`ತಾಯಿ ಜೀವ ತವರ; ಮಗನ ಜೀವ ಮರ!' ಅನ್ನುತ್ತದೆ ಜನಪದ ಗಾದೆ. ಅಮ್ಮ ಶಬ್ದಕ್ಕೆ, ಆ ಸುಕುಮಾರ ಸ್ವರೂಪಕ್ಕೆ ಅವಳ ಪ್ರೀತಿ- ಚಹರೆಗಳ ಸಾವಿರ ರೂಪಕ್ಕೆ, ಇನ್ನೊಂದು ಹೋಲಿಕೆ ಇಲ್ಲ.
ಇವತ್ತಿಗೂ ಮಳೆಗಾಲ ಬಂದರೆ, ಆಗ ನಾನೆಲ್ಲೋ ಹೊರಗಿದ್ದು ನೆನೆದರೆ, ಆ ಚಳಿಯಲ್ಲಿ ಬೆಚ್ಚಗೆ ನೆನಪಾಗುವುದು ಅಮ್ಮನೇ. ಬಾಲ್ಯದ ಮುಗ್ಧ ಸುಂದರ ದಿನಗಳು, ಹನಿ ತುಂಬಿದ ಅಂಗಳ, ಶೀತಲ ವರ್ಷ ಧಾರೆ. ಕೇಕೆ ಹಾಕಿ ಕುಣಿಯುವ ಚಿಣ್ಣರ ಗುಂಪು. ಇವೆಲ್ಲ ಈಗ ತಾನೇ ಸಂಭವಿಸುತ್ತಿರುವಂತೆ ಕಣ್ಮುಂದೆ ಮೂಡುತ್ತವೆ. ಮಳೆಯಲ್ಲಿ ಮೀಯುತ್ತಾ, ಕುಣಿದಾಡುತ್ತಾ, ಬೊಗಸೆಯಲ್ಲಿ ಮಳೆ ನೀರು ಹಿಡಿದು ಕುಡಿಯುತ್ತಾ ಸಂಭ್ರಮಿಸುವಾಗ, ಓಡೋಡಿ ಬಂದೇ ಬಿಡುತ್ತಿದ್ದಳಲ್ಲ ಅಮ್ಮ. ಗದರುತ್ತಾ ಮನೆಯೊಳಗೆ ಕರಕೊಂಡು ಹೋಗಿ, ಒದ್ದೆ ಬಟ್ಟೆ ಕಳಚಿ, ಒಣ ಬಟ್ಟೆ ತೊಡಿಸಿ, ಬೆಚ್ಚಗೆ ಒಲೆ ಮುಂದೆ ಕೂರಿಸುವಳು. ಅರಿಶಿನ ಬೆರೆಸಿದ ಬಿಸಿ ಹಾಲು ಕೊಡುವಳು. ಅವಳ ಮೆಲು ನಗು, ಸವಿ ಮುತ್ತು, ಅದೆಷ್ಟು ಸೊಗಸು.
`ತಾಯೆ ಬಾರ ಮೊಗವ ತೋರ!' ಹಂಬಲಿಸುತ್ತದೆ ಮನಸ್ಸು, ಅವಳು ಗತಿಸಿ 24 ವರ್ಷಗಳು ಕಳೆದಿದ್ದರೂ. `ತಾಯಿ' ಒಂದು ಪವಿತ್ರ ವಸ್ತು ಎನ್ನುವುದು ಎಲ್ಲ ಮಕ್ಕಳ ಅಸೀಮ ಭರವಸೆ. `ಅಮ್ಮ' ಅನ್ನುತ್ತಿದ್ದಂತೆ ಕವಿ ಮನಸ್ಸು ಸಂಭ್ರಾಂತವಾಗಿ ಬಿಡುತ್ತದೆ. ಭಾವ ಪರವಶವಾಗಿ ಅಮ್ಮನನ್ನು ಬಗೆ ಬಗೆಯಾಗಿ ಬಣ್ಣಿಸತೊಡಗುತ್ತದೆ.
`ಆ ಅಂಬಿಕೆ ಪ್ರೀತಿಯಿಂದ ಪೊರೆದ ಮಗನೇ ನಾನು ದತ್ತ!' ಎಂದೇ ಕಾವ್ಯನಾಮ ಇಟ್ಟುಕೊಂಡ ವರಕವಿ ಬೇಂದ್ರೆ, ತಾಯ ಹೆಸರಿನ ಮರೆಯಲ್ಲೇ ತಮ್ಮ ಅಸ್ತಿತ್ವವನ್ನು ಪ್ರಕಟಿಸಿದವರು.
`ಅಮ್ಮ'ನ ಅತಿ ದೊಡ್ಡ ವಿಶೇಷ ಅಂದರೆ, ತಾನು ಹೆತ್ತ ಮಕ್ಕಳಿಗೆ ಮಾತ್ರ ಸೀಮಿತವಾಗದೆ ಮೇರೆ ಮೀರಿ ಹರಿಯುವ ಅವಳ ತಾಯ್ತನ. ಮಾಸ್ತಿ ಅವರು ತಮ್ಮ ಆತ್ಮಚರಿತ್ರೆ `ಭಾವ'ದಲ್ಲಿ ಒಂದು ಹೃದಯಸ್ಪರ್ಶಿ ಪ್ರಸಂಗವನ್ನು ಬರೆಯುತ್ತಾರೆ. ಬಾಲ್ಯದಲ್ಲಿ ಒಂದು ದಿನ ಮಾಸ್ತಿ ಒಂದಿಬ್ಬರು ಸಂಗಡಿಗರೊಡನೆ ತಮ್ಮೂರಿಗೆ ಹಿಂದಿರುಗುತ್ತಿದ್ದರು.
ಆದರೆ ಊರು ತಲುಪುವ ಮುನ್ನವೇ ಕತ್ತಲೆಯಾಗಿಬಿಟ್ಟಿತು. ಆ ಊರಿನಲ್ಲಿದ್ದ ಗುರುತಿನ ಮೇಷ್ಟರೊಬ್ಬರ ಮನೆಗೆ ಉಳಿದುಕೊಳ್ಳಲು ಹೋದರು. ಅವರು ಪಕ್ಕದ ಹಳ್ಳಿಯ ತವರು ಮನೆಗೆ ಹೋಗಿದ್ದ ಮಡದಿಗೆ ಕೂಡಲೇ ಬರುವಂತೆ ಹೇಳಿಕಳಿಸಿದರು. ಆ ತಾಯಿ ಧಾವಿಸಿ ಬಂದರು. ಸೆರಗನ್ನು ಸೊಂಟಕ್ಕೆ ಸಿಕ್ಕಿಸಿ ಅಡುಗೆ ಮನೆಗೆ ಹೋದರು. ಬೇಗ ಬೇಗನೆ ಅಡುಗೆ ತಯಾರಿಸಿ, ಹುಡುಗರನ್ನು ಕೂರಿಸಿ ಹೊಟ್ಟೆ ತುಂಬ ಬಡಿಸಿದರು. ಆವತ್ತು ಆಕೆ ಬಡಿಸಿದ್ದು ಅನ್ನ, ಗೊಡ್ಡು ಸಾರು, ಚಟ್ನಿ ಮತ್ತು ಮಜ್ಜಿಗೆ. `ಅಂಥ ಅಮೃತ ಸಮಾನವಾದ ಊಟವನ್ನೂ, ಆ ತಾಯಿಯ ಪ್ರೀತಿಯನ್ನೂ ನಾನೆಂದೂ ಮರೆಯಲಾರೆ' ಅನ್ನುತ್ತಾರೆ ಮಾಸ್ತಿ. ವರ್ಷ ವರ್ಷಗಳಿಂದ ಈ ಕತೆಯನ್ನು ಆಗಾಗ ಓದುತ್ತೇನೆ. ಪ್ರತಿ ಬಾರಿ ಮನಸ್ಸು ಆರ್ದ್ರವಾಗುತ್ತದೆ. ಪುಟ್ಟ ಹುಡುಗರ ಹಸಿವೆ ತಣಿಸಲು ಪಕ್ಕದೂರಿನಿಂದ ಪತ್ನಿಯನ್ನು ಕರೆಸಿದ ಆ ಮೇಷ್ಟರ ಮನಸ್ಸು ಎಂಥದ್ದು, ತವರ ಸುಖ ಬಿಟ್ಟು, ಕತ್ತಲೆಯಲ್ಲೂ ಓಡೋಡಿ ಬಂದ ಆ ತಾಯಿ ಎಂಥವಳು!
ಇನ್ನು, ಸ್ವತಃ ಮಾಸ್ತಿ ಅವರ ಬಗ್ಗೆ ಹೇಳುವುದಾದರೆ, ಅವರಿಗೆ ಇದ್ದಕ್ಕಿದ್ದಂತೆ ಒಂದು ದಿನ ಭಾವವೊಂದು ಹೊಳೆಯಿತು. `ಪ್ರತಿ ದಿನ ಕೆಲಸಕ್ಕೆ ಹೋಗುವಾಗ ದೇವರಿಗೆ ನಮಸ್ಕಾರ ಮಾಡ್ತೀನಿ, ಆದರೆ ಪ್ರತ್ಯಕ್ಷ ದೇವತೆ ಅಮ್ಮ ಮನೇಲೇ ಇದ್ದಾಳೆ, ಆಕೆಗೆ ನಾನು ನಮಸ್ಕಾರ ಮಾಡಲೇಬೇಕು ಅಲ್ಲವೇ?' ಹೀಗನ್ನಿಸಿದ್ದೇ ತಡ, ಮಾಸ್ತಿ ನೇರವಾಗಿ ತಾಯಿಯ ಬಳಿ ಹೋದರು. `ಅಮ್ಮ, ಇವತ್ತಿನಿಂದ ಪ್ರತಿ ದಿನ ನಿನಗೆ ನಮಸ್ಕಾರ ಮಾಡ್ತೀನಿ. ಆಶೀರ್ವಾದ ಮಾಡು ತಾಯಿ' ಅಂದರು. ತಾಯಿ ಹೃದಯ ಹಿಗ್ಗಿತು. ಮಮತೆಯಿಂದ ಮಗನ ತಲೆ ನೇವರಿಸಿ `ಚೆನ್ನಾಗಿ ಬಾಳು ನನ್ನ ಕಂದ' ಎಂದು ಹರಸಿದರು. ತಾಯಿ ಬದುಕಿರುವವರೆಗೂ ಒಂದು ದಿನವೂ ತಪ್ಪದೇ ಇದು ನಡೆಯಿತು.
`ಅಮ್ಮ ಆದೋಳು ಸಿಟ್ಟಿನಿಂದ ಎಡಗೈಲಿ ಉಪ್ಪು ಎಸೆದರೂ, ಅದು ಮಕ್ಕಳ ಹೊಟ್ಟೇಲಿ ಅಮೃತಾನೇ ಆಗುತ್ತೆ' ಅಂತ ನನ್ನ ಅಮ್ಮ ಆಗಾಗ ಹೇಳುತ್ತಿದ್ದಳು. `ಒಂಬತ್ತು ತಿಂಗಳು ತುಂಬಿದ ಬಸಿರ ಭಾರದಲ್ಲಿ ಉಸ್ಸಂತ ಒಂದೇ ಒಂದು ಸಾರಿ ಹೊಸಿಲು ದಾಟುವ ಪ್ರಯಾಸದ ಋಣವನ್ನು ಕೂಡ ಮಕ್ಕಳು ತೀರಿಸಲಾರರು' ಎನ್ನುವುದು ಅವಳ ಇನ್ನೊಂದು ಹೆಮ್ಮೆ.
ನನ್ನ ಗೆಳತಿಯ ತಾಯಿಯ ಕಡೇ ದಿನಗಳು ಅವು. ಪ್ರತಿ ದಿನ ಅವರಿಗೆ ರಕ್ತ ಕೊಡಬೇಕಾಗಿತ್ತು. ಅವರ ಏಳೆಂಟು ಮಕ್ಕಳೇ ತಾಯಿಗೆ ರಕ್ತ ಕೊಡುತ್ತಿದ್ದರು. ಹೀಗೊಂದು ದಿನ ಅವರ ಮಗ ತಾಯಿಗೆ ರಕ್ತ ಕೊಟ್ಟರು. ಸಂಜೆ ತಾಯಿಯನ್ನು ಕಂಡು ತಮಾಷೆ ಮಾಡಿದರು- `ನೋಡಿದ್ಯಾ ಅಮ್ಮ, ಎಷ್ಟು ಗೆಲುವಾಗಿ ಕಾಣ್ತೀ ಇವತ್ತು? ಯಾಕಂದ್ರೆ ರಕ್ತ ಕೊಟ್ಟದ್ದು ನಾನಲ್ವಾ?' ಸೋತು ಹೋಗಿದ್ದ ತಾಯಿಯ ದುರ್ಬಲ ಮುಖದಲ್ಲೂ ಕ್ಷೀಣವಾದ ತುಂಟ ನಗು ಮಿನುಗಿತು. ಅರೆಗಣ್ಣಿನಿಂದಲೇ ಮಗನನ್ನು ಮಮತೆಯಿಂದ ದಿಟ್ಟಿಸುತ್ತಾ ಪಿಸುಗುಟ್ಟಿದರು. `ಹೌದಾ ಮಗಾ? ನಿನ್ನ ಮೈಯಲ್ಲಿ ರಕ್ತ ತುಂಬಿಸಿದೋರು ಯಾರೋ?'
`ಹೆತ್ತ ಮಕ್ಕಳು ಹುಚ್ಚರಾದರೆ... ಎತ್ತದೇ ನೆಲಕ್ಕೆ ಬಿಸುಟುವಳೇ?' ಅನ್ನುತ್ತಾರೆ ನಮ್ಮ ಪುರಂದರ ದಾಸರು. ಈ ಮಾತಿನ ಸತ್ಯಾಸತ್ಯತೆಯನ್ನು ನಾನು ಸಾಕ್ಷಾತ್ತಾಗಿ ಮನಗಂಡೆ. ಸಂಜೆಯಾದರೆ ಸಾಕು, ಸುಮಾರು 25ರ ತರುಣನನ್ನು ತಳ್ಳುಗಾಡಿಯಲ್ಲಿ ನೂಕಿಕೊಂಡು `ವಾಕಿಂಗ್' ಮಾಡಿಸುವ ಮಹಿಳೆಯೊಬ್ಬರು ಪ್ರತಿ ದಿನ ಎದುರಾಗುತ್ತಿದ್ದರು. ಆಮೇಲೆ ತಿಳಿಯಿತು, ಹುಟ್ಟಿದಾಗಿನಿಂದ ಆ ಹುಡುಗ ಬುದ್ಧಿಮಾಂದ್ಯನಂತೆ. ದಿನಾ ಅವನಿಗೆ ಹವಾ ಸೇವನೆ ಬೇಕೆಂದು ವೈದ್ಯರು ಹೇಳಿದ್ದರು. ಆ ತಾಯಿ ಅದೆಷ್ಟೋ ವರ್ಷಗಳಿಂದ ತಪಸ್ಸಿನಂತೆ ಅದನ್ನು ಪಾಲಿಸಿಕೊಂಡು ಬಂದಿದ್ದಾಳೆ.
ಒಬ್ಬ ತಾಯಿ ಇದ್ದಳು. ತನ್ನ ಕಂದನಿಗೆ ಗುಟುಕು ತಿನ್ನಿಸುವಾಗಲೆಲ್ಲ `ಕೆರೆ ಕಟ್ಟಿಸು', `ಬಾವಿ ತೋಡಿಸು' ಎಂದೆಲ್ಲ ಉಪಕಾರಿಯಾಗಿ ಬಾಳುವ ಸಂದೇಶಗಳನ್ನೇ ಒಡಲು ತುಂಬಿಸುತ್ತಿದ್ದಳು. ಇವಳೇ ಶ್ಯಾಮನ ತಾಯಿ, ಶಿವಾಜಿಯ ತಾಯಿ, ಬಾಪೂಜಿಯ ತಾಯಿ. ಇವಳೇ ನಿತ್ಯ ಭರವಸೆಯ ನವನವೋನ್ಮೇಶ ಶಾಲಿನಿ!
ಇಗೋ, ಇವಳಿಗೊಂದು ನಮಸ್ಕಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.