ADVERTISEMENT

ಪ್ರೀತಿಯೆಂಬ ಅನಂತ ಆಕಾಶ...

ಶೈಲಜಾ ಹೂಗಾರ
Published 13 ಫೆಬ್ರುವರಿ 2015, 19:30 IST
Last Updated 13 ಫೆಬ್ರುವರಿ 2015, 19:30 IST

ಕಂಡಿಷನಲ್‌ ಲವ್‌ ಪ್ರೀತಿಯೇ ಅಲ್ಲ, ತಾಯಿ ಮಗುವಿಗೆ ತೋರುವಂಥ ಪ್ರೀತಿ ಅಪ್ಯಾಯಮಾನ. ಅದೇ ನಿಜಪ್ರೇಮ ಎಂಬ ವಾದ ಇದೆ. ಅದು ಸತ್ಯವೂ ಹೌದು. ಆದರೆ ಅಂಥದೇ ಪ್ರೀತಿಗಾಗಿ ಹಾತೊರೆದು ಹುಡುಗ ಹುಡುಗಿಯಲ್ಲಿ ತಾಯಿಯನ್ನು ಕಾಣಲು, ಹುಡುಗಿ ತನ್ನ ಹುಡುಗನಲ್ಲೇ ತಂದೆಯನ್ನು ಕಾಣಲು ಹಾತೊರೆಯುವುದು ಒಂದು ತರಹ. ಆದರೆ ಪ್ರತಿ ವ್ಯಕ್ತಿಯೂ ವಿಶಿಷ್ಟ. ಅನನ್ಯ. ಆಕೆಯ ತಂದೆ ಅವನಲ್ಲಿ ಹೇಗಿರಲು ಸಾಧ್ಯ? ಅವನ ತಾಯಿಯ ಅಗಾಧ ಪ್ರೀತಿ ಅವಳಲ್ಲಿ ಕಾಣುವುದೂ ಕಷ್ಟಸಾಧ್ಯ ತಾನೆ? ಆಗ ಪ್ರೀತಿ ಎಂದರೆ ನಿರಾಸೆ, ಬದುಕು ನೀರಸ.

ಅದೊಂದು ರಹಸ್ಯ. ಕುತೂಹಲದ ಕಾಯುವಿಕೆ, ರೂಪುಕೊಟ್ಟು ನೋಡುವ ಹುರುಪು ಹರೆಯದಲ್ಲಿ. ಪ್ರೀತಿ ಎಂದರೆ ಏನು ಎನ್ನುವ ಕುತೂಹಲ, ಹುಡುಕಾಟವೂ ಆಗುತ್ತದೆ. ಪದಗಳ ಲೋಕ ಜ್ಞಾನ ನೀಡುತ್ತದೆ. ಕಂಡ ಕೊಟೇಷನ್‌ಗಳು, ಕನಸು ಕನವರಿಕೆಗಳೆಲ್ಲ ಕಪಾಟಿನ ಡೈರಿಯಲ್ಲಿ ಬಚ್ಚಿಟ್ಟುಕೊಂಡ ಸಮಯವೂ ಸರಿಯುತ್ತದೆ. ರಹಸ್ಯದ ಮುಖವಾಡ ಕಳಚುತ್ತ ಹೋದಂತೆ ಕಾಣುವುದು ಮತ್ತೇನೊ. ಈ ಜ್ಞಾನ ಅನ್ನೋದು ಎಲ್ಲವನ್ನೂ ಸಾಮಾನ್ಯ ನಿಯಮವನ್ನಾಗಿಸುತ್ತದೆ. ರಹಸ್ಯವೆಲ್ಲ ಸೂತ್ರವಾಗಿ ಬದಲಾಗುತ್ತದೆ. ವಿಜ್ಞಾನ ಎಲ್ಲವನ್ನೂ ಯಾಂತ್ರಿಕ ಮಟ್ಟಕ್ಕೆ ತರುತ್ತದೆ. ಪ್ರೀತಿ ಇದೇನಾ? ಅಥವಾ ಇಷ್ಟೆಯೆ ಎನಿಸುವುದು ಈ ಹಂತದಲ್ಲಿ. ಪದಗಳು ಬಿಡಿಸಿಟ್ಟ ಪಜಲು, ಕವಿಗಳ ಗಜಲುಗಳೆಲ್ಲ ಸೇರಿ ಗೋಜಲು. ನಮಗೆದುರಾದ ಪ್ರೀತಿಯೇ ಬೇರೆ ಎನಿಸುತ್ತದೆ.

ಕೆಲವರಿಗೆ ಪ್ರೇಮ ಎಂದರೆ ನಮ್ಮೊಳಗಿನ ರಸಾಯನಿಕ ಕ್ರಿಯೆ ಅಷ್ಟೆ. ಗಂಡು ಹೆಣ್ಣಿನ ನಡುವೆ ಹಾರ್ಮೋನುಗಳ ಸೆಳೆತ. ಸಕಾರಾತ್ಮಕ– ನಕಾರಾತ್ಮಕ  ವಿದ್ಯುಚ್ಛಕ್ತಿ. ಹೆಣ್ಣು ಗಂಡು ಎಂದರೆ ಜೈವಿಕ ವಿದ್ಯುಚ್ಛಕ್ತಿಯಂತೆ.

ಆದರೆ ಇದು ಕಮಲ– ಕೆಸರಿನ ಉಪಮೆಯಂತೆ ಆದೀತು. ಕಮಲ ಕೆಸರಿನಿಂದಲೇ ಹುಟ್ಟಿದರೂ ಅದು ಕೆಸರಲ್ಲ. ಹಾಗೆಯೇ ಹಾರ್ಮೋನುಗಳ ಸೆಳೆತದಿಂದಲೇ ಪ್ರೀತಿ ಉಂಟಾದರೂ ಆ ಸೆಳೆತವಷ್ಟೇ ಪ್ರೀತಿಯಲ್ಲ. ಮೊದಲು ಕಾಣುವುದು ಬಾಹ್ಯ ಸೌಂದರ್ಯವೇ.  ನಮ್ಮ ಮನದಾಳಕ್ಕೆ ಇಳಿದು ಕಡೆಯವರೆಗೂ ಉಳಿಯುವುದು ನಾವು ಪ್ರೀತಿಸಿದ ವ್ಯಕ್ತಿಯ ಆಂತರಿಕ ವಲಯದ ಶಾಂತಕೊಳದ ಸಾಮೀಪ್ಯ. ಇಂಥ ಬಿಡಿ ಬಿಡಿ ಸಂಗತಿಗಳ ಒಟ್ಟುಗೂಡುವಿಕೆ ಅದು. ಆದರೆ ಒಟ್ಟುಗೂಡಿಸಿದ ಅಭಿಪ್ರಾಯಗಳ ಕಂತೆಯನ್ನೇ ಅರಿವು ಎಂದುಕೊಂಡಿರುತ್ತೇವೆ. ಪ್ರೀತಿ ಎಂದರೆ ಏನು ಎಂದು ನಾವು ಅರಿತಿದ್ದೇವೆ ಎಂದುಕೊಂಡಾಗಲೂ ಅದು ಸಂಗ್ರಹಿತ ಅಭಿಪ್ರಾಯ ಅಷ್ಟೆ.
ಆದರೆ ಸಂಪೂರ್ಣತೆ ಎಂದರೆ, ಈ ಒಟ್ಟುಗೂಡುವಿಕೆಯನ್ನೆಲ್ಲ ಮೀರಿದ್ದು. ಎಲ್ಲಕ್ಕೂ ಮಿಗಿಲಾದುದು ಪೂರ್ಣತೆ. ಪರಮ ಆತ್ಮ, ಪ್ರೀತಿ. ಅನುಭವಕ್ಕೆ ನಿಲುಕಿದಾಗಲೇ ಎಟುಕಿದಷ್ಟು ತಿಳಿವಿಗೆ ಒಡ್ಡಿಕೊಂಡಿರುತ್ತೇವೆ. ಆಗಲೂ ಪ್ರೀತಿ ಎಂದರೆ ನಮಗೆ ದೊರೆತ ಆ ಸೀಮಿತ ಅನುಭವ ಅಷ್ಟೇ ಅಲ್ಲ. ಇನ್ನೂ ಏನೋ...

ಪ್ರೀತಿಸುವವರಿಗೆ ಪರಸ್ಪರ ತಾವು ಅನಿವಾರ್ಯ, ಅಗತ್ಯ ಎನಿಸಿರುತ್ತದೆ. ಆದರೆ ಪ್ರೀತಿ ಅಗತ್ಯವಲ್ಲ, ಅವಶ್ಯಕತೆಯೂ ಅಲ್ಲ.
ಅನವರತ ಅನುರಣಿಸುವ ಅವತರಣಿಕೆ. ನಿರಂತರ ಒಸರುವ ಸಲಿಲ ಧಾರೆಯ ಒರತೆ. ಚಲನೆಯುಳ್ಳ ಸರಿತ ಸರಿಯೇ. ಆದರೂ ಅದಕ್ಕೆ ಮುದಿತನವಿಲ್ಲವಂತೆ. ಸಹಜ ಪ್ರೀತಿಯ ಜುಳುಜುಳು ಮನದಲಿದ್ದರೆ ಮೈಯೊಳಗಿನ ಚೈತನ್ಯ ಚಿರಯೌವನ ಎಂದವರಿದ್ದಾರೆ.

ಆದರೆ ಕಾಲ ಸರಿದಂತೆಲ್ಲ ಪ್ರೀತಿಯ ರೂಪವೇ ಬದಲಾಗುತ್ತದೆ. ಪ್ರೀತಿಗೂ ವಯಸ್ಸಾಯಿತೆ ಎನಿಸುತ್ತದೆ. ದೇಹಕ್ಕೆ ವಯಸ್ಸಾದರೂ ಚಿಮ್ಮುವ ಜೀವನೋತ್ಸಾಹ ಹರೆಯ ನೆನಪಿಸಿದರೆ ಅದು ಪ್ರೀತಿಯಿಂದಲೇ. ಮನದಲ್ಲೇ ಕೊರಗಿ ಚಿಂತಿಸಿ ಹಣ್ಣಾದಾಗ ಹರೆಯದಲ್ಲೇ ಜಿಂಕೆಯಂತಹ ದೇಹ ಮುಪ್ಪಾದೀತು. ಪ್ರೀತಿಯ ಪರಿಣಾಮ ಹೀಗೇ ಎಂದು ಹೇಳಲಾಗದು.

ಪ್ರೀತಿಸುವ ವ್ಯಕ್ತಿಗೆ ಬೇಕಾದಷ್ಟು ಸಮಯ, ವೈಯಕ್ತಿಕ ಸ್ಥಳಾವಕಾಶ, ಸ್ವಾತಂತ್ರ್ಯ ಎಲ್ಲವನ್ನೂ ಒದಗಿಸಿ, ನಾವು ದೂರವೇ ನಿಂತು ಅವರ ವ್ಯಕ್ತಿತ್ವ ಅರಳುವುದನ್ನು ಕಾಣುವುದು ಪ್ರೀತಿ. ಇದೇ ಕೆಲವರ ಜೀವನ ರೀತಿ. ಅಲ್ಲ, ಪ್ರೀತಿ ಎಂದರೆ ಅದಲ್ಲ, ಅವನು ನನ್ನವ, ಬೇರಾರ ಜತೆ ಅವನೇಕೆ ಹೆಚ್ಚು ಸಮಯ ಕಳೆಯಬೇಕು, ತನ್ನ ಕ್ಷಣಗಳನ್ನು ನನ್ನೊಡನೆ ಹಂಚಬಾರದೆ, ಒಂದಷ್ಟು ಸುಂದರ ನೆನಪು ಬಿಡಬಾರದೆ ನನ್ನ ಪಾಲಿಗೆ ಎಂದುಕೊಳ್ಳುವುದು ಬಂಧನವಲ್ಲ, ಅದು ನನ್ನವ ಎನ್ನುವ ಪಾಸೆಸಿವ್‌ನೆಸ್‌. ಅದೂ ಬೇಡವೆ ಪ್ರೀತಿಗೆ ಎನ್ನುವವರ ವಾದವೂ ಇದೆ. ಪ್ರೀತಿ ಕೊಡುವುದು ಎಂದರೆ ಅದನ್ನು ಮರಳಿ ಅದೇ ಮೂಲದಿಂದಲೇ ಪಡೆಯಲು ಕಾತರಿಸುವುದೂ ಅಲ್ಲವೆ ಎನ್ನುವವರದೊಂದು ನೀತಿ. ಆಚೆಯಿಂದ ಪ್ರೀತಿ ಸಿಗಲಿ ಬಿಡಲಿ, ನಾನಂತೂ ಪ್ರೀತಿಸುವೆ, ಚೂರೂ ಅವರ ನೆಮ್ಮದಿ ಕದಡದೆ ಎನ್ನುವ ನಿರ್ಲಿಪ್ತರ ಹಿಂಡೊಂದು ಇದೆ.

ಅವನು ಹೆಣ್ಣಿನ ಸುತ್ತಲೇ ಸುಳಿಯುವಾಗ ಮೋಹ ಎನ್ನುತ್ತದೆ ಜಗತ್ತು. ನಿರ್ಭಾವುಕ ಸ್ಥಿತಿಯಲ್ಲಿ ಪ್ರೀತಿ ಬದುಕುತ್ತದೆಯೇ? ಇಸಿಜಿಯ ಏರಿಳಿತದ ಗೆರೆಗಳಲ್ಲವೇ ನಮ್ಮೊಳಗಿನ ಜೀವಂತಿಕೆಗೂ ಸಾಕ್ಷಿಯಾಗುವುದು? ಏನೂ ಅನ್ನಿಸದೇ ಇರುವ ಸ್ಥಿತಿ, ಪ್ರೀತಿಯ ಸರಳ ಗೆರೆಯಾಗದೆ? ಅಂತಹ ಸಂಚಲನವೇ ಇಲ್ಲದ ಪ್ರೀತಿ ಜೀವಂತ ಹೇಗಾದೀತು? ನಮ್ಮಲ್ಲೂ ಜೀವಂತಿಕೆ ತುಂಬೀತು ಹೇಗೆ? ಅಭಿವ್ಯಕ್ತಿ ಬೇಕಲ್ಲವೆ? ಆಗಾಗ ನಮ್ಮ ಪ್ರೀತಿಗೆ ಮಾರುತ್ತರದಂತೆ ಪ್ರತಿ ಪ್ರೀತಿ ಸಿಗಬೇಕಲ್ಲ. ಪೋನ್‌ನ ಸಂದೇಶಗಳೇನು ಗೋಡೆಗೆ ಅಪ್ಪಳಿಸಿ ಬರಲೆಂದು ಕಳಿಸುತ್ತೇವೆಯೆ? ಸ್ಪಂದನೆಯೇ ಇಲ್ಲದ ಆಚೆಯ ಜೀವದಲ್ಲಿ ಪ್ರೀತಿಯ ಸೆಲೆ ಬತ್ತಿತೆ ಎನಿಸುತ್ತದೆ.

ಹೌದು ಮತ್ತೆ  ಹುಡುಗಿಯರಿಗೆ ಈಗ, ಸ್ವಲ್ಪ ಹೊತ್ತಿಗೆ ಮೊದಲು, ಮತ್ತೆ ಇನ್ನು ಸ್ವಲ್ಪ ಹೊತ್ತಿಗೆ ಅಂತ ಆಗಾಗ ಕೊಡುತ್ತಲೇ ಇರಬೇಕು ನೀವಿನ್ನೂ ಅವರನ್ನು ಪ್ರೀತಿಸುತ್ತಿದ್ದೀರಿ ಎನ್ನುವ ಅಭಯವನ್ನು. ಆಕೆಯ ಪ್ರೀತಿಗೆ ಸ್ವೀಕೃತಿ ಪತ್ರವನ್ನು. ‘ಐ ಲವ್‌ ಯೂ’ ಎಂಬ ರಸೀದಿಯನ್ನು. ಅಷ್ಟೊಂದು ಅನಿಶ್ಚಿತತತೆ ಕಾಡುವುದೆ ಅವಳನ್ನು? ನಂಬಿಕೆಯಿಲ್ಲವೆ ನಮ್ಮ ಮೇಲೆ? ಎನ್ನುವ ಪ್ರಶ್ನೆ ಹುಡುಗರಿಂದ. ಯಾವಾಗ ಪ್ರೀತಿ ಸಾಕೆನಿಸಿ ವಿಮುಖರಾಗುವರೊ, ಮೌನಕ್ಕೆ ಜಾರುವರೊ, ದೂರ ಹೋಗುವರೊ ಎಂಬ ಅನುಮಾನ ಕಾಡದೇ ಇರದು. ಇವನು ಬಾಳಿಸುವನೆ ನನ್ನ ಕಡೆಯವರೆಗೂ, ಕೈಕೊಟ್ಟರೆ ಗತಿ ಎನ್ನುವ ಅನುಮಾನದಿಂದ ದೂರವೇ ಉಳಿದ ಹುಡುಗಿಯನ್ನು ನೆನೆದು ಈಗಲೂ ಮನದಲ್ಲೇ ಆ ಪ್ರೀತಿ ನನ್ನೊಂದಿಗಿದ್ದರೆ ಎಂದು ಹೆೇಳಿದವರಿದ್ದಾರೆ. ಆಕೆಗಿಷ್ಟದ ಚಿಕ್ಕಿ ತಿಂದಾಗಲೆಲ್ಲ ನೆನಪಂತೆ, ಕನಸಲೂ ಕಾಡುವಳಂತೆ. ತಾನಿಷ್ಟಪಟ್ಟ ಹುಡುಗಿಯನ್ನು ದೂರದಿಂದಲೇ ನೋಡಿ ನೆಮ್ಮದಿಯಾಗಿ ನಿಟ್ಟುಸಿರು ಸೂಸುವವರೂ ಇದ್ದಾರೆ. ಆಕೆಯ ಭಾವನೆಗಳ ಕೆದಕಿ ಕಷ್ಟಕೊಡಲೊಪ್ಪದವರು.

ವ್ಯಾಲೆಂಟೈನ್‌ ದಿನದಂದು ಗುಲಾಬಿ ಕೊಟ್ಟರೆ ವ್ಯಕ್ತವಾದಂತೆಯೆ ಪ್ರೀತಿ ಎನ್ನುವವರ ಪ್ರಶ್ನೆಗೆ ಅಷ್ಟೇ ಬೀಸಾಗಿ ಅದೊಂದು ದಿನವಾದರೂ ಇದೆ ವ್ಯಕ್ತಪಡಿಸಲೆಂದು. ನಮ್ಮ ನಡುವೆ ಇರುವ ಪ್ರೀತಿಯ ಗುರುತಿಸಿ ಅತ್ತ ಗಮನಹರಿಸಲೆಂದು ಎನ್ನುವವರು ಇದ್ದಾರೆ. ಪ್ರೀತಿ ಅನುದಿನ ನಮ್ಮ ನಡೆನುಡಿಯಲ್ಲಿ ವ್ಯಕ್ತವಾಗುತ್ತಲೇ ಇದ್ದರೂ ಅದನ್ನು ಜಾಗೃತ ಮನದಲ್ಲಿ ಮತ್ತೆ ನೆಲೆಗೊಳಿಸಿ ಹೊಸದರಂತೆ ಕಾಣುವ ಹಂಬಲದ ದಿನ. ಕಡುಗೆಂಪು ಬಣ್ಣದ ಗುಲಾಬಿ ಕೇವಲ ಸಾಂಕೇತಿಕ ಅಭಿವ್ಯಕ್ತಿ. ಗುಲಾಬಿ ಕೊಡದೇ ಇದ್ದರೂ ಪ್ರೀತಿಯನ್ನು ಗುಲಾಬಿಯಂತೆ ಕಾಣುವ ವ್ಯವಧಾನ ಇದ್ದರೆ ಸರಿ. ಪ್ರೀತಿ ಕೋಮಲ, ಗುಲಾಬಿಯಂತೆ. ನಿಸರ್ಗದ ಮಡಿಲಲ್ಲೇ ಇರಗೊಟ್ಟು ಮಳೆಯ ತುಂತುರಲೆಗೆ ನಲಿಯಲು ಬಿಟ್ಟು, ತೂಗುವ ಗಾಳಿಗೆ ತೊನೆಯಲು ಬಿಟ್ಟು, ದಿನಕರನ ಚೈತನ್ಯವನ್ನೆಲ್ಲ ಆವಾಹಿಸಿಕೊಳ್ಳಲು ಅನುವಾಗುವಂತೆ ಆಗಸಕೆ ಮೈಯೊಡ್ಡಿ ನಳನಳಿಸಲು ಬಿಡಬೇಕಾಗುತ್ತದೆ.

ನಮ್ಮ ಬೇಕುಗಳ ಆಯ್ಕೆಯ ಪಟ್ಟಿಯಲ್ಲಿ ಪ್ರೀತಿ ಎಂಬ ಪದದ ಮುಂದೆ ಒಮ್ಮೆ ಟಿಕ್‌ ಮಾಡಿದರೆ ಮುಗಿಯಿತು. ಅದರ ಜತೆಗೆ ಆಟೊಮ್ಯಾಟಿಕ್‌ ಆಗಿ ಟಿಕ್‌ ಆಗಿ ಬರುವುದನ್ನೆಲ್ಲ ಅನುಭವಿಸಲು ಸಿದ್ಧರಾಗಬೇಕು. ಸಣ್ಣಕ್ಷರಗಳಲ್ಲಿ ಇರುವ ಕಂಡಿಷನ್‌ಗಳಿಗೆಲ್ಲ ಓಕೆ ಎಂದಂತೆಯೇ. ಪ್ರೀತಿ ಕೊಡುವ ಆಹ್ಲಾದ, ಜೀವನೋತ್ಸಾಹ, ಮಧುರ ನೆನಪು, ಕಹಿ ಗಳಿಗೆ, ವಾದ, ಮಾತಿನ ಚಾಟಿ, ವಿರಹ, ಹಿತವಾದ ನೋವು, ಜೀವಹಿಂಡುವ ನೋವು, ಅಗಲಿಕೆ ಎಲ್ಲವೂ ಪ್ರೀತಿಯದೇ ಉಪ ಉತ್ಪನ್ನಗಳು. ಪ್ರೀತಿ ತೋರದವನ ಮೇಲೆ ಮುನಿಸು ಏಕೆ ಎನ್ನುತ್ತಾರೆ ಕೆಲವರು. ನಿರಾಕರಣೆ, ತಿರಸ್ಕಾರ, ಮುನಿಸು, ಮೌನ ಎಲ್ಲಕ್ಕೂ ಈಚೆ ಕಡೆಯಿಂದ ಪ್ರೀತಿಯೇ ಉತ್ತರವಾಗಬೇಕಪ್ಪ ಎನ್ನುವ ವಾದ ಅವರದು. ಅವನು ಹೀಗಿದ್ದರೆ ಮಾತ್ರ ಪ್ರೀತಿಸಲು ಸಾಧ್ಯ ಎನ್ನುವುದನ್ನವರು ಒಪ್ಪುವುದೇ ಇಲ್ಲ.

ಹೌದು, ಕಂಡಿಷನಲ್‌ ಲವ್‌ ಪ್ರೀತಿಯೇ ಅಲ್ಲ, ತಾಯಿ ಮಗುವಿಗೆ ತೋರುವಂಥ ಪ್ರೀತಿ ಅಪ್ಯಾಯಮಾನ. ಅದೇ ನಿಜಪ್ರೇಮ ಎಂಬ ವಾದ ಇದೆ. ಅದು ಸತ್ಯವೂ ಹೌದು. ಆದರೆ ಅಂಥದೇ ಪ್ರೀತಿಗಾಗಿ ಹಾತೊರೆದು ಹುಡುಗ ಹುಡುಗಿಯಲ್ಲಿ ತಾಯಿಯನ್ನು ಕಾಣಲು, ಹುಡುಗಿ ತನ್ನ ಹುಡುಗನಲ್ಲೇ ತಂದೆಯನ್ನು ಕಾಣಲು ಹಾತೊರೆಯುವುದು ಒಂದು ತರಹ. ಆದರೆ ಪ್ರತಿ ವ್ಯಕ್ತಿಯೂ ವಿಶಿಷ್ಟ. ಅನನ್ಯ. ಆಕೆಯ ತಂದೆ ಅವನಲ್ಲಿ ಹೇಗಿರಲು ಸಾಧ್ಯ? ಅವನ ತಾಯಿಯ ಅಗಾಧ ಪ್ರೀತಿ ಅವಳಲ್ಲಿ ಕಾಣುವುದೂ ಕಷ್ಟಸಾಧ್ಯ ತಾನೆ? ಆಗ ಪ್ರೀತಿ ಎಂದರೆ ನಿರಾಸೆ, ಬದುಕು ನೀರಸ.

ಬದುಕು ಸಮರಸವಾಗಬೇಕು. ಸಮ ಸಮವಾಗಿ ಕೊಟ್ಟು ತೆಗೆದುಕೊಳ್ಳುವ ಬಿಸುಪು ಉಳಿಯಬೇಕು.
ಕಣ್ಣೀಲೆ ಮೂಗೀಲೆ ಚೆಲುವು ಕಾಣುವವರು ಬೇಡ ನಾವು ಏನಾಗಿರುವೆವೊ,
ನಮ್ಮನ್ನು ನಾವಾಗಿ ಇರಿಸಿರುವುದು ಅದಾವುದೊ...
ಅದನೆ ಕಾಣುವವರು ಬೇಕು, ಮೆಚ್ಚಿ ಬಳಿ ಸಾರುವವರು ಬೇಕು
ಎಂದುಲಿಯುತ್ತದೆ ಮನ
ಆಂತರ್ಯದ ಅತಿಯಾಳದಲ್ಲೊಂದು ಪ್ರೀತಿ ತುಂಬಿದ ಕವನ
ಅದನ್ನು ಮೌನದಲ್ಲೂ ಕೇಳುವ ಕಲೆ ಒಲಿದ ಕ್ಷಣ...ಪ್ರೀತಿ.

ಅದು ಗಾಳಿಯಂತೆ. ಹಿಡಿದಿಡಲಾರೆವು. ನಾವಾಗೇ ಬಯಸಿದಾಗಲೆಲ್ಲ ಉತ್ಪತ್ತಿ ಮಾಡಲೂ ಆಗದು. ತಾನಾಗೇ ಬಳಿಸಾರಿ ತನಗಿಷ್ಟ ಬಂದಷ್ಟು ಸಮಯ ಇರುತ್ತದೆ. ಇಂಪಾದ ಹಾಡೊಂದು ಗುನುಗಿದಂತೆ ತಂಪಾದ ಆಹ್ಲಾದವೊಂದು ತಾಕಿದಂತೆ. ಇಂದು ಇಲ್ಲಿ, ನಾಳೆ ಎಲ್ಲಿ ಎಂಬ ಅನಿಶ್ಚಿತ ಭಾವ, ಅಭದ್ರತೆಯ ಸ್ವಭಾವವೇ ಮೈವೆತ್ತಂತೆ. ಚೆಲುವಿರಲಿ, ಗೆಲುವಿರಲಿ, ಬಲವಿರಲಿ, ಛಲವಿರಲಿ ವಾಸ್ತವದ ನೆಲೆಯಲ್ಲಿ ಒಲವ ಕಾಣುವ ಒಳಗಣ್ಣಿರಲಿ.

ಓಶೋ ಹೇಳಿದ್ದಾದರೂ ಏನು?: ಯಾರೂ ಇನ್ನೊಬ್ಬರಿಗಾಗಿ ಜನಿಸಲಿಲ್ಲ. ಯಾರೂ ನಿಮ್ಮ ಕಲ್ಪನೆಗೆ, ಆದರ್ಶಕ್ಕನುಗುಣವಾಗಿ ನಿಮ್ಮನ್ನು ತೃಪ್ತಿಗೊಳಿಸಲು ಈ ಜಗತ್ತಿಗೆ ಬಂದಿಲ್ಲ. ನಿಮ್ಮ ಪ್ರೀತಿಯ ಮಾಲಿಕರು ನೀವೇ. ನಿಮಗೆಷ್ಟು ಹಂಚಿಕೊಳ್ಳಬೇಕೆನಿಸುವುದೊ ಅಷ್ಟನ್ನೂ ಹಂಚಿಕೊಳ್ಳಬಹುದು. ಆದರೆ ಬೇರೆಯವರು ನಿಮಗಿಷ್ಟೇ, (ನಿಮಗಷ್ಟೇ ಪ್ರೀತಿ) ಕೊಡಬೇಕು ಎಂದು ಬಲವಂತ ಮಾಡಲು ಸಾಧ್ಯವಿಲ್ಲ.

ಈ ಸರಳ ವಾಸ್ತವದ ಅರಿವು ಸದಾ ಮನದ ಮೂಲೆಯಲ್ಲಿದ್ದರೆ ಮದುವೆಯಾಗಿದ್ದರೂ. ಮದುವೆ ಆಗದೇ ಇದ್ದಾಗಲೂ ಸಂಗಾತಿಗಳಾಗಿ ಇರಬಹುದು. ಇನ್ನೊಬ್ಬರ ವೈಯಕ್ತಿಕ ವಲಯದಲ್ಲಿ ಮೂಗು ತೂರಿಸದೆ, ಪರಸ್ಪರ ಪೂರಕವಾಗಿ ಬಾಳಬಹುದು. ಪ್ರೀತಿಯ ಅನಂತ ಆಕಾಶವನ್ನು ವಿಸ್ತಾರಗೊಳಿಸಲು ಪೂರಕವಾಗಿ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.