`ಸ್ಮೈಲ್ ಪ್ಲೀಸ್, ಸೇ ಚೀಸ್' ಅಂತ ಹೇಳೋದ್ನ ಒಂದೇ ಸಮನೆ ಕೇಳಿಸ್ಕೊಂಡು ಸಾಕಾಗ್ಹೋಗಿದೆ. ನಾನು ಕಾಲೇಜ್‌ನ `ಸ್ಮೈಲ್ ಕ್ವೀನ್' ಕಾಂಟೆಸ್ಟ್‌ನಲ್ಲಿ ಸೆಲೆಕ್ಟ್ ಆಗಿದ್ದೇ ತಪ್ಪಾಗ್ಬಿಟ್ಟಿದೆ.
ನೋಡಮ್ಮೋ, ಹೀಗೇ ನಗ್ಬೇಕು ಹಾಗೇ ನಗ್ಬೇಕು, ಹಲ್ಲು ತೋರಿಸ್ಬೇಕು ಅನ್ನೋದಲ್ದೆ ಕಣ್ಣಲ್ಲೂ ನಗೋದು ಹೇಗೆ ಅಂತ ಹೇಳ್ಕೊಟ್ರು. ಕನ್ನಡಿ ಮುಂದೆ ನಿಂತ್ಕೊಂಡೋ, ಇಲ್ಲ, ಮನೇಲಿ ನಿಮ್ಮ ತಾಯೀನ ಮುಂದೆ ಕೂಡುಸ್ಕೊಂಡೋ ಪ್ರಾಕ್ಟೀಸ್ ಮಾಡು ಅಂತ ಬೇರೆ ಹೇಳಿದ್ದಾರೆ.
ಮುಂದಿನ್ ವಾರ ಫೈನಲ್ ಫೋಟೊ ಶೂಟ್ ಕಣಮ್ಮೋ. ಅಲ್ಲೆ ತನಕ ಹಲ್ಗೆ ತೊಂದ್ರೆ ಆಗೋದ್ನ ತಿಂದು ಕುಡ್ದು ಮಾಡ್ಬೇಡ ಅಂತ ಸಜೆಷನ್ ಬೇರೆ! ಬಲವಂತ್ವಾಗಿ ನಗೋದು ಇದ್ಯಲ್ಲಾ, ಅದು ಎಷ್ಟು ಕಷ್ಟ ಗೊತ್ತಾ?' ಎಂದು ಕಾಲೇಜ್‌ನಿಂದ ಮುಖ ದುಮ್ಮಿಸಿಕೊಂಡು ಬಂದು ಎಲ್ಲರ ಮೇಲೂ ಹರಿಹಾಯ್ದ ಮೃದುವಿನೆಡೆಗೆ ಯಾವುದೋ ಹಾಸ್ಯ ನಾಟಕವನ್ನು ನೋಡುತ್ತಾ ನಗೆಗಡಲಿನಲ್ಲಿ ಮುಳುಗಿದ್ದ ನಮ್ಮೆಲ್ಲರ ಅಚ್ಚರಿಯ ದೃಷ್ಟಿ ಹೊರಳಿತು.
`ಪುಟ್ಟೀ, ನೀನು ನಗೋದು ಎಲ್ರಿಗೂ ಯಾವಾಗಿಷ್ಟ ಆಗುತ್ತೆ ಗೊತ್ತಾ? ನಿನ್ನ ಹಲ್ಗಳು ಮುತ್ನಂತೆ ಹೊಳೀತಿದ್ದಾಗ. ಮೇ 20ರಿಂದ ಜೂನ್ 20ರವರೆಗೆ `ಮೌಖಿಕ ಸ್ವಚ್ಛತೆಯ ಮಾಸ'ವನ್ನು ಆಚರಿಸ್ತಾ ಇದ್ದೀವಿ ನಾವು, ಅಂದ್ರೆ ದಂತವೈದ್ಯರು. ಈ ಬ್ರೋಷರ್ಸ್‌ನಲ್ಲಿ ಒಂದು ಸ್ವಚ್ಛವಾದ ನಗುವಿಗೆ ಬೇಕಾದ ಹಲ್ಲುಗಳ್ನ ಹೇಗೆ ಉಜ್ಜೋದು, ಫ್ಲಾಸಿಂಗ್ ಮಾಡೋದು ಅನ್ನೋದಷ್ಟೇ ಅಲ್ದೆ ಇಡೀ ಬಾಯಿಯ ಆರೋಗ್ಯದ ಬಗ್ಗೆ ವಿವರ‌್ಸಿದಾರೆ. ನೋಡು, ಏನಾದ್ರೂ ಸಹಾಯ ಆಗತ್ತಾ ನಿನ್ನ ಫೋಟೊ ಶೂಟ್‌ಗೆ' ಎಂದರು ಮೃದುವಿನ ದಂತವೈದ್ಯ ತಂದೆ.
ಈ ಮಾತಿಗೆ ಮೃದುವಿನ ಅಜ್ಜಿ ತಮ್ಮ ಬೊಚ್ಚುಬಾಯಿಯ ನಗೆ ನಗುತ್ತಾ `ಅಯ್ಯೋ ದೇವ್ರೇ, ಏನೇ ಮೃದು ಇದು, ನಗಕ್ಕೂ ಟ್ರೇನಿಂಗೇನೇ! ಹಳೇ ಪಿಕ್ಚರ್ ಹಾಡು ಕೇಳಿಲ್ವಾ `ಮೌನವೇ ಆಭರಣ, ಮುಗುಳ್ನಗೆ ಶಶಿಕಿರಣ, ನೋಟವೇ ಹೂ ಬಾಣ, ಚೆಲುವಿನಾ ಕವನ' ಅಂತ. ಹೆಣ್ಣು ಮಕ್ಳು ಮುದ್ದಾಗಿ ಕಾಣ್ಸೋದು ಜೋರಾಗಿ ಹಲ್ಬಿಟ್ಕೊಂಡು ಮಾತಾಡ್ದೇ/ನಗ್ದೇ ಇದ್ದಾಗ್ಲೇ. ಅದು ಬಿಟ್ಟು ಹೇಗೆ ನಗೋದು ಅಂತ ಹೇಳುಸ್ಕೋ ಬೇಕೇನೇ?' ಎಂದು ಕೇಳುತ್ತಿದ್ದಂತೇ ಅವಳ ತಾತ `ಹ್ಞಾ, ಪುಟ್ಟೀ, ಸಹಜ್ವಾಗಿ ನಗ್ಬೇಕು. ಡಿ.ವಿ.ಜಿ.ಯವ್ರ ಹೇಳಿಲ್ವೇ ನಗುವುದು ಸಹಜ ಧರ್ಮ ಅಂತ. ನಾವೂ ಸಂತೋಷವಾಗಿರ‌್ಬೇಕು, ಇನ್ನೊಬ್ರನ್ನೂ ಸಂತೋಷವಾಗಿ ಇಡ್ಬೇಕು ಗೊತ್ತಾಯ್ತ' ಎಂದು ಅವಳಿಗೆ ಸಮಾಧಾನ ಹೇಳಲು ಪ್ರಯತ್ನಿಸಿದರು.
ಅವಳ ಅಕ್ಕ ಧವಳ `ಅಜ್ಜಿ- ತಾತ ನಿಮ್ಗೇನೂ ಗೊತ್ತಿಲ್ಲ. ನಗು ಅನ್ನೋದು ಈಗ ವೃತ್ತಿ ಗೊತ್ತಾ? ಕೆಲಸಕ್ಕೆ ಹೋಗೋರ‌್ಗೆಲ್ಲ ಒಳ್ಳೆ ನಗು ನಗೋಕೂ ಬರ‌್ಬೇಕು. ಬಾಸ್‌ಗಳು, ಟೀಂ ಲೀಡರ್ಸ್‌ಗಳು ಅವ್ರ ಕೈಕೆಳ್ಗೆ ಕೆಲ್ಸ ಮಾಡೋರ‌್ಮುಂದೆ ಯಾವಾಗ್ಲೂ ನಗು ಮುಖ ಹಾಕ್ಕೊಂಡು ಓಡಾಡ್ತಿರ‌್ಬೇಕು! ಪ್ರಾಜೆಕ್ಟ್‌ನಲ್ಲಿ ಹೆಚ್ಚುಕಡಿಮೆ ಆದ್ರೂ ಬಾಕಿ ಅವ್ರಿಗೆ ಅದು ಗೊತ್ತಾಗ್ಬಾರ‌್ದು ನೋಡಿ, ಅದಕ್ಕೆ ಪೆಚ್ಚುಮೋರೆ ಹಾಕೊಳ್ದೆ ಕಾನ್‌ಫಿಡೆಂಟ್ ಆಗಿ ನಗ್ತಾನಗ್ತಾ ಓಡಾಡ್ಬೇಕು. ಮನೇಲಿ ನಗೋ ಥರ ನಗೋದಲ್ಲ, ನಗೋಕೂ ಒಂದು ರೀತಿ ನೀತಿ ಇದೆ' ಎಂದು ತನ್ನ `ಪ್ರಾಜೆಕ್ಟ್ ಮ್ಯೋನೇಜರ್' ಹುದ್ದೆಯಲ್ಲಿ ನಗುವಿನ ಮಹತ್ವದ ಬಗ್ಗೆ ಒಂದು ಪುಟ್ಟ ಭಾಷಣವನ್ನೇ ಕೊಟ್ಟು ಬಿಟ್ಟಳು.
`ಎಲ್ರಿಗೂ ಹೃದಯ ಇರುತ್ತೆ, ಆದ್ರೆ ಎಲ್ರೂ ಹೃದಯವಂತರಾಗೋಲ್ಲ ಮೃದು. ಹಾಗೇ, ಹಲ್ಲಿದ್ದವ್ರೆಲ್ಲ ಒಳ್ಳೆ ನಗು ನಗ್ತಾರೆ ಅಂತಾ ಏನೂ ಇಲ್ಲ. ಹಾಸ್ಯ ಅನ್ನೋದು ಒಂದು ಆಂತರಿಕ ಕ್ರಿಯೆ. ಅದು ನಗುವಾಗಿ ಬಾಹ್ಯದಲ್ಲಿ ಗೊತ್ತಾಗುತ್ತೆ ಅಷ್ಟೆ. ಮುಕ್ತವಾಗಿ ನಗ್ಬೇಕು ಅಂದ್ರೆ ಅದಕ್ಕೆ ಒಳ್ಳೆ ಮನಸ್ಸು ಬೇಕು, ಹೃದಯವಂತಿಕೆ ಬೇಕು' ಎಂದರು `ಹಾಸ್ಯರಸ ಸಾಮ್ರೋಜ್ಞ' ಬಿರುದು ಪಡೆದಿರುವ ನಾಟಕಕಾರರಾದ ಮೃದುವಿನ ಸೋದರಮಾವ.
`ನಮ್ಮನ್ನ ಎಲ್ರೂ ನಾಟಕ್ದೋರು ಅಂತ ಕರೀತಾರೆ. ಈಗ್ಲೇ ಈ ಪಿಕ್ಚರಲ್ಲೇ ನೋಡುದ್ರಲ್ಲ ಹೇಗೆ ಆ ಆರ್ಟಿಸ್ಟು `ತಾನಲ್ಲದ' ಪಾತ್ರ ಹಾಕಿ ನಗ್ಸುದ್ರು ಅಂತ. ಬೆಳಿಗ್ಗೆ ಎದ್ದಾಗ್ಲಿಂದ ನಗು ತರ‌್ಸೋ ಸನ್ನಿವೇಶಗಳು ಬರ‌್ತಾನೇ ಇರುತ್ವೆ. ಕೆಲವು ಸತಿ ಬರೀ ತುಟಿ ಅರಳುಸ್ತೀವಿ, ಕೆಲವು ಸತಿ ಹೊಟ್ಟೆ ಹುಣ್ಣಾಗೋ ಹಂಗೆ ಬಿದ್ದೂ ಬಿದ್ದೂ ನಗ್ತೀವಿ. ನಗು ಅನ್ನೋದು ಒಂದು `ಕಾರಣ'ಕ್ಕೆ ಉಂಟಾಗೋ `ಪ್ರತಿಕ್ರಿಯೆ'.
ಆ ಪ್ರತಿಕ್ರಿಯೆ ತುಟಿ, ಕೆನ್ನೆಗಳು, ಕಣ್ಗಳು, ಭುಜ... ಒಟ್ಟಿನಲ್ಲಿ ಮುಖಾನೇ ಅಲ್ದೆ ದೇಹದ ಬೇರೆ ಅಂಗಾಗಗಳಲ್ಲೂ ಪ್ರತಿಕ್ರಿಯೆ ಉಂಟು ಮಾಡುತ್ತೆ. ಇದನ್ನೇ ಭರತ 'ಭಾವ, ವಿಭಾವ, ಅನುಭಾವ' ಅಂತ ಕರ‌್ದು, `ನವರಸ'ಗಳಲ್ಲಿ ಅವುಗಳ ಪಾತ್ರ ಹೇಗೆ ಅಂತ `ನಾಟ್ಯಶಾಸ್ತ್ರ' ದಲ್ಲಿ ಹೇಳಿದಾನೆ. ಕಲಾಕಾರರ‌್ಗೆ ನಾಟ್ಯಶಾಸ್ತ್ರ ಮತ್ತೆ ಭಾರತೀಯ ಸೌಂದರ್ಯ ಶಾಸ್ತ್ರದಲ್ಲಿ ವಿವರಿಸಿರೋ `ರಸ ವಿವರಣೆ'ಗಳು (ರಸ ಥಿಯರಿ) ತುಂಬಾ ಪ್ರಧಾನ.
ನಾಟಕದಲ್ಲಿ ಅಭಿನಯಿಸೋರ‌್ಗೆ ಕೇವಲ ಪುಸ್ತಕದ ಜ್ಞಾನ ಇದ್ರೆ ಸಾಲ್ದಮ್ಮೋ, ನಿಜ ಜೀವನದಲ್ಲಿ ಭೇಟಿ ಮಾಡೋ ಮನುಷ್ಯರಿಂದಲೂ ಕಲೀಬೇಕಾಗುತ್ತೆ' ಎಂದು ಹೇಳುತ್ತಾ `ಹಾಸ್ಯರಸ'ದ ಉತ್ಪತ್ತಿ, ಕ್ರಿಯೆಗಳನ್ನು ವಿವರಿಸಿದರು.
`ಮನುಷ್ಯರೆಲ್ರೂ ಒಂದೇ ತರ ನಗ್ತಾರೆ ಅಂದ್ಕೋಬೇಡ. ಅವ್ರಗಳ ಗುಣ/ ಸ್ವಭಾವಗಳಂತೆ ಅವರುಗಳ ನಗು ಇರುತ್ತೆ' ಎಂದು ಹೇಳುತ್ತಾ ಮನುಷ್ಯರಲ್ಲಿರುವ ಗುಣಗಳು/ ನಗುವಿನ ಪ್ರಕಾರಗಳು, ಅವುಗಳನ್ನು ಬಹಿರ್ಪಡಿಸಬೇಕಾದ ರೀತಿಗಳನ್ನು ಅವರು ವಿವರಿಸುತ್ತಾ ಹೋದರು. `ನೋಡಮ್ಮೋ ಮೃದು, ನಾನು ವಿವರಿಸ್ತಾ ಹಾಗೇ ಪ್ರಾಕ್ಟಿಕಲ್ ಆಗಿ ತೋರಿಸ್ತಾ ಹೋಗ್ತೀನಿ. ನೀನು ಫೋಟೊ ಶೂಟ್ಗೆ ಯಾವ್ದ ಸರಿಹೋಗುತ್ತೋ ಅದ್ನ ಸರಿಯಾಗಿ ಆರಿಸ್ಕೊ.
ಉತ್ತಮ ಪುರುಷರದ್ದು- ದೇವ್ರಗಳ ಚಿತ್ರಪಟದಲ್ಲಿ ಕಾಣುವಂತದ್ದು `ಸ್ಮಿತ ಹಾಸ' (ಮುಗುಳ್ನಗೆ) ಹಾಗೂ `ಹಸಿತ ಹಾಸ' (ಸೂಸು ನಗೆ) ಪ್ರಕಾರದವು. ಇಲ್ಲಿ ಕೆನ್ನೆಗಳನ್ನ ಕಿಂಚಿತ್ತಾಗಿ ಅರಳ್ಸಿ, ತುದಿಗಣ್ಣಿನ ದೃಷ್ಟಿ, ಹಲ್ಲುಗಳ್ನ ಮಂದ್ವಾಗಿ ತೋರ‌್ಸಿ, ಹುಬ್ಬಗಳನ್ನ ಸಹಜವಾಗಿ ಇಟ್ಕೋಬೇಕು.
ಮಧ್ಯಮ ಪುರುಷರದ್ದು- ಕಣ್ಣು, ಕೆನ್ನೆಗಳನ್ನ ಒಳಗೆ ಸೇರಿಸಿಕೊಂಡು, ಶಬ್ದ ಮಾಡ್ಕೊಂಡು ನಗೋದು `ವಿಹಸಿತ ಹಾಸ'. ಹಾಗೇ, ಮೂಗನ್ನು ಅರಳಿಸಿ, ವಕ್ರದೃಷ್ಟೀಲಿ ನೋಡ್ತಾ, ಭುಜ, ತಲೆಗಳ್ನ ಅಲ್ಲಾಡಿಸ್ಕೊಂಡು ನಗೋದು `ಉಪಹಸಿತ ಹಾಸ'.
ಅಧಮ ಪುರುಷರದ್ದು- ನಗ್ಬಾರದ ಕಡೆ ನಗೋದು. ತಲೆ/ ಭುಜ ಅಲ್ಲಾಡ್ಸೋದು, ಮತ್ತೆ ಕಣ್ಣಲ್ಲಿ ನೀರು ತರುಸ್ಕೊಳ್ಳೋದನ್ನ `ಅಪಹಸಿತ ಹಾಸ' ಅಂತಾರೆ. ಇವುಗಳ ಜೊತೆ ಗಟ್ಟಿ ಸ್ವರದಲ್ಲಿ ಕೂಗ್ತಾ, ಸೊಂಟ ಹಿಡ್ಕೊಂಡು ನಗೋದು `ಅತಿಹಸಿತ ಹಾಸ'.
`ಪುಟ್ಟೀ, ಇಷ್ಟೇ ಅಲ್ದೆ, ಬೇರೆ ಅವ್ರನ್ನ ಆಡ್ಕೋಳೋದು, ಕುಚೇಷ್ಟೆ, ಅಸಂಬದ್ಧವಾಗಿ ಮಾತಾಡೋದು, ಮೂರ್ಖತನಾನ ತೋರ‌್ಸೋದು ಕೂಡಾ ಹಾಸ್ಯ ರಸಾನ ಉತ್ಪತ್ತಿ ಮಾಡುತ್ತೆ. ನಿಮ್ಮ ತಾತ ಹೇಳಿದ್ರಲ್ಲಾ, ನಗೋದು ನಿನ್ನ ಗುಣ. ಹಾಗೆಯೇ ಇತರರನ್ನೂ ನಗ್ಸೋದು ನಿನ್ನ ಗುರಿ ಆಗ್ಬೇಕು. ನಿಜವಾಗ್ಲೂ ಹೇಳ್ಬೇಕೂಂದ್ರೆ ಬೆಳಗ್ಗಿಂದ ರಾತ್ರೀವರ‌್ಗೂ ಒಂದಿಲ್ಲೊಂದು ಕಾರಣಕ್ಕೆ ನಾವು ನಗ್ತಾ ಇರ‌್ತೀವಿ, ಇಲ್ಲಾ ನಗುಸ್ತಾ ಇರ‌್ತೀವಿ, ಹಾಗೇನೂ ಇಲ್ಲಾ ಅಂದ್ರೂ ನಗೋರ‌್ನ ನೋಡ್ತಾ ಅಂತೂ ಇರ‌್ತೀವಿ.
ನಗು ಅನ್ನೋದು ಚೊಕ್ಕವಾಗಿರ‌್ಬೇಕು ಅಂದ್ರೆ ಆಂತರ್ಯದಲ್ಲಿ ನಗ್ಬೇಕು/ ಸಂತೋಷವಾಗಿ ಇರ‌್ಬೇಕು ಹಾಗೇ ಸಕಾರಾತ್ಮಕ ಚಿಂತನೆ ಉಳ್ಳವರಾಗಿರ‌್ಬೇಕು. ಅದನ್ನೇ ಅಜ್ಜಿ ಆವಾಗ ಹೇಳಿದ್ದು `ನಗು ನಿನ್ನ ನಡೆಯನ್ನ ಹೇಳುತ್ತೆ' ಅಂತ. ನೀನೇನೂ ಯೋಚ್ನೆ ಮಾಡ್ಬೇಡ. ಫೈನಲ್ ಫೋಟೊ ಶೂಟ್ ದಿನ ಯಾವುದಾದ್ರೂ ಆರೋಗ್ಯಕರವಾದ ಜೋಕ್‌ನ ಜ್ಞಾಪುಸ್ಕೋ. ಆಗ ತಂತಾನೇ ಮುಖ ಅರಳುತ್ತೆ. ಅದರ ಜೊತೆಗೆ ನಿಮ್ಮಪ್ಪ ಹೇಳಿದ್ಹಾಗೆ ಚೆನ್ನಾಗಿ ಹಲ್ಲನ್ನ ಉಜ್ಜಿ, ಸ್ನಾನ ಮಾಡ್ಕೊಂಡು, ನೀಟಾಗಿ ಡ್ರೆಸ್ ಮಾಡ್ಕೊಂಡು ಹೋಗು.' ಎಂದು ಅವಳನ್ನು ಛೇಡಿಸುವ `ತುಂಟ ನಗೆ' ನಗುತ್ತಾ ಕುಳಿತುಕೊಂಡರು.
ಅಲ್ಲೆವರೆಗೂ ಒಳ್ಳೆಯ ನಿದ್ದೆ ಮಾಡುತ್ತಿದ್ದ ನನ್ನ ನಾದಿನಿಯ ಮೂರು ತಿಂಗಳ ಮಗು ಪಿಳಿಪಿಳಿ ಕಣ್ಣು ಬಿಡುತ್ತಾ ತನಗೇನೋ ಅರ್ಥವಾದಂತೆ ಗುಳಿ ಬೀಳುವ ಕೆನ್ನೆಯನ್ನಗಲಿಸಿ `ಮುಗ್ಧ ನಗೆ' ಬೀರಿತು. ಅದನ್ನು ನೋಡಿ ನನ್ನ ನಾದಿನಿ `ವಾತ್ಸಲ್ಯದ ನಗೆ' ನಗುತ್ತಾ, `ನೋಡೇ ಮೃದು ಇವಳ್ನೇ ಬೇಕಾದ್ರೆ ನಿನ್ನ ಸ್ಮೈಲ್ ಟ್ರೈನರ್ ಆಗಿ ಇಟ್ಕೋ' ಎಂದಳು. ಆ ಮಾತನ್ನು ಕೇಳಿದ ನನ್ನ ಮಗಳ ಮುಖದಲ್ಲಿ ಆ ದಿನದ ಒತ್ತಡವನ್ನು ಮರೆಸುವ, ಬಲವಂತವಲ್ಲದ, ಹಾರ್ದಿಕವಾದ `ಮುಕ್ತ ನಗು' ಮೂಡಿಬಂತು. ಅವಳಿಂದ ಮನೆಯಲ್ಲಿ ಇದ್ದವರೆಲ್ಲರಿಗೂ ನಗುವೆಂಬ `ಸೋಂಕು ರೋಗ' ಹಲವಾರು ನಿಮಿಷಗಳವರೆಗೂ ತಗುಲಿಕೊಂಡೇ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.