ADVERTISEMENT

ನಾಗರ ಪಂಚಮಿಗೆ ಬಗೆಬಗೆ ಖಾದ್ಯ

ನಮ್ಮೂರ ಊಟ

ಸೀತಾ ಎಸ್.ನಾರಾಯಣ
Published 14 ಆಗಸ್ಟ್ 2015, 19:56 IST
Last Updated 14 ಆಗಸ್ಟ್ 2015, 19:56 IST

ಸಿಹಿಕಡುಬು
ಸಾಮಗ್ರಿ:
1 ಲೋಟ ಅಕ್ಕಿಹಿಟ್ಟು,  ಎರಡೂವರೆ ಲೋಟ ನೀರು, ಚಿಟಿಕೆ ಉಪ್ಪು. 1 ಲೋಟ ಕಾಯಿತುರಿ. ಅರ್ಧ ಲೋಟ ಬೆಲ್ಲದಪುಡಿ, ಸ್ವಲ್ಪ ಏಲಕ್ಕಿಪುಡಿ.

ವಿಧಾನ: ಬಾಣಲೆಗೆ ಕಾಯಿತುರಿ ಬೆಲ್ಲ ಸೇರಿಸಿ ಒಲೆಯ ಮೇಲಿಟ್ಟು ಕೈಯಾಡಿಸಿ. ಬೆಲ್ಲ ಕರಗಿ ಚೆನ್ನಾಗಿ ಹೊಂದಿಕೊಂಡ ಮೇಲೆ ಏಲಕ್ಕಿಪುಡಿ ಹಾಕಿ ಕೈಯಾಡಿಸಿ ಒಲೆ ಆರಿಸಿ. ತಣ್ಣಗಾಗಲು ಬಿಡಿ. ಇನ್ನೊಂದು ಬಾಣಲೆಗೆ ನೀರು ಹಾಕಿ 2 ಚಮಚ ಅಕ್ಕಿಹಿಟ್ಟು ಕದಡಿ ಕುದಿಯಲು ಇಡಿ. ಚೆನ್ನಾಗಿ ಕುದಿ ಬಂದ ಮೇಲೆ ಉಪ್ಪು ಉಳಿದ ಅಕ್ಕಿಹಿಟ್ಟು ಹಾಕಿ 5 ನಿಮಿಷ ಬೇಯಲು ಬಿಡಿ. ನಂತರ ಗಂಟಿಲ್ಲದಂತೆ ಚೆನ್ನಾಗಿ ಕೈಯಾಡಿಸಿ. ಗಟ್ಟಿ ಎನಿಸಿದರೆ ನೀರು ಚಿಮುಕಿಸಿ. ಸ್ಟೌ ಆರಿಸಿ. ಆರಿದ ಮೇಲೆ ಎಣ್ಣೆ ಕೈ ಮಾಡಿಕೊಂಡು ಮೃದುವಾಗಿ ಹಪ್ಪಳದ ಹಿಟ್ಟಿನಂತೆ ಚೆನ್ನಾಗಿ ನಾದಿಕೊಳ್ಳಿ. ಉದ್ದುದ್ದಕ್ಕೆ ಉಂಡೆ ಮಾಡಿ, ಅಕ್ಕಿಹಿಟ್ಟು ಹಾಕಿ ಉದ್ದದ ಹಾಳೆ ಲಟ್ಟಿಸಿಕೊಳ್ಳಿ. ಅಥವಾ ಪ್ರೆಸ್ಸರ್ ಇದ್ದರೆ ಪ್ಲಾಸ್ಟಿಕ್ ಹಾಳೆಗಳ ನಡುವೆ ಇಟ್ಟು ಪ್ರೆಸ್ ಮಾಡಿ, ಹಾಳೆಗಳನ್ನು ತಯಾರಿಸಿಕೊಂಡು ಅದರಲ್ಲಿ ಉದ್ದಕ್ಕೂ ತಯಾರಿಸಿಟ್ಟುಕೊಂಡ ಹೂರಣ ಇಟ್ಟು ಮಡಿಸಿ. ಬಾಳೆ ಎಲೆಯ ಮೇಲಿಟ್ಟು ಹಬೆಯಲ್ಲಿ ಇಡ್ಲಿಯಂತೆ 10 ನಿಮಿಷ ಬೇಯಿಸಿ. 5ರಿಂದ 6ನಿಮಿಷ ಬಿಟ್ಟು ತೆಗೆದು ತುಪ್ಪದೊಂದಿಗೆ ಸವಿಯಿರಿ

ಕರಿಗಡಬು
ಸಾಮಗ್ರಿ:
ಕಣಕಕ್ಕೆ - ಮೈದಾ 1 ಲೋಟ, ಚಿರೋಟಿ ರವೆ ಕಾಲು ಲೋಟ, ತುಪ್ಪ 1ಟೀ ಚಮಚ, ಉಪ್ಪು ಚಿಟಿಕೆ, ಕರಿಯಲು ಎಣ್ಣೆ. ಹೂರಣಕ್ಕೆ-1 ಲೋಟ ಕಾಯಿತುರಿ,  ಬೆಲ್ಲದ ಪುಡಿ 1ಲೋಟ, ಏಲಕ್ಕಿ ಪುಡಿ ಸ್ವಲ್ಪ. (1 ಲೋಟ ಒಣಕೊಬ್ಬರಿ, ಸಕ್ಕರೆ ಪುಡಿ. ಹುರಿಗಡಲೆ ಪುಡಿ 2 ಚಮಚ, ಹುರಿದ ಎಳ್ಳು 1 ಚಮಚ, ಹುರಿದ ಗಸಗಸೆ 1 ಚಮಚ, ಈ ಮಿಶ್ರಣದ ಹೂರಣವನ್ನೂ ಮಾಡಬಹುದು]

ವಿಧಾನ: ಮೈದಾ, ರವೆ, ತುಪ್ಪ, ಉಪ್ಪು ಹಾಕಿ ಗಟ್ಟಿಯಾಗಿ ಕಲಸಿ ಚೆನ್ನಾಗಿ ನಾದಿ ನೆನೆಯಲು ಬಿಡಿ. ಕಾಯಿತುರಿ, ಬೆಲ್ಲ ಸೇರಿಸಿ ಒಲೆಯ ಮೇಲಿಟ್ಟು ಬಿಡದೆ ಕೈಯಾಡಿಸುತ್ತಿರಿ. 5 ನಿಮಿಷ ಹುರಿಯಿರಿ. ಏಲಕ್ಕಿ ಬೆರೆಸಿ ಹೂರಣ ತಣ್ಣಗಾಗಲು ಬಿಡಿ. ಕಣಕವನ್ನು  ಮತ್ತೊಮ್ಮೆ ನಾದಿ ಚಿಕ್ಕಚಿಕ್ಕ ಉಂಡೆ ತೆಗೆದುಕೊಂಡು ಉದ್ದಕ್ಕೆ ಹಾಳೆ ಒತ್ತಿಕೊಳ್ಳಿ. ಅದರಲ್ಲಿ ಹೂರಣವಿಟ್ಟು ಮಡಿಸಿ ಹೂರಣ ಹೊರಬರದಂತೆ ಸರಿಯಾಗಿ ಅಂಟಿಸಿ ಅಥವಾ ಅಚ್ಚಿಗೆ ಹಾಕಿ ಒತ್ತಿ ಕಡುಬು ತಯಾರಿಸಿಕೊಂಡು ಕಾದ ಎಣ್ಣೆಗೆ ಹಾಕಿ ಎರಡೂ ಕಡೆ ಹದವಾಗಿ ಕರಿಯಿರಿ. ಭಂಡಾರಕ್ಕೆ- ಎರಡು ಪೂರಿಗಳ ಮಧ್ಯೆ ಹೂರಣವಿಟ್ಟು ಒಂದು ನಾಣ್ಯವನ್ನಿಟ್ಟು ಸುತ್ತಲೂ ಒತ್ತಿ ಅಂಟಿಸಿಕೊಂಡು, ಎಣ್ಣೆಯಲ್ಲಿ ಕರಿಯಿರಿ.

ನುಚ್ಚಿನ ಉಂಡೆ
ಸಾಮಗ್ರಿ:
ಮುಕ್ಕಾಲು ಲೋಟ ತೊಗರಿಬೇಳೆ, ಕಾಲು ಲೋಟ ಹೆಸರುಬೇಳೆ, ಕಾಲು ಲೋಟ ಕಡ್ಲೆಬೇಳೆ, ಹಸಿಮೆಣಸಿನಕಾಯಿ 4-5, ಶುಂಠಿ 2,  ಹೆಚ್ಚಿದ ಕೊತ್ತಂಬರಿ ಸೊಪ್ಪು ಕಾಲು ಕಪ್, ಸಬ್ಬಸಿಗೆ ಸೊಪ್ಪು ಅರ್ಧ ಕಪ್, 4 ಚಮಚ ಕಾಯಿತುರಿ. ರುಚಿಗೆ ಉಪ್ಪು. ನಿಂಬೆರಸ 1 ಚಮಚ. ಒಗ್ಗರಣೆಗೆ 1 ಚಮಚ ಎಣ್ಣೆ ಅರ್ಧ ಚಮಚ ಸಾಸಿವೆ, 1 ಒಣಮೆಣಸಿನಕಾಯಿ ಇಂಗು ಸ್ವಲ್ಪ.

ವಿಧಾನ: ಮೂರೂ ಬೇಳೆಗಳನ್ನು 2-3 ಗಂಟೆ ಕಾಲ ನೀರು ಹಾಕಿ ನೆನೆಸಿಕೊಳ್ಳಿ. ಶುಂಠಿ, ಹಸಿಮೆಣಸು ಹಾಕಿ ತರಿತರಿ ರುಬ್ಬಿಕೊಳ್ಳಿ. ಆ ಮಿಶ್ರಣಕ್ಕೆ ಕೊತ್ತಂಬರಿ, ಸಬ್ಬಸಿಗೆ ಸೊಪ್ಪು, ಉಪು, 2 ಚಮಚ ಕಾಯಿತುರಿ ಹಾಕಿ ಚೆನ್ನಾಗಿ ಕಲಸಿ. ಉಂಡೆಗಳನ್ನು ಮಾಡಿ ಹಬೆಯಲ್ಲಿ 10–12 ನಿಮಿಷ ಬೇಯಿಸಿ. ತಣ್ಣಗಾದ ನಂತರ ತೆಗೆದು ಉಂಡೆಗಳನ್ನು ಪುಡಿ ಮಾಡಿ. ಉಳಿದ ಕಾಯಿತುರಿ ಉಪ್ಪು, ನಿಂಬೆರಸ, ಎಣ್ಣೆ ಸಾಸಿವೆ ಒಣಮೆಣಸಿನ ಇಂಗು ಒಗ್ಗರಣೆ ಮಾಡಿ (ಬೇಕಿದ್ದಲ್ಲಿ ಈರುಳ್ಳಿ ಸಣ್ಣಗೆ ಹೆಚ್ಚಿ ಒಗ್ಗರಣೆಗೆ ಹಾಕಬಹುದು) ಚೆನ್ನಾಗಿ ಕಲಸಿ ಉಂಡೆ ಮಾಡಿದರೆ ತೊಗರಿನುಚ್ಚಿನ ರುಚಿಯಾದ ಉಂಡೆ ಸವಿಯಲು ಸಿದ್ಧ.  ಮೊಸರು ಸಾಸಿವೆ ಅಥವಾ ಮಜ್ಜಿಗೆ ಹುಳಿಯೊಂದಿಗೆ ಅಥವಾ ಹಾಗೆಯೇ ತುಪ್ಪ ಹಾಕಿ ಸವಿಯಿರಿ.

ಹಸಿ ಮಜ್ಜಿಗೆ ಹುಳಿ
ಸಾಮಗ್ರಿ:
1 ಚಮಚ ಹುರಿಗಡಲೆ, 2 ಹಸಿಮೆಣಸು, ಅರ್ಧ ಚಮಚ ಜೀರಿಗೆ, ಅರ್ಧ ಶುಂಠಿ, ಅರ್ಧ ಲೋಟ ಕಾಯಿತುರಿ, ಕಾಲು ಚಮಚ ಅರಿಶಿನ, ಕೊತ್ತಂಬರಿ ಸೊಪ್ಪು, 1 ಲೋಟ ಮೊಸರು. ರುಚಿಗೆ ಉಪ್ಪು. ಒಗ್ಗರಣೆಗೆ ಎಣ್ಣೆ ಹಾಗೂ ಸಾಸಿವೆ, 1 ಒಣಮೆಣಸಿನ ಕಾಯಿ, ಕರಿಬೇವು.

ವಿಧಾನ: ಹುರಿಗಡಲೆ, ಹಸಿಮೆಣಸು, ಜೀರಿಗೆ,  ಶುಂಠಿ, ಕಾಯಿತುರಿ, ಅರಿಶಿನ, ಕೊತ್ತಂಬರಿ ಸೊಪ್ಪು ಎಲ್ಲವನ್ನೂ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣಕ್ಕೆ ಉಪ್ಪು ಮೊಸರು ಸೇರಿಸಿ. ಕ್ರಮವಾಗಿ ಹಾಕಿ ಒಗ್ಗರಣೆ ಮಾಡಿ, ಮಜ್ಜಿಗೆ ಹುಳಿಗೆ ಹಾಕಿ. ಬೇಕಿದ್ದಲ್ಲಿ  ಸೋರೆಕಾಯಿ ಸೀಮೆಬದನೆ ಹೋಳುಗಳನ್ನು ಬೇಯಿಸಿ ಹಾಕಿ. ಸೌತೆಕಾಯಿಯಾದರೆ ತುರಿದು ಹಾಕಿ. ಇದು ಅನ್ನ, ಚಪಾತಿಗೂ ಚೆನ್ನಾಗಿರುತ್ತದೆ.

ಅಕ್ಕಿ ತಂಬಿಟ್ಟು
ಸಾಮಗ್ರಿ:
1 ಲೋಟ ಅಕ್ಕಿ, ಮುಕ್ಕಾಲು ಲೋಟ ಬೆಲ್ಲ, ಅರ್ಧ ಲೋಟ ಕಾಯಿತುರಿ. ಏಲಕ್ಕಿ ಪುಡಿ ಸ್ವಲ್ಪ. 
  
ವಿಧಾನ:
ಅಕ್ಕಿಯನ್ನು ರಾತ್ರಿಯೇ ನೆನೆಸಿ. ಬೆಳಿಗ್ಗೆ ತೊಳೆದು ಬಸಿಹಾಕಿ. ನೆನೆದ ಅಕ್ಕಿ  ಕುಟ್ಟಿ ಹಿಟ್ಟು ಮಾಡಿಕೊಳ್ಳಿ, ಕಾಯಿತುರಿ ಬೆಲ್ಲ ಏಲಕ್ಕಿ ಮಿಶ್ರಣ ಮಾಡಿ. ಅದಕ್ಕೆ ಹಿಡಿಯುವಷ್ಟು ಹಿಟ್ಟು ಸೇರಿಸಿ ಉಂಡೆ ಮಾಡಿ.

ಚಿಗಳಿ ತಂಬಿಟ್ಟು 
ಸಾಮಗ್ರಿ:
1ಲೋಟ ಕರಿಎಳ್ಳು, ಮುಕ್ಕಾಲು ಲೋಟ ಬೆಲ್ಲ.   ವಿಧಾನ: ಎಳ್ಳನ್ನು ಚೆನ್ನಾಗಿ ತೊಳೆದು ಬಸಿದು, ಬಟ್ಟೆಯ ಮೇಲೆ ಹರಡಿ. ನೀರು ಆರಿದ ನಂತರ ತರಿತರಿಯಾಗಿ ಮಿಕ್ಸಿ ಮಾಡಿ. ಬೆಲ್ಲದ ಪುಡಿ ಸೇರಿಸಿ, ಒಮ್ಮೆ ಮಿಕ್ಸಿ ಮಾಡಿ. ಹೊರತೆಗೆದು ಕೈಯಿಂದ ಬೆರೆಸಿಕೊಂಡು ಉಂಡೆಕಟ್ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT