ADVERTISEMENT

ಬಂಜೆತನಕ್ಕೆ ಹಲವು ಕಾರಣ

ಅಂಕುರ, ಸರಣಿ 18

ಡಾ.ಎಸ್.ಎಸ್.ವಾಸನ್
Published 7 ನವೆಂಬರ್ 2014, 19:30 IST
Last Updated 7 ನವೆಂಬರ್ 2014, 19:30 IST

ಕಳೆದ ನಾಲ್ಕು ದಶಕಗಳ ಹಿಂದೆ, 1970ರಲ್ಲಿ 35ನೇ ವಯಸ್ಸಿಗೆ ತಾಯ್ತನ ಅನುಭವಿಸುವವರ ಸಂಖ್ಯೆ ಶೇ 1ರಷ್ಟಿತ್ತು. 2006ರಲ್ಲಿ ಈ ಸಂಖ್ಯೆ ಶೇ 8ರಷ್ಟಾಯಿತು. ಬಹುತೇಕ ಜನರು ಮಹಿಳೆಯರಲ್ಲಿ ನಲ್ವತ್ತರ ಅಂಚಿನವರೆಗೂ ಫಲವತ್ತತೆ ಇರುತ್ತದೆ ಎಂದು ಭಾವಿಸಿರುತ್ತಾರೆ. ಆದರೆ ಬಂಜೆತನದ ಪ್ರಮಾಣ ವಯಸ್ಸು ಏರಿದಂತೆ ಹೆಚ್ಚಾಗುತ್ತದೆ. ಯಾವುದೇ ಕುಟುಂಬ ಯೋಜನೆ ಇರದೆ ಒಂದು ವರ್ಷದವರೆಗೆ ಮಿಲನದಲ್ಲ ಪಾಲ್ಗೊಂಡಾಗ 20–24ನೇ ವಯಸ್ಸಿನ ಅವಧಿಯಲ್ಲಿ ಬಂಜೆತನದ ಪ್ರಮಾಣ ಶೇ 6ರಷ್ಟಿದ್ದರೆ, 40ರಿಂದ 44ರಲ್ಲಿ ಈ ಪ್ರಮಾಣ ಶೇ 64ರಷ್ಟಿದೆ.  

1940 ಮತ್ತು 50ರಲ್ಲಿ ಮಗುವಿಗಾಗಿ ಪ್ರಯತ್ನಿಸುತ್ತಿದ್ದ 5000 ದಂಪತಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಒಂದು ವರ್ಷ ಇಂಥ ಪ್ರಯತ್ನದಲ್ಲಿ ತೊಡಗಿಸಿಕೊಂಡಿರುವ  ಶೇ 85ರಷ್ಟು ದಂಪತಿಗಳಿಗೆ ಗರ್ಭಧಾರಣೆಯಾಗಿತ್ತು. ಅಂದಿನಿಂದ ಬಂಜೆತನವನ್ನು ನಿರ್ಧರಿಸಲು ಈ ಒಂದು ವರ್ಷದ ಅವಧಿಯನ್ನು ಪರಿಗಣಿಸುವುದು ಆಗಿನಿಂದಲೇ ಆರಂಭವಾಯಿತು. ಒಂದು ವರ್ಷದ ಅವಧಿಯಲ್ಲಿ ಗರ್ಭಧರಿಸದೇ ಇದ್ದಲ್ಲಿ ತಜ್ಞವೈದ್ಯರೊಂದಿಗೆ ದಂಪತಿ ಸಮಾಲೋಚಿಸುವುದು ಅತ್ಯಗತ್ಯ.

ಆದರೆ ಈ ನಿಯಮವು ಕೇವಲ 35ರ ಒಳಗಿರುವ ಸಾಮಾನ್ಯ ಆರೋಗ್ಯ ಸ್ಥಿತಿಯನ್ನು ಹೊಂದಿರುವ ಯುವತಿಯರಿಗೆ ಅನ್ವಯಿಸುವಂಥದ್ದು. ವಯಸ್ಸು 35 ದಾಟಿದ್ದಲ್ಲಿ, ಯಾವುದೇ ಸಮಸ್ಯೆಗಳಿದ್ದರೆ (ನಿಯಮಿತ ಋತುಸ್ರಾವವಾಗದೇ ಇರುವುದು, ಋತುಚಕ್ರ ಸಂದರ್ಭದಲ್ಲಿ ಅತೀವ ನೋವು ಅನುಭವಿಸುವಂತಿದ್ದಲ್ಲಿ, ಮಧುಮೇಹಿಗಳಾಗಿದ್ದಲ್ಲಿ, ಥೈರಾಯ್ಡ್‌ ಸಮಸ್ಯೆಗಳಿದ್ದಲ್ಲಿ ವೈದ್ಯರನ್ನು ಕೂಡಲೇ ಸಂಪರ್ಕಿಸುವುದು ಒಳಿತು. ಫಲವಂತಿಕೆಯ ವಿಷಯದಲ್ಲಿ ಸಮಯ ಅತ್ಯಮೂಲ್ಯವಾದುದು. ವೈದ್ಯರ ಭೇಟಿಯನ್ನು ಮುಂದೂಡದೇ ಕೂಡಲೇ ಕಾಣುವುದು ಜಾಣ್ಮೆಯ ನಿರ್ಧಾರವಾಗಿದೆ. ಫಲವಂತಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸುಲಭವಾದ ಚಿಕಿತ್ಸೆಯ ಮೂಲಕವೇ ಪರಿಹಾರ ಪಡೆಯಬಹುದಾಗಿದೆ. ನೈಸರ್ಗಿಕ ಗರ್ಭಧಾರಣೆ ಸಾಧ್ಯವಾಗುತ್ತದೆ. ಆದರೆ ಸಕಾಲದಲ್ಲಿ ವೈದ್ಯರನ್ನೂ ಕಾಣುವುದು ಮಾತ್ರ ಮರೆಯುವಂತಿಲ್ಲ.

ಬಹುತೇಕ ವೃತ್ತಿನಿರತ ದಂಪತಿಗಳ ಪ್ರಶ್ನೆ ಎಂದರೆ ನಾವು ಒಟ್ಟಿಗೇ ಇದ್ದೇವೆ. ನಿಯಮಿತವಾಗಿ ಮಿಲನದಲ್ಲಿ ಪಾಲ್ಗೊಳ್ಳುತ್ತೇವೆ. ಆದರೂ ಗರ್ಭಧಾರಣೆಯಾಗುತ್ತಿಲ್ಲ. ಸಾಮಾನ್ಯವಾಗಿ 20ರ ವಯೋಮಾನದಲ್ಲಿರುವ ಆರೋಗ್ಯವಂತ ಸಂಗಾತಿಗಳು, ಒಂದು ತಿಂಗಳು ಒಟ್ಟಿಗೇ ಇದ್ದು, ಪ್ರತಿದಿನ ಮಿಲನದಲ್ಲಿ ಪಾಲ್ಗೊಂಡರೂ ಫಲವಂತಿಕೆಯ ಪ್ರಮಾಣ ಶೇ 10ರಷ್ಟು ಮಾತ್ರ ಇರುತ್ತದೆ. ಈ ಫಲವಂತಿಕೆಯ ಕಿಂಡಿ ಅಂಡಾಣು ಬಿಡುಗಡೆಯ ನಾಲ್ಕರಿಂದ ಐದು ದಿನಗಳ ಮೊದಲು ತೆರೆದಿರುತ್ತದೆ. ಆ ಅವಧಿಯಲ್ಲಿ ಪ್ರತಿ 24ರಿಂದ 48 ಗಂಟೆಯ ಅವಧಿಯಲ್ಲಿ ಸಂಗಾತಿಗಳು ಕೂಡಬೇಕು ಎಂದು ವಿಜ್ಞಾನ ಹೇಳುತ್ತದೆ.

ಆದರೆ ಸಂಖ್ಯಾಶಾಸ್ತ್ರದ ಸಂಭವನೀಯತೆ ಹೇಳುವ ಸತ್ಯವೇ ಬೇರೆಯಾಗಿದೆ. ಈ ಎಲ್ಲ ಸಾಧ್ಯತೆಗಳಿದ್ದಾಗಲೂ ಪ್ರತಿ ತಿಂಗಳೂ ಗರ್ಭಧಾರಣೆಯ ಸಾಧ್ಯತೆಯಲ್ಲಿ ಶೇ 10ರಿಂದ 15ರಷ್ಟು ಪ್ರಮಾಣ ಕಡಿಮೆಯಾಗುತ್ತಲೇ ಹೋಗುತ್ತದೆ. ಮೊದಲ ಮೂರು ತಿಂಗಳಲ್ಲಿ ಗರ್ಭ ಕಟ್ಟದಿದ್ದರೆ ಈ ಪ್ರಮಾಣ ಹೆಚ್ಚುತ್ತಲೇ ಇರುತ್ತದೆ. ನಂತರದ ಮೂರು ತಿಂಗಳಲ್ಲಿ ಗರ್ಭಧಾರಣೆಯ ಪ್ರಮಾಣ ಇನ್ನಷ್ಟು ಕಡಿಮೆಯಾಗುತ್ತದೆ. ಒಂದು ವರ್ಷದ ಅವಧಿಯಲ್ಲಿ ಗರ್ಭಿಣಿಯಾದರೆ ಫಲವಂತಿಕೆಯ ಪ್ರಮಾಣದಲ್ಲಿ ಶೇ 5ರಷ್ಟು ಕಡಿಮೆಯಾಗಿದೆ ಎಂದರ್ಥ.

ಉದಾಹರಣೆಗೆ ಅನಿಯಮಿತ ಋತುಚಕ್ರವನ್ನು ಹೊಂದಿರುವ ಮಹಿಳೆಯು   ಅಂಡಾಣು ಬಿಡುಗಡೆಯ ಸಂದರ್ಭವನ್ನು ಹೊರತು ಪಡಿಸಿ, ಸಂಗಾತಿಯೊಡನೆ ಮಿಲನವಾದರೆ ಗರ್ಭ ಫಲಿತವಾಗುವುದು ಸಾಧ್ಯವೇ? ಅದೆಷ್ಟೇ ಭಾವತೀವ್ರತೆಯಿಂದ ಕೂಡಿರುವ ಮಿಲನವೇ ಆದರೂ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗಿರದಿದ್ದಲ್ಲಿ ಫಲವಂತಿಕೆಯ ಮಾತೆಲ್ಲಿ? ಫಲವಂತಿಕೆಯ ಅವಧಿಯನ್ನು ಅರಿಯಲು ಅವರು ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.

ಬಂಜೆತನವನ್ನು ಯಾವತ್ತಿಗೂ ಮಹಿಳೆಯನ್ನೇ ಕೇಂದ್ರವಾಗಿರಿಸಿಕೊಂಡು ಹೇಳಲಾಗುತ್ತದೆ. ಅದು ಸಹಜ ಕೂಡ. ಫಲವಂತಿಕೆಯ ವಿಷಯ ಬಂದಾಗ ಮಹಿಳೆಯರಲ್ಲಿ ಸಂಕೀರ್ಣ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಗರ್ಭಕೋಶ, ಅಂಡಾಶಯ, ಅಂಡಾಣು, ಅಂಡನಾಳ ಹೀಗೆ ಹತ್ತು ಹಲವಾರು ಕಡೆಗಳಲ್ಲಿ ಅಡೆತಡೆಗಳಿರಬಹುದು. ಫಲವಂತಿಕೆಯನ್ನು ಅಧ್ಯಯನ ಮಾಡಬೇಕಾದವರೂ ಮೊದಲು ಪ್ರಸೂತಿ ತಜ್ಞರ ಜ್ಞಾನವನ್ನು ಪಡೆದಿರಲೇಬೇಕು. ನಂತರವೇ ಪುರುಷರ ದೇಹರಚನೆ ಅಥವಾ ಅಂಗರಚನೆ, ಇನ್ನಿತರ ಸಮಸ್ಯೆಗಳನ್ನು ಅವಲೋಕಿಸುತ್ತಾರೆ. ಇದಕ್ಕೆ ಐತಿಹಾಸಿಕ, ಸಾಂಸ್ಕೃತಿಕ ಧಾರ್ಮಿಕ ಕಾರಣಗಳೇನೇ ಇರಲಿ, ಬಂಜೆತನಕ್ಕೆ ಹೆಣ್ಣುಮಕ್ಕಳು ನೇರ ಕಾರಣ ಎಂದು ಹೇಳುವವರ ಸಂಖ್ಯೆಯಲ್ಲಿ ಇನ್ನೂ ಕಡಿಮೆಯಾಗಿಲ್ಲ.

ಆದರೆ ಮೈ ನಡುಗಿಸುವ ಸತ್ಯವೊಂದಿದೆ. ಬಂಜೆತನವನ್ನು ಅನುಭವಿಸುತ್ತಿರುವ ದಂಪತಿಗಳಲ್ಲಿ ಶೇ 45–55ರಷ್ಟು ಗಂಡಸರಲ್ಲಿಯೇ ಸಮಸ್ಯೆ ಇದೆ. ವೀರ್ಯಾಣು ಸಂಖ್ಯೆಯಲ್ಲಿ ಕೊರತೆ, ಆರೋಗ್ಯವಂತ ವೀರ್ಯಾಣುವಿನ ಕೊರತೆ, ಗರ್ಭಧಾರಣೆಯ ಯಾನ ಸಂಪೂರ್ಣಗೊಳಿಸಲು ಅಶಕ್ತವಾಗಿರುವ ವೀರ್ಯಾಣುಗಳು ಕಾರಣವಾಗಿವೆ. ಬಂಜೆತನಕ್ಕೆ ಪುರುಷರೂ ಹೆಚ್ಚಿನ ಸಂಖ್ಯೆಯಲ್ಲಿ ಕಾರಣವಾಗುತ್ತಿರುವುದು ಸದ್ಯದ ವಿದ್ಯಮಾನವಾಗಿದೆ. 

ಹೆಣ್ಣುಮಕ್ಕಳಲ್ಲಿ ಬಂಜೆತನ ಕಂಡು ಬರಲು ವೀರ್ಯಾಣುವಿನ ಗುಣಮಟ್ಟವೂ ಕಾರಣವಾಗಿರುತ್ತದೆ. ಹಾಗಾಗಿ ಬಂಜೆತನ ತಪಾಸಣೆಯಲ್ಲಿ ವೀರ್ಯಾಣುವಿನ ಗುಣಮಟ್ಟವನ್ನು ಪರಿಶೀಲಿಸಲೂ ಶಿಫಾರಸ್ಸು ಮಾಡಲಾಗುತ್ತದೆ. ಫಲವಂತಿಕೆಗಾಗಿ ಯತ್ನಿಸುವಾಗ ಪುರುಷರ ಪಾಲ್ಗೊಳ್ಳುವಿಕೆಯೂ ಮಹತ್ವದ ಪಾತ್ರವಹಿಸುವುದು ಇದೇ ಕಾರಣದಿಂದ. ಇಷ್ಟಕ್ಕೂ ಇಂಥ ಕಾರಣಗಳಿಗೆಲ್ಲ ಚಿಕಿತ್ಸೆ ಇದ್ದೇ ಇದೆ. ಪುರುಷರು ಆ್ಯಂಡ್ರೋಲಜಿಸ್ಟ್‌ಗಳನ್ನು ಭೇಟಿ ಮಾಡಿ ಸಮಾಲೋಚಿಸಲು ಮುಂದಾಗಬೇಕು. 
ಮಾಹಿತಿಗೆ: info@manipalankur.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.