ADVERTISEMENT

ದುಬೈನಲ್ಲಿ ಮಾಂಸಾಹಾರ ಬಿಟ್ಟಿದ್ದು...

ಚಂದ್ರಕಾಂತ ನಾಮಧಾರಿ ಅಂಕೋಲಾ
Published 11 ಸೆಪ್ಟೆಂಬರ್ 2015, 19:30 IST
Last Updated 11 ಸೆಪ್ಟೆಂಬರ್ 2015, 19:30 IST

ಇದು 13 ವರ್ಷಗಳ ಹಿಂದಿನ ಮಾತು. ಅಂದು ನಾನು ದುಬೈನ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದೆ. ದುಬೈ ನಗರ ನಿಜಕ್ಕೂ ವಿಸ್ಮಯಕಾರಿಯಾಗಿತ್ತು. ಇಲ್ಲಿ ಏನುಂಟು.....ಏನಿಲ್ಲ....? ಮುಸ್ಲಿಂ ರಾಷ್ಟ್ರವಾದರೂ, ಆಧುನಿಕತೆಯ ಎಲ್ಲ ಅಂಶಗಳನ್ನು ಒಳಗೊಂಡಿರುವ ನಗರ. ನಮ್ಮ ದೇಶದಲ್ಲಿ ದೆಹಲಿ-ರಾಜಧಾನಿ, ಮುಂಬೈ ಆರ್ಥಿಕ ರಾಜಧಾನಿ ಮತ್ತು ಬೆಂಗಳೂರು ಐಟಿ. ಬಿ.ಟಿ ರಾಜದಾನಿಯಾಗಿರುವಂತೆ, ಯು.ಎ,ಇ ಎನ್ನುವ ದೇಶದಲ್ಲಿ ಅಬುಧಾಬಿ ರಾಜಧಾನಿ, ದುಬೈ ಆರ್ಥಿಕ ರಾಜಧಾನಿ ಹಾಗೂ ಅಲ್ಲಿಂದ ಕೇವಲ 12 ಕಿ.ಮೀ ದೂರದಲ್ಲಿರುವ ಶಾರ್ಜಾ ಆ ದೇಶದ ಸಾಂಸ್ಕೃತಿಕ ರಾಜಧಾನಿ. 

ಆ ದೇಶದ ಯಾವುದೇ ನಗರಗಳಲ್ಲಿ ಹಿಂದೂ ದೇವಸ್ಥಾನಗಳಿಲ್ಲ. ಆದರೆ ದುಬೈನ ಹಿಂದಿನ ರಾಜ ಕುಮಾರರು ಹಿಂದೂ ದೇವಸ್ಥಾನಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. (ಮೊನ್ನೆ ಮೋದಿ ಯವರು ಆ ದೇಶಕ್ಕೆ ಭೆಟ್ಟಿ ನೀಡಿದಾಗ ಅಬುಧಾಬಿ ನಗರದಲ್ಲೂ ಕೂಡಾ ಒಂದು ದೇವಸ್ಥಾನ ಸ್ಥಾಪಿಸುವ ಪ್ರಸ್ತಾಪ ಬಂದಿತ್ತು.) ದುಬೈ ಮಧ್ಯದಲ್ಲಿ ಒಂದು ನದಿ ಹರಿಯುತ್ತಿದ್ದು, ಅದರ ಅಕ್ಕ ಪಕ್ಕದ ಊರುಗಳಿಗೆ ದೈರಾ(Deira) ಮತ್ತು ಬರ್-ದುಬೈ(Bur Dubai) ಅಂತ ಕರೆಯುತ್ತಾರೆ. ದುಬೈನಲ್ಲಿ ಭಾರತೀಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ ಅದರಲ್ಲೂ ಬರ್-ದುಬೈನಲ್ಲಿ ಭಾರತ ಮೂಲದ ಸಿಂಧಿ, ಜನರೇ ಹೆಚ್ಚಾಗಿ ವ್ಯಾಪಾರೋದ್ಯಮಿಗಳು. ಅಲ್ಲಿ ಭಾರತೀಯ ಹೆಸರನ್ನು ಹೊಂದುವ ಮೀನಾ ಬಜಾರ್ ಎನ್ನುವ ಬೀದಿ ಕೂಡ ಇದೆ. ಆ ಪ್ರದೇಶದಲ್ಲಿ ನಿಮಗೆ ಯು.ಎ.ಇ. ದೇಶದ ಭಾಷೆಯಾದ ಅರೇಬಿಕ್ ಮಾತನಾಡಲೂ ಬರದಿದ್ದರೂ ಪರವಾಗಿಲ್ಲ ಆದರೆ ಭಾಷೆ ಬರಲೇಬೇಕು.

ಶ್ರಾವಣ ಮಾಸ ಆರಂಭವಾದಾಗ ನಮ್ಮ ತಾಯಿ ಊರಿನಿಂದ ಫೋನ್ ಮಾಡಿ ಎಚ್ಚರಿಸುವವರು, ಮಗ.. ನಾಳೀಂದ್ ಶ್ರಾವಣ ಮಾಸ್ ಶುರು ಆತೀದ್...ಮೀನು ಮಟನ್ ತಿನ್ನೂಕ್ ಹೋಗ್ಬೇಡ (ಅಂದರೆ ಮಗ... ನಾಳೆಯಿಂದ ಮೀನು, ಮಾಂಸ ಏನನ್ನು ತಿನ್ನಕೂಡದು. ಶ್ರಾವಣ ಮಾಸ ಆರಂಭವಾಗುತ್ತೋ...) ತಾಯಿಯ ಮಾತನ್ನು ಮೀರಲಾಗುತ್ತದೆಯೇ? ಮುಸ್ಲಿಮರು ಒಂದು ತಿಂಗಳು ರಂಜಾನ್ ಹಬ್ಬದಲ್ಲಿ ಉಪವಾಸ ಆಚರಿಸುವಂತೆ, ನಾವು ಹಿಂದೂ ಧರ್ಮಿಯರು ಒಂದು ತಿಂಗಳು ಶ್ರಾವಣ ಮಾಸವನ್ನು ಮಾಂಸ, ಮದಿರೆ ಬಿಟ್ಟು ಆಚರಿಸಬೇಕು. ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಶ್ರಾವಣ ಮಾಸದಲ್ಲಿ ಮನೆಯಲ್ಲಿ ಯಾರೂ ಮಾಂಸಾಹಾರ ಬಳಸುವದು ತುಂಬಾ ಕಡಿಮೆಯಾರುತ್ತದೆ. ಆದ್ದರಿಂದ ಶ್ರಾವಣದಲ್ಲಿ  ಅವುಗಳ ಬೆಲೆ ಇಳಿಯುತ್ತವೆ. ಕಾರವಾರದಲ್ಲಿ ಶ್ರಾವಣ ಮಾಸದ ಮುನ್ನಾ ದಿನವಾದ ಅಮಾವಾಸ್ಯೆಗೆ ಗಟಾರ್ ಅಮಾವಾಸ್ಯೆ ಅಂತ ಕರೆಯುತ್ತಾರೆ. ಗಟಾರ್ ಅಮಾವಾಸ್ಯೆ ಅಂದರೆ ಆದಿನ ಕುಡಿಯಲು ತಿನ್ನಲು  ಕೊನೆಯ ದಿನ. ನೀವು ಕುಡಿದು ಗಟಾರ್‌ನಲ್ಲಿ ಬಿದ್ದುಕೊಂಡರೂ, ಆ ದಿನ ನಿಮಗೆ ತಪ್ಪಿತಸ್ತರೆಂದೂ ಯಾರೂ ಹೇಳುವದಿಲ್ಲ. ಆದರೆ ಶ್ರಾವಣ ಮಾಸದಲ್ಲಿ ಅವೆಲ್ಲ ಬಂದ್ .

ಆದರೆ ದುಬೈನಲ್ಲಿ ಹಾಗಲ್ಲ, ಸಸ್ಯಾಹಾರಿ ಹೊಟೆಲ್‌ಗಳನ್ನು ಹುಡುಕಿಕೊಂಡು ಹೋಗಬೇಕು. ಬರ್-ದುಬೈನಲ್ಲಿ ಮಾತ್ರ ಸಾಕಷ್ಟು ಉಡುಪಿ ಸ್ಟೈಲ್‌ನ ಹೋಟೆಲ್‌ ಗಳಿದ್ದು, ಆವುಗಳಲ್ಲಿ ಶಿವಳ್ಳಿ ಬ್ರಾಹ್ಮಣರ ಇಂಡಿಯಾ ಹೋಟೆಲ್ ತುಂಬಾ ಫೇಮಸ್ಸು. ಶ್ರಾವಣ ಮಾಸದಲ್ಲಿ ಅದರಲ್ಲೂ ವಿಶೇಷವಾಗಿ ಸೋಮವಾರ, ಶುಕ್ರವಾರ, ಶನಿವಾರ  ಗದ್ದಲವೋ ಗದ್ದಲ. ಉದ್ಯಮಿಗಳಿಂದ ಹಿಡಿದು, ಮೇಸ್ತ್ರೀ ತನಕ ಎಲ್ಲರೂ ಆ ಹೋಟೆಲ್‌ನ ತಿನಿಸುಗಳಿಗಾಗಿ ಕಾಯುವ ವರೇ, ಅಲ್ಲಿಯೇ ಸಮೀಪ ದೇವಸ್ಥಾನ ಇರುವದರಿಂದ, ನಾವೆಲ್ಲ ಬೆಳಿಗ್ಗೆಯೇ ಸ್ನಾನ ಮಾಡಿ, ದೇವರ ದರ್ಶನ ಮಾಡಿದ ನಂತರವೇ ಇಂಡಿಯಾ ಹೋಟೆಲ್‌ನಲ್ಲಿ ತಿಂಡಿ-ತಿನಿಸುಗಳಿಗಾಗಿ ಪ್ರವೇಶಿಸುವದು. ನಂತರ ಮಾಮೂಲಿ ಉದ್ಯೋಗದಲ್ಲಿ ಧ್ಯಾನಸಕ್ತರು. ದುಬೈನಲ್ಲಿ ದೇವಸ್ಥಾನಗಳು ಕೇವಲ ಎರಡೇ ಇರುವದರಿಂದ ವಿಪರೀತ ಜನಸಂದಣಿಯೂ ಇರುತ್ತದೆ.

ಅದರಲ್ಲಿ ಶ್ರಾವಣ ಮಾಸ ಅಂದಾಗ ವಿಶೇಷವಾಗಿ ಅಲ್ಲಿ ಮಹಿಳೆಯರದೇ ಪಾರುಪತ್ಯ. ಗಂಡಸರ ಸಾಲು ಚಿಕ್ಕದಿದ್ದರೆ, ಹೆಂಗಳೆಯರ ಸಾಲು ಉದ್ದವೋ ಉದ್ದ, ತಾಯಿಯ ಮಾತು ಮೀರುವಂತಿಲ್ಲ. ಮೀನು, ಮಾಂಸ ತಿನ್ನುವಂತಿಲ್ಲ. ಆ ಒಂದು ತಿಂಗಳಲ್ಲಿ ಎಂಥಾ ಮಾಂಸಾಹಾರಿ ಗಳು ಕೂಡ ಸಸ್ಯಹಾರಿಗಳಾಗಿ ಪರಿವರ್ತಿತರಾಗುತ್ತಾರೆ. ದುಬೈನಂತ ವಿವಿಧ ದೇಶಗಳ ಪಕ್ಕಾ ಮಾಂಸಾಹಾರಿ ನಗರ ಕೂಡ, ಶ್ರಾವಣ ಮಾಸಗಳಿಗಾಗಿ ಸಸ್ಯಾಹಾರಿ ನಗರವಾಗಿದೆಯೋ ಅಂತ ಭಾಸವಾಗುತ್ತದೆ. ಒಟ್ಟಾರೆ ತಾಯಿಯ ಮಾತನ್ನು ಮೀರದೇ, 4 ವರ್ಷಗಳ ತನಕ ಶ್ರಾವಣ ಮಾಸದಲ್ಲಿ ಪಕ್ಕಾ ಸಸ್ಯಾಹಾರಿಯಾಗಿ ಇದ್ದದ್ದು ಇಂದಿಗೂ ನೆನಪಿನಲ್ಲಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT