿಗಳು ಬರುತ್ತಿದ್ದವು. ದಕ್ಷಿಣದ ರಾಜ್ಯಗಳಲ್ಲೂ ರೈತರ ಆತ್ಮಹತ್ಯೆಗಳು ಸಂಭವಿಸತೊಡಗಿದ್ದವು. ‘ಹಸಿರುಕ್ರಾಂತಿ’ಯ ಪಂಜಾಬಿನಲ್ಲೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ದೆಹಲಿಗೆ ಹತ್ತಿರವಿದ್ದ ಪಂಜಾಬಿಗೆ ‘ಪೈಲಟ್ ಸ್ಟಡಿ’ಗೆಂದು ಹೋದರೆ, ಭೇಟಿಯಾದ ಮಹಿಳೆಯರಲ್ಲಿ ಅರ್ಧಕ್ಕರ್ಧ ಜನ ನಿದ್ರೆಮಾತ್ರೆ ನುಂಗುತ್ತಿರುವುದಾಗಿ ಹೇಳಿದರು! ಒಂದು ಮನೆಯ ಪುಟ್ಟ ಹುಡುಗಿ ನನ್ನನ್ನು ಬಹಳ ಹಚ್ಚಿಕೊಂಡಳು. ಹಿಂದೆಮುಂದೆ ಸುಳಿಯುತ್ತ ನನ್ನ ಮುಟ್ಟುತ್ತಿದ್ದಳು, ಪಕ್ಕವೇ ಕೂರುತ್ತಿದ್ದಳು, ಕೂದಲು ಸವರುತ್ತಿದ್ದಳು. ಕೊನೆಯ ದಿನ ತಾನೂ ನನ್ನ ಜೊತೆ ಬರುವೆನೆಂದು ಹಟ ಹಿಡಿದಳು. ‘ನೀನು ಬಂದರೆ ಅಮ್ಮನ ಜೊತೆ ಯಾರಿರುತ್ತಾರೆ?’ ಎಂದೆ. ಅವಳಮ್ಮ, ‘ನನ್ನ ಜೊತೆ ಇದ್ದರೆ ನನ್ನಂತೇ ಆದಾಳು. ನಿನ್ನ ಜೊತೆಯಿದ್ದರೆ ನಿನ್ನಂತಾದರೂ ಆಗುವಳೇನೋ?’ ಎಂದು ವಿಷಣ್ಣಳಾಗಿ ಹೇಳಿದಳು. ಒಬ್ಬ ತಾಯಿ ತನ್ನ ಬಗ್ಗೆ ತಾನು ಇದಕ್ಕಿಂತ ಅಸಹಾಯಕತೆ, ನೇತ್ಯಾತ್ಮಕ ಭಾವ ಹೊಂದಲು ಸಾಧ್ಯವೆ?
ನಿದ್ರಾಹೀನ, ವಿಷಣ್ಣ ತಾಯಂದಿರ ಕಂಡು ಇದು ಸಾಮಾನ್ಯ ಸಮಸ್ಯೆಯಾಗಿರಲಿಕ್ಕಿಲ್ಲ ಎನಿಸಿತು. ಜಾಗತೀಕರಣ, ಮುಕ್ತ ಮಾರುಕಟ್ಟೆ ತಂದೊಡ್ಡಿದ ಸಂಕಷ್ಟಗಳಿಗೆ ನಾವು ಮೂಕಸಾಕ್ಷಿಯಾದೆವೇ ಎಂಬ ಪಾಪಪ್ರಜ್ಞೆ ಆವರಿಸಿತು. ವಿಸ್ತೃತ ಅಧ್ಯಯನಕ್ಕೆಂದು ಪಂಜಾಬಿಗೆ ಹೊರಟುಬಿಟ್ಟೆ.

ADVERTISEMENT

* ನೀವು ರೈತಕುಟುಂಬದಿಂದ ಬಂದವರೇ?
ನಾನು ರೈತಕುಟುಂಬದವಳಲ್ಲ. ನಾನಷ್ಟೇ ಅಲ್ಲ, ಈಗ ‘ಅಕ್ಷರಸ್ಥ’ ಎನಿಸಿಕೊಂಡರಲ್ಲಿ ಬಹಳಷ್ಟು ಜನ ರೈತ ಕುಟುಂಬದವರಲ್ಲ. ಅದೇ ‘ನಿಮ್ಮ ತಾಯ್ತಂದೆಯರು ರೈತ ಕುಟುಂಬದವರಾ?’ ಎಂದು ಕೇಳಿನೋಡಿ. ಒಂದಷ್ಟು ಜನ ಸಿಗುತ್ತಾರೆ. ಅಜ್ಜಿ–ಅಜ್ಜ ರೈತರಾಗಿರುವವರು ಹಲವರು ಸಿಗುತ್ತಾರೆ. ಕೃಷಿ ನೆಚ್ಚಿದವರ ಸಂಖ್ಯೆ ಕಡಿಮೆಯಾಗುತ್ತಿರುವುದರ ಸೂಚನೆಯಿದು. ಈಗ ನಾವು ರೈತರೊಂದಿಗೆ ಕನೆಕ್ಟ್ ಆಗಲೇಬೇಕು. ಅನ್ನ ಬೆಳೆವ ರೈತನ ಸಮಸ್ಯೆ ಎಲ್ಲರಿಗೂ ಸಂಬಂಧಿಸಿದ್ದೆಂದು ತಿಳಿದುಕೊಳ್ಳಬೇಕು.

* ಕ್ಷೇತ್ರಕಾರ್ಯದ ವೇಳೆ ಮರೆಯಲಾಗದ ಕೆಲವು ಸಂಗತಿಗಳನ್ನು ಹಂಚಿಕೊಳ್ಳುವಿರಾ?
ವಿಧವೆಯರ ಸ್ಥಿತಿಗತಿಗೆ ಜಾತಿಯ ಕೊಡುಗೆಯೂ ಸಾಕಷ್ಟಿದೆ. ಜಾಟ್, ಸಿಖ್ ಮತ್ತು ದಲಿತ ರೈತವಿಧವೆಯರನ್ನು ಕಂಡಮೇಲೆ ದಮನದ ನೆಲೆಗಳು, ಹೊರದಾರಿಗಳು ಮತ್ತು ಅವರವರ ಶಕ್ತಿಗಳು ಭಿನ್ನ ಎಂದರಿವಾಯಿತು. ಜಾತಿ–ವರ್ಗ ಕುರಿತ ನನ್ನ ತಿಳಿವಳಿಕೆ ಈ ಅಧ್ಯಯನ ಮಾಡುವಾಗ ಪುಷ್ಟೀಕರಣಗೊಂಡಿತು.

ಒಂದು ಮನೆಯಲ್ಲಿ ವಿಧವೆಯ ಬಳಿ ಒಳಮನೆಯಲ್ಲಿ ಮಾತು ಮುಗಿಸಿದ್ದೆ. ತಲೆಬಾಗಿಲಲ್ಲಿ ಕೂತ ಮಾವ, ‘ಎಲ್ಲ ಹೇಳಿದಳೇ?’ ಎಂದರು. ಅದು ಆರೋಪವೋ ವಿಚಾರಣೆಯೋ ತಿಳಿಯದೇ – ‘ಅವಳು ಹೇಳಿದಳು. ನೀವೂ ಹೇಳಿ’ ಎಂದೆ. ಅವರು ಮುಂಬಾಗಿ ಮೆಲುದನಿಯಲ್ಲಿ ಮಾತನಾಡತೊಡಗಿದರು: ‘ಕೆಲಸ ಹುಡುಕುತ್ತ ನನ್ನ ಮಗ ಹಡಗು ಹತ್ತಿ ಕೆನಡಾಗೆ ಅಕ್ರಮ ವಲಸೆ ಹೊರಟಿದ್ದ. ದಾರಿಯಲ್ಲಿ ಡರ್ಬಾನಿನಲ್ಲಿ ಸಿಕ್ಕಿಕೊಂಡ. ಅಲ್ಲಿ ಗುರುದ್ವಾರದವರ ಕೈಗೆ ಸಿಕ್ಕು ಪುಣ್ಯವಶಾತ್ ಮರಳಿ ಬಂದ. ಬಂದಮೇಲೆ ಅವನು ಟೆರರಿಸ್ಟ್ ಎಂದು ಬೆನ್ನುಹತ್ತಿದರು. ನನ್ನನ್ನು ಬಂಧಿಸಿ ಜೈಲಿಗೆ ಹಾಕಿದರು. ಕೊನೆಗೆ ವ್ಯವಸಾಯ ಶುರು ಮಾಡಿದ. ಕೈಹತ್ತಲಿಲ್ಲ. ಅವರೂ ಅವನ ಬೆನ್ನು ಬಿಡಲಿಲ್ಲ. ಅವನಿರುವಷ್ಟೂ ದಿನವೂ ಒಂದಿಲ್ಲ ಒಂದು ತೊಂದರೆ. ಕೊನೆಗೀಗ ಹೀಗೆ...’ ಎಂದು ಮಾತಾಡುತ್ತ ಆಡುತ್ತ ಗದ್ಗದರಾದರು... ಪ್ರತಿ ಬದುಕಿನ ಹಿಂದೆ, ಸಾವಿನ ಹಿಂದೆ ಅದೆಷ್ಟು ಗುಟ್ಟುಗಳು! ಒಳಸುಳಿಗಳು!

* ಬರಪೀಡಿತ, ಒಣನೆಲದ ಪ್ರದೇಶಗಳಿಗಿಂತ ನೀರಾವರಿ ಇರುವಲ್ಲೇ ರೈತರ ಆತ್ಮಹತ್ಯೆ ಹೆಚ್ಚು ಸಂಭವಿಸುತ್ತಿದೆ. ಇದನ್ನು ಹೇಗೆ ಅರ್ಥೈಸುವಿರಿ?
ನೀರಾವರಿ ಇರುವಲ್ಲಿ ಕೃಷಿಗೆ ಬಂಡವಾಳ ಹೂಡಿಕೆ ಇರುತ್ತದೆ. ಅಲ್ಲಿ ಜಮೀನೆಂದರೆ ಆಸ್ತಿ, ಅಂತಸ್ತು, ಶ್ರೇಣಿಯ ಸಂಕೇತ. ಜಾತಿ–ಲಿಂಗಗಳಿಗಿಂತ ಜಮೀನು ಕೊಡುವ ಅಂತಸ್ತೇ ದೊಡ್ಡ ಐಡೆಂಟಿಟಿ. ಕೊನೆಗೆ ಉತ್ಪಾದನೆಗಿಂತಲೂ ಭೂಮಿಯೇ ಹೆಮ್ಮೆಯ ಪ್ರತೀಕವಾಗಿಬಿಡುತ್ತದೆ. ಬಂಡವಾಳ ಒತ್ತಾಯಿಸುವ ಪುರುಸೊತ್ತಿಲ್ಲದ ಕೃಷಿಯ ದುಷ್ಪರಿಣಾಮಗಳು ಹೆಂಗಸರು, ಮಕ್ಕಳು, ಮುದುಕರು, ಕೃಷಿಕೂಲಿಗಳ ದಿನನಿತ್ಯದ ಬದುಕಿನಲ್ಲಿ ಆಗುತ್ತವೆ. ಇದು ಪುರುಷಪ್ರಾಧಾನ್ಯ ಹುಲುಸಾಗಿ ಬೆಳೆಯಲು ಇಂಬು ಕೊಟ್ಟು ಸ್ತ್ರೀಭ್ರೂಣ ಹತ್ಯೆ, ವರದಕ್ಷಿಣೆ ಪಿಡುಗು ಹೆಚ್ಚಲೂ ಕಾರಣವಾಗಿದೆ.

* ಕೃಷಿ ಬಿಕ್ಕಟ್ಟನ್ನು ಕೊನೆಗೊಳಿಸುವುದು ಹೇಗೆ?
ಸಾವಯವ ಕೃಷಿಯಿಂದ ಬೆಳೆ ಸಾಲ, ಬೀಜಸಾಲ ತಪ್ಪುತ್ತದೆ; ರೈತರ ಆತ್ಮಹತ್ಯೆ ಕಡಿಮೆಯಾಗುತ್ತದೆ ಎನ್ನುತ್ತಾರೆ. ನನಗೆ ಹಾಗೆನಿಸುವುದಿಲ್ಲ. ಇಷ್ಟು ಬೃಹತ್ ದೇಶದ ಜನಸಂಖ್ಯೆಗೆ ಕೈಗೆಟುಕುವ ದರದಲ್ಲಿ ಪೌಷ್ಟಿಕ ಆಹಾರ ಒದಗಿಸುವುದು ಹಸಿರುಕ್ರಾಂತಿಯ ನಂತರವೂ ಕಷ್ಟವಾಗಿರುವಾಗ ಆರೋಗ್ಯಕರ, ವೈಜ್ಞಾನಿಕ ಆಧುನಿಕ ಕೃಷಿಪದ್ಧತಿಯಷ್ಟೇ ಬಿಕ್ಕಟ್ಟಿಗೆ ಪರಿಹಾರವಾಗಬಲ್ಲದು. ಬಂಡವಾಳ ಕೃಷಿಯನ್ನು ಸರಕೀಕರಣಗೊಳಿಸಿದೆ. ಕೃಷಿ ಅತಿ ಯಾಂತ್ರೀಕರಣಗೊಂಡು, ಅನಗತ್ಯ ಖರ್ಚು ಸೃಷ್ಟಿಸಿ, ನಿರುದ್ಯೋಗಕ್ಕೆ ಕಾರಣವಾಗಿದೆ. ಅಧ್ಯಯನದ ವೇಳೆ ದಾಖಲಿಸಿರುವಂತೆ ಕೃಷಿ ಯಂತ್ರೋಪಕರಣಗಳಲ್ಲಿ ಶೇ. 81ರಷ್ಟು ಅನವಶ್ಯಕವಾಗಿವೆ. ಯಂತ್ರೋಪಕರಣಗಳಿಗೆ, ವರದಕ್ಷಿಣೆ, ಅನಾರೋಗ್ಯ ಮತ್ತಿತರ ಸಮಸ್ಯೆಗಳಿಗೆ ರೈತರ ಬಹುಪಾಲು ಲಾಭ ಸೂರೆಗೊಂಡು ಅವರು ಸಾಲಗಾರರಾಗಿದ್ದಾರೆ. ಹಾಗಾಗಿಯೇ ಕೃಷಿಯ ಯಾಂತ್ರೀಕರಣ ಕಡಿಮೆಯಾಗಬೇಕಿದೆ. ಬೃಹತ್ ಬಂಡವಾಳಗಾರರು, ವ್ಯಾಪಾರಿ–ದಲ್ಲಾಳಿಗಳು ಇರದ ರೈತಸ್ನೇಹಿ ಕೃಷಿನೀತಿ ಅವಶ್ಯವಾಗಿದೆ.

* ಮಹಿಳೆಯರ ಬಿಕ್ಕಟ್ಟುಗಳಿಗೆ ಪರಿಹಾರವೇನು?
‘ನೀನು ಹುಡುಗಿ, ಓದಿದ್ದು ಸಾಕು, ಗಂಡು ಸಿಗುವುದಿಲ್ಲ, ನಿನ್ನ ವರದಕ್ಷಿಣೆಗೆ ಹಣ ಕೂಡಿಡಬೇಕು’ ಎನ್ನುವಂತಹ ಮಾತುಗಳು ಇವತ್ತಿಗೂ ಸಾಮಾನ್ಯ. ಇಂಥ ಸಂದರ್ಭದಲ್ಲಿ ಸಂಘಟಿತರಾಗುವುದೊಂದೇ ಮಹಿಳೆಯರಿಗಿರುವ ದಾರಿ. ಅದು ಇವತ್ತು ಆಗುತ್ತಿರುವ ರೀತಿಯಿಂದ, ಪ್ರಮಾಣದಿಂದ ಸಾಧ್ಯವಿಲ್ಲ. ಮಹಿಳಾ ಚಳವಳಿಗೆ, ಮಹಿಳೆಯರ ವ್ಯಕ್ತಿಗತ ಸಮಸ್ಯೆಗಳ ಬಗೆಗೆ, ಗಮನ ಕಡಿಮೆಯಾಗುತ್ತಿದೆ ಎಂದು ನನಗೆ ಗಾಢ ಅಸಮಾಧಾನವಿದೆ. ನಾವು ಪಿತೃಪ್ರಾಧಾನ್ಯವನ್ನು ಸೂಕ್ತವಾಗಿ ಗುರುತಿಸಿದೆವು. ಸಮಾಜದ ಆಂತರಿಕ ರಚನೆ ಬದಲಾದರೆ ಎಲ್ಲವು ಸರಿಯಾಗುವುದೆಂದು ಹೋರಾಡಿದೆವು. ಆದರೆ ವರದಕ್ಷಿಣೆ ಆಗಲೂ ಇತ್ತು, ಈಗಲೂ ಇದೆ. ವರದಕ್ಷಿಣೆ ಬಗ್ಗೆ ನಾವು ಮಾತನಾಡುವುದನ್ನೇ ನಿಲ್ಲಿಸಿದ್ದೇವೆ. ನಮ್ಮ ಗ್ರಹಿಕೆ ವಿಶಾಲವಾಗುತ್ತಾ ಹೋದಂತೆ, ಹೆಣ್ಣುಮಕ್ಕಳನ್ನು ಬುಡಮಟ್ಟ ಕಾಡುವ ಮೂಲಭೂತ ಪ್ರಶ್ನೆಗಳನ್ನು ಕೈಬಿಟ್ಟು, ಪಿತೃಪ್ರಾಧಾನ್ಯವೆಂಬ ಒಂದೇ ಎಳೆ ಹಿಡಿದು ಜಗ್ಗಾಡತೊಡಗಿದ್ದೇವೆ.

ಇವತ್ತು ಮಹಿಳಾ ಚಳವಳಿಯ ದೊಡ್ಡ ಸಮಸ್ಯೆ ಅದು ‘ಎನ್‌ಜಿಒ’ಕರಣಗೊಂಡಿರುವುದು. ‘ಎನ್‌ಜಿಒ’ಗಳು ವ್ಯವಸ್ಥೆಯ ಆರ್ಥಿಕ, ರಾಜಕೀಯ ಲೋಪಗಳ ಕುರಿತು ಚರ್ಚಿಸುವ ಗೋಜಿಗೇ ಹೋಗುವುದಿಲ್ಲ. ಸರ್ಕಾರದ ‘ಸ್ತ್ರೀಶಕ್ತಿ’ ಕಾರ್ಯಕ್ರಮಗಳಾದರೋ ಹೆಣ್ಣುಮಕ್ಕಳನ್ನು ಸುಮ್ಮನಿರಲು, ಇರುವಂತೆಯೇ ಇರಲು ಒತ್ತಾಯಿಸುತ್ತವೆಯೇ ಹೊರತು ಸಮಗ್ರ ಜಾಗೃತಿಗೆ ಕಾರಣವಾಗುತ್ತಿಲ್ಲ. ಸಮಸಮಾಜ ಬಯಸುವ ಪ್ರಗತಿಪರ – ಪರಿಸರ – ಎಡಪಂಥೀಯ ಚಳವಳಿಗಳೆಲ್ಲ ಮಹಿಳಾ ಸಮಸ್ಯೆಗಳನ್ನು ಮುಖ್ಯವೆಂದು, ತಮ್ಮದೆಂದು ಪರಿಗಣಿಸಬೇಕು. ಎಲ್ಲ ಸಮಸ್ಯೆಗಳ ಲಿಂಗಸಂಬಂಧಿ ಆಯಾಮ ಕುರಿತು ಚರ್ಚಿಸಬೇಕು. ಜೊತೆಗೆ ಮಹಿಳಾ ಚಿಂತನೆಯೂ ಎಲ್ಲ ವಾದಗಳ ಸತ್ವ ಹೀರಿ ಅದರಾಚೆ ಬೆಳೆಯಬೇಕು. ಕೊನೆಯ ಮಹಿಳೆ ಮುಕ್ತಳಾಗುವವರೆಗೂ, ನಡುರಾತ್ರಿಯೂ ಮಹಿಳೆ ನಿರ್ಭಯಳಾಗಿ ಓಡಾಡುವಂತೆ ಆಗುವವರೆಗೂ ಚಳವಳಿ ಮುಂದುವರೆಯಬೇಕು. ಅದೊಂದೇ ಸಮತೆಯ ಕನಸನ್ನು ಬಿತ್ತುವ ಶಕ್ತಿಯಾಗಿದೆ.
ಮಾಳವಾದಲ್ಲಿ ಏಳನೇ ತರಗತಿಯ ಒಂದು ಹುಡುಗಿ ನನ್ನ ಹಿಂದೆಮುಂದೆ ಸುಳಿಯುತ್ತ ಮಾತು, ಬರವಣಿಗೆಗಳನ್ನು ಆಸಕ್ತಿಯಿಂದ ಗಮನಿಸುತ್ತಿದ್ದಳು. ಕೊನೆಯ ದಿವಸ ‘ನೀನು ಮಹಿಳಾ ವಿಮೋಚನೆಗಾಗಿ ಕೆಲಸ ಮಾಡುತ್ತಿರುವೆಯಾ?’ ಎಂದಳು. 12–13 ವರ್ಷದ ಹುಡುಗಿಯ ಬಾಯಿಯಲ್ಲಿ ಆ ಮಾತು ಕೇಳಿ ಆಶ್ಚರ್ಯವಾಯಿತು. ಅವಳಿಗದು ಹೇಗೆ ಗೊತ್ತಾಯಿತೆಂದು ಕೇಳಿದೆ. ತನಗೆ ಸಮಾಜ ಪುಸ್ತಕದಲ್ಲಿ ಹಾಗೊಂದು ಪಾಠ ಇದೆಯೆಂದು ಹೇಳಿದಳು. ಪಠ್ಯದಲ್ಲಿ ಇಂಥ ಸೂಕ್ಷ್ಮವಿಷಯಗಳಿದ್ದರೆ, ಬೆಳೆಯುವ ಹುಡುಗ–ಹುಡುಗಿಯರಲ್ಲಿ ಸಮತೆಯ ಭಾವ ತುಂಬಿದರೆ, ನಮ್ಮ ನಾಳೆಗಳು ಹೇಗಿದ್ದಾವು ಎನ್ನುವುದನ್ನು ಊಹಿಸಿಕೊಳ್ಳಿ.

* ಸ್ತ್ರೀವಾದ ಎಂಬ ಪದ ಕೇಳಿದರೆ ನಮ್ಮಲ್ಲಿ ಕೆಲವರಿಗೆ ಮೈಮೇಲೆ ಮುಳ್ಳುಗಳೇಳುತ್ತವೆ...
ಲಿಂಗತಾರತಮ್ಯದ ಫಲಸುಖಾನುಭವಿಗಳು ಅವರು. ಅವರಿಗೆ ಹಾಗನಿಸುವುದು ಸಹಜ. ದಲಿತನೊಬ್ಬ ಮೇಲ್ಜಾತಿಯವರೆದುರು ತನ್ನ ಹಕ್ಕುಗಳನ್ನು ಕೇಳಿದಾಗ ಯಾವ ವಿರೋಧ ಬರುವುದೋ, ಹೆಣ್ಣು ತನ್ನ ಹಕ್ಕುಗಳ ಕುರಿತು ಖಚಿತವಾಗಿ ಮಾತನಾಡತೊಡಗಿದಾಗಲೂ ಅದೇ ಆಗುತ್ತದೆ. ಆದರೆ ಸಮಾಜ ತಿಳಿಯಲಿ: ಸ್ತ್ರೀವಾದ ಎಂದರೆ ಮಹಿಳೆ ಗಂಡಸರಿಂದ ಅಧಿಕಾರ ಕಸಿಯುವುದಲ್ಲ, ಅಧಿಕಾರದ ವ್ಯಾಖ್ಯೆ ಬದಲಿಸುವುದು. ಸ್ತ್ರೀವಾದ ಎಂದರೆ ಪುರುಷವಿರೋಧವಲ್ಲ; ಸಮತೆಯ, ಘನತೆಯ ಬದುಕನ್ನು ಪ್ರತಿಪಾದಿಸುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.