ADVERTISEMENT

ನಮ್ಮೂರ ಊಟ: ಮೈಸೂರ್ ಪಾಕ್

ಭಾರತೀ ಕಾಸರಗೋಡು
Published 24 ಜನವರಿ 2014, 19:30 IST
Last Updated 24 ಜನವರಿ 2014, 19:30 IST

ಸಿಹಿಸಿಹಿ ಮೈಸೂರು ಪಾಕ್‌ ಸವಿಯಲು ಯಾರಿಗಿಷ್ಟವಿಲ್ಲ. ಆದರೆ ಉಷಾಕಿರಣ ಅವರು ಕಳೆದ ಬಾರಿ (11.01.2014)ನಮ್ಮೂರ ಊಟ ವಿಭಾಗದಲ್ಲಿ ನೀಡಲಾದ ವಿಧಾನಕ್ಕಿಂತಲೂ ಸರಳವಾಗಿ ಮೈಸೂರು ಪಾಕ್‌ ತಯಾರಿಸಬಹುದು. ಶ್ರಮವೂ ಕಡಿಮೆ. ಸಮಯವೂ ಕಡಿಮೆ. ಸ್ವಾದಿಷ್ಟ ಮಾತ್ರ ಒಂದಿನಿತೂ ಕಡಿಮೆ ಇಲ್ಲ. ಹೀಗಿಗೆ ಮಾಡಿ ನೋಡಿ ಮೈಸೂರ್ ಪಾಕ್.

ಸಾಮಗ್ರಿ: ಕಡಲೆಹಿಟ್ಟು ನೀರು ಒಂದು ಕಪ್, ಸಕ್ಕರೆ ತುಪ್ಪ ಎರಡು ಕಪ್‌.
ವಿಧಾನ: ಬಾಣಲೆಯಲ್ಲಿ ಕಡಲೆಹಿಟ್ಟನ್ನು ಹಾಕಿ ಕಮ್ಮಗೆ ಹುರಿದು ಪಕ್ಕಕ್ಕಿಡಿ, ಬಟ್ಟೆಯಿಂದ ಬಾಣೆಲೆಯನ್ನು ಒರೆಸಿ ಮತ್ತೆ ಒಲೆಯ ಮೇಲಿಟ್ಟು ಸಕ್ಕರೆ ಮತ್ತು ನೀರನ್ನು ಹಾಕಿ. ಒಂದು ಕಾಳೂ ಉಳಿಯದಂತೆ ಎಲ್ಲ ಸಕ್ಕರೆ ಕರಗಿ, ಒಂದೆರಡು ಕುದಿ ಬರಲಿ. ಇದಕ್ಕೀಗ ಕರಗಿಸಿಟ್ಟುಕೊಂಡ ತುಪ್ಪ ಬೆರೆಸಿ. ಕೆಲವೇ ಸೆಕೆಂಡುಗಳಲ್ಲಿ ಪಾಕ ಮತ್ತು ತುಪ್ಪ ಸೇರಿಕೊಂಡು ಬಾಣಲೆ ತುಂಬ ನೊರೆ ಉಕ್ಕಿ ಬರುತ್ತದೆ. ಈ ಮಿಶ್ರಣಕ್ಕೆ ಹುರಿದ ಕಡಲೆಹಿಟ್ಟನ್ನು ಒಟ್ಟಿಗೆ ಹಾಕಿ ಕೈ ಬಿಡದೆ ಕಲಕುತ್ತಿರಿ. ಮಿಶ್ರಣ ಹದವಾಗಿ ತಳಬಿಡಲು ಆರಂಭಿಸುತ್ತದೆ. 3–4 ನಿಮಿಷದ ನಂತರ ತೆಗೆದು ತುಪ್ಪ ಸವರಿದ ತಟ್ಟೆಗೆ ಸುರಿದು, ಒಂದು ಕಪ್‌ನ ಹಿಂಭಾಗಕ್ಕೆ ತುಪ್ಪ ಸವರಿ ಲೆವಲ್‌ ಮಾಡಿ ಕತ್ತರಿಸಿ ಇದು ಮೃದು ಮೈಸೂರು ಪಾಕು. ಸ್ವಲ್ಪ ಗಟ್ಟಿಯಾಗಿ ಮತ್ತು ಗೂಡುಗಳು ಬಿಟ್ಟುಕೊಂಡ ಮೈಸೂರು ಪಾಕ್‌ ಬೇಕೆಂದರೆ, ತಳಬಿಟ್ಟಮೇಲೆ 7–8 ನಿಮಿಷ ಕೆದಕಬೇಕು. ಮೈಸೂರು ಪಾಕು ಹಲ್ವದ ಹಾಗೆ ಬಾಣೆಲೆ ಮಧ್ಯೆ ಕೂತುಕೊಳ್ಳುತ್ತದೆ. ಒಂದು ಕೈಚಳಕದಲ್ಲಿ ಥಟ್ಟನೆ ತಟ್ಟೆಗೆ ಹಾಕಬೇಕು. ಇಡೀ ಮುದ್ದೆ ಒಟ್ಟಿಗೆ ಬಿದ್ದುಬಿಡುತ್ತದೆ. ಅದನ್ನು ಅಲುಗಾಡಿಸಬಾರದು. ತನ್ನಂತೆ ಗೂಡುಬಿಟ್ಟುಕೊಳ್ಳುತ್ತದೆ. ಸುರಿದ 1–2 ನಿಮಿಷದ ನಂತರ ಕತ್ತರಿಸಿ.

ಸೂಚನೆ: ಇಡೀ ತಯಾರಿಕೆಯನ್ನು ಆದಷ್ಟೂ ಕಡಿಮೆ ಉರಿಯಲ್ಲಿಯೇ ನಿರ್ವಹಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.